ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು

ಡಾ. ಕೆ. ಎಸ್. ನಾರಾಯಣಾಚಾರ್ಯ ಇವರು ಬರೆದ ‘ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು’ ಎನ್ನುವ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಎನ್ ಕೆ ಇವರು. ಇವರು ತಮ್ಮ ಮುನ್ನುಡಿಯಲ್ಲಿ “ಭಾಗವತವು, ಅದರಲ್ಲೂ ಈ 'ಕೃಷ್ಣನ ಕೊನೆಯ ದಿನಗಳು” ಇಪ್ಪತ್ತು ಅಧ್ಯಾಯಗಳು ಉಚ್ಛಶ್ರೇಷ್ಠ ತತ್ತ್ವಜ್ಞಾನ ಗ್ರಂಥವಾಗಿರುವಂತೆ, ನವರಸಭರಿತವಾದ ಪ್ರತಿ ಅಧ್ಯಾಯ ರಸೋತ್ಕರವಾದ ಗದ್ಯ ಕಾವ್ಯವಾಗಿದೆ. ವ್ಯಾಸರ ಕಣ್ಣಾಗಿ ನಾರಾಯಣಾಚಾರ್ಯರು ಮಹಾಭಾರತದ ಕೆನೆಯನ್ನು ಈ ಗದ್ಯ ಕಾವ್ಯಕ್ಕೆ ಸುವರ್ಣರಸದಂತೆ ಲೇಪಿಸಿದ್ದಾರೆ. ಈ ಇಪ್ಪತ್ತು ಅಧ್ಯಾಯಗಳ ಹೃದಯಸ್ಪರ್ಶಿ ಗದ್ಯಗಾಥೆಯ ದರ್ಶನದ ಸಾರದಲ್ಲಿ ವ್ಯಕ್ತಿ-ವ್ಯಕ್ತಿಯ ಜೀವನದಲ್ಲಿ ನಡೆಯುವ ದೇವಾಸುರ ಸಂಗ್ರಾಮದ ಇಷ್ಟಾನಿಷ್ಟಗಳ ಗುಟ್ಟು ಅಡಗಿದೆ.

ಪೂಜ್ಯ ಆಚಾರ್ಯರ ಸಂಸ್ಕೃತ, ಕನ್ನಡ, ಇಂಗ್ಲಿಷ್, ತಮಿಳು ಚತು‌ರ್ ಭಾಷಾ ಪ್ರೌಢಿಮೆ, ಕಲ್ಪನಾ ಪ್ರಾಗಲ್ಭ್ಯ, ಜೀವಂತ ಪಾತ್ರ ನಿರೂಪಣೆ, ಮುಖ್ಯವಾಗಿ ಅವರ ವೇದ ತತ್ತ್ವಜ್ಞಾನ ಪಾಂಡಿತ್ಯ, ರಾಮಾಯಣ, ಮಹಾಭಾರತ, ಭಾಗವತಗಳ ಮೇಲಿನ ಪ್ರಭುತ್ವ, ಗೌರೀಶಂಕರ ಶಿಖರದಷ್ಟು ಎತ್ತರದ ತತ್ತ್ವಜ್ಞಾನವನ್ನು ನಮ್ಮಂತಹ ನೆಲದ ಮೇಲೆ ಓಡಾಡುವ ಮಣ್ಣಿನ ಮನುಷ್ಯರಿಗೆ ಉಣ್ಣಿಸುವ ಔದಾರ್ಯಮಯ ಜ್ಞಾನಸಂಪತ್ತು ಇವುಗಳಿಗೆ ಆಗರವಾಗಿರುವ ಈ ಲೇಖಾಂಕ ಮಾಲೆಯ ಒಂದಿಷ್ಟು ಸವಿಯನ್ನು ಮೂಗಿಗೆ ಭಾರವೆನಿಸುವ ಈ ಮುನ್ನುಡಿ ನೀಡಿರಲಾರದು.” ಎಂದು ಬರೆದಿದ್ದಾರೆ.

