ರೆಡ್ ಶರ್ಟ್

ಸೂರಿ ಒಂದು ದೊಡ್ಡ ಮಿಶನ್ ಮೇಲೆ ಹಡಗಿನಲ್ಲಿ ಹೊರಟಿದ್ದ. ಅವನು ಒಂದು ದೊಡ್ಡ ಟೀಮ್‌ಗೆ ನಾಯಕನಾಗಿದ್ದ. ಆ ಹಡಗಿನಲ್ಲಿ ಒಂದು ಬೆಲೆಬಾಳುವ ವಸ್ತುವನ್ನು ಸುರಕ್ಷಿತವಾಗಿ ಸಾಗಿಸಬೇಕಿತ್ತು. ಆದರೆ ಅವರು ಹೋಗುತ್ತಿದ್ದ ಸಮುದ್ರದಲ್ಲಿ ದರೋಡೆಕೋರರ ಕಾಟ ತುಂಬಾ ಇತ್ತು. ಸೂರಿಗೆ ಈ ಮೊದಲು ದರೋಡೆಕೋರರನ್ನು ಎದುರಿಸಿ ಅನುಭವ ಇರಲಿಲ್ಲ. ಆದರೂ ಆ ವಸ್ತುವನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಜವಾಬ್ದಾರಿಯನ್ನು ಸೂರಿಗೆ ವಹಿಸಲಾಗಿತ್ತು. ಸರಿ, ಆಗಿದ್ದಾಗ್ಲಿ ಅಂತ ಧೈರ್ಯ ಮಾಡಿ ಸೂರಿ ತನ್ನ ತಂಡದೊಂದಿಗೆ ಹೊರಟಿದ್ದ. ಸ್ವಲ್ಪ ಹೊತ್ತಾದ ಮೇಲೆ ದುರ್ಬೀನು ಹಾಕಿಕೊಂಡು ದೂರದಲ್ಲಿ ದರೋಡೆಕೋರರು ಬರ್ತಾ ಇದ್ದಾರಾ ಅಂತ ಗಮನಿಸುತ್ತಿದ್ದ ಸಹಾಯಕ ಬಂದು ಸೂರಿಗೆ ಕೇಳಿದ, "ಸರ್, ದೂರದಲ್ಲಿ ಒಂದು ದರೋಡೆಕೋರರ ಟೀಮ್ ಗನ್ ತಗೊಂಡು ಬರ್ತಾ ಇದೆ, ಏನ್ ಮಾಡೋಣ?''. ಸೂರಿಗೆ ಸಿಕ್ಕಾಪಟ್ಟೆ ಭಯ ಶುರುವಾಯಿತು. ಆದ್ರೆ ಅದನ್ನ ತೋರಿಸಿ ಕೊಳ್ಳದೆ, ''ನಮ್ಮ ಟೀಮ್‌ಗೆ ರೆಡಿ ಆಗಿರೋಕೆ ಹೇಳು, ಜತೆಗೆ ಒಳಗೆ ಹೋಗಿ ನನ್ನ ರೆಡ್ ಕಲರ್ ಶರ್ಟ್ ತಗೊಂಡ್ ಬಾ" ಅಂದ. ಸೂರಿಯ ಭಯವನ್ನು ನೋಡಿ ಒಳಗೊಳಗೇ ನಗುತ್ತಿದ್ದ ಸಹಾಯಕ, "ರೆಡ್ ಕಲರ್ ಶರ್ಟ್ ಯಾಕೆ ಸರ್?'' ಅಂತ ಕೇಳಿದ್ದಕ್ಕೆ, "ನನಗೇನಾದರೂ ಗುಂಡು ಬಿದ್ದು ರಕ್ತ ಬಂದ್ರೆ ಅದು ನಮ್ಮವರಿಗೆ ಕಾಣಬಾರದು. ಅವರು ನನ್ನನ್ನು ಆ ಸ್ಥಿತಿಯಲ್ಲಿ ನೋಡಿದ್ರೆ ನಮ್ಮ ನಾಯಕನಿಗೆ ಹಿಂಗಾಯ್ತಲ್ಲ ಅಂತ ಹೆದರಿ ಕೊಂಡುಬಿಡ್ತಾರೆ, ಅದಕ್ಕೆ' ಅಂದ ಸೂರಿ. ಸ್ವಲ್ಪ ಹೊತ್ತಿನಲ್ಲಿ ಆ ದರೋಡೆಕೋರರ ಟೀಮ್ ಬಂತು. ಸೂರಿ ಕಡೆಯವರು ಅವರನ್ನು ಹೊಡೆದು ಉರುಳಿಸಿದರು. ಮತ್ತೆ, ಸ್ವಲ್ಪ ಹೊತ್ತಾದ ಮೇಲೆ ದುರ್ಬೀನು ಹಾಕಿಕೊಂಡು ನೋಡುತ್ತಿದ್ದ ಸಹಾಯಕ ಸೂರಿ ಬಳಿ ಬಂದು ಕೇಳಿದ- ''ಸರ್, ಈ ಸಲ ಐದು ಹಡಗುಗಳಲ್ಲಿ ದರೋಡೆಕೋರರು ಬರ್ತಾ ಇದ್ದಾರೆ. ಯಾವುದಕ್ಕೂ ರೆಡ್ ಕಲರ್ ಶರ್ಟ್ ಜತೆಗೆ, ನಿಮ್ಮ ಹಳದಿ ಕಲರ್ ಪ್ಯಾಂಟೂ ತರ್ಲಾ?"

