ಇಂದು ಅಕ್ಟೋಬರ್ 2, ಮೋಹನದಾಸ್ ಕರಮಚಂದ್ ಗಾಂಧಿ ಅವರ 156ನೇ ಹುಟ್ಟುಹಬ್ಬ. ಈಗ ಬಹುಶಃ ಅವರನ್ನು ಮಹಾತ್ಮ ಪಟ್ಟದಿಂದ ಇಳಿಸುವ ಸಂದರ್ಭ ಬಂದಿದೆ ಅಥವಾ ಈಗಾಗಲೇ ಇಳಿಸಿಯಾಗಿದೆ ಅಥವಾ ಅವರು ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಅನರ್ಹರಾಗಿದ್ದಾರೆ ಅಥವಾ ಅವರನ್ನು ಮಹಾತ್ಮ ಎಂದು ಕರೆಯುವ ಅರ್ಹತೆಯನ್ನು ಜನಸಾಮಾನ್ಯರು ಕಳೆದುಕೊಂಡಿದ್ದಾರೆ.
ಸತ್ಯ - ಅಹಿಂಸೆ - ಸರಳತೆ - ಪ್ರಾಮಾಣಿಕತೆ - ಪಾರದರ್ಶಕತೆ ಯಾರಿಗೆ ಬೇಕಾಗಿದೆ. ಎಲ್ಲವೂ ಎಲ್ಲರೂ ಹಣ - ಅಧಿಕಾರ - ಪ್ರಶಸ್ತಿ - ಜನಪ್ರಿಯತೆ - ಸುಖಲೋಲುಪತೆಯ ಹಿಂದೆ ಬಿದ್ದಿದ್ದಾರೆ. ಸಾಮಾಜಿಕ ಮೌಲ್ಯಗಳು, ಪ್ರಾಕೃತಿಕ ಮೌಲ್ಯಗಳು, ಮಾನವೀಯ ಮೌಲ್ಯಗಳು, ನೈತಿಕ ಮೌಲ್ಯಗಳು ಕುಸಿದಿರುವುದು ಮಾತ್ರವಲ್ಲ ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆದಿರುವ ಸಂದರ್ಭದಲ್ಲಿ ಈ ದೇಶದ ಸದ್ಯದ ಮಹಾತ್ಮರ ಪಟ್ಟಿ ಬದಲಾಗಿದೆ. ಆ ಸ್ಥಾನದಲ್ಲಿ ಬೇರೆಯವರು ಕುಳಿತಿದ್ದಾರೆ.
ಸಿಕ್ಕಾಪಟ್ಟೆ ಮಹಾತ್ಮರು ಈ ಸಮಾಜದಲ್ಲಿ ಪ್ರಮುಖ ಸ್ಥಾನ ಪಡೆದಿರುವಾಗ ಇನ್ನೆಲ್ಲಿಯ ಆ ಮೋಹನ್ ದಾಸ್ ಕರಮಚಂದ್ ಗಾಂಧಿ. ಒಂದು ವೇಳೆ ಹೇಳುವ ಪ್ರಯತ್ನ ಮಾಡಿದರೂ ಅದು ಅರ್ಥವೇ ಆಗದಷ್ಟು ಯುವ ಮನಸುಗಳು ಸೀಡ್ಲೆಸ್ ಆಗಿವೆ ಮತ್ತು ಗುಲಾಮಿ ಮನೋಭಾವವನ್ನು ಒಪ್ಪಿಕೊಂಡಾಗಿದೆ.
