ದೇಹ ಭಾಗಿಸಿ ಮನಸ್ಸು ಧ್ಯಾನಿಸಿ
ಕಟ್ಟಿದ ಕನಸಿನ ಕಸರತ್ತು
ಎಣ್ಣೆಗಂಬವ ಎತ್ತರಕ್ಕೆ ಏರಿ
ಜಾರಿದರೂ ಕೊನೆಯಾಗದ ಶಿಸ್ತು
ಹುರಿಗೊಳಿಸಿದ ಹರೆಯ ಗೆದ್ದ
ನಲಿವಿನ ಪಥ ಸಂಚಲನ
ಬೆರಗಿಗೆ ಮೌನವೇ ಉತ್ತರ
ಸಾಹಸದ ಸವಾಲು ಜೀವನ
ಪ್ರತಿ ಕ್ಷಣದ ಶ್ರಮದ ಹಿಂದೆ
ಬೆವರು ಹರಿಸಿ ಬರೆದ ಪರೀಕ್ಷೆ
ಕಾಡಿಬೇಡಿ ಗೂಡು ಕಟ್ಟಿದ ಮೇಲೆ
ಮನದ ಜಗುಲಿಗೆ ಫಲದ ನಿರೀಕ್ಷೆ
ಸೋಲಿಗೆ ಶರಣಾಗದೇ ಗುರಿಯ
ದಾರಿಯಲಿ ನೆಟ್ಟ ನೇರ ಬಿಂಬ
ಪಾಲಿಗೆ ಬಂದ ಗೆಲುವು ಪಡೆದು
ಎದೆಯೊಳು ಮಿಂಚುವ ಮಲ್ಲಕಂಬ.
-ದತ್ತಾತ್ರಯ ಭಟ್ಟ, ಕಣ್ಣಿಪಾಲ
ಚಿತ್ರ ಕೃಪೆ:ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!