ಕತೆಗಾರ ವಿನಾಯಕ ಅರಳಸುರಳಿಯವರು ಮುನವ್ವರ್ ಜೋಗಿಬೆಟ್ಟು ಅವರ ‘ಟಚ್ ಮೀ ನಾಟ್’ ಕಥಾ ಸಂಕಲನಕ್ಕೆ ‘ನಜರಿಗೆ ಸಿಕ್ಕ ಕಥೆಗಳು’ ಎಂದು ಹೆಸರಿಸುತ್ತಾ ಬೆನ್ನುಡಿಯೊಂದನ್ನು ಬರೆದಿದ್ದಾರೆ. ಅದರಲ್ಲಿ…
“ಮುನವ್ವರ್ ಅವರ ಕಥೆಗಳು ಬದುಕೆನ್ನುವ ಬೃಹತ್ ರಚನೆಯ ಪುಟ್ಟ ಮಿನಿಯೇಚರ್ ಮಾದರಿಯಂತೆ ಭಾಸವಾಗುತ್ತವೆ. ಪ್ರತಿದಿನ ಅಪ್ಡೇಟಾಗುತ್ತಲೇ ಇರುವ, ತನ್ನ ಕೋಡಿಂಗನ್ನು ತಾನೇ ಬರೆದುಕೊಳ್ಳುತ್ತ ದಿನಕ್ಕೊಂದು ವರ್ಷನ್ನಿನಲ್ಲಿ ಬಿಡುಗಡೆಯಾಗುವ ಸ್ವತಂತ್ರ ಸಾಫ್ಟ್ ವೇರಿನಂಥಾ ನಮ್ಮೀ ಸಮಾಜದ ಪ್ರವಾಹದಿಂದ ಬಗ್ಗಿಸಿಕೊಂಡ ಇಷ್ಟೇ ಇಷ್ಟು ಬೊಗಸೆ ನೀರಿನಂತೆ ಅವುಗಳು. ಕಾಣುವುದು ಬೊಗಸೆಯಷ್ಟೇ ಆದರೂ ಅದು ಇಡೀ ನದಿಯನ್ನೇ ಪ್ರತಿಬಿಂಬಿಸುತ್ತದೆ. ಆ ನೀರನ್ನೇ ಸಿಹಿಯೆಂದು ನಂಬುತ್ತೀವೋ, ಅಥವಾ ಕಹಿಯೆಂದು ಉಗುಳುತ್ತೀವೋ, ಇಲ್ಲಾ ಆ ಪ್ರವಾಹದಿಂದ ಇಷ್ಟಾದರೂ ಕಸ ಆಚೆ ತೆಗೆಯುತ್ತೀವೋ ಎನ್ನುವುದು ನಮಗೆ ಬಿಟ್ಟಿದ್ದು.
ಎಲ್ಲರೂ ಅರ್ಥವಾದಂತೆ ನಟಿಸುವ ಆದರೆ ನಿಜದಲ್ಲಿ ಸಂಕೀರ್ಣ ಸಮೀಕರಣದಂತಿರುವ ಬಡತನವೆನ್ನುವ ಬಾಳೆ ದಿಂಡಿನ ತಿರುಳನ್ನು ಪದರ ಪದರವಾಗಿ ಬಿಚ್ಚಿಟ್ಟು 'ಇದು ಜಗತ್ತು, ಇದೇ ಜಗತ್ತು' ಎಂದು ದಿಟ್ಟವಾಗಿ ಹೇಳುವ ಗಟ್ಟಿತನ ಇಲ್ಲಿನ ಹಲವು ಕಥೆಗಳಲ್ಲಿದೆ. ಬಲ್ಬಿಗೆ ಬೆಳಕನ್ನು ತಲುಪಿಸುವ ತಂತಿಯ ವಿದ್ಯುತ್ತಿನಲ್ಲೇ ಪ್ರಾಣ ತೆಗೆಯುವ ಕರೆಂಟೂ ಇದೆ. ದುರಂತವೆಂದರೆ ನಮ್ಮ ಸಮಾಜದ ಕತ್ತಲನ್ನು ಹೋಗಲಾಡಿಸಲು ಕಂಡು ಹಿಡಿದ ನಾನಾ ಕರೆಂಟುಗಳು ಇಲ್ಲಿಯ ತನಕ ಬೆಳಕು ಕೊಟ್ಟಿದ್ದಕ್ಕಿಂತ ಪ್ರಾಣ ತೆಗೆದಿದ್ದೇ ಹೆಚ್ಚು ಎನ್ನುವ ಸೂಕ್ಷ್ಮವನ್ನು ಉಪ್ಪನ್ನು ಹೀರಿಕೊಂಡ ನೀರಿನಂತೆ ಇಲ್ಲಿನ ಕಥೆಗಳು ಕರಗಿಸಿಕೊಂಡಿವೆ.
