ಅಧಿಕಾರವೆಂಬ ಅಮಲು ಮತ್ತೇರಿ ವಿಧವಿಧದ ಕುರ್ಚಿಗಾಗಿ ಕೆಲವು ವ್ಯಕ್ತಿಗಳು ಮುಗಿ ಬೀಳುವುದು ನೋಡಿದಾಗ ಅನಿಸಿದ್ದು...

ಕುರ್ಚಿ ಬೇಕೆ ಕುರ್ಚಿ?

" ಆ " ಮಾಯಾ ಕುರ್ಚಿ.....

ಏರಲು ದೈವ ಬಲ ಬೇಕಂತೆ " ಆ " ಕುರ್ಚಿ.

ಕೂರಲು ಜನ ಬಲ ಬೇಕಂತೆ " ಆ " ಕುರ್ಚಿ.

ಪಡೆಯಲು ಹಣ ಬಲ ಬೇಕಂತೆ " ಆ " ಕುರ್ಚಿ.

ಗಳಿಸಲು ಜಾತಿ ಬಲ ಬೇಕಂತೆ " ಆ " ಕುರ್ಚಿ.

ಮಾನ ಮರ್ಯಾದೆ ಬಿಡಬೇಕಂತೆ " ಆ " ಕುರ್ಚಿ ಸಿಗಲು.

ಹೋಮ ಹವನ ಮಾಡ ಬೇಕಂತೆ " ಆ " ಕುರ್ಚಿ ಹೊಂದಲು.

ತಲೆ ಹಿಡಿಯಲು ತಲೆ ಹೊಡೆಯಲು ಸಿದ್ದರಿರಬೇಕಂತೆ " ಆ " ಕುರ್ಚಿ ಗೆಲ್ಲಲು.

ಜುಟ್ಟು ಹಿಡಿಯಲು, ಕೈ ಮುಗಿಯಲು, ಕಾಲು ಕಟ್ಟಲು ಗೊತ್ತಿರಬೇಕಂತೆ " ಆ " ಕುರ್ಚಿ ನಿಮ್ಮದಾಗಲು.

ಸಾಮಾನ್ಯರಿಗೆ ಸಿಗದಂತ" ಆ " ಕುರ್ಚಿ.

ಏಳು ಜನ್ಮದ ಪುಣ್ಯ ಬೇಕಂತೆ " ಆ " ಕುರ್ಚಿ .

ಹೋರಾಟಕ್ಕೂ ದೊರೆಯುವುದಂತೆ " ಆ " ಕುರ್ಚಿ.

ಮಾರಾಟಕ್ಕೂ ಇದೆಯಂತೆ " ಆ " ಕುರ್ಚಿ.

ಮುಳ್ಳಿನ ಆಸನವಂತೆ " ಆ " ಕುರ್ಚಿ.

ಸುಳ್ಳಿನ ಅರಮನೆಯಂತೆ " ಆ " ಕುರ್ಚಿ.

ಜನಗಳ ಬೆವರಿನ ವಾಸನೆಯಂತೆ " ಆ " ಕುರ್ಚಿ .

ರಕ್ತದ ಕಲೆಗಳ ನೆನಪುಗಳಂತೆ " ಆ " ಕುರ್ಚಿ.

ಬೆನ್ನಿಗಿರಿಯುವ ಕಲೆ ಇರಬೇಕಂತೆ " ಆ " ಕುರ್ಚಿ.

ಎದೆ ಬಗೆಯುವ ಧೈರ್ಯ ಬರಬೇಕಂತೆ " ಆ " ಕುರ್ಚಿ.

ಮುಖವಾಡ ತೊಡುವ ಮನಸ್ಸಿರಬೇಕಂತೆ " ಆ " ಕುರ್ಚಿ.

ವಂಚಿಸುವ ತಲೆಯಿರಬೇಕಂತೆ " ಆ " ಕುರ್ಚಿ.

ವರ್ಣನೆಗೆ ನಿಲುಕದಂತೆ " ಆ " ಕುರ್ಚಿ‌

ಪದಗಳಿಗೆ ಸಿಗದಂತೆ " ಆ " ಕುರ್ಚಿ.

ಭಾವನೆಗಳಿಗೆ ಕರಗದಂತೆ " ಆ " ಕುರ್ಚಿ.

ಕನಸುಗಳಿಗೆ ಎಟುಕದಂತೆ " ಆ " ಕುರ್ಚಿ.

ಕೋಟಿ ಕೋಟಿ ಜನರ ಜೀವನ ನಿರ್ಧರಿಸುವ " ಆ " ಕುರ್ಚಿ 

ಯಾವುದು ಬಲ್ಲಿರಾ ? ಬಲ್ಲಿರಾ ?

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