ಜಲ ಜಾಗೃತಿ ಯಾಕೆ? ಹೇಗೆ?

ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಅಡ್ದೂರು ಕೃಷ್ಣ ರಾವ್ ಅವರ ಪ್ರವೃತ್ತಿ ಕೃಷಿ. ಕೃಷಿಯಲ್ಲಿ ನೀರಿನ ಕೊರತೆ ಮತ್ತು ಅಗತ್ಯತೆಯನ್ನು ಬಹಳ ಹತ್ತಿರದಿಂದ ಕಂಡವರು ಇವರು. ತಮ್ಮ ಬರಹಗಳ ಮೂಲಕ ನೀರಿನ ಉಳಿವಿಗಾಗಿ ಜಲಜಾಗೃತಿಯ ಆಂದೋಲವನ್ನೇ ಹುಟ್ಟಿ ಹಾಕಿದವರು. ತಮ್ಮ ಅಂಕಣ ಬರಹಗಳ ಮೂಲಕ ಓದುಗರಲ್ಲಿ ‘ಜಲ’ ಪ್ರೀತಿಯನ್ನು ಮೂಡಿಸಿದವರು. ಇವರು ವಿವಿಧ ಪತ್ರಿಕೆಗಳಲ್ಲಿ ಬರೆದ ‘ಜಲ ಜಾಗೃತಿ’ ಬಗ್ಗೆ ಮಾಹಿತಿಗಳನ್ನು ಒಂದೆಡೆ ಕಲೆ ಹಾಕಿ ಪುಸ್ತಕ ರೂಪದಲ್ಲಿ ‘ಜಲ ಜಾಗೃತಿ ಯಾಕೆ? ಹೇಗೆ?’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. 

ಈ ಕೃತಿಗೆ ಯೋಗ್ಯವಾದ ಮುನ್ನುಡಿಯನ್ನು ಬರೆದಿದ್ದಾರೆ ಪರಿಸರ ಪ್ರೇಮಿ, ಅಂಕಣಕಾರ ಶಿವಾನಂದ ಕಳವೆ. ತಮ್ಮ ಮುನ್ನುಡಿ “ಜಲ ಜಾಗೃತಿಯ ತುರ್ತು” ನಲ್ಲಿ ಬರೆಯುತ್ತಾ “ ನಮ್ಮೆಲ್ಲರ ದಿನಚರಿ ಶುರುವಾಗುವುದು, ಬದುಕು ಸಾಗುವುದು, ಕೃಷಿ-ಉದ್ಯಮಗಳೆಲ್ಲ ನಡೆಯುವದು ನೀರು ನಂಬಿಯೇ ಅಲ್ಲವೇ? ಆಸ್ಪತ್ರೆ, ಔಷಧ ತಯಾರಿಗೂ ಶುದ್ಧ ನೀರು ಬೇಕು. ನಮ್ಮ ಎಲ್ಲ ಸಾಧನೆಗಳ ಹಿಂದೆ ನೀರಿದೆ. ಇಂದು ಯಾರು ಎಷ್ಟು ಓದಿದ್ದಾರೆಂಬುದಕ್ಕಿಂತ ನೀರಿನ ವಿಚಾರದಲ್ಲಿ ಎಷ್ಟು ಅರಿತಿದ್ದಾರೆಂಬುದು ಮುಖ್ಯ. ಹವಾಮಾನ ಬದಲಾವಣೆಗಳಿಂದ ತೀವ್ರ ಬರ, ಅತಿಯಾದ ಮಳೆಯನ್ನು ಅನುಭವಿಸಲು ಆರಂಭಿಸಿದ್ದೇವೆ. ಕಳೆದ ವರ್ಷ ಜಲಕ್ಷಾಮ ಕಷ್ಟದಲ್ಲಿ ಎಷ್ಟೇ ಬಳಲಿದ್ದರೂ ಈ ವರ್ಷದ ಮಳೆಯಲ್ಲಿ ತುಸುವೂ ನೆನಪಿರುವುದಿಲ್ಲ. ನೀರಿನ ವಿಚಾರದಲ್ಲಿ ಪ್ರತಿ ವ್ಯಕ್ತಿ, ಕುಟುಂಬ ಜಾಗೃತಿಯ ಕಾರ್ಯ ಮಾಡಬೇಕಾದ ಜಲತುರ್ತಿನಲ್ಲಿ ನಾವಿದ್ದೇವೆ.