***

ಗ್ರಹಗಳ ಡಿಕ್ಕಿ

ಸೂರಿ: ಎರಡು ಕ್ಷುದ್ರಗ್ರಹಗಳ ಡಿಕ್ಕಿ ಸಂಭವಿಸುವುದು ಯಾವಾಗ?

ಗಾಂಪ: ಮಾಜಿ ಪ್ರೇಯಸಿ ಹಾಗೂ ಹಾಲಿ ಹೆಂಡತಿ ಒಬ್ಬರಿಗೊಬ್ಬರು ಸಂಧಿಸಿದಾಗ!

***

ಪರಿಹಾರ

ಸೂರಿ: ಡಾಕ್ಟ್ರೇ, ನಂಗೆ ಊಟ ಆದ ಮೇಲೆ ಹಸಿವಾಗಲ್ಲ. ಮಲಗಿ ಎದ್ದ ಮೇಲೆ ನಿದ್ದೆ ಬರಲ್ಲ, ಏನು ಮಾಡೋದು?

ಡಾಕ್ಟರ್: ರಾತ್ರಿ ಎದ್ದು ಬಿಸಿಲಿನಲ್ಲಿ ಒಂದು ಗಂಟೆ ನಿಂತು ನೋಡಿ ಸರಿ ಆಗುತ್ತೆ.

***

ಬಾಯಿ

ಹೆಂಡತಿ ಆಕಾಶದಲ್ಲಿ ಚಂದ್ರನನ್ನು ನೋಡುತ್ತಾ ಗಂಡನಿಗೆ ಹೀಗೆ ಹೇಳಿದಳು…

ಶ್ರೀಮತಿ: ರೀ... ನೀವು ದಿನಾಲೂ ನೋಡ್ತಿರಿ, ಆದ್ರೆ ಅದನ್ನು ಮುಚ್ಚಲು ಸಾಧ್ಯವಿಲ್ಲ, ಅದು ಯಾವುದು ಹೇಳಿ?

ಸೂರಿ: ಇಲ್ಲ ನಾ ಹೇಳುವುದಿಲ್ಲ.

ಶ್ರೀಮತಿ: ಹೇಳಿ ಫೀಸ್

ಸೂರಿ: ನನ್ನ ಬಿಟ್ಟು ಬಿಡು ನಾನು ಹೇಳಲ್ಲ.