ಅದು ರಿಯಲ್ ಎಸ್ಟೇಟ್ ಇರಲಿ, ಹಾರ್ಡ್ವೇರ್ ಇರಲಿ, ಸಾಫ್ಟ್ವೇರ್ ಇರಲಿ ಹಣದ ಆಧಾರದ ಮೇಲೆ, ಅದರ ಆಗುಹೋಗುಗಳ ಸುತ್ತಲೇ ಇವರ ಮನಸ್ಸು ಮತ್ತು ಸಂಪೂರ್ಣ ಬದುಕು ಸುತ್ತುತ್ತಿರುವುದರಿಂದ ಗಾಂಧಿಯ ಆದರ್ಶಗಳ ಅವಶ್ಯಕತೆ ಅವರಿಗೆ ಇಲ್ಲ ಎನಿಸುತ್ತದೆ ಹಾಗೂ ಮೋಹನ್ ದಾಸ್ ಗಾಂಧಿಯನ್ನು ಮರೆಸುವ ಪ್ರಯತ್ನಗಳು ಸಹ ನಡೆಯುತ್ತಿವೆ. ಅವರನ್ನು ಖಳನಾಯಕನಾಗಿ ಚಿತ್ರಿಸುವ ಬರಹಗಳು, ಭಾಷಣಗಳು, ಉಪನ್ಯಾಸಗಳು ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿರುವುದರಿಂದ ಗಾಂಧಿ ಸಾಮಾನ್ಯ ಗಾಂಧಿಯಾಗಿ ಗುರುತಿಸಿಕೊಳ್ಳುವ ಹಂತ ತಲುಪಿಯಾಗಿದೆ. ಬದುಕಿನ ತೀವ್ರತೆಯನ್ನು ಅನುಭವಿಸಲಾಗದ ನಮ್ಮ ದೇಹ ಮನಸುಗಳು ನಮ್ಮ ಬದುಕಿಗೆ ಕೊಳ್ಳಿ ಇಡುವ ವ್ಯಕ್ತಿಗಳನ್ನೇ ಮಹಾತ್ಮ ಎಂದು ಗುರುತಿಸುವ ಹಂತಕ್ಕೆ ತಲುಪಿರುವುದು ವಿಷಾದನೀಯ.
ಹಾಗೆಂದು ತುಂಬಾ ನಿರಾಶರಾಗಬೇಕಿಲ್ಲ. ಯುವಕರಿಗೆ ಒಂದೆರಡು ದಶಕಗಳಿಂದ ಅವರನ್ನು ಕಾಡುತ್ತಿರುವ ಈ ಹಣದ ಮಾನಸಿಕ ರೋಗ ಸುಖಲೋಲುಪತೆಯ ಆಸೆ ಆಕಾಂಕ್ಷಿಗಳು ಕೆಲವೇ ವರ್ಷಗಳಲ್ಲಿ ಭ್ರಮನಿರಸನ ಉಂಟುಮಾಡಿ ಸಮಾಜ ಮತ್ತೆ ಮೌಲ್ಯಗಳಿಗಾಗಿ ತುಡಿಯುವುದು ಬಹುತೇಕ ನಿಶ್ಚಿತ. ಇಂದಿನ ಎಲ್ಲಾ ವಿದ್ಯಮಾನಗಳನ್ನು ನೋಡುತ್ತಿದ್ದರೆ ಮನಸ್ಸಿನ ಪ್ರಕ್ಷುಬ್ಧತೆಯ ನಿಯಂತ್ರಣವೇ ದೊಡ್ಡ ಸವಾಲಾಗಿದೆ .ಎಲ್ಲರೂ ಅತೃಪ್ತ ಆತ್ಮದ ಭೂತಗಳಂತೆ ಓಡಾಡುತ್ತಿದ್ದಾರೆ. ವಸ್ತು ಸಂಸ್ಕೃತಿಯೇ ನಿಜವಾದ ಮಜಾ ಸಂಸ್ಕೃತಿ ಎಂಬುದಾಗಿ ಭಾವಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ......