ಈ ಕೃತಿಯ ಬಗ್ಗೆ ಚೇತನ ಭಾರ್ಗವ ಅವರು ತಮ್ಮ ಅನಿಸಿಕೆಯಲ್ಲಿ “ಕೃಷ್ಣಾವತಾರದ ಕೊನೆಯ ಭಾಗ ಒಂದು ತೆರನಾದ ದುರಂತ ಅಂತ್ಯ ಕಾಣುವ ಚಿತ್ರ ಕಥೆ ಇದ್ದಂತೆ. ಮಹಾಭಾರತದ ಸೂತ್ರದಾರ ಅವತಾರಿ ಕೃಷ್ಣನ ಅಂತ್ಯಕ್ಕೆ ಕಾರಣವಾಗುವ ಘಟನೆಗಳು ಕುರುಕ್ಷೇತ್ರ ಯುದ್ಧಾನಂತರ ೩೬ ವರುಷಗಳ ಬಳಿಕ ಕಾಣ ಬರುತ್ತದೆ. ಎಲ್ಲರೂ ಧರ್ಮರಾಯನ ಆಳ್ವಿಕೆಯಲ್ಲಿ ನೆಮ್ಮದಿಯಿಂದ ಇದ್ದಾರೆ ಎಂದಾಗಲೇ ಗಾಂಧಾರಿಯ ಶಾಪ ಫಲ ನೀಡುವ ಗಳಿಗೆ ಸನ್ನಿಹಿತವಾಗುತ್ತದೆ. ಎಲ್ಲಾ ಬಲ್ಲ ಕೃಷ್ಣ ಇದನ್ನು ತಡೆಯುವ ಗೋಜಿಗೆ ಹೋಗುವುದಿಲ್ಲ. ಯಾದವರಲ್ಲಿ ಅಧರ್ಮ ವ್ಯಭಿಚಾರ ಮೈಗೂಡಿ  ದೂರ್ವಾಸರಿಂದ ಶಾಪ ಹೊಂದಿ ಕಬ್ಬಿಣದ ಒನಕೆ ರೂಪದಲ್ಲಿ ಮಹಾಪಾನ ಕೂಟದಲ್ಲಿ ಅಂತ್ಯವಾಗಿ ಅವರೇ ಹೊಡೆದಾಡಿ ಸಾಯುತ್ತಾರೆ . ಅದರ ಒಂದು ಚೂರು ಜರಾ ಎಂಬ ಬೇಡನ ಬಾಣವಾಗಿ ಕೃಷ್ಣನ ಕಾಲು ಸೀಳುತ್ತದೆ , ಅವತಾರಿಯ ಅಂಕ ಪರದೆ ಹರಿಯುತ್ತದೆ . ಕೃಷ್ಣ ನ ರಾಣಿಯರು ಅರ್ಜುನನ ಸಂರಕ್ಷಣೆಯಲ್ಲಿದ್ದಾಗಲೇ ದಸ್ಯುಗಳಿಂದ ಅಪಹರಿಸಲ್ಪಟ್ಟು ಅಸು ನೀಗುತ್ತಾರೆ. ಅರ್ಜುನನ ಧನುರ್ವಿದ್ಯೆ ಕೈಕೊಟ್ಟು ಅವತಾರಿಯ ಆಣತಿಯಂತೆ ನಾಟಕ ಮುಗಿಯುವ ಸಮಯ ಮುಗಿಯುತ್ತದೆ . ಪಾಂಡವರ ಮಹಾಪ್ರಸ್ಥಾನದೊಂದಿಗೆ ಅಂತ್ಯವಾಗುತ್ತದೆ. 

ಇದಿಷ್ಟೇ ಆಗಿದ್ದರೆ ಬರಿಯ ಅವತಾರಿಯ ಕಥೆಯಾಗುತ್ತಿತ್ತು. ಆದರೆ ಆಚಾರ್ಯರು ಕೃಷ್ಣನ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯನ್ನೂ ಪರೀಕ್ಷೆಗೊಳಪಡಿಸುತ್ತಾರೆ, ಗಾಂಧಾರಿ , ದ್ರೌಪದಿ ಕರ್ಣ ಕೊನೆಗೆ ಪೂತನಿ ಯ ಪಾತ್ರವೂ ಕೃಷ್ಣನ ಮಾನಸ ಪಟಲದಲ್ಲಿ ಬಂದು ಹೋಗುತ್ತದೆ. ತಮ್ಮ ತಪ್ಪು ಒಪ್ಪುಗಳನ್ನು ಹೇಳುತ್ತವೆ ಅಪೂರ್ಣತೆಯಲ್ಲಿ ಬೇಯುತ್ತವೆ. ಕೃಷ್ಣನ ಧರ್ಮ ಜಿಜ್ಞಾಸುತನಕ್ಕೆ ಸೋಲುತ್ತವೆ.  ಆದರೆ ಅಚ್ಚರಿಯಾಗುವಂತೆ ವಿಷದ ಹಾಲೂಣಿಸಿದ ತಾಯಿಯೇ ಆದರೂ ಪೂತನಿಯ ಶರಣಾಗತಿ ಪುಟ್ಟ ಕೃಷ್ಣನ ಸಾನಿಧ್ಯದಲ್ಲಿ ಶುಚಿಯಾಗಿ ರಾಕ್ಷಸಿ ಭಾವ ತೊರೆದು ಮರಣ ಹೊಂದಿದ ಆಕೆ ಎಲ್ಲಕ್ಕಿಂತ ಶ್ರೇಷ್ಠವಾಗಿ ಕಾಣುತ್ತಾಳೆ. ಮಹಾಭಾರತದ ಈ ಸೂಕ್ಷ್ಮ ವಿಷಯವನ್ನು ಪ್ರಸ್ತುತ ಪಡಿಸುವ ಆಚಾರ್ಯರಿಗೆ ಅವರೇ ಸಾಟಿ . ಈ ರೀತಿಯ ವಸ್ತು ವಿಷಯ ಹಾಗೂ ಅದನ್ನು ವಿಷದ ಪಡಿಸುವ ಹಾಗೂ ಪ್ರಸ್ತುತ ಪರಿಸ್ಥಿತಿಗೆ ಅಳವಡಿಸಿ ಹೇಳಿರುವ ಆಚಾರ್ಯರು ಅಮೋಘ ಕೃತಿಯನ್ನು ಕೊಟ್ಟು ಹೋಗಿದ್ದಾರೆ . ಎಲ್ಲರೂ ತಪ್ಪದೆಯೇ ಓದಬೇಕಾದ ಕೃಷ್ಣನ ಮತ್ತೊಂದು ಮಹಾನತೆಯ ಪರಿಚಯ ಪಡಿಸುವ ಅಮೋಘ ಕೃತಿ ಆಚಾರ್ಯರ ಕೃಷ್ಣಾವತಾರದ ಕೊನೆಯ ಗಳಿಗೆಗಳು.” ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸುಮಾರು ೨೮೦ ಪುಟಗಳ ಈ ಕೃತಿಯು ಪೌರಾಣಿಕ ಕತೆಗಳಲ್ಲಿ ಆಸಕ್ತಿ ಹೊಂದಿದ ಓದುಗರಿಗೆ ಉತ್ತಮ ಓದು ಆಗಬಹುದು.