ನಾವು ನೋಡಿರಬಹುದಾದ, ನೋಡದೆಯೂ ಇರಬಹುದಾದ ಒಂದಷ್ಟು ಪಾತ್ರಗಳು ಉಳಿಸಿ ಹೋಗುವ ಭಾವನೆಗಳ ಗುಚ್ಛವೇ ‘ಟಚ್ ಮೀ ನಾಟ್’. ಪರಿಪೂರ್ಣತೆಯೆನ್ನುವುದು ಮುಂದೆ ನಡೆದಂತೆಲ್ಲ ಮತ್ತೂ ದೂರಕ್ಕೆ ಹೋಗುವ ದಿಗಂತದಂತೆ. ಈ ಹೊತ್ತಿನ ತಮ್ಮ ನಜರಿಗೆ ಸಿಕ್ಕಿದ್ದನ್ನು ತಿರುಚದೇ ಹೇಳುವ ಪ್ರಾಮಾಣಿಕ ದನಿ ಇಲ್ಲಿನ ಕಥೆಗಳಲ್ಲಿದೆ. ‘ಟಚ್ ಮೀ ನಾಟ್’ಗೆ ಶುಭವಾಗಲಿ.”
ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಝುಬೈರ್ ಹಿಮಮಿ ಪರಪ್ಪು. ಅವರು ತಮ್ಮ ಅನಿಸಿಕೆಯಲ್ಲಿ ‘ಟಚ್ ಮಿ ನಾಟ್’ ಮುನವ್ವರ್ ಜೋಗಿಬೆಟ್ಟು ಇವರ ಎರಡನೇ ಕಥಾ ಸಂಕಲನ. ಬದುಕಿನ ದೈನಿಕದ ಸುತ್ತ ಗಿರಕಿ ಹೊಡೆಯುವ ಇಲ್ಲಿಯ ಕಥೆಗಳಲ್ಲಿ ವ್ಯವಸ್ಥೆಯ ಬಗೆಗಿನ ವಿಷಾದದ ಸಣ್ಣ ನೆರಳೊಂದು ಸದಾ ಎದುರುಗೊಳ್ಳುತ್ತದೆ. ಈ ಕಥಾ ಗುಚ್ಛ ಒಟ್ಟಾರೆಯಾಗಿ ಕರಾವಳಿಯ ಸೂಕ್ಷ್ಮ ಬದುಕಿನ ಬಗೆಗೆ ಇರುವುದಾದರೂ ನಮ್ಮ ಗಡಿಗಳ ಆಚೆಗೂ ವಿಸ್ತರಿಸಿಕೊಂಡಿರುವುದು ಕಥಾಗಾರನ ಗೆಲುವಾಗಿ ಕಾಣುತ್ತದೆ. ಪ್ರತಿ ಕಥೆಗಳೂ ಕೂಡ ಇನ್ನೊಂದು ಕಥೆಯ ಮುಂದುವರಿದ ಭಾಗವಾಗಿ ಅಥವಾ ಅನಂತ ಮೂರ್ತಿಗಳು ಹೇಳಿದ 'ಎಂದೂ ಮುಗಿಯದ ಕಥೆಗಳಾಗಿ'ಓದುಗರಿಗೆ ಸಿಗುತ್ತವೆ.' ನಿಮ್ಮೊಡನಿದ್ದೂ ನಿಮ್ಮಂತಾಗದ' ಕಥೆಯು ಸರಳ ಗದ್ಯದ ಮನುಷ್ಯ ಸಂಬಂಧದ ಬಗೆಗಿನ ಸೆಲೆಯಲ್ಲಿ ಭಾವುಕ ಕಥನವಾಗಿ ಕಾಣುತ್ತದೆ. ಇದು ಎಲ್ಲರೊಳಗನ್ನೂ ತಟ್ಟುವ ಕಾರಣಕ್ಕೆ ಒಂದಿಡೀ ಕಥಾ ಸಂಕಲನದಲ್ಲಿ ನನಗೆ ಪರ್ಸನಲ್ ಫೇವ್ರೆಟ್ ಅನಿಸಿದೆ.
ಬಹುಮುಖ್ಯವಾಗಿ ಮುನವ್ವರ್ ಎಲ್ಲಾ ಕಥೆಗಳಿಗೂ ಒಂದು ಆರಂಭ ಒಂದು ಅಂತ್ಯ ಎಂಬ ಚೌಕಟ್ಟನ್ನು ನೀಡಿದಂತೆ ಅಥವಾ ಕಥೆಗಳೇ ಹಾಗೆ ಒಲಿದುಕೊಂಡಂತೆ ತೋರುತ್ತದೆ. ಕೆಲವೊಮ್ಮೆ ಈ ಸೀಮಾರೇಖೆಗಳು ಕಥಾವಸ್ತುವಿನ ಮಿತಿಗಳಾಗಿ ಕಂಡರೆ ಕೆಲವು ಸಂದರ್ಭಗಳಲ್ಲಿ ಇದೇ ಕಥೆಗಳ ಯಶಸ್ಸಾಗಿ ಉಳಿದುಬಿಡುತ್ತದೆ. ತನ್ನ ಸುತ್ತಲೂ ಕಾಣುವ ಪ್ರತಿಯೊಂದನ್ನು ಬೆರಗು ಕಣ್ಣಿನಿಂದ ನೋಡುವ ಕಲಾವಿದನಂತ ಕಥೆಗಾರ ಬೀದಿಯಲ್ಲಿ ಕಾಣುವ ನಾಯಿಮರಿ, ಸಹ ಪ್ರಯಾಣಿಕ, ಮನೆಗೆ ನುಗ್ಗಿದ ಕೇರೆಹಾವು, ಯಾವುದೋ ಒಂದು ವಾಟ್ಸಪ್ ಸಂದೇಶ, ಹೀಗೇ ಎಲ್ಲರೂ, ಎಲ್ಲವೂ ಒಂದು ದಿವ್ಯ ರೂಪಕವಾಗಿ ಕಥೆಯಾಗುವುದರಲ್ಲಿ ಕೊನೆಗೊಳ್ಳುತ್ತದೆ. ಒಟ್ಟಿನಲ್ಲಿ ಮುನವ್ವರ್ ಒಬ್ಬ ಅಪ್ಪಟ ಮನುಷ್ಯ ಸ್ನೇಹಿಯಾಗಿ, ಭಾವುಕ ಜೀವಿಯಾಗಿ ಓದುಗರಿಗೆ ಅನುಭವವಾಗುತ್ತಾರೆ.
‘ಗೆರೆಗೆ ಸಿಗದ ನದಿ' ಸ್ವಲ್ಪ ಪ್ರೆಡಿಕ್ಟೇಬಲ್ ಅನಿಸಿದರೂ ಅದು ಕೊನೆಗೊಂಡಾಗ ಉಳಿದು ಬಿಡುವ ತೀವ್ರ ವಿಷಾದದ ಕಾರಣಕ್ಕೆ ಕಥೆ ಸೋಲುವುದಿಲ್ಲ. ಅಥವಾ ಕಥೆ ಹೇಳಿದ ಪ್ರಬುದ್ಧತೆ ಮೆಚ್ಚುಗೆಯಾಗುತ್ತದೆ. ಇನ್ನು 'ಮುತ್ತಿಗೆ' ಕಥೆ ಕಥೆಗಾರ ಪ್ರಸ್ತುತ ಪಡಿಸಿದ ಭಿನ್ನ ರೀತಿಯಿಂದ ಬೇರೆಯದೇ ಒಂದು ತುಂಡು ದ್ವೀಪದ ಹಾಗೆ ಉಳಿದ ಕಥೆಗಳಿಂದ ದೂರ ಇದ್ದುಬಿಡುತ್ತದೆ. ಸಂಕಲನದ ಶೀರ್ಷಿಕೆಯಲ್ಲಿರು 'ಟಚ್ ಮಿ ನಾಟ್' ಎಲ್ಲರೂ ಎಲ್ಲರಂತಲ್ಲ ಅನ್ನುತ್ತಲೇ ಒಂದು ತೆರನಾದ ಸಂಕಟವನ್ನು ಹುಟ್ಟುಹಾಕುತ್ತಾ ಮುಗಿದುಬಿಡುತ್ತದೆ.
ಹೀಗೇ ಇಲ್ಲಿರುವ ಎಲ್ಲಾ ಕಥೆಗಳೂ ಎಲ್ಲರದೂ ಹೌದು ಅಥವಾ ನಮ್ಮದೇ ಬದುಕಿನ ಒಂದು ಪುಟ್ಟ ಅಧ್ಯಾಯ ಅನ್ನುವಂತಿದೆ.ಮೊದಲ ಕಥಾಸಂಕಲನ 'ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್' ಬೆನ್ನಿಗೆ ಎಲ್ಲರೊಳಗನ್ನು ಟಚ್ ಮಾಡಿ ಬಿಡಬಲ್ಲ ಈ 'ಟಚ್ ಮಿ ನಾಟ್' ಮುನವ್ವರ್ ಎಂಬ ಕಥೆಗಾರನಿಗೆ ಯಶಸ್ಸು ನೀಡಲಿ.ಮುಂದಕ್ಕೂ ಕಥೆಗಳು ಅವನ ಪಾಲಿಗೆ ಒಲಿದು ಬರಲಿ, ಒಳಿತಾಗಲಿ.” ಎಂದು ಶುಭ ಹಾರೈಸಿದ್ದಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!