ಸುಮಂಗಲಾ ಅವರು ಬರೆದ ‘ಎನ್ನಾತ್ಮ ಕಂಪಮಿದು’ ಎನ್ನುವ ಕಾದಂಬರಿಗೆ ಖ್ಯಾತ ಲೇಖಕಿ ಆಶಾದೇವಿಯವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು “ಒಂದೇ ಹೂವಿನ ಹಲವು ಪಕಳೆಗಳಂತೆ ಇರುವ ಈ ನಿರೂಪಣೆಗಳು ಒಂದು ಹೂವಾಗಿಯೂ, ದಳಗಳಾಗಿಯೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೂವು ಮತ್ತು ದಳಗಳಂತೆಯೇ 'ಎನ್ನಾತ್ಮ ಕಂಪಮಿದು' ಎನ್ನುವಂತೆ ಕಂಡೂ ಕಾಣದಂತೆ ಕಂಪಿಸುತ್ತವೆ!
ಇದನ್ನು ಕಥಾ ಸಂಕಲನವಾಗಿ ಪ್ರಕಟಿಸಬೇಕೇ ಅಥವಾ ಕಾದಂಬರಿಯಾಗಿಯೇ ಎನ್ನುವ ಪ್ರಶ್ನೆಯೂ ಸುಮಂಗಲಾ ಅವರನ್ನು ಕಾಡಿದ್ದಿದೆ. ಆದರೆ ಇವುಗಳಿಗಿರುವ ಅಂಟಿಕೊಳ್ಳುವ ಮತ್ತು ಪದ್ಮ ಪತ್ರ ಜಲಬಿಂದುವಿನಂತಹ ಗುಣಗಳು ಅಂತಿಮವಾಗಿ ಕಲೆಯ ಸೃಜನಶೀಲ ಶಕ್ತಿಯನ್ನೇ ಎತ್ತಿ ಹಿಡಿಯುತ್ತಿವೆ. ಈ ಪ್ರಯತ್ನವನ್ನು ಪ್ರಯೋಗಶೀಲ, ಕ್ರಿಯಾಶೀಲ ನೆಲೆಯಲ್ಲಿ ನೋಡಬಹುದು ಎನ್ನುವುದೇನೋ ನಿಜವೇ ಮತ್ತು ಇಂಥ ಪ್ರಯತ್ನಗಳನ್ನು ಇದೇ ಮೊದಲು ಎಂದೂ ನೋಡಬೇಕಾಗಿಲ್ಲ. ಸವಿತಾ ನಾಗಭೂಷಣ ಅವರ 'ಸ್ತ್ರೀಲೋಕ' ಕಾದಂಬರಿಯ ಸ್ವರೂಪವೂ ಹೆಚ್ಚು ಕಡಿಮೆ ಹೀಗೇ ಇದೆ. ಎನ್ನಬಹುದು. ಅದರಲ್ಲೂ ಬಿಡಿ ಬಿಡಿ ಚಿತ್ರಗಳು ಒಟ್ಟಾರೆಯಾಗಿಯೂ ಹೊಸ ಚಿತ್ರ ವೊಂದನ್ನು ಕಟ್ಟಿಕೊಡುತ್ತವೆ. ಸುಮಂಗಲಾ ಇದರ ಮತ್ತೊಂದು ಆವೃತ್ತಿಯನ್ನು ಬಲು ಚೆಂದವಾಗಿ, ಆದ್ರ್ರವಾಗಿ ಸೃಷ್ಟಿಸಿದ್ದಾರೆ.
