ಹುಲಿ ಸಂಸಾರ

ದಿನ ನಿತ್ಯವೂ ಮಾತೆತ್ತಿದರೆ ಜಗಳ. ಮಾತು ಮಾತಿಗೆ ಕಾಲು ಕೆದರುವ ಜಗಳಗಂಟಿ ಹೆಂಡತಿಯ ಕಾಟ ತಾಳಲಾರದೆ ಸೂರಿ ರೋಸಿಹೋದ, ಪ್ರಾಣಿಗಳಿಗೆ ಆಹಾರವಾಗುವ ಮೂಲಕ ಪುಣ್ಯ ಸಂಪಾದನೆ ಮಾಡಬೇಕು ಎಂದು ಯೋಚಿಸಿದ. ಹೀಗೆ ಸಾಯಲು ನಿರ್ಧರಿಸಿ ಒಂದು ಮೃಗಾಲಯಕ್ಕೆ ಹೋದ. ಆಗ ಹೆಬ್ಬುಲಿಯೊಂದು ಗೂಡಿನಿಂದ ತಪ್ಪಿಸಿಕೊಂಡು ಅವನನ್ನು ತಿನ್ನಲು ಬಾಯ್ದೆರೆದು ಮುಂದೆ ಬಂದಿತು. ಸೂರಿ ಸ್ವಲ್ಪವೂ ಭಯ ಪಡಲಿಲ್ಲ.

ಹೆಬ್ಬುಲಿಗೆ ಆಶ್ಚರ್ಯ.'ನೀನೆಂಥ ಮನುಷ್ಯನಯ್ಯ? ಹೆಬ್ಬುಲಿ ಮುಂದೆ ಬಂದರೂ ಭಯಪಡುವುದಿಲ್ಲ ಎಂದರೆ ಹೆಬ್ಬುಲಿಯನ್ನೇ ಸೋಲಿಸಲು ನಿನ್ನಲ್ಲಿ ಏನಿದೆ ಅಂತಹ ಅಸ್ತ್ರ?' ಎಂದು ಕೇಳಿತು.

'ಅಸ್ತ್ರವೂ ಇಲ್ಲ, ವಸ್ತ್ರವೂ ಇಲ್ಲ. ನಾನು ಇಷ್ಟು ವರ್ಷ ನಿನಗಿಂತ ದೊಡ್ಡ ಹೆಬ್ಬುಲಿಯೊಂದಿಗೆ ಸಂಸಾರ ಮಾಡಿ ಇಲ್ಲಿಗೆ ಬಂದಿದ್ದೇನೆ. ಅದರ ಅನುಭವದ ಮುಂದೆ ನೀನು ನನಗೊಂದು ಲೆಕ್ಕವೇ ಅಲ್ಲ' ಎಂದ ಸೂರಿ.

***

ಕಚ್ಚುವವರ ಪಟ್ಟಿ

ಸೂರಿಗೆ ಕೆಲವು ದಿನಗಳ ಹಿಂದೆ ಹುಚ್ಚುನಾಯಿ ಕಚ್ಚಿತ್ತು. ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋದಾಗ ಅವರು ಚಿಕಿತ್ಸೆ ಮಾಡಲು ನಿರಾಕರಿಸಿದರು. 'ಪರಿಸ್ಥಿತಿ ಕೈಮೀರಿದ ಕಾರಣ ಒಂದೆರಡು ದಿನಗಳಲ್ಲಿ ನಿಮಗೂ ನಾಯಿಯ ಹಾಗೆಯೇ ಹುಚ್ಚು ಹಿಡಿಯುವುದು ಖಚಿತ' ಎಂದು ಹೇಳಿದರು.

ಸ್ವಲ್ಪ ಹೊತ್ತು ಯೋಚಿಸಿದ ಸೂರಿ, 'ನನಗೆ ಒಂದು ಪೆನ್ನು ಮತ್ತು ಕಾಗದ ಕೊಡಬಹುದೆ?' ಕೇಳಿದ. ವೈದ್ಯರು, 'ಉಯಿಲು ಬರೆಯುತ್ತೀರಾ? ಒಳ್ಳೆಯ ಯೋಚನೆ. ಹುಚ್ಚು ಹಿಡಿದು ಮತಿ ಕೆಡುವ ಮೊದಲೇ ಆಸ್ತಿಯ ವಿಲೇವಾರಿ ಹೇಗೆ ಎಂಬುದನ್ನು ಬರೆದಿಡುವುದು ಉತ್ತಮ' ಎಂದರು.

ಸೂರಿ ಕಣ್ಣು ಕೆಕ್ಕರಿಸಿ ವೈದ್ಯರೆಡೆಗೆ ನೋಡಿದ. 'ನಾನು ಬರೆಯಬೇಕಾಗಿರುವುದು ಉಯಿಲು ಅಲ್ಲ. ಸಾಯುವ ಮೊದಲು ಯಾರನ್ನೆಲ್ಲ ಕಚ್ಚಬೇಕು ಎಂದು ಪಟ್ಟಿ ಮಾಡಬೇಕಾಗಿದೆ. ಅದರಲ್ಲಿ ಮೊದಲ ಹೆಸರು ನಿಮ್ಮದೇ ಇರುತ್ತದೆ' ಎಂದ.

