ಏನಾದ್ರೂ ಬೇಕಿದ್ರೆ…

ಸೂರಿ ಆ್ಯಂಡ್ ಫ್ಯಾಮಿಲಿ ಅಂದ್ರೆ ಶ್ರೀಮತಿ, ಮರಿ - ಸೂರಿ, ಅವರ ಜತೆಗೆ ಸೂರಿಯ ಅಜ್ಜ-ಅಜ್ಜಿ ದುಬೈಗೆ ಹೋಗಿ ಸೆಟಲ್ ಆದ್ರು. ಅವರ ಉಳಿದ ಸಂಬಂಧಿಕರೆಲ್ಲಾ ಇಂಡಿಯಾದಲ್ಲೇ ಇದ್ರು. ದುಬೈನ ಹವಾಮಾನ ಒಗ್ಗದೆ ಅಜ್ಜಿಗೆ ಅನಾರೋಗ್ಯ ಕಾಡತೊಡಗಿತು. ಎಷ್ಟೇ ಪ್ರಯತ್ನ ಪಟ್ಟರೂ ಅಜ್ಜಿ ಯನ್ನು ಉಳಿಸಿಕೊಳ್ಳಲಾಗಲಿಲ್ಲ. ಅಜ್ಜಿ ತೀರಿಹೋದ ಸುದ್ದಿಯನ್ನು ಇಂಡಿಯಾದಲ್ಲಿದ್ದ ಸಂಬಂಧಿಕರಿಗೆ ಮುಟ್ಟಿಸಿದ ಸೂರಿ “ಅಜ್ಜಿಯ ಆಸೆಯಂತೆ ಅವಳನ್ನು ನಮ್ಮ ಹುಟ್ಟೂರಲ್ಲೇ ಮಣ್ಣು ಮಾಡಬೇಕು. ಹಾಗಾಗಿ ಆಕೆಯ ಬಾಡಿಯನ್ನು ಇಲ್ಲಿಂದ ಕಳಿಸುತ್ತೇನೆ'' ಎಂದು ಹೇಳಿದ. ಸರಿ ದುಬೈನಿಂದ ಅಜ್ಜಿಯ ದೇಹ ಕಫಿನ್‌ ಬಾಕ್ಸ್‌ನಲ್ಲಿ ಇಂಡಿಯಾಗೆ ಬಂತು. ಸಂಬಂಧಿಕರು ಅದನ್ನು ಮನೆಗೆ ತಂದರು. ಬಾಕ್ಸ್ ಓಪನ್ ಮಾಡಿದರೆ ಅದರಲ್ಲೊಂದು ಲೆಟರ್ ಇತ್ತು. ಅದರಲ್ಲಿ ಸೂರಿ ಹೀಗೆ ಬರೆದಿದ್ದ. ''ನೋಡಿ, ಅಜ್ಜಿಯ ಕೊರಳಲ್ಲಿ ನಾಲ್ಕು ಬಂಗಾರದ ಸರಗಳಿವೆ. ಅವನ್ನು ಎಲ್ಲ ಹೆಣ್ಣುಮಕ್ಕಳೂ ಸಮನಾಗಿ ಹಂಚಿಕೊಳ್ಳಿ. ಜತೆಗೆ ಕೈಯಲ್ಲಿ ಬಳೆಗಳೂ ಇವೆ, ಅವನ್ನೂ ಅಷ್ಟೆ. ಇನ್ನು ಚಿಂಟು ರೀಬಾಕ್ ಶೂ ಬೇಕಂತ ಹೇಳಿದ್ದ ಅದನ್ನು ಅಜ್ಜಿಯ ಕಾಲಿಗೆ ಹಾಕಿ ಕಳಿಸಿದ್ದೇನೆ. ಅಜ್ಜಿಯ ಕೈಯಲ್ಲಿ ರಾಡೋ ವಾಚ್ ಇದೆ, ಅದನ್ನು ಪಿಂಟುಗೆ ಕೊಡಿ. ಅಜ್ಜಿ ಉಟ್ಟುಕೊಂಡಿರುವ ಸೀರೆ ತುಂಬಾ ದುಬಾರಿ, ಅದನ್ನು ರೇವತಿ ಅಕ್ಕನಿಗೆ ಕೊಡಿ. ಕೈ ಬೆರಳಲ್ಲಿರೋ ವಜ್ರದ ಉಂಗುರವನ್ನು ನಮ್ಮ ಸುಮತಿ ಚಿಕ್ಕಮ್ಮನಿಗೆ ಕೊಡಿ. ಇನ್ನೊಂದು ಮುಖ್ಯ ವಿಷಯ. ಯಾರಿಗಾದರೂ ಇನ್ನೇನಾದರೂ ಬೇಕಿದ್ದರೆ ಈಗಲೇ ಹೇಳಿಬಿಡಿ.... ಯಾಕೋ ಇತ್ತೀಚೆಗೆ ಅಜ್ಜನಿಗೂ ಹುಷಾರಿಲ್ಲ!''.