ಬದುಕನ್ನು ಎದುರಿಗೆ ನಿಲ್ಲಿಸಿಕೊಂಡು, ಬದುಕೇ ನಿನ್ನ ನಿಜ ಯಾವುದು, ನಾನು ಉಣಬಯಸಿದ್ದೇನು? ನೀನು ಬಡಿಸುತ್ತಿರುವುದೇನು? ಬದುಕುವುದೆಂದರೆ ನೀನು ಕೊಟ್ಟದ್ದನ್ನು ಮಾತ್ರ ಚಕಾರವೆತ್ತದೆ ಉಣ್ಣುವುದು ಮಾತ್ರವೆ? ನನಗೆ ಬೇಕಾದ್ದನ್ನೂ ನೀನು ಕೊಡಬೇಕಲ್ಲವೆ? ಹೋಗಲಿ ಬಿಡು ಇಷ್ಟನ್ನಾದರೂ ಕೊಟ್ಟೆಯಲ್ಲ, ಹಸಿದು ಸಾಯುವುದಕ್ಕಿಂತ ಅರೆಹೊಟ್ಟೆಯಾದರೂ ವಾಸಿ. ಇಷ್ಟಕ್ಕೂ ಇದೂ ರುಚಿಯಾಗಿಯೇ ಇರುವಂತಿದೆ, ನಾನು ಎಣಿಸಿದಷ್ಟು ಇದು ಅರುಚಿಯದಲ್ಲ, ಅಥವಾ ರುಚಿ ಎನ್ನುವುದು ನನ್ನ ಮನಸ್ಸಿಗೆ ಸಂಬಂಧಿಸಿದ್ದೆ? ರುಚಿ ರುಚಿ ಎಂದುಕೊಳ್ಳುತ್ತಾ ಹೋದರೆ ಇದೂ ರಸಗವಳವೂ ಆದೀತೋ ಏನೋ, ಎಂಥದೋ ಹೋಗಲಿ ಬಿಡು, 'ಇದ್ದಷ್ಟು ದಿನವಾರೆ ಇರುವಷ್ಟು ಪ್ರೀತಿಯ ಹಂಚಿ ಹೋಗುವುದೇ' ಅಂದುಕೊಳ್ಳೋದೇ ನಿನ್ನನ್ನ ವಶ ಮಾಡಿಕೊಳ್ಳೋಕೆ ಇರೋ ದಾರಿಯೇನೋ ಅಲ್ಲವಾ, ಹೇಳು ಮತ್ತೆ... ಹೀಗೆ ಇಲ್ಲಿನ ಪಾತ್ರಗಳು ಬದುಕಿನ ಜೊತೆ ಕೊನೆಯೇ ಇಲ್ಲದ ಮಾತುಕತೆಯನ್ನು ಒಳಗಿನಿಂದಲೂ ಹೊರಗಿನಿಂದಲೂ ಕೇಳಿಕೊಳ್ಳುತ್ತಿರುವಂತೆ ಈ ನಿರೂಪಣೆಗಳು ಕಾಣಿಸುತ್ತವೆ.
ಒಂದು ಮೂಲಭೂತ ಪ್ರಶ್ನೆ ಇಲ್ಲಿನ ನಿರೂಪಣೆಗಳನ್ನು ನಿರ್ದೇಶಿಸಿದ ಹಾಗೆ ಕಾಣುತ್ತದೆ. ನಡೆದಂತೆ ದಾರಿಯನು ಬಿಚ್ಚಿ ಬೆಳಸುವುದು, ಇದೇ ಬದುಕು ಎನ್ನುವುದು ಸತ್ಯವೆ ಅಥವಾ ನನಗೆ ಬೇಕಾದ ದಾರಿಯನ್ನು ನಾನೇ ಕಂಡುಕೊಳ್ಳಬೇಕು ಎನ್ನುವುದು ಸತ್ಯವೆ? ಈ ನಿರೂಪಣೆಗಳಲ್ಲಿ ನಾಯಕ ನಾಯಕಿಯರಿಲ್ಲ. ಇಲ್ಲಿ ಯಾರೂ ಮುಖ್ಯರೂ ಅಲ್ಲ, ಅಮುಖ್ಯರೂ ಅಲ್ಲ. ಇದೇ ಈ ನಿರೂಪಣೆಗಳನ್ನು ಭಿನ್ನ ಜಾಗದಲ್ಲಿ ಮತ್ತು ಸ್ವರೂಪದಲ್ಲಿ ನಿಲ್ಲಿಸುತ್ತದೆ. ನಾಯಕಿ ಎಂದು ಭಾಸವಾಗುವ ವಿನುತಾಳೇ ತನ್ನನ್ನು ನಾಯಕಿಯಾಗಿಸಿಕೊಳ್ಳಲು ಉದ್ದಕ್ಕೂ ನಿರಾಕರಿಸುತ್ತಾ ಹೋಗುತ್ತಾಳೆ. ಬದುಕಿನಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ, ಇನ್ನೂ ಹಲವರೊಂದಿಗೆ ಅದು ಹೇಗೆ ಬೆಸೆದುಕೊಂಡಿರುತ್ತೇವೆ ಎಂದರೆ, ಅವರಿಲ್ಲದೆ ನಮ್ಮ ಬದುಕಿನ ಬಂಡಿಯೇ ಚಲಿಸುವುದಿಲ್ಲ ಎಂದಾದ ಮೇಲೆ ಯಾರೋ ಒಬ್ಬರ ಸುತ್ತ ಬದುಕು ಸುತ್ತುತ್ತದೆ ಎನ್ನುವುದೇ ಮಿಥ್ಯ ಎನ್ನುವ ಸತ್ಯವನ್ನು ಇಲ್ಲಿನ ಪಾತ್ರಗಳು ಗಾಢವಾಗಿ ನಂಬಿವೆ.
ಉದಾಹರಣೆಗೆ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಸಿದ್ದಾರ್ಥ ಕೂಡ ಇಲ್ಲಿ ಒಂದು ಪ್ರಧಾನ ಪಾತ್ರವೇ. ಎಂದೂ ನೋಡಿಯೇ ಇರದ ಆತನ ಆತ್ಮಹತ್ಯೆ ಮೇಗಲೆ ಯನ್ನು ಅದೆಷ್ಟು ಘಾಸಿಗೊಳಿಸುತ್ತದೆ ಎಂದರೆ, ಎನುತಾಳನ್ನು ಭೇಟಿಯಾಗಲೇಬೇಕೆಂದು ಹಾತೊರೆದು ಅವಳ ಜೊತೆ ಇಡೀ ಸಂಜೆ ಈ ಸಾವಿನ ಬಗೆಗೆ ಮಾತನಾಡುತ್ತಾಳೆ. ಬದುಕು ಬೇಡವೆನ್ನುವ ಆತನ ತೀರ್ಮಾನದ ಕಾರಣಗಳನ್ನು ಇವರಿಬ್ಬರೂ ಹುಡುಕಿದ್ದೇ ಹುಡುಕಿದ್ದು. ಆತ ಪ್ರಭಾವಿ ಉದ್ಯಮಿ. ಆತನ ಸಾವು ಒಂದು ಸಾರ್ವಜನಿಕ ಸಂಗತಿ ಎನ್ನುವುದು ಇಲ್ಲಿ ಮುಖ್ಯವಾಗುವುದೇ ಇಲ್ಲ. ಆತ್ಮಹತ್ಯೆಯ ಸಾಧ್ಯತೆ ಎನ್ನುವುದು ಎಲ್ಲರ ಮನಸ್ಸಿನೊಳಗೂ ಇದ್ದೇ ಇರುತ್ತದೆ. ಅದನ್ನು ಜಾರಿಗೊಳಿಸಿದವರನ್ನು ಅರ್ಥ ಮಾಡಿಕೊಳ್ಳಲು ನಡೆಸುವ ಪ್ರಯತ್ನವೆಂದರೆ, ನಾವು