ನಮ್ಮ ಬದುಕಿನ ನೆನಪುಗಳನ್ನು ಒಮ್ಮೆ ಓದಿ ನೋಡಿ. ಬೇಸಿಗೆಯ ಎಪ್ರಿಲ್ ತಿಂಗಳಿನ ಬಿಸಿಲಿನ ಉರಿಯಲ್ಲಿ ಕರಾವಳಿ, ಮಲೆನಾಡಿನ ನಾವುಗಳು ಇಂದಿಗೆ ೩೦-೪೦ ವರ್ಷಗಳ ಹಿಂದೆ ಹಳ್ಳಗಳಲ್ಲಿ ಈಜು ಕಲಿತವರು. ಬೇಸಿಗೆಯ ಆ ದಿನಗಳಲ್ಲಿ ನಮ್ಮ ಹೊಳೆಗಳು ಹರಿಯುತ್ತಿದ್ದ ಸಾಕ್ಷ್ಯವದು. ಇಂದು ನವೆಂಬರ್ ಹೊತ್ತಿಗೆ ಒಣಗಲು ಶುರುವಾಗುತ್ತವೆ. ಕೊಳವೆ ಬಾವಿಯ ಆಳ ೧೯೨೦ ಅಡಿ ತಲುಪಿದ ಕೋಲಾರದಲ್ಲಿಯೂ ೧೯೮೪ರಲ್ಲಿ ತೆರೆದ ಬಾವಿಗಳಲ್ಲಿ ನೀರಿತ್ತು. ಚಿತ್ರದುರ್ಗದ ಹಳ್ಳಿಗಳಲ್ಲಿಯೂ ಹಳ್ಳದ ಮರಳನ್ನು ಕೈಯಲ್ಲಿ ಬಗೆದರೆ ಅಸರುವ ನೀರು ತುಸು ಹೊತ್ತಿನ ನಂತರ ಕುಡಿಯಲು ಯೋಗ್ಯವಿತ್ತು. ಈಗ ಸುಮಾರು ೨೦-೨೫ ವರ್ಷಗಳ ಹಿಂದೆ ನೀರಿನ ಬಳಕೆ ಹೆಚ್ಚಿದೆ, ಬಹುವಾರ್ಷಿಕ ತೋಟಗಾರಿಕೆ, ಉದ್ಯಮಗಳಿಗೆ ನದಿ ಕಣಿವೆಯ ನೀರು ಹರಿದಿದೆ. ರಾಜ್ಯದಲ್ಲಿ ಸುಮಾರು ೭ ಲಕ್ಷ ಹೆಕ್ಟೇರ್ ಅಡಿಕೆ ತೋಟವಿರುವ ಅಂದಾಜಿದೆ. ಒಂದು ಎಕರೆ ತೋಟಕ್ಕೆ ಬೇಸಿಗೆಯಲ್ಲಿ ಸರಿಸುಮಾರು ೧೩,೦೦೦ ಲೀಟರ್ ನೀರು ಬೇಕು. ೩೦೦-೬೦೦ ಮಿಲಿ ಮೀಟರ್ ಮಳೆಯ ಪ್ರದೇಶದಲ್ಲಿಯೂ ಇಂದು ಕೊಳವೆ ಬಾವಿ ನಂಬಿ ತೋಟಗಾರಿಕೆ ವಿಸ್ತರಣೆಯಾಗಿದೆ. ರೈತರ ಆದಾಯವೆಲ್ಲ ನೀರಾವರಿ ಖರ್ಚಿಗೆ ಖಾಲಿಯಾಗುತ್ತಿದೆ. ರಾಜ್ಯದಲ್ಲಿ ೩೯,೧೭೩ ಕೆರೆಗಳಿವೆ. ಬಹುತೇಕ ಹೂಳು ತುಂಬಿವೆ. ಪ್ರಮುಖ ಐದು ನದಿ ಕಣಿವೆಗಳಿಂದ ೩೪೭೨.೫ ಟಿ ಎಮ್‌ ಸಿ ಮಾತ್ರ ನೀರಿದೆ. ಇವುಗಳಲ್ಲಿ ಈಗಾಗಲೇ ಬಹುತೇಕ ಬಳಕೆಯಾಗಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ೪೫ ಲಕ್ಷ ಕೊಳವೆ ಬಾವಿಗಳಿವೆ. ಇದು ನೀರಿನ ಭವಿಷ್ಯದ ದಿಕ್ಕೂಚಿ. ಅಂತರ್ಜಲ ಬಳಕೆ ಹೀಗೆ ಹೆಚ್ಚುತ್ತ ಹೋದರೆ ವಾಡಿಕೆಯ ನಾಲ್ಕು ಪಟ್ಟು ಮಳೆ ಸುರಿದರೂ ರಾಜ್ಯಕ್ಕೆ ಪ್ರತಿ ವರ್ಷ ಜಲಕ್ಷಾಮ ಬರುತ್ತದೆ.

