ಖುಲಾಸೆ ಅಂದ್ರೆ ಏನರ್ಥ?
ಬೆಳಗ್ಗೆ ಪತ್ರಿಕೆ ಓದುವಾಗ, ಮಂತ್ರಿ ಖುಷಿಯಿಂದ ಬೀಗುತ್ತಿದ್ದ. ತನ್ನ ಹತ್ತಿರದ ಸಂಬಂಧಿಕರಿಗೆ ಲಾಭ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ, ಮಂತ್ರಿಯನ್ನು ಸ್ವಜನಪಕ್ಷಪಾತ ಆಪಾದನೆಯಿಂದ ಖುಲಾಸೆಗೊಳಿಸಲಾಗಿತ್ತು. ಮುಖಪುಟದಲ್ಲಿ ಪ್ರಕಟವಾದ ಈ ಸುದ್ದಿ ನೋಡಿ ಮಂತ್ರಿಗೆ ಅತೀವ ಆನಂದವಾಗಿತ್ತು. ಸದಾ ಗಂಭೀರವದನನಾಗಿ ಪತ್ರಿಕೆ ಓದುವ ಅಪ್ಪ, ಇಂದು ನಗುತ್ತಾ ಖುಷಿಯಲ್ಲಿರುವುದನ್ನು ಕಂಡು ಮಗ ಸೂರಿಗೆ ತುಸು ಆಶ್ಚರ್ಯವಾಯಿತು.
"ಅಪ್ಪ, ನೀನು ಖುಷಿಪಡುವಂಥ ವಿಷಯ ಪತ್ರಿಕೆಯಲ್ಲಿ ಪ್ರಕಟವಾಗಿದೆಯಾ? ಅದು ಯಾವ ಸುದ್ದಿ?" ಎಂದು ಸೂರಿ ಕೇಳಿದ. ''ನಾನು ಎಲ್ಲಾ ಆರೋಪಗಳಿಂದ ಖುಲಾಸೆ ಆಗಿದ್ದೇನೆ - ಗೊತ್ತಾ? ಇದಕ್ಕಿಂತ ಖುಷಿ ಮತ್ತೇನಿದೆ?" ಎಂದು ಮಂತ್ರಿ ಮಗನಿಗೆ ಹೇಳಿದೆ. ಸೂರಿಗೆ ಖುಲಾಸೆ ಪದದ ಅರ್ಥ ಗೊತ್ತಾಗಲಿಲ್ಲ, "ಅಪ್ಪ ಖುಲಾಸೆ ಅಂದ್ರೆ ಏನು?'' ಅಂತ ಕೇಳಿದೆ. "ಅಷ್ಟೂ ಗೊತ್ತಾಗುವುದಿಲ್ಲವಾ? ಖುಲಾಸೆ ಅಂದ್ರೆ ನಾನು ಏನೂ ಮಾಡಿಲ್ಲ ಅಂತ ಅರ್ಥ" ಎಂದ ಮಂತ್ರಿ, ಅದಕ್ಕೆ ಸೂರಿ ಹೇಳಿದ: ''ಈ ಮಾತನ್ನು ನಮ್ಮ ಕಾಲೇಜಿನಲ್ಲೂ ಎಲ್ಲರೂ ಹೇಳ್ತಾರೆ. ನಿನ್ನಪ್ಪ ಏನೂ ಮಾಡಲ್ಲ ಅಂತ".
***
ನಿಧನದ ಸುದ್ದಿ
ಸೂರಿಯ ಹೆಂಡತಿ ಬೆಳಗ್ಗೆ ಕಾಫಿ ಹೀರುತ್ತಾ ಪತ್ರಿಕೆ ಓದುತ್ತಿದ್ದಳು. ಒಳಪುಟ ತಿರುವಿದಾಗ ಅವಳ ಫೋಟೊ ಕಣ್ಣಿಗೆ ಬಿತ್ತು. ಕುತೂಹಲದಿಂದ ಕೆಳಗಿನ ಸುದ್ದಿ ಕಡೆ ಕಣ್ಣಾಡಿಸಿದರೆ ಅವಳ ನಿಧನದ ಸುದ್ದಿ!
ತಕ್ಷಣ ಸೂರಿಗೆ ಫೋನ್ ಮಾಡಿ, "ವಿಷಯ ಗೊತ್ತಾ? ಇಂದಿನ ಪೇಪರ್ ಓದಿದಿಯಾ? ನಾನು ಸತ್ತು ಹೋಗಿದ್ದೀನಂತೆ!'' ಎಂದಳು. ಅದಕ್ಕೆ ಸೂರಿ ಹೇಳಿದ- "ಹೌದಾ? ಅದ್ಸರಿ ನೀನು ಎಲ್ಲಿಂದ ಫೋನ್ ಮಾಡ್ತಾ ಇದೀಯಾ ಮೊದಲು ಹೇಳು. ಆನಂತರ ನೀನು ಸತ್ತಿದ್ದೀಯಾ ಇಲ್ಲವಾ ಅಂತ ಹೇಳೇನೆ !