ಗಾಂಧಿಗೊಂದು ವಿದಾಯ ಹೇಳುವ ಸಮಯ ಬಂದಿದೆಯೇ? ನನ್ನ ಅರಿವಿಗೆ ಬಂದಂತೆ ಗಾಂಧಿಯನ್ನು ಇಷ್ಟಪಡುವವರ ಸಂಖ್ಯೆ ದಿನೇ ದಿನೇ ವೇಗವಾಗಿ ಕುಸಿಯುತ್ತಿರುವ ಅನುಭವವಾಗುತ್ತಿದೆ ಮತ್ತು ಅದಕ್ಕಿಂತ ಹೆಚ್ಚಾಗಿ ಗಾಂಧಿಯನ್ನು ವಿರೋಧಿಸುವವರ ಸಂಖ್ಯೆ ಇನ್ನೂ ಹೆಚ್ಚಾಗುತ್ತಿದೆ ಅಷ್ಟೇ ಅಲ್ಲ ಗಾಂಧಿಯನ್ನು ದ್ವೇಷಿಸುವವರ ಸಂಖ್ಯೆ ಮತ್ತೂ ಹೆಚ್ಚಾಗುತ್ತಿದೆ. ಇನ್ನೂ ಆಳಕ್ಕೆ ಇಳಿದು ನೋಡಿದಾಗ ಕೆಲವರು ಗಾಂಧಿಯನ್ನು ಸಿಕ್ಕಿದರೆ ಮತ್ತೊಮ್ಮೆ ಇರಿದು ಇರಿದು ಕೊಲ್ಲುವ ಮಾತನಾಡುತ್ತಾರೆ. ಇಂತಹ ಗಾಂಧಿಯನ್ನು ಮಹಾತ್ಮ ಪಟ್ಟದಿಂದ ಕೆಳಗಿಳಿಸಲು ಇದು ಅತ್ಯಂತ ಸುಸಮಯ. ಈಗಾಗಲೇ ಗಾಂಧಿಯ ಪ್ರತಿಮೆಗಳು ಕಣ್ಮರೆಯಾಗುತ್ತಿವೆ. ಅವರ ಚಿಂತನೆಗಳು ನಾಶವಾಗುತ್ತಿವೆ. ಅದರ ವಿರುದ್ಧ ಚಿಂತನೆಗಳು ಮಾನ್ಯತೆ ಪಡೆಯುತ್ತಿವೆ.
ಒಂದು ಕಡೆ ಭಗವದ್ಗೀತೆಯ ಶ್ಲೋಕಗಳು, ಮತ್ತೊಂದು ಕಡೆ ವೇದ ಉಪನಿಷತ್ತು ಮನುಸ್ಮೃತಿಗಳ ಕಡೆಗೆ ಒಲವು, ಇನ್ನೊಂದು ಕಡೆ ಖುರಾನ್ ಪ್ರಚಾರ, ಮಗದೊಂದು ಕಡೆ ಬೈಬಲ್ ವಿಸ್ತರಣೆ ಹಾಗೆಯೇ ಬುದ್ದನ ಚಿಂತನೆಗಳು, ಚಾಣಕ್ಯನ ನೀತಿಗಳು, ಆಚಾರ್ಯತ್ರಯರ ಸಂದೇಶಗಳು, ಬಸವಣ್ಣನವರ ವಚನಗಳು, ವಿವೇಕಾನಂದರ ಉಪನ್ಯಾಸಗಳು, ಬಾಬಾ ಸಾಹೇಬರ ವಿಚಾರಗಳು ಮುನ್ನಲೆಗೆ ಬಂದು ಒಂದು ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದೆ. ಇದರ ಜೊತೆಗೆ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್, ವೀರ ಸಾರ್ವರ್ಕರ್ ಅವರನ್ನು ಗಾಂಧಿಯ ವಿರುದ್ಧ ವಿಜೃಂಭಿಸುವ ಭಾಷಣಗಳು, ಪುಸ್ತಕಗಳು, ಉಪನ್ಯಾಸಗಳು ಸಹ ಹೆಚ್ಚಾಗಿದೆ.
ಇಂತಹ ಸಂದರ್ಭದಲ್ಲಿ ಗಾಂಧಿಯನ್ನು ಇಟ್ಟುಕೊಂಡು ಮಾಡುವುದಾದರೂ ಏನು. ಗಾಂಧಿಯೊಬ್ಬ ಬ್ರಿಟಿಷ್ ಏಜೆಂಟ್, ಗಾಂಧಿಯೊಬ್ಬ ನಪುಂಸಕ, ಗಾಂಧಿಯೊಬ್ಬ ಕಪಟಿ, ಗಾಂಧಿಯೊಬ್ಬ ರಣಹೇಡಿ, ಗಾಂಧಿಯೊಬ್ಬ ಹಿಂದುತ್ವದ ವಿರೋಧಿ ಎಂದು ಹಿಯಾಳಿಸಿ ಕೇಳಿಬರುತ್ತಿರುವ ಮಾತುಗಳ ನಡುವೆ ಗಾಂಧಿ ಸಮರ್ಥನೆಯ ವ್ಯರ್ಥ ಪ್ರಯತ್ನ ಬಿಟ್ಟು ಅವರಿಗೆ ಒಂದು ವಿದಾಯ ಹೇಳಿ ಬಿಡೋಣ.