ಕೃಷಿಕರು, ಉದ್ಯಮಿಗಳು, ಮಕ್ಕಳು, ವೃದ್ಧರು ಹೀಗೆ ಎಲ್ಲರಿಗೂ ನೀರುಳಿಸುವ ಪಾಠ ಬೇಕು. ಐದು ಜನರ ಒಂದು ಕುಟುಂಬಕ್ಕೆ ದಿನಕ್ಕೆ ಸಾವಿರ ಲೀಟರ್ ಖರ್ಚಾಗುತ್ತದೆ. ಇದನ್ನು ಹೇಗೆ ಕಡಿಮೆಗೊಳಿಸಬಹುದೆಂಬ ಅರಿವು ಅಗತ್ಯ. ಛಾವಣಿ ನೀರಿನ ಕೊಯ್ದು, ನೀರಿಂಗಿಸುವ ಮಾದರಿ, ಕೆರೆ ಪುನಶ್ವೇತನ, ಅರಣೀಕರಣ, ಕೃಷಿಹೊಂಡ ಹೀಗೆ ನೀರಿನ ವಿಚಾರದಲ್ಲಿ ತುರ್ತಾಗಿ ಮಾಡಲೇಬೇಕಾದ ಹಲವು ಕಾರ್ಯಗಳಿವೆ. ಜಲ ಸಂರಕ್ಷಣೆಯ ಯಶೋಗಾಥೆಗಳನ್ನು ಹಂಚುವ ಕಾರ್ಯ

ನಿರಂತರವಾಗಿ ನಡೆಯಬೇಕು. ಕಳೆದ ೨೦೦೧ರಿಂದ ರಾಜ್ಯದ ನೆಲ ಜಲದ ಕಾಯಕವನ್ನು ಹತ್ತಿರದಿಂದ ಗಮನಿಸಿದ್ದೇನೆ. ಸಂರಕ್ಷಣೆಯ ಕೆಲಸಗಳು ನಡೆದಿವೆ. ಆದರೂ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ನಮ್ಮ ಶಾಲೆಯ ಮಕ್ಕಳಿಗಂತೂ ನೀರಿನ ಕುರಿತ ಅಜ್ಞಾನ ದೊಡ್ಡದಿದೆ. ಪರಿಸ್ಥಿತಿ ಹೀಗಾದರೆ ಹೇಗೆ? ಹನಿ ಹನಿಯೂ ಅಮೂಲ್ಯವೆಂದು ಎಚ್ಚರಿಸುವುದು ಹೇಗೆ? ಅಂಥ ವಿಶೇಷ ಪ್ರಯತ್ನ ಈ ಕೃತಿಯಲ್ಲಿದೆ.” ಎಂದು ಅಡ್ದೂರು ಕೃಷ್ಣ ರಾವ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲೇಖಕರಾದ ಅಡ್ದೂರು ಕೃಷ್ಣ ರಾವ್ ಅವರು “ಜಲಜಾಗೃತಿಯ ಚಿಂತನೆಗೆ ನಿಮ್ಮ ಮನದಲ್ಲೊಂದಿಷ್ಟು ಜಾಗ ಕೊಡಿ’ ಎನ್ನುತ್ತಾ “ನೀರಿನ ಬಗ್ಗೆ ನಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸಿದ್ದೇವೆ. ಆದರೆ ನಮಗೆ ಗೊತ್ತಿಲ್ಲದ ಹಾಗೂ ನಾವು ಒಪ್ಪಿಕೊಳ್ಳಲೇಬೇಕಾದ ಹಲವು ಸಂಗತಿಗಳಿವೆ.