***

ಸಮಾಧಾನಕರ

ಶ್ರೀಮತಿ: ಜಗತ್ತಿನ ಅತ್ಯಂತ ಸಮಾಧಾನದ ರಾಷ್ಟ್ರ ಫಿನ್ಲೆಂಡ್ ಅಂತೆ. ನಾವು ಅಲ್ಲಿಗೊಮ್ಮೆ ಹೋಗಿ ಬರೋಣವೇ?

ಸೂರಿ: ಅಲ್ಲಿಗೆ ಹೋಗಿ ಅವರ ಸಮಾಧಾನವನ್ನು ನಾವು ಯಾಕೆ ದೂರವಾಗಿಸಬೇಕು?

***

ಊಟ

ಸೂರಿ ಕಚೇರಿಯಿಂದ ಬಂದು ಹೆಂಡತಿಯನ್ನು ಹೀಗೆ ಕೇಳಿದನು…

ಸೂರಿ: ಇವತ್ತಿನ ಮಧ್ಯಾಹ್ನದ ಊಟ ಬಹಳ ಸ್ವಾದಿಷ್ಟವಾಗಿತ್ತು.

ಶ್ರೀಮತಿ: ಹೌದಾ ರೀ... ನನ್ನ ಅಡುಗೆ ಸೂಪರ್ ಅಂತ ಕಡೆಗೂ ಒಪ್ಪಿಕೊಂಡಿರಲ್ಲ, ಅಷ್ಟೇ ಸಾಕು. ಈಗಲೇ ದೇವರಿಗೆ ತುಪ್ಪದ ದೀಪ ಹಚ್ಚುವೆ.

ಸೂರಿ: ಹಾಗಲ್ಲ. ಕಚೇರಿಯಲ್ಲಿ ನನ್ನ ಟಿಫಿನ್ ಡಬ್ಬ ಅದಲು ಬದಲಾಯಿತು. ಗೊತ್ತಿದ್ದೂ ಯಾರಿಗೂ ಹೇಳದೆ ಅದೇ ನನ್ನ ಡಬ್ಬಿ ಅಂತ ಹೇಳಿ ತಿಂದೆ.

***

ಅಪಘಾತ

ಜ್ಯೋತಿಷಿ: ನೀವು ಅಪಘಾತದಿಂದ ಹಲವು ಬಾರಿ ಪಾರಾಗಿದ್ದೀರಿ ಎಂದು ಕಾಣುತ್ತಿದೆಯಲ್ಲಾ?

ಶ್ರೀಮತಿ: ಹೌದು, ನನ್ನ ವಿವಾಹ ಕಾರ್ಯಕ್ರಮ ಹಲವಾರು ಬಾರಿ ರದ್ದಾಗಿದೆ. ವಿನಾ ಕಾರಣ ಗಂಡನೊಬ್ಬನ ಬದುಕನ್ನು ಉದ್ದಾರ ಮಾಡುವ ಔದಾರ್ಯ ನನಗಿಲ್ಲ.

***

ಶುಗರ್ ಸಮಸ್ಯೆ

ಸೂರಿ: ಡಾಕ್ಟರ್, ನಾನೂ ನಿಮ್ಮಂತೆ ಯಾರಿಗೆಲ್ಲ ಶುಗರ್ ಸಮಸ್ಯೆ ಇದೆ. ಎಂದು ಹೇಳಬಲ್ಲೆ.

