ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡಿನ ಸಾಲುಗಳನ್ನು ನೆನೆಯುತ್ತಾ… ಭಾನಲ್ಲಿ ಹಕ್ಕಿಯೊಂದು ಹಾರುತ್ತಾ ಹಾಡುತ್ತಿತ್ತು, ಪ್ರೀತಿಸುವ ಹೃದಯಗಳೇ ಪ್ರೀತಿಯೆಂದರೆ ಗೊತ್ತೆ? ಆಕಾಶದಲ್ಲಿ ಹಕ್ಕಿಯೊಂದು ಹಾರುತ್ತಾ ಕೇಳುತ್ತಿತ್ತು, ಪ್ರೇಮಿಸುವ ಮನಸುಗಳೇ ಪ್ರೇಮವೆಂದರೇ ಗೊತ್ತೆ? ಎತ್ತರದಲ್ಲಿ ಹಕ್ಕಿಯೊಂದು ಹಾರುತ್ತಾ  ನುಡಿಯುತ್ತಿತ್ತು. ತ್ಯಾಗ ಜೀವಿಗಳೇ ತ್ಯಾಗವೆಂದರೆ ಗೊತ್ತೆ? ಮೋಡಗಳಲ್ಲಿ ಹಕ್ಕಿಯೊಂದು ಹಾರುತ್ತಾ ಹೇಳುತ್ತಿತ್ತು. ಸ್ನೇಹಿತರೆ ಸ್ನೇಹವೆಂದರೆ ತಿಳಿದಿದೆಯೇ? ಮೇಲೆ ಹಕ್ಕಿಯೊಂದು ಹಾರುತ್ತಾ ಪ್ರಶ್ನಿಸುತ್ತಿತ್ತು. ಮನುಷ್ಯರೇ ಮಾನವೀಯತೆ ಎಂದರೆ ಗೊತ್ತಿದೆಯೇ.?ದೂರದಲ್ಲಿ ಹಕ್ಕಿಯೊಂದು ಹಾರುತ್ತಾ ಅನ್ನುತ್ತಿತ್ತು. ಎಲೈ ಜೀವಿಗಳೆ ಸಂಬಂಧಗಳೆಂದರೆ ಗೊತ್ತೇ? ಕೆಳಗಿನಿಂದ ಮನುಷ್ಯ ಹೇಳಿದ, 

ಹೌದು ಚೆನ್ನಾಗಿ ಗೊತ್ತು.

ಭಾನಲ್ಲಿ ಹಕ್ಕಿಯೊಂದು ಹಾರುತ್ತಾ ಉತ್ತರಿಸಿತು.

ಹೌದು ಅದೆಲ್ಲಾ ನನಗೂ ಕಾಣುತ್ತಿದೆ ಮೇಲಿನಿಂದ.....

ಅವೆಲ್ಲಾ ನಿನ್ನ ಆಂತರ್ಯದಲ್ಲಿ ಬಂಧಿಯಾಗಿದೆ..

ಮಸುಕಾಗಿದೆ, ಮಂಕಾಗಿದೆ, ಮುಖವಾಡಧರಿಸಿದಂತಿದೆ........

 

ಸರಿಸು ಮುಸುಕನ್ನು, 

ಒರೆಸು ಮಂಕನ್ನು, 

ಕಿತ್ತೊಗೆ ಮುಖವಾಡವನ್ನು......

 

ಆಗ ಗೋಚರಿಸುತ್ತದೆ ನಿನಗೆ ನಿಜವಾದ

ಪ್ರೀತಿ, ಪ್ರೇಮ, ತ್ಯಾಗ, ಸ್ನೇಹ, ಸಂಬಂಧ, ಮಾನವೀಯತೆ.......

 

ಹೀಗೆನ್ನುತ್ತಾ ಶುಭ್ರ, ಸ್ವಚ್ಛ ನೀಲಾಕಾಶದ

ಅನಂತದಲ್ಲಿ ಹಾರುತ್ತಾ , ಹಾಡುತ್ತಾ  ಮರೆಯಾಯಿತು......

 " ಆತ್ಮ ಸಾಕ್ಷಿ "  ಎಂಬ ಹಕ್ಕಿಯೊಂದು…

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