ಶ್ರೀಮತಿ: ಹೇಳ್ತಿರೊ ಇಲ್ವೋ?

ಸೂರಿ ಅದು ನಿನ್ನ ಬಾಯಿ ಕಣೇ!

***

ವಸ್ತು ಸಂಗ್ರಹಾಲಯ

ಒಮ್ಮೆ ಸೂರಿ ಮತ್ತು ಗಾಂಪ ವಸ್ತು ಸಂಗ್ರಹಾಲಯಕ್ಕೆ ಹೋಗಿದ್ದರು. ಅಲ್ಲಿದ್ದ ಈಜಿಪ್ಟಿನ ಮಮ್ಮಿಯನ್ನು ನೋಡಿ

ಸೂರಿ: ಡೌಟೇ ಬೇಡ ಇದಕ್ಕೆ ಇಷ್ಟೊಂದು ಬ್ಯಾಂಡೇಜ್ ಸುತ್ತಿದ್ದಾರೆ ಅಂದ್ರೆ ಇದ್ಯಾವುದೋ ಭಯಂಕರ ಅಕ್ಸಿಡೆಂಟ್ ಕೇಸ್ ಆಗಿರುತ್ತೆ.

ಸೂರಿ: ನೀನು ಹೇಳಿದ್ದು ಸರಿ ಅನಿಸುತ್ತೆ. ಅಕ್ಸಿಡೆಂಟ್ ಮಾಡಿದ ಗಾಡಿ ನಂಬರ್ ಬಿ.ಸಿ 1760 ಅಂತ ಇಲ್ಲಿ ಬರೆದಿದ್ದಾರೆ ನೋಡು !

***

ಪಿಶಾಚಿ

ಮೇಷ್ಟ್ರು: ನಿನ್ನ ಹೆಸರೇನು?

ವಿದ್ಯಾರ್ಥಿ: ಪಿರಿಯಾಪಟ್ಟಣದ ಶಾಮಣ್ಣನ ಮಗ ಚಿನ್ನಯಮೂರ್ತಿ ಸರ್

ಮೇಷ್ಟ್ರು ಹೆಸರು ತುಂಬಾ ದೊಡ್ಡದಾಯ್ತು

ವಿದ್ಯಾರ್ಥಿ: ಶಾರ್ಟ್ ಆಗಿ ಪಿಶಾಚಿ ಅಂತ ಕರಿಯಿರಿ ಸರ್ !

***

ದೆವ್ವಗಳು

ಒಂದು ಅಪಘಾತದಲ್ಲಿ ಗಂಡ ಹೆಂಡತಿ ಇಬ್ಬರು ತೀರಿಕೊಂಡು ದೆವ್ವಗಳಾದರು.

ಬಹಳ ದಿನ ಕಳೆದ ಮೇಲೆ ಒಬ್ಬರಿಗೊಬ್ಬರು ಭೇಟಿಯಾದಾಗ,

ಗಂಡ ದೆವ್ವ: ಏನೇ ಎಷ್ಟು ದಿನಗಳ ನಂತರ ಸಿಕ್ಕಿದ್ದೀಯಾ. ಥೇಟ್ ದೆವ್ವದ ಹಾಗೇ ತಿರುಗಾಡುತ್ತಿದ್ದೀಯಾ?

ಹೆಂಡತಿ ದೆವ್ವ: ನೀವೂ ಅಷ್ಟೇ ಚೂರೂ ಬದಲಾಗಿಲ್ಲ. ಆಗ ಹೇಗೆ ಕೆಲಸ ಕಾರ್ಯ ಇಲ್ಲದೆ ತಿರುಗಾಡ್ತಿದ್ರೂ, ಈಗಲೂ ಹಾಗೆಯೇ ತಿರುಗಾಡ್ತಿದ್ದೀರಿ!

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