ಸೋತವನ ಸಾವಿರ ಕಥೆಗಳು

ಈ ಕೃತಿ ಗೆಲ್ಲಲು ಹೊರಟವನ ಭಗವದ್ಗೀತೆ ಎನ್ನುತ್ತಾ ಸೋತವರ ಕಥೆಗಳನ್ನು ಹೇಳಿದ್ದಾರೆ ರನ್ನರಾಜ. ಇವರ ‘ಸೋತವನ ಸಾವಿರ ಕಥೆಗಳು’ ಕೃತಿಯ ಬಗ್ಗೆ ಸಿದ್ದೇಶ್ ಸಿದ್ದನಮಠ ತಮ್ಮ ಅನಿಸಿಕೆಯಲ್ಲಿ ತಿಳಿಸಿದ ಕೆಲವೊಂದು ಮಾತುಗಳು ನಿಮ್ಮ ಓದಿಗಾಗಿ…

"ನೀಡುವುದಕ್ಕೆ ಎನ್ನೊಳಗೆ ಉಳಿದಿರುವುದು ನಶ್ವರ ನೀಡಿದವರು ಎನ್ನ ಪಾಲಿನ ಸರ್ವೇಶ್ವರ " ಎಂದು ಹೇಳುತ್ತಾ ನನಗೆ ಅವಮಾನ ಮಾಡಿದವರು,ನನಗೆ ನೋವು ಕೊಟ್ಟವರು, ನನಗೆ ಸೋಲು ಉಣಿಸಿದವರು, ನನ್ನಲ್ಲಿ ಪ್ರೀತಿ ಬಿತ್ತಿದವರು, ನನ್ನಲ್ಲಿ ಜ್ಞಾನ ಬೆಳೆಸಿದವರು, ನನ್ನೊಳಗೆ ಶಕ್ತಿ ತುಂಬಿದವರು ಇವರೆಲ್ಲರಿಗೂ ಪ್ರಾರಂಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಲೇಖಕರ ನೂರು ಲೇಖನಗಳಿಂದ ಕೂಡಿದ ಪುಸ್ತಕವನ್ನು ಅನಾವರಣಗೊಳಿಸುತ್ತಾ ಸಾಗಿದಾಗ...." ಸೋತಿದ್ದರೆ ನೀನು ಹುಟ್ಟುತ್ತಿರಲಿಲ್ಲ" ಎಂಬ ಮೊದಲನೆಯ ಲೇಖನವೇ ಓದುಗನನ್ನು ಕಟ್ಟ ಕಡೆಯ ಲೇಖನ ಓದುವವರೆಗೂ ಬಿಡುವುದಿಲ್ಲ. ಶರವೇಗದಲ್ಲಿ ಓದಿಸಿಕೊಂಡು ಹೋಗುತ್ತದೆ. ಏಕೆಂದರೆ 10 ಲಕ್ಷ ವೀರ್ಯಾಣುಗಳು ಸ್ಪರ್ಧೆಯಲ್ಲಿ ಓಟಕ್ಕೆ ಬಿದ್ದು ಅದರಲ್ಲಿ ನೀನು! ಒಂದು ವೀರ್ಯಾಣುವಾಗಿ ಎಲ್ಲರಿಗಿಂತಲೂ ಮೊದಲು ಗುರಿ ಮುಟ್ಟಿ ಅಂಡಾಶಯ ತಲುಪಿದ್ದರ ಪರಿಣಾಮವಾಗಿ ನೀನು ಹುಟ್ಟಿದೆ ಅಂದ ಮೇಲೆ; ಮೊದಲು ಗೆದ್ದಿದ್ದರಿಂದಲೇ ನೀನು ಹುಟ್ಟಿದ್ದೀಯಾ...ಹಾಗಾದರೆ ಗೆಲುವು ನಿನ್ನ ರಕ್ತದ ಜೊತೆಗೆ ಬಂದಿದೆ ಸೋತಿದ್ದರೆ, ನೀನು ಖಂಡಿತವಾಗಿಯೂ ಹುಟ್ಟುತ್ತಿರಲಿಲ್ಲ. ಎಂದು ನಿರೂಪಿಸುತ್ತಾ ಓದುಗರನ್ನು ತನಗರಿವಿಲ್ಲದಂತೆ ತನ್ನೊಳಗೆ ಸೆಳೆದುಕೊಳ್ಳುತ್ತಾ ಸಾಗುತ್ತದೆ. ಈ ಪುಸ್ತಕ ಜೀವನದ ಭರವಸೆಯ ಬೆಳಕನ್ನು ಚೆಲ್ಲುತ್ತಾ ಹೋಗುತ್ತದೆ.

"ಸ್ಪರ್ಧೆಯಲ್ಲಿ ನೀನೊಬ್ಬನೇ ಇದ್ದರೆ ದೇವರಾಣೆ ನೀನು ಗೆಲ್ಲುವುದಿಲ್ಲ", "ಬಯಸಿದ್ದೆಲ್ಲಾ ದೊರೆಯಲು ನೀನು ದೇವರಲ್ಲ"," ಸಮಯ ನಿನಗಾಗಿ ಕಾಯುವುದಿಲ್ಲ","ಸಾವಿರ ಸೋಲುಗಳನ್ನು ಮೆಟ್ಟಿ ನಿಲ್ಲು" ಮುಂತಾದ ಕಿರು ಶೀರ್ಷಿಕೆಗಳು ಅದರೊಳಗಿನ ಪುಟ್ಟ ಪುಟ್ಟ ವಿವರಣೆಗಳು ಸರಳವಾದ, ಸಹಜವಾದ ಭಾಷೆಯಲ್ಲಿ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಈ ಪುಸ್ತಕದಲ್ಲಿ ಬಾಲ್ಯಾವಸ್ಥೆ, ಯೌವ್ವನಾವಸ್ಥೆ, ಬಡತನ ,ಸಿರಿತನ, ಗುರಿ ,ಹುಮ್ಮಸ್ಸು ,ಸಾಧಿಸಬೇಕೆಂಬ ತುಡಿತ ,ಯಶಸ್ಸು ಮುಂತಾದವುಗಳ ವಿವರಣೆ ಇದೆ. ಇಲ್ಲಿ ಲೇಖಕರು 'ಪುಣ್ಯವಂತ'ನೆಂಬ ಏಕೈಕ ಪಾತ್ರವನ್ನು ಸೃಷ್ಟಿಸಿ ಶೀರ್ಷಿಕೆಗಳಡಿ ನಿರೂಪಿಸುತ್ತ ಸಾಗಿರುವುದು, ನಮ್ಮೊಳಗಿನ ಪುಣ್ಯವಂತನ ಕಥೆಯೇ ಹೊರತೂ.. ಯಾವುದೇ ನಾಟಕ ಪುಸ್ತಕ, ಇನ್ನಾವುದೇ ಮೂಲದಿಂದ ಬರುವಂತಹ ಪಾತ್ರವಲ್ಲ. ಇದು ನಮ್ಮ ನಿಮ್ಮ ಬದುಕಿನ ಪಯಣದಂತೆಯೇ ಸಾಗುತ್ತದೆ. ಪುಣ್ಯವಂತನ ಬದುಕಿನಲ್ಲಿ ನಡೆದಂತೆಯೇ ನಮಗೂ ಹಾಗೂ ನಿಮಗೂ ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ವ್ಯಕ್ತಿಗಳಿಂದ ಅವಮಾನವಾಗಿರುತ್ತದೆ. ಜೀವನದಲ್ಲಿ ಹಲವಾರು ಹಂತಗಳಲ್ಲಿ ಸೋಲನ್ನು ಅನುಭವಿಸಿರುತ್ತೀರಿ, ಪ್ರತಿಯೊಬ್ಬರೂ ಒಂದು ಗುರಿಯನ್ನು ಇಟ್ಟುಕೊಂಡು ಹೊರಟಿರುತ್ತೀರಿ.ಆದರೆ ಆ ಗುರಿಯನ್ನು ಮುಟ್ಟಲಾಗದೆ ಅದಕ್ಕೆ ಕಾರಣಗಳನ್ನು ಹುಡುಕುತ್ತಾ... ಬೇರೆ ಬೇರೆ ಕಾರಣಗಳನ್ನು ನೀಡುತ್ತಾ.. ಬದುಕಿನ ಬಂಡಿಯನ್ನು ಮುಂದೆ ಸಾಗಿಸುತ್ತಾ... ಹೊರಟಿದ್ದೀವಿ. ಆದರೆ ನಮ್ಮ ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲವೇಕೆ?? ಉತ್ತರ ಬಹಳ ಸರಳವಾಗಿದೆ. ನಾವು ಗುರಿಯತ್ತ ನಡೆಯುವುದನ್ನು ಬಿಟ್ಟು ಉಳಿದೆಲ್ಲಾ ಕೆಲಸಗಳನ್ನು ಮಾಡುತ್ತಿದ್ದೇವೆ.