***

ನೆನಪು

ಶ್ರೀಮತಿ: ನಾನು ಕವಿತೆ ಬರೆಯಲು ಕುಳಿತರೆ, ನಿನ್ನ ನೆನಪು ಆಗುತ್ತದೆ.

ಸೂರಿ: ಏಕೆ? ನಾನು ನೆನಪಾಗುವುದು?

ಶ್ರೀಮತಿ: ನಿನ್ನೆ ನನ್ನ ಪೆನ್ನು ತೆಗೆದುಕೊಂಡು ಹೋದೆ, ಇನ್ನೂ ತಂದು ಕೊಟ್ಟಿಲ್ಲವಲ್ಲ !

***

ಧೈರ್ಯವಂತ

ಸೂರಿ: ಗಾಂಪ, ನಿನ್ನ ಮಗನನ್ನು ಧೈರ್ಯವಂತನಾಗಿ ಮಾಡಲು ಹೇಳುತ್ತಿದ್ದೆಯಲ್ಲ ಆತ ಧೈರ್ಯವಂತನಾದನೆ?

ಗಾಂಪ: ಆತನೇನೋ ಧೈರ್ಯವಂತನಾದ. ಆದರೆ...

ಸೂರಿ: ಏನಾಯ್ತು?

ಗಾಂಪ: ಆತ ನಾನು ಮನೆಯಲ್ಲಿ ಇಟ್ಟಿದ್ದ ಐದು ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

***

ಕುತೂಹಲ

ಸೂರಿ: ಗಾಂಪ, ನೀನು ಪತ್ತೇದಾರಿ ಕಾದಂಬರಿಯನ್ನು ಮಧ್ಯ ಭಾಗದಿಂದ ಓದಲು ಪ್ರಾರಂಭಿಸುವಿಯಲ್ಲಾ ಏಕೆ?

ಗಾಂಪ: ಹಾಗೆ ಓದಿದರೆ ಅಂತ್ಯದ ಬಗ್ಗೆಯಲ್ಲದೆ, ಪ್ರಾರಂಭದ ಬಗ್ಗೆಯೂ ಕುತೂಹಲ ಮೂಡುತ್ತದೆ.

***

ಮೂರ್ಖ ಸಲಹೆ

ಡಾಕ್ಟರ್: ನೀವು ನನ್ನ ಬಳಿ ಬರುವ ಮೊದಲು, ಯಾವ ಡಾಕ್ಟರ್ ಬಳಿ ಹೋಗಿದ್ರಿ?

ಸೂರಿ: ಈ ಬಡಾವಣೆಯಲ್ಲಿರುವ ಗಾಂಪ ಡಾಕ್ಟರ್ ಬಳಿ ಹೋಗಿದ್ದೆ.

ಡಾಕ್ಟರ್: ಆತ ನಿಮಗೆ ಮೂರ್ಖ ಸಲಹೆಯನ್ನು ಕೊಟ್ಟಿರಬೇಕು ಅಲ್ಲವೇ?

ಸೂರಿ: ಹೌದು, ಅವರು ನಿಮ್ಮ ಬಳಿ ಹೋಗಿ ಎಂದು ಕಳಿಸಿದರು.

***

ಕೆಲಸ

ಸಂದರ್ಶಕ: ಮಿಸ್ಟ‌ರ್ ಸೂರಿ, ಈ ಹಿಂದೆ ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡಿದ್ದೀರಾ?

ಸೂರಿ: ಮಾಡಿದ್ದೇನೆ ಸಾರ್ 

ಸಂದರ್ಶಕ: ಹಾಗಾದರೆ ನೀವು ಆ ಕಂಪನಿ ಬಿಡಲು ಕಾರಣ?

ಸೂರಿ: ಸರ್, ಆ ಕಂಪನಿ ಬೇರೆ ಕಡೆ ಸ್ಥಳಾಂತರವಾಯಿತು. ಅದನ್ನು ಅವರು ನನಗೆ ತಿಳಿಸಲೇ ಇಲ್ಲ.

***

ಗುಣಗಳು

ಸೂರಿ: ನೋಡಮ್ಮ ನಿನಗೆ ಸರಿಹೊಂದುವಂಥ ಗುಣಗಳು ಆ ಹುಡುಗನಲ್ಲಿ ಯಾವುದೂ ಇಲ್ಲ.

ಮಗಳು: ಯಾಕಿಲ್ಲಪ್ಪ ಆತ ಫೈವ್ ಸ್ಟಾರ್ ಹೋಟೆಲಿನಲ್ಲಿ ಕಿಚನ್ ಅಸಿಸ್ಟೆಂಟ್ ಅಂತೆ.

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