ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ 

ಜಿದ್ದಿನಿಂದಲ್ಲ; ಲೆಕ್ಕವೇ ಇರದ 

ದೀಪಾವಳಿಯ ಹಡಗುಗಳೇ 

ಇದರಲ್ಲಿ ಮುಳುಗಿ ಕರಗಿರುವಾಗ 

ನಾನು ಹಚ್ಚುವ ಹಣತೆ 

ಶಾಶ್ವತವೆಂಬ ಭ್ರಾಂತಿ ನನಗಿಲ್ಲ.

 

ಹಣತೆ ಹಚ್ಚುತ್ತೇನೆ ನಾನೂ; 

ಈ ಕತ್ತಲಿನಿಂದ ಬೆಳಕಿನ ಕಡೆಗೆ 

ನಡೆದೇನೆಂಬ ಆಸೆಯಿಂದಲ್ಲ.

ಕತ್ತಲಿನಿಂದ ಕತ್ತಲಿಗೇ 

ತಡಕಾಡಿಕೊಂಡು ಬಂದಿದೆ ಹೆಜ್ಜೆ 

ಶತಮಾನದಿಂದಲೂ.

 

ನಡು ನಡುವೆ ಒಂದಷ್ಟು 

ಬೆಳಕು ಬೇಕೆಂದು ಆಗಾಗ 

ಕಡ್ಡಿ ಗೀಚಿದ್ದೇವೆ, ದೀಪ 

ಮೂಡಿಸಿದ್ದೇವೆ, ವೇದ, ಶಾಸ್ತ್ರ, 

ಪುರಾಣ, ಇತಿಹಾಸ, ಕಾವ್ಯ, 

ವಿಜ್ಞಾನಗಳ ಮತಾಪು - ಪಟಾಕಿ - 

ಸುರುಸುರುಬತ್ತಿ - ಹೂಬಾಣ 

ಸುಟ್ಟಿದ್ದೇವೆ.

 

'ತಮಸೋಮಾ 

ಜ್ಯೋತಿರ್ಗಮಯಾ' ಎನ್ನುತ್ತಾ 

ಬರೀ ಬೂದಿಯನ್ನೇ ಕೊನೆಗೆ 

ಕಂಡಿದ್ದೇವೆ. ನನಗೂ ಗೊತ್ತು, 

ಈ ಕತ್ತಲೆಗೆ ಕೊನೆಯಿರದ 

ಬಾಯಾರಿಕೆ.

 

ಎಷ್ಟೊಂದು ಬೆಳಕನ್ನು ಇದು 

ಉಟ್ಟರೂ, ತೊಟ್ಟರೂ ತಿಂದರೂ, 

ಕುಡಿದರೂ ಇದಕ್ಕೆ ಇನ್ನೂ ಬೇಕು 

ಇನ್ನೂ ಬೇಕು ಎನ್ನುವ ಬಯಕೆ.

 

ಆದರೂ ಹಣತೆ ಹಚ್ಚುತ್ತೇನೆ ನಾನು; 

ಕತ್ತಲೆಯನ್ನು ದಾಟುತ್ತೇನೆಂಬ 

ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು 

ನಿನ್ನ ಮುಖ ನಾನು, ನನ್ನ ಮುಖ ನೀನು 

ನೋಡಬಹುದೆಂಬ ಒಂದೇ ಒಂದು ಆಸೆಯಿಂದ; 

ಹಣತೆ ಆರಿದ ಮೇಲೆ, ನೀನು ಯಾರೋ, 

ಮತ್ತೆ ನಾನು ಯಾರೋ.

- ಜಿ.ಎಸ್. ಶಿವರುದ್ರಪ್ಪ

(ಸಂಗ್ರಹ : ಶ್ರೀರಾಮ ದಿವಾಣ)