"ಸೋಲದಿದ್ದರೆ ಶ್ರೀರಾಮನಿಗೂ ಬೆಲೆ ಇಲ್ಲ" ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀರಾಮಚಂದ್ರ ರಾಜ್ಯ ತೊರೆದು ವನವಾಸಕ್ಕೆ ಹೋದ ಮಾಯಾ ಜಿಂಕೆ ಎಂದು ಗ್ರಹಿಸುವಲ್ಲಿ ಪ್ರಾರಂಭದಲ್ಲಿ ಎಡವಿದ್ದರಿಂದ ರಾವಣನಿಗೆ ಜಯ ಸಿಕ್ಕಿತು. ರಾವಣನಿಗೆ ಸಿಕ್ಕ ಜಯ ರಾವಣನ ಬದುಕನ್ನೇ ಮುಗಿಸಿತು.. ರಾಮನಿಗೆ ಬಂದ ಸೋಲು ರಾಮಾಯಣದ ಸೃಷ್ಟಿಗೆ ಕಾರಣವಾಯಿತು. ಹಾಗೆಯೇ ಧರ್ಮರಾಯ ಪಗಡೆಯಾಟದಲ್ಲಿ ಸೋತಿದ್ದಕ್ಕೆ ನಮಗೆ ಪಾಂಡವರ ಮತ್ತು ಕೌರವರ ಕಥೆ ಗೊತ್ತಾಯಿತು. ಒಂದು ವೇಳೆ ಧರ್ಮರಾಯ ಪಗಡೆ ಆಡದಿದ್ದರೆ.., ಆಡಿದರೂ ಆಟದಲ್ಲಿ ಸೋಲದಿದ್ದರೆ..., ಮಹಾಭಾರತದ ಕುರುಕ್ಷೇತ್ರ ಯುದ್ಧವೆಲ್ಲಿ? ನಡೆಯುತ್ತಿತ್ತು. ಒಂದು ವೇಳೆ ದುರ್ಯೋಧನ ಹಿರಿಯರ ಮಾತಿಗೆ ಬೆಲೆ ಕೊಟ್ಟು ಪಾಂಡವರಿಗೆ ಅರ್ಧ ರಾಜ್ಯ ಬಿಟ್ಟು ಕೊಟ್ಟಿದ್ದರೆ ಭಗವದ್ಗೀತೆಯ ಸೃಷ್ಟಿ ಹೇಗಾಗುತ್ತಿತ್ತು? "ನೀನು ಸೋತಿದ್ದೀಯಾ ಎಂದರೆ ಅದರಿಂದ ಮಹತ್ತರವಾದದ್ದು ಏನೋ ನಡೆಯಲಿದೆ" ಎಂದು ಭಾವಿಸು ಎಂದಿಗೂ ಸೋಲಿಗೆ ಅಂಜಬೇಡ ಎಂಬ ಲೇಖಕರ ನಿರೂಪಣೆ; ಸೋತು ಸುಣ್ಣವಾಗಿ ಬಸವಳಿದ ಬದುಕಿಗೊಂದು ಗೆಲುವೆಂಬ ಸಿಹಿ ನೀರಿನ ಸಿಂಚನ ಮಾಡಿಸುತ್ತದೆ" ಅವಮಾನವನ್ನು ಅಪ್ಪಿಕೊಂಡು ಮುದ್ದಾಡು"ಶೀರ್ಷಿಕೆಯಲ್ಲಿನ ಕಥೆ ಓದುಗನಲ್ಲಿ ಸಾಧನೆಯ ಕಿಚ್ಚನ್ನು ಹಚ್ಚಿಸದೆ ಇರದು.

ಆತ ಜಪಾನಿನಲ್ಲಿದ್ದ ಟೊಯೋಟಾ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಂಪನಿಗಾಗಿ ಶ್ರಮವಹಿಸಿ ದುಡಿಯುತ್ತಿದ್ದ ಆದರೆ ಎರಡನೇ ಮಹಾಯುದ್ಧದ ನೆಪದಲ್ಲಿ ಆತನನ್ನು ಕೆಲಸದಿಂದ ತೆಗೆಯಲಾಯಿತು. ಅವಮಾನಿತನಾಗಿ ಹೊರ ಬಿದ್ದ ಆತ ಕೆಲಸಕ್ಕಾಗಿ ಅಲೆದಾಡಿದ ಪ್ರತಿದಿನ ತನ್ನ ಸೈಕಲ್ ಮೇಲೆ ಕೆಲಸ ಹುಡುಕಿಕೊಂಡು ಹತ್ತಾರು ಕಿಲೋಮೀಟರ್ ಸುತ್ತುತ್ತಿದ್ದ. ಕೊನೆಗೊಂದು ದಿನ ತನ್ನ ಸೈಕಲ್ ಗೆ ಮೋಟಾರ್ ಅಳವಡಿಸಿ ತುಳಿಯುವ ಶ್ರಮವಿಲ್ಲದೆ ಓಡಾಡಬಹುದು ಎಂದು ಯೋಚಿಸಿದ ಕೊನೆಗೆ ಅಂತಹ ಇಂಜಿನ್ ತಯಾರಿಸಿಯೇ ಬಿಟ್ಟ.. ಟೊಯೋಟಾ ಕಂಪನಿಯಲ್ಲಿಯೇ ಅವಮಾನಿತನಾಗಿದ್ದರೂ ಆತ ಕಂಡುಹಿಡಿದ ಮೋಟಾರನ್ನು ಅದೇ ಕಂಪನಿಗೆ ತೋರಿಸಲು ಹೋದ. ಅಲ್ಲಿದ್ದವರು ನಕ್ಕು ಅವಮಾನಿಸಿ ಕಳುಹಿಸಿದರು. ಕೊನೆಗೆ ಆತನೇ ಸೈಕಲ್ ಗಳಿಗೆ ಮೋಟಾರ್ ಅಳವಡಿಸಿ ಮಾರಾಟ ಮಾಡಲು ಪ್ರಾರಂಭಿಸಿದ ಯಶಸ್ವಿಯೂ ಆದ. ಆತ ಅವಮಾನಗಳನ್ನು ಅಪ್ಪಿಕೊಂಡು ಮುದ್ದಾಡುತ್ತಲೇ ಹೋರಾಡಿದ. ಅದರ ಪರಿಣಾಮ ಜಗತ್ತಿಗೆ ತಿಳಿಯಿತು. 'ಹೋಂಡಾ' ತಯಾರಿಸಿದ ಆತನ ಹೆಸರಿನ ಬೈಕುಗಳು ಇಂದು ವಿಶ್ವದ ಮೂಲೆ ಮೂಲೆಯಲ್ಲಿರುವ ಪ್ರತಿ ಹಳ್ಳಿಗಳಲ್ಲೂ ಇವೆ. ಹಾಗೆಯೇ ತಾಳ್ಮೆ ಎಂಬುದು ಇಲ್ಲವಾಗಿದ್ದರೆ ಮಹಾತ್ಮ ಗಾಂಧಿಯವರ ಹೆಸರು ಇರುತ್ತಿರಲಿಲ್ಲ. ತಾಳ್ಮೆ ಎಂಬುದು ಇಲ್ಲವಾಗಿದ್ದರೆ ಪ್ರತಿ ಮನೆಮನೆಗಳಲ್ಲೂ ವಿದ್ಯುತ್ತಿನ ಬೆಳಕು ಕಾಣುತ್ತಿರಲಿಲ್ಲ. ಏಕೆಂದರೆ ಬಲ್ಬ್ ಕಂಡುಹಿಡಿದ'ಥಾಮಸ್ ಅಲ್ವಾ ಎಡಿಸನ್' ಕೂಡ ಸಾವಿರ ಬಾರಿ ಬೆಳಕನ್ನು ಕಂಡುಹಿಡಿಯಲು ಸೋತು ನಂತರ ಗೆದ್ದ. ಹೀಗೆ ತಾಳ್ಮೆ ಇಲ್ಲದಿದ್ದರೆ ಏನನ್ನು ಸಾಧಿಸಲಾಗದು ಎಂದು ಲೇಖಕರು ಮನಮುಟ್ಟುವಂತೆ ನಿರೂಪಿಸುತ್ತಾ... ಸಾಗುತ್ತಾರೆ ಹಾಗೂ ಸಾಧನೆ ಮಾಡಲೇಬೇಕು ಎಂದು ಹುಟ್ಟಿಬಂದವನು ನೀನು ಸಾಧಿಸದೆ ಸತ್ತು ಹೋದರೆ ನಿನ್ನ ನೋವುಗಳಿಗೆ ಬೆಲೆಯೇ ಇರುವುದಿಲ್ಲ. ಆದ್ದರಿಂದ ಸೋಲುಗಳನ್ನೇ ಗೆಲುವಿನ ಸೋಪಾನವನ್ನಾಗಿ ಮಾಡಿಕೋ...... ಎಂದು ಪ್ರೇರೇಪಿಸುತ್ತಾ ಸಾಗುತ್ತಾರೆ.

"ಗೆದ್ದಿರುವುದರಿಂದಲೇ ನೀನು ಹುಟ್ಟಿ ಬಂದಿದ್ದೀಯ, ಗೆಲ್ಲುವ ಶಕ್ತಿ ನಿನಗೆ ರಕ್ತಗತವಾಗಿ ಬಂದಿದೆ ಎದ್ದೇಳು ಸಾವಿರ ಸೋಲುಗಳನ್ನು ಸೋಲಿಸಿ ಪುಣ್ಯವಂತನೇ ಗೆದ್ದ ಅಂದರೆ ನೀನು ಗೆಲ್ಲುತ್ತೀಯ ನಿನ್ನನ್ನು ನೀನು ಗೆದ್ದರೆ ವಿಶ್ವವನ್ನೇ ಗೆಲ್ಲಬಲ್ಲೆ ಆ ಶಕ್ತಿ ನಿನ್ನೊಳಗೆ ಖಂಡಿತ ಇದೆ" ಎಂದು ಲೇಖಕರು ಮಾರ್ದವವಾಗಿ ವಿಷಯ ಪ್ರತಿಪಾದಿಸುತ್ತಾರೆ ಜೀವನದ ಅನುಭವಗಳನ್ನೇ ಕೃತಿಯ ವಸ್ತುವನ್ನಾಗಿಸಿದ್ದಾರೆ. ಸರ್ವರ ಬದುಕಿನಲ್ಲಿ ಒಂದಲ್ಲ ಒಂದು ರೀತಿ ನಡೆದಿರುವ, ನಡೆಯಬಹುದಾದ ಸರಳ ಸತ್ಯಗಳನ್ನೇ ಸಹಜವಾಗಿ ಇಲ್ಲಿ ನಿರೂಪಿಸಿದ್ದಾರೆ. ಹದವಾದ ಬರವಣಿಗೆ ಇದೆ. ಆಕರ್ಷಕ ನಿರೂಪಣಶೈಲಿ ಇದೆ. ಸೋಲಿನಲ್ಲೂ ಗೆಲುವನ್ನು ಕಾಣುವಂತಿದೆ.

ಕೊನೆಯದಾಗಿ ಲೇಖಕರು ನನ್ನ ನಿರಾಕಾರ ಮನದೊಳಗೆ ಹೇಳಿಕೊಳ್ಳಲು ಏನು ಉಳಿದಿಲ್ಲ. ನನ್ನ ಮನಸ್ಸನ್ನು ಈ ಪುಸ್ತಕದೊಳಗೆ ಇಟ್ಟಿದ್ದೇನೆ." ಹೊಗಳಿಕೆ ಅಹಂಕಾರದ ಜನ್ಮದಾತೆ "ಎಂದು ಹೇಳಿದೆ. ಇವರೇ.... ರನ್ನರಾಜ ಎಂದು ತಿಳಿದರೆ ಖಂಡಿತವಾಗಿಯೂ ಕೆಲವರು ಹೊಗಳಬಹುದು.ಆಗ ನನ್ನಲ್ಲಿ ಅಹಂಕಾರ ಹುಟ್ಟಿಕೊಂಡರೆ ಎಂಬ ಭಯದಿಂದ ಇಲ್ಲಿ ತಮ್ಮ ಪರಿಚಯವನ್ನು ಮಾಡಿಕೊಳ್ಳದೆ ಇತರೆ ಲೇಖಕರಿಗಿಂತ ತುಂಬಾ ವಿಭಿನ್ನವಾಗಿ ಕಾಣುತ್ತಾರೆ. ಹಾಗೂ "ಭಾವಚಿತ್ರ ಮುಖ್ಯ ಅಲ್ಲ;ಭಾವನೆಗಳು ಮುಖ್ಯ" ಎಂದು ಹೇಳುವ ಮೂಲಕ ನಿಮ್ಮ ಬದುಕಿನ ಪಯಣ ಯಶಸ್ಸಿನ ಪಯಣವಾಗಲೆಂದು ಆಶಿಸುತ್ತಾ ನಿಲುಕದ ನಕ್ಷತ್ರವಾಗಿಯೇ ಉಳಿದುಬಿಡುತ್ತಾರೆ.”