ಅಂತಹ ಒಂದು ಸಂಗತಿ: ಈ ಭೂಮಿ ಸುಮಾರು ೪.೬ ಬಿಲಿಯನ್ ವರುಷಗಳ ಮುಂಚೆ ರೂಪುಗೊಂಡಾಗ ಇಲ್ಲಿ ಎಷ್ಟು ನೀರು ಇತ್ತೋ ಈಗಲೂ ಅಷ್ಟೇ ಇದೆ. ಆದರೆ ಜನಸಂಖ್ಯೆ ಮಾತ್ರ ವೇಗವಾಗಿ ಹೆಚ್ಚುತ್ತಿದೆ. ಅದರಿಂದಾಗಿ ನೀರಿನ ತಲಾ ಲಭ್ಯತೆ ಕಡಿಮೆಯಾಗುತ್ತಿದೆ ಎಂಬುದು.

ಭೂಮಿಯ ಜನಸಂಖ್ಯೆ ಒಂದು ಬಿಲಿಯನ್‌ನಿಂದ ಎರಡು ಬಿಲಿಯನ್‌ಗೆ ಏರಲು ೧೨೬ ವರುಷ ತಗಲಿತು (೧೮೦೪ರಿಂದ ೧೯೩೦). ಆದರೆ ೧೯೮೭ರಿಂದೀಚೆಗೆ ಪ್ರತಿ ೧೨ ವರುಷಕ್ಕೊಮ್ಮೆ ಭೂಮಿಯ ಜನಸಂಖ್ಯೆ ಒಂದು ಬಿಲಿಯನ್ ಹೆಚ್ಚುತ್ತಿದ್ದು, ೨೦೨೪ರ ಆರಂಭದಲ್ಲಿ ಜನಸಂಖ್ಯೆ ೮ ಬಿಲಿಯನ್ (೮೦೦ ಕೋಟಿ) ದಾಟಿದೆ. ಹಾಗಾಗಿ ನೀರಿನ ತಲಾ ಲಭ್ಯತೆ ಎಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಿ. ಜಗತ್ತಿನಲ್ಲಿ ಅತ್ಯಧಿಕ ಜನರಿರುವ ನಮ್ಮ ಭಾರತದ ಜನಸಂಖ್ಯೆ ೧೪೩ ಕೋಟಿಗಿಂತ ಅಧಿಕ. ಆದ್ದರಿಂದ ನಾವಂತೂ ನೀರಿನ ತಲಾ ಲಭ್ಯತೆ ಬಗ್ಗೆ ತುರ್ತಾಗಿ ಗಮನ ಹರಿಸಬೇಕಾಗಿದೆ. ಇನ್ನು ೨೫ ವರುಷದಲ್ಲಿ ಅಂದರೆ ೨೦೫೦ರಲ್ಲಿ ನಮ್ಮ ಮಕ್ಕಳಿಗೆ ಸಾಕಷ್ಟು ನೀರು ಸಿಕ್ಕೀತೇ? ಎಂಬುದೇ ನಾವು ಉತ್ತರಿಸಬೇಕಾದ ಪ್ರಶ್ನೆ.

ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ ೧೦೦ ಲೀಟರ್ ನೀರು ಬಳಸುತ್ತಾರೆ. ಅಂದರೆ ವರುಷಕ್ಕೆ ೩೬,೫೦೦ ಲೀಟರ್ ನೀರು! ಭೂಮಿಗೆ ಕನಿಷ್ಠ ಇಷ್ಟು ನೀರಿನ ಮರುಪೂರಣ ಮಾಡುವ ಜವಾಬ್ದಾರಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇಲ್ಲವೇ? ಈ ಜವಾಬ್ದಾರಿ ನಿರ್ವಹಿಸದಿದ್ದರೆ, ೨೦೫೦ರಲ್ಲಿ ನಮ್ಮ ಮಕ್ಕಳಿಗೆ ದಿನಕ್ಕೆ ತಲಾ ೧೦೦ ಲೀಟರ್ ನೀರು ಹೇಗೆ ಸಿಕ್ಕೀತು?