***
ಯಾರು ಬುದ್ದಿವಂತರು?
ತುಂಬಾ ಹಿಂದಿನ ರೀಡರ್ಸ್ ಡೈಜೆಸ್ಟ್ ಮಾಸಿಕದಲ್ಲಿ ಓದಿದ ಒಂದು ಪ್ರಸಂಗವಿದು. ಮುಸೋಲಿನಿ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲಿ ಅಮೆರಿಕದ ಶ್ರೀಮಂತ ಆರ್ಟ್ ಸಂಗ್ರಹಕಾರ ಇಟಲಿಗೆ ಬಂದು, ಹದಿನಾರನೇ ಶತಮಾನದ ಪ್ರಸಿದ್ದ ಕಲಾವಿದ ಟಿಟಿಯನ್ ನ ಬೃಹತ್ ವರ್ಣಚಿತ್ರವನ್ನು ಭಾರಿ ಬೆಲೆಗೆ ಖರೀದಿಸಿದ. ಅದನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗುವುದು ಅವನ ಉದ್ದೇಶವಾಗಿತ್ತು. ಆದರೆ ಅದನ್ನು ಇಟಲಿಯಿಂದ ಹೊರಗೆ ತೆಗೆದು ಕೊಂಡು ಹೋಗಲು ಮುಸೋಲಿನಿ ಸರಕಾರ ಅನುಮತಿ ನೀಡಲಿಕ್ಕಿಲ್ಲ ಎಂದು ಅವನಿಗೆ ಕೆಲವರು ಹೇಳಿದರು. ಆಗ ಆ ಅಮೆರಿಕನ್ ಕಲಾಸಂಗ್ರಹಕಾರನಿಗೆ ಅತೀವ ಬೇಸರವಾಯಿತು., ಇದನ್ನು ತನ್ನ ದೇಶಕ್ಕೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಆತ ಒಬ್ಬ ಸಲಹೆಗಾರನನ್ನು ಕೇಳಿದ.
ಅದಕ್ಕೆ ಆತ ಒಂದು ಸಲಹೆ ನೀಡಿದ-'"ಒಂದು ಕೆಲಸ ಮಾಡಿ, ಟಿಟಿಯನ್ನ ವರ್ಣಚಿತ್ರದ ಮೇಲೆ ಮುಸೋಲಿನಿ ವರ್ಣಚಿತ್ರವನ್ನು ಬಿಡಿಸುವಂತೆ ಸ್ಥಳೀಯ ಕಲಾವಿದನಿಗೆ ಹೇಳಿ. ಆತ ಅದನ್ನು ಬಿಡಿಸಿಕೊಡುತ್ತಾನೆ. ಮುಸೋಲಿನಿ ಆಡಳಿತದ ಅಧಿಕಾರಿಗಳು ತಮ್ಮ ನಾಯಕನ ಚಿತ್ರವನ್ನು ಅಮೆರಿಕಕ್ಕೆ ತೆಗೆದು ಕೊಂಡು ಹೋಗುವವನು ಮುಸೋಲಿನಿ ಅಭಿಮಾನಿಯಿರ ಬೇಕೆಂದು, ತಕ್ಷಣ ಸಂತೋಷದಿಂದ ಅನುಮತಿ ನೀಡುತ್ತಾರೆ. ಅಮೆರಿಕಕ್ಕೆ ಹೋದ ನಂತರ, ಮೇಲಿನ ಪೇಂಟಿಂಗ್ನ್ನು ಕೆರೆಸಿ ತೆಗೆದುಹಾಕಿ''.