ಅದರಿಂದ ಯಾಕೆ ದೂರ ಉಳಿದಿದ್ದೇವೆ, ಅಥವಾ ಅವನಂತೆ ಅದು ನಮ್ಮ ಮೊದಲ ಆದ್ಯತೆ ಯಾಕಾಗಲಿಲ್ಲ ಎನ್ನುವುದರ ಹಿಂದಿನ ಕಾರಣವನ್ನು ಹುಡುಕುವುದೇ ಆಗಿದೆ ಎನ್ನುವಷ್ಟು ಆಳವಾಗಿಯೂ ಮೇಗಲೆಯ ಮಾತುಗಳು ಕಾಣಿಸುತ್ತಾ ಹೋಗುತ್ತವೆ. ಮತ್ತೆ ಮತ್ತೆ ಸಿದ್ದಾರ್ಥನ ಪಾತ್ರ ಈ ನಿರೂಪಣೆಗಳಲ್ಲಿ ಬರುತ್ತದೆ. 'ಏಜ್ ಲೆಸ್ ಗರ್ಲ್ಸ್' ಎಂದು ತಮ್ಮನ್ನು ತಾವು ಒಂದು ಗುಂಪು ಮಾಡಿಕೊಂಡ ರಾಜೋ, ವಿನುತಾ ಮತ್ತು ಮೇಗಲೆಯರಿಗೆ ಸಾವಿನ ಮನೆಯನ್ನು ಆರಿಸಿಕೊಂಡ ಸಿದ್ದಾರ್ಥ ಯಾಕಾಗಿ ಕಾಡುತ್ತಾನೆ? ಏಜ್ ಲೆಸ್ ಆಗುವ ಉತ್ಕಟ ಜೀವನ ಪ್ರೀತಿಯೆಲ್ಲಿ? ಕೈಯಾರೆ ಬದುಕನ್ನು ಅರ್ಧಕ್ಕೇ ನಿಲ್ಲಿಸಿಕೊಂಡ ಸಿದ್ದಾರ್ಥನೆಲ್ಲಿ? ಈ ಎರಡರ ಸಂಧಿ ಬಿಂದುವಿನಲ್ಲಿ ಬದುಕನ್ನು ಇಲ್ಲಿನ ಪಾತ್ರಗಳು ಹುಡುಕುತ್ತವೆ. ವಾಸ್ತವಕ್ಕೆ ಬೆನ್ನು ತಿರುಗಿಸದೇ, ಕನಸನ್ನೂ ಕಳೆದುಕೊಳ್ಳದೆ ಈ ಎರಡರ ನಡುವೆ ಜೀಕುತ್ತಾ ಹೋಗುವ ಇಲ್ಲಿನ ಪಾತ್ರಗಳು ತಮ್ಮ ತಲ್ಲಣಗಳನ್ನು ಓದುಗರ ತಲ್ಲಣಗಳಾಗಿಸುತ್ತಾ ಹೋಗುತ್ತಾರೆ.
ಕನ್ನಡದ ಅತ್ಯುತ್ತಮ ಕತೆಗಾರ್ತಿಯಾದ ಸುಮಂಗಲಾ ಅವರ ಈ ಕತೆಗಳು ಇವುಗಳನ್ನು ನಾನು ಉದ್ದಕ್ಕೂ ನಿರೂಪಣೆಗಳೆಂದೇ ಕರೆದಿದ್ದೇನೆ. ಇವು ಸಮಕಾಲೀನ ಸಂದರ್ಭದ ಗಮನಾರ್ಹ ನಿರೂಪಣೆಗಳಾಗಿವೆ. ತೋರಿಕೆಯದಲ್ಲದ, ಕೇವಲ ಬುದ್ದಿಗತವೂ ಅಲ್ಲದ, ಭಾವುಕತೆಯನ್ನು ಮಾತ್ರ ಆಧರಿಸಿದವು ಎಂದೂ ಅನ್ನಿಸದ ಅಪ್ಪಟ ಮಾನವೀಯ ನಿರೂಪಣೆಗಳಾಗಿವೆ.” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!