ಗಾನ ವಿಜ್ಞಾನ ಚೇತನ

“ಗಾನ ವಿಜ್ಞಾನ ಚೇತನ” ನಮ್ಮೊಳಗಿನ ಅಜ್ಞಾನವನ್ನು ತೊಡೆದು ಹಾಕುವ ಪ್ರಬುದ್ಧ ಗುಚ್ಛ. ಮೌಢ್ಯ ತುಂಬಿದ ಈ ಸಮಾಜಕ್ಕೆ ವಿಜ್ಞಾನ ಮತ್ತು ವೈಚಾರಿಕ ಮನೋಧರ್ಮಗಳ ಶಸ್ತ್ರಚಿಕಿತ್ಸೆ ಇಂದು ಅತ್ಯಗತ್ಯ. ಮೌಢ್ಯದ ಕಪ್ಪು ಮೋಡ ಕರಗಲೇ ಬೇಕು, ಕಂದಾಚಾರದ ಸಂಕೋಲೆ ಕತ್ತರಿಸಿ ಬೀಲಬೇಕು. ಸುಜ್ಞಾನದ ಹೊಂಗಿರಣ ಸುತ್ತ ಹರಡಿ ಬೆಳಕು ಕಾಣಿಸಬೇಕು. ಹೊಸ ದಿಕ್ಕಿಗೆ ಹೊರಟ ಹಕ್ಕಿನ ಹೋರಾಟಗಾರರೇ, ಹಾಡುಗಾರರೇ ನಿಲ್ಲಿ? ಹಾಡಿನ ಗಟ್ಟಿ ದನಿಯ ಮೂಲಕ ಈ ಚೇತನದ ಸಂದೇಶ ಎಲ್ಲೆಡೆ ಚೆಲ್ಲಿ” ಎಂದು ಈ ಕೃತಿಯ ಸಂಪಾದಕರಾದ ಡಾ. ಶೇಖರ ಗೌಳೇರ್ ಅಭಿಪ್ರಾಯ ಪಟ್ಟಿದ್ದಾರೆ.

ಅವರ ಪ್ರಕಾರ “ದಿನದಿನಕ್ಕೂ ಸಮಾಜದಲ್ಲಿ ಅವೈಜ್ಞಾನಿಕ ಘಟನೆಗಳು ಹೆಚ್ಚುತ್ತಲೇ ಇವೆ. ಜನರಲ್ಲಿ ವೈಜ್ಞಾನಿಕ ಮನೋಭೂಮಿಕೆ ಸಿದ್ಧ ಪಡಿಸುವುದು. ಇಂದಿನ ತುರ್ತು ಅಗತ್ಯವಾಗಿದೆ. ವಿಶೇಷವಾಗಿ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವನ್ನು ಸೂಕ್ಷ್ಮ ಸವಾಲುಗಳನ್ನು ಬಿತ್ತುವುದು ಅನಿವಾರ್ಯವಾಗಿದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಳೆದ ಮೂರು ದಶಕಗಳಿಂದಲೂ ಈ ನಿಟ್ಟಿನಲ್ಲಿ ವರ್ಷವಿಡೀ ಹತ್ತು ಹಲವು ಹೊಸ ವಿಜ್ಞಾನ ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದೆ.

ವಿಜ್ಞಾನದ ಧ್ವನಿಯನ್ನು ಅಭಿವ್ಯಕ್ತಿಗೊಳಿಸುವ ನಿಟ್ಟಿನಲ್ಲಿ ಕಾವ್ಯ ಮಾಧ್ಯಮವನ್ನು ಮೊದಲ ಬಾರಿಗೆ ಬಳಸಿಕೊಳ್ಳುತ್ತಿರುವುದು ವಿಜ್ಞಾನ ಪರಿಷತ್ತಿನ ಮತ್ತೊಂದು ಮೈಲಿಗಲ್ಲು. ಈಗ ಹೊರಬರುತ್ತಿರುವ "