ತಾನು ಬಳಸುವಷ್ಟು ನೀರಿನ ಮರುಪೂರಣದ ಮಾತು ಹಾಗಿರಲಿ. ನಮ್ಮ ಪರಿಚಿತರು, ಬಳಗದವರು, ಸುತ್ತಮುತ್ತಲಿನವರಲ್ಲಿ ನೀರು ಪೋಲು ಮಾಡುವವರು ಎಷ್ಟು ಜನರಿದ್ದಾರೆ? (ಕಾರು ತೊಳೆಯಲು, ಅಂಗಳ ತೊಳೆಯಲು ಇತ್ಯಾದಿ.) ಇವರು ತಮ್ಮ ವರ್ತನೆ ಬದಲಾಯಿಸದಿದ್ದರೆ ೨೦೫೦ರಲ್ಲಿ ಏನಾದೀತು ಕೃಷಿಯಲ್ಲಿ ನೀರಿನ ಬಳಕೆಯಂತೂ ಗಂಭೀರ ಸವಾಲು. ಯಾಕೆಂದರೆ, ನಮ್ಮ ಒಟ್ಟು ನೀರಿನ ಬಳಕೆಯ ಶೇಕಡಾ ೭೦ರಷ್ಟು ಕೃಷಿಗೆ ಬಳಕೆಯಾಗುತ್ತಿದೆ. ಹಾಗಿರುವಾಗ, ಆಯಾ ಪ್ರದೇಶದಲ್ಲಿ ಬೀಳುವ ಮಳೆಯ ಪರಿಮಾಣ ಅವಲಂಬಿಸಿ, ಯಾವ ಬೆಳೆ ಬೆಳೆಸಬೇಕೆಂದು ನಿರ್ಧರಿಸಬೇಕಾದ್ದು ಅನಿವಾರ್ಯ. ಆದರೆ ನಾವೇನು ಮಾಡುತ್ತಿದ್ದೇವೆ? 

'ಲಾಭದ ಬೆಳೆ' ಎಂಬ ಕಾರಣಕ್ಕಾಗಿ, ನಿರ್ದಿಷ್ಟ ಪ್ರದೇಶಕ್ಕೆ ಸೂಕ್ತವಲ್ಲದ ಬೆಳೆಗಳನ್ನು ಬೆಳೆಯುವ ಪ್ರವೃತ್ತಿ ಜಾಸ್ತಿಯಾಗುತ್ತಿದೆ. ಉದಾಹರಣೆಗೆ, ಅಧಿಕ ಮಳೆ ಬೀಳುವ ಪ್ರದೇಶಕ್ಕೆ ಸೂಕ್ತ ಬೆಳೆ ಅಡಿಕೆ. ಕಳೆದ ೧೦ ವರುಷಗಳಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಅಡಿಕೆ ಕೃಷಿ ಆತಂಕಕಾರಿಯಾಗಿ ವ್ಯಾಪಿಸಿದೆ. ಅಡಿಕೆ ತೋಟಕ್ಕೆ ನೀರು ಹಾಯಿಸಲಿಕ್ಕಾಗಿ, ಸಾವಿರಾರು ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ. ಆದರೆ, ಕೊಳವೆಬಾವಿಗಳಿಗೆ ಜಲ ಮರುಪೂರಣ ಮಾಡುವುದರ ಬಗ್ಗೆ ರೈತರಲ್ಲಿ ನಿರ್ಲಕ್ಷ್ಯ. ಇದರಿಂದಾಗಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಲಕ್ಷಗಟ್ಟಲೆ ವರುಷಗಳಿಂದ ನೆಲದಾಳದಲ್ಲಿ ಭೂಮಿ ಕಾಯ್ದಿಟ್ಟ ಅಂತರ್ಜಲವನ್ನು ೧೫೦೦-೧೯೦೦ ಅಡಿ ಆಳದ ವರೆಗೂ ಕೊಳವೆ ಬಾವಿ ಕೊರೆದು ಕೊಳ್ಳೆ ಹೊಡೆಯುತ್ತಿದ್ದೇವೆ. ಹೀಗಾದರೆ, ೨೦೫೦ರಲ್ಲಿ ನಮ್ಮ ಮಕ್ಕಳಿಗೆ ಕುಡಿಯಲು ನೀರು ಸಿಕ್ಕೀತೇ?