ಅಮೆರಿಕದ ಕಲಾ ಸಂಗ್ರಹಕಾರನಿಗೆ ಇದು ಅದ್ಭುತ ಐಡಿಯಾ ಎಂದೆನಿಸಿತು. ಆತ ತಕ್ಷಣ ಸ್ಥಳೀಯ ಕಲಾಕಾರನನ್ನು ಕರೆಯಿಸಿ, ಟಿಟಿಯನ್ ಪೇಂಟಿಂಗ್ ಮೇಲೆ ಮುಸೋಲಿನಿ ಪೇಂಟಿಂಗ್ ಬಿಡಿಸಿಕೊಡುವಂತೆ ಹೇಳಿದ. ಆತ ಬಿಡಿಸಿಕೊಟ್ಟ, ಮುಂದೆ ಆತ ಅಂದುಕೊಂಡಂತೆ ಆಯಿತು. ಯಾವ ತೊಂದರೆಯೂ ಇಲ್ಲದೇ ಪೇಂಟಿಂಗ್ ಅನ್ನು ಸುಲಭವಾಗಿ ಅಮೆರಿಕಕ್ಕೆ ತೆಗೆದುಕೊಂಡು ಬಂದ. ಬಂದವನೇ ಆ ಪೇಂಟಿಂಗ್ ಮೇಲೆ ಬಿಡಿಸಿದ ಮುಸೋಲಿನಿ ಚಿತ್ರವನ್ನು ಕೆರೆಸಿ ಹಾಕುವಂತೆ ನುರಿತ ಪೇಂಟರ್ಗೆ ಹೇಳಿದ. ಆತ ಹರಿತವಾದ ಚಾಕುವಿನಿಂದ ಬಹಳ ನಾಜೂಕಿನಿಂದ - ಮೇಲಿನ ಪದರ ಕೆರೆಸಿ ಹಾಕಿದ. ಟಿಟಿಯನ್ನ ಅದ್ಭುತ ಪೇಂಟಿಂಗ್ ಎದ್ದು ಕಂಡಿತು. ಅಷ್ಟಕ್ಕೇ ಸುಮ್ಮನಾಗದ ಪೇಂಟರ್, ''ಸರ್, ಈ ಟಿಟಿಯನ್ ಪೇಂಟಿಂಗ್ ಕೆಳಗೆ ಬೇರೆ ಇನ್ನೊಂದು ಪೇಂಟಿಂಗ್ ಇರುವಂತಿದೆ" ಎಂದು ಹೇಳಿದೆ. ಕಲಾ ಸಂಗ್ರಹಕಾರನಿಗೆ ದಿಗಿಲಾಯಿತು. ಆ ಪೇಂಟರ್, ಟಿಟಿಯನ್ನ ಪೇಂಟಿಂಗ್ ಅನ್ನು ಕೆರೆಸುತ್ತಿದ್ದಂತೆ ಮತ್ತೊಂದು ಚಿತ್ರ ಎದ್ದು ಬಂದಿತು. ನೋಡಿದರೆ ಮುಸೋಲಿನಿ ಪೇಂಟಿಂಗ್!
***
ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ..
ತಮಾಷೆ ಪ್ರಸಂಗ ಮೊಬೈಲ್ ಫೋನ್ ಇಲ್ಲದ ಕಾಲದಲ್ಲಿ ನಡೆದ ಪ್ರಸಂಗವಿದು. ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಕೆಲವರು ತಪ್ಪಾಗಿ ಭಾವಿಸುತ್ತಾರೆ ಎಂಬುದನ್ನು ವಿವರಿಸಲು ಸ್ವಾಮೀಜಿ ಈ ಘಟನೆ ಹೇಳಿದ್ದರು. ಯುವ ವಿದ್ಯಾರ್ಥಿಯೊಬ್ಬ ಲೈಬ್ರರಿಯಿಂದ ಹೊರಡುವಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಲೈಬ್ರರಿಯಿಂದ ನಿರ್ಗಮಿಸಿದವರಲ್ಲಿ ಅವನೇ ಕೊನೆಯವನಾಗಿದ್ದ. ಪಾರ್ಕಿಂಗ್ ತಾಣದಲ್ಲಿ ನಿಲ್ಲಿಸಿದ್ದ ಕಾರನ್ನು ಸ್ಟಾರ್ಟ್ ಮಾಡಬೇಕು ಎಂದು ಚಾವಿ ತಿರುವಿದರೆ, ಬ್ಯಾಟರಿ ಡೆಡ್ ಆಗಿತ್ತು. ಮೆಕಾನಿಕ್ಗೆ ಫೋನ್ ಮಾಡಿ ಕರೆಯೋಣ ಅಂದರೆ ಫೋನ್ ಬೂತ್ ದೂರದಲ್ಲಿತ್ತು. ಬೇರೆ ದಾರಿ ಕಾಣದೇ ಹತ್ತಿರದಲ್ಲಿರುವ ಲೇಡೀಸ್ ಹಾಸ್ಟೆಲ್ಗೆ ಹೋದ. ಬಾಗಿಲಲ್ಲಿ ಯುವತಿಯೊಬ್ಬಳು ಕುಳಿತಿದ್ದಳು. ತನ್ನ ಸಮಸ್ಯೆಯನ್ನು ಅವಳಿಗೆ ಹೇಳಿದ. ಅವಳು ಹಾಸ್ಟೆಲ್ ವರಾಂಡದಲ್ಲಿರುವ ಫೋನ್ ತೋರಿಸುತ್ತಾ, ''ಪರವಾಗಿಲ್ಲ, ಒಳಗೆ ಹೋಗಿ, ಫೋನ್ ಮಾಡಿ'' ಎಂದು ಹೇಳಿದಳು. ಆತ ಒಳ ಬಂದು ಮೆಕಾನಿಕ್ಗೆ ಫೋನ್ ಮಾಡಿದ. ಮೆಕಾನಿಕ್ಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ. ಹೀಗಾಗಿ ಯುವಕ ಜೋರಾಗಿ ಕಿರುಚುತ್ತಿದ್ದ. ಆ ಹೊತ್ತಿನಲ್ಲಿ ಗಂಡಸಿನ ದನಿಯನ್ನು ಕೇಳಿದ ಮೊದಲ ಮಹಡಿಯಲ್ಲಿದ್ದ ಹಾಸ್ಟೆಲ್ ಸಂಘದ ಸೆಕ್ರೆಟರಿ ಗಾಬರಿಗೊಂಡಳು. ಬಾಗಿಲಲ್ಲಿ ಕುಳಿತಿದ್ದ ಯುವತಿಗೆ ಹೇಳಿದಳು- "ಏನಮ್ಮಾ, ಯಾವನೋ ಗಂಡಸು ಹಾಸ್ಟೆಲ್ ಒಳಗೆ ಬಂದಂತಿದೆ. ರಾತ್ರಿ ಹತ್ತು ಗಂಟೆ ನಂತರ, ಹಾಸ್ಟೆಲ್ ಒಳಗೆ ಗಂಡಸರನ್ನು ಒಳಬಿಡಬಾರದು ಎಂಬುದು ಗೊತ್ತಿಲ್ಲವಾ?". ಅದಕ್ಕೆ ಬಾಗಿಲಲ್ಲಿ ನಿಂತವಳು ಜೋರಾಗಿ ಹೇಳಿದಳು- '"ಪರವಾಗಿಲ್ಲ ಬಿಡಮ್ಮ, ಅವನ ಬ್ಯಾಟರಿ ಡೆಡ್ ಆಗಿದೆಯಂತೆ''.
***
ರಾಜೀನಾಮೆ ಪತ್ರ
ಸೂರಿಯ ರಾಜೀನಾಮೆ ಪತ್ರ ಇಟ್ಟಿದ್ದ ಫೈಲ್ ಬಾಸ್ ಕೈಯಲ್ಲಿ ಆಫೀಸಿನಲ್ಲಿ ಎಲ್ಲೋ ಕಳೆದು ಹೋಗಿತ್ತು. ಅದಕ್ಕಾಗಿ ಬಾಸ್ ತಮ್ಮ ಸಿಬ್ಬಂದಿಯನ್ನು ಕರೆದು ಹೀಗೊಂದು ಸೂಚನೆಯಿತ್ತರು..
ಬಾಸ್: ನನ್ನ ಒಂದು ಫೈಲ್ ಕಳೆದು ಹೋಗಿದೆ. ಅದರೊಳಗೆ ಹತ್ತು ಸಾವಿರ ರೂಪಾಯಿಗಳಿದ್ದವು. ಹುಡುಕಿ ತಂದುಕೊಟ್ಟವರಿಗೆ ಎರಡು ಸಾವಿರ ರೂಪಾಯಿ ಬಹುಮಾನ ಹಾಗೂ ರಾತ್ರಿ ಪ್ರತಿಷ್ಟಿತ ಹೋಟೇಲ್ ಒಂದರಲ್ಲಿ ಊಟ ಕೊಡಿಸಲಾಗುವುದು.
ಅದನ್ನು ಕೇಳಿದ ಸೂರಿ ಕೀರಲು ಧ್ವನಿಯಲ್ಲಿ ಮೆಲ್ಲಗೆ ಹೇಳಿದ
ಸೂರಿ: ಅದನ್ನು ನನಗೆ ತಂದುಕೊಟ್ಟವರಿಗೆ ಐದು ಸಾವಿರ ರೂಪಾಯಿ ಬಹುಮಾನ ಹಾಗೂ ಫೈವ್ ಸ್ಟಾರ್ ಹೋಟೇಲ್ ನಲ್ಲಿ ಒಂದು ವಾರ ಉಚಿತವಾಗಿ ಉಳಿಯಲು ಅವಕಾಶ ಕಲ್ಪಿಸಲಾಗುವುದು !
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!