ಡಾಕ್ಟರ್: ಓಹ್ ಹೌದಾ? ನೀವೇನಾದರೂ ಡಾಕ್ಟರ್ ಓದಿದ್ರಾ? 

ಸೂರಿ: ಇಲ್ಲ ಇಲ್ಲ. ಈ ಭಾಗದಲ್ಲಿ ನಾನು ಹತ್ತಾರು ವರ್ಷಗಳಿಂದ ಕಾಫಿ, ಟೀ ಅಂಗಡಿ ನಡೆಸುತ್ತಿದ್ದೆ. ಅದರ ಅನುಭವ ಇಲ್ಲಿ ಉಪಯೋಗಕ್ಕೆ ಬರುತ್ತಿದೆ.

**

ಮದುವೆ

ಶ್ರೀಮತಿ: ನಮ್ಮ ಮದುವೆ ಶೀಘ್ರ ನಡೆಯಬೇಕು. ಇಲ್ಲವಾದರೆ ಅಮ್ಮನನ್ನು ವಿವಾಹವಾಗಬೇಕಾದೀತು.

ಸೂರಿ: ಛೇ ಎಂತ ಮಾತು ಅಡ್ತೀಯಾ? ಹಾಗೆಲ್ಲ ಮಾತಾಡಬಾರದು.

ಶ್ರೀಮತಿ: ಅಂದ್ರೆ ನಾನೀಗ ಗರ್ಭಿಣಿ ತಡ ಮಾಡಿದರೆ ನಾನು ಅಮ್ಮನಾಗುತ್ತೇನೆ ಅಂತ ಹೇಳುತ್ತಿದ್ದೇನೆ.

***

ಭಯ

ಸೂರಿ: ಇಲ್ಲಿನ ಸೊಳ್ಳೆಗಳು ನನ್ನನ್ನು 'ಕಚ್ಚಿಕೊಂಡು ಹಾರಿ ಹೋಗಬಹುದೆಂದು ಹೆದರಿಕೆಯಾಗುತ್ತಿದೆ, ನರ್ಸ್

ನರ್ಸ್: ಅಂತಹ ಯಾವುದೇ ಭಯ ಬೇಡ. ಹಾಗೆ ಆಗದಂತೆ ಈ ಹಾಸಿಗೆಯ ತಿಗಣೆಗಳು ನಿಮ್ಮನ್ನು ನೋಡಿಕೊಳ್ಳುತ್ತವೆ.

***

ಶಿಕ್ಷೆ

ಸೂರಿ: ನಾನು ಒಂದು ಐ ಲವ್ ಯೂ ಎಂದು ಹೇಳಿದ್ದಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಗಿ ಬಂತು.

ಗಾಂಪ: ಅಯ್ಯೋ ನಾನು ಹತ್ತು ವರ್ಷದ ಹಿಂದೆ ಹೇಳಿದ್ದ ಕಾರಣಕ್ಕೆ ಈಗಲೂ ಶಿಕ್ಷೆ ಅನುಭವಿಸುತ್ತಿದ್ದೇನೆ. ಆಕೆ ಈಗ ನನ್ನ ಹೆಂಡತಿ.

***

ಅನ್ಯೋನ್ಯತೆ

ಶ್ರೀಮತಿ: ನೀವಿಬ್ಬರು ತುಂಬಾ ಅನ್ಯೋನ್ಯತೆಯಿಂದ ಇದ್ದೀರಿ. ಮನೆಯಲ್ಲಿ ಗಂಡ ಹೆಂಡತಿ ನಗುತ್ತಿರುವುದು ಆಗಾಗ ಕೇಳುತ್ತಲೇ ಇರುತ್ತದೆ.

ತಾರಾ: ಹೌದು ನನಗೆ ಸಿಟ್ಟು ಬಂದಾಗಲೆಲ್ಲಾ ಕೈಗೆ ಸಿಕ್ಕಿದ್ದನ್ನು ಅವರತ್ತ ಎಸೆಯುತ್ತೇನೆ. ಅವರಿಗೆ ತಾಗದಿದ್ದರೆ 'ಅವರು ನಗುತ್ತಾರೆ. ತಾಕಿದರೆ ನಾನು ನಗುತ್ತೇನೆ, ಅಷ್ಟೇ.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