ಈ ಪ್ರಶ್ನೆಯ ಗಂಭೀರತೆ ಅರ್ಥವಾಗಬೇಕಾದರೆ, ಒಂದೇ ಒಂದು ಲೆಕ್ಕಾಚಾರ ಗಮನಿಸಿ. ಒಂದು ಹಳ್ಳಿಯಲ್ಲಿ ಅಥವಾ ಬಡಾವಣೆಯಲ್ಲಿ ೧೦೦ ಕೊಳವೆ ಬಾವಿಗಳಿದ್ದರೆ, ಅದರ ವಾಸ್ತವ ಏನು? (ಪ್ರತಿಯೊಂದು ಕೊಳವೆ ಬಾವಿಯ ಕೇಸಿಂಗ್ ಪೈಪಿನ ವ್ಯಾಸ ೬ ಇಂಚು) ಏನೆಂದರೆ, ಸುಮಾರು ೫೦ ಅಡಿ ವ್ಯಾಸದ ಒಂದೇ ಪೈಪಿನ ಮೂಲಕ ಅಲ್ಲಿ ನೆಲದಾಳದಿಂದ ನೀರೆತ್ತಲಾಗುತ್ತಿದೆ! ಇದರಿಂದಾಗಿ ಅಂತರ್ಜಲ ಖಾಲಿಯಾಗದೆ ಇದ್ದೀತೇ?

ಈ ಪುಸ್ತಕದ ಬರಹಗಳಲ್ಲಿ, ಇಂತಹ ಪ್ರಶ್ನೆಗಳ ಉತ್ತರಗಳ ಹುಡುಕಾಟವಿದೆ. ಅದುವೇ ಜಲಸಾಕ್ಷರತೆ, ಈ ಉತ್ತರಗಳನ್ನು ಅರ್ಥ ಮಾಡಿಕೊಂಡು, ನಾವು ಜಲಸಾಕ್ಷರರಾಗಿ, ನಮ್ಮ ನೀರಿನೆಚ್ಚರವನ್ನು ಸಮುದಾಯಕ್ಕೆ ಹಬ್ಬಿಸುವುದೇ ಜಲಜಾಗೃತಿ, ಅದುವೇ ಈ ಪುಸ್ತಕದ ಉದ್ದೇಶ, ಮುಂದಿನ ಹೆಜ್ಜೆ, ಮನೆಮನೆಗಳಲ್ಲಿ ಹಾಗೂ ಸಮುದಾಯದ ನೆಲೆಯಲ್ಲಿ ಮಳೆಕೊಯ್ದು ಮತ್ತು ನೀರು ಸಂರಕ್ಷಿಸುವ ಹತ್ತು ಹಲವು ಕಾಯಕಗಳ ಮೂಲಕ ಜಲಸಂರಕ್ಷಣೆ.” ಎನ್ನುತ್ತಾ ಜಲ ರಕ್ಷಣೆಯ ಅಗತ್ಯತೆಯನ್ನು ಬಹಳ ಸೊಗಸಾಗಿ ತಮ್ಮ ಮಾತುಗಳಲ್ಲಿ ಹೇಳಿದ್ದಾರೆ.

ಈ ಕೃತಿಯಲ್ಲಿ ಜಲ ಜಾಗೃತಿ ಯಾಕೆ? ಮತ್ತು ಹೇಗೆ? ಎನ್ನುವ ಎರಡು ವಿಭಾಗಗಳಿವೆ. ಪ್ರತಿಯೊಂದು ಅಧ್ಯಾಯವೂ ಚಿಂತನಶೀಲ. ಅದರಲ್ಲಿ ಒಂದು ಅಧ್ಯಾಯ “ಕೋಲಾದ ಪ್ರತಿಸ್ಪರ್ಧಿ ಯಾವುದು?” ಎನ್ನುವುದು. ಒಮ್ಮೆ ಬಹುರಾಷ್ಟ್ರೀಯ ಕಪ್ಪು ಕೋಲಾ ಕಂಪೆನಿಯಲ್ಲಿ ತಮ್ಮ ಕೋಲಾಗೆ ಪ್ರತಿಸ್ಪರ್ಧಿ ಯಾವುದು ಎಂಬ ವಿಚಾರದಲ್ಲಿ ಬಹು ಗಂಭೀರ ಚರ್ಚೆ ನಡೆಯುತ್ತಿತ್ತು. ಕಪ್ಪು ಕೋಲಾದ ಪ್ರತಿಸ್ಪರ್ಧಿ ಕೆಂಪು ಕೋಲಾ ಎನ್ನುವ ಮಾತುಗಳು ಕೇಳಿ ಬಂದವು.

ಆಗ ಒಬ್ಬ ಯುವಕ ಧೃಢ ಸ್ವರದಲ್ಲಿ ಹೇಳಿದ ಕಪ್ಪುಕೋಲಾದ ಪ್ರತಿಸ್ಪರ್ಧಿ ಕೆಂಪು ಕೋಲಾ ಅಲ್ಲ, ನಮ್ಮ ಪ್ರತಿಸ್ಪರ್ಧಿ ‘ನೀರು’ ಎಂದ. ಆತನ ಮಾತು ಎಷ್ಟು ಸತ್ಯ ನೀವೇ ಒಮ್ಮೆ ಆಲೋಚನೆ ಮಾಡಿ. ನಮಗೆ ಬಾಯಾರಿಕೆಯಾದಾಗ ನಾವು ಎಷ್ಟೇ ಕೋಲಾ, ಲೈಮ್, ಎಳನೀರು, ಹಣ್ಣಿನ ರಸಗಳನ್ನು ಕುಡಿದರೂ ನೀರು ಕುಡಿದಾಗ ನಮಗೆ ಸಿಗುವ ಆನಂದ ಅವುಗಳ ಎದುರು ನಗಣ್ಯ. ಈ ಕಾರಣಕ್ಕೇ ಆ ಯುವಕ ಹೇಳಿದ್ದು ಜನರು ನೀರು ಕುಡಿಯುವುದನ್ನು ಬಿಟ್ಟು ನಮ್ಮ ಕಪ್ಪು ಕೋಲಾ ಕುಡಿಯಬೇಕು, ಆಗ ನಮ್ಮ ಮಾರಾಟವು ಗಗನಕ್ಕೇರುತ್ತದೆ ಎಂದು.  ಆ ಲೇಖನದ ಕೊನೆಗೆ ಕೃತಿಕಾರರು ಒಂದು ಮಾತು ಹೇಳುತ್ತಾರೆ, “ನೀರಿಗೆ ಪ್ರತಿಸ್ಪರ್ಧಿಗಳನ್ನು ಹುಟ್ಟುಹಾಕಿ ಲಾಭದ ಕೊಳ್ಳೆ ಹೊಡೆಯುವ ಹುನ್ನಾರಗಳನ್ನು ಹೂತು ಹಾಕೋಣ. ಮನೆಗೆ ಬಂದವರಿಗೆ ನೀರು ಕೊಡುವ ನಮ್ಮ ತಲೆತಲಾಂತರದ ಸಜ್ಜನಿಕೆ ಮುಂದುವರಿಸೋಣ.” ಎಷ್ಟೊಂದು ಸತ್ಯವಾದ ಮಾತು ಅಲ್ಲವೇ?

ಇಂತಹ ಹಲವಾರು ಉದಾಹರಣೆ ಸಹಿತ ಮೂಡಿರುವ ಬರಹಗಳು ಈ ಕೃತಿಯಲ್ಲಿವೆ. ೧೨೦ ಪುಟಗಳ ಈ ಪುಸ್ತಕದ ಪ್ರತೀ ಅಧ್ಯಾಯಕ್ಕೆ ಸೂಕ್ತವಾದ ಚಿತ್ರಗಳನ್ನು ನೀಡಿದ್ದಾರೆ. ಮಳೆಯ ನೀರಿಂಗಿಸುವ ಸರಳವಾದ ಸೂತ್ರವೊಂದನ್ನು ಅವರು ಈ ಕೃತಿಯಲ್ಲಿ ಮುದ್ರಿಸಿದ್ದಾರೆ “ಓಡುವ ನೀರನ್ನು ನಡೆಯುವಂತೆ ಮಾಡಿ ; ನಡೆಯುವ ನೀರನ್ನು ತೆವಳುವಂತೆ ಮಾಡಿ ; ತೆವಳುವ ನೀರನ್ನು ನಿಲ್ಲಿಸಿ ; ನಿಂತ ನೀರನ್ನು ಇಂಗಿಸಿ.”