ಗಾಂಧಿ ಬದುಕಿದ್ದ ಸಮಯದಲ್ಲಿ ಬಹುತೇಕ ಅನಕ್ಷರಸ್ಥರಿಂದಲೇ ದೇಶ ತುಂಬಿತ್ತು. ಜನರ ಬಳಿ ಹಣವಿರಲಿಲ್ಲ. ಯಾವುದೇ ಪ್ರಬಲ ಮಾಧ್ಯಮಗಳು ಜನಪ್ರಿಯವಾಗಿರಲಿಲ್ಲ. ಚುನಾವಣಾ ರಾಜಕೀಯ ಹೆಚ್ಚು ಪ್ರಚಲಿತದಲ್ಲಿರಲಿಲ್ಲ. ಅಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮಹಾತ್ಮಾನಾಗುತ್ತಾನೆ. ಆದರೆ ಈಗ ಎಲ್ಲರೂ ಬುದ್ದಿವಂತರೇ, ಜ್ಞಾನಿಗಳೇ, ಮೇಧಾವಿಗಳೇ. ಎಲ್ಲರ ಬಳಿಯೂ ವಿಶ್ವದ ಸಂಪೂರ್ಣ ಮಾಹಿತಿ ನೀಡುವ ಮೊಬೈಲ್ ತಂತ್ರಜ್ಞಾನವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನ ಮತ್ತು ಅದು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಬಹುತೇಕರ ಬಳಿ ದುಡ್ಡು ಇದೆ. ಅದರಿಂದಾಗಿಯೇ ಅವರಿಗೆ ಗಾಂಧಿ ಒಬ್ಬ ಸವಕಲು ನಾಣ್ಯದಂತೆ ಕಾಣುತ್ತಾರೆ.
ತನ್ನ ಮಕ್ಕಳನ್ನೇ ಸರಿಯಾಗಿ ನಿರ್ವಹಿಸಲಿಲ್ಲ ಗಾಂಧಿ, ತನ್ನ ದೇಹವನ್ನೇ ಸರಿಯಾಗಿ ನಿರ್ವಹಿಸಲಿಲ್ಲ ಗಾಂಧಿ ಇನ್ನೂ ತನ್ನ ದೇಶವನ್ನು ನಿರ್ವಹಿಸಲು ಸಾಧ್ಯವೇ ಎಂದು ಬಹಳ ಜನ ಕೇಳುತ್ತಾರೆ. ಒಬ್ಬ ಮಂತ್ರಿ " ಶಸ್ತ್ರ ಮತ್ತು ಶಾಸ್ತ್ರದ ಬಲದಿಂದ ಸ್ವಾತಂತ್ರ್ಯ ಲಭಿಸಿತೇ ಹೊರತು ಅಹಿಂಸೆಯಿಂದ ಅಲ್ಲ " ಎಂದು ನೇರವಾಗಿಯೇ ಗಾಂಧಿಯ ಕೊಡುಗೆಯನ್ನು ಅಲ್ಲಗಳೆದರು. ಇನ್ನೊಬ್ಬ ಮಂತ್ರಿ " ನಾಥುರಾಂ ಘೋಡ್ಸೆ ನಿಜವಾದ ದೇಶಪ್ರೇಮಿ - ಗಾಂಧಿ ದೇಶದ್ರೋಹಿ " ಎಂದು ಬಹಿರಂಗವಾಗಿಯೇ ಹೇಳಿದರು. ಸತ್ಯ ಅಹಿಂಸೆ ಸರಳತೆ ನೈತಿಕತೆ ಮಾನವೀಯ ಮೌಲ್ಯಗಳು ಸಂಪೂರ್ಣ ಕುಸಿತ ಕಂಡಿರುವಾಗ ಗಾಂಧಿಯನ್ನು ಮರೆಯುವುದೇ ಒಳಿತು. ಇಲ್ಲದಿದ್ದರೆ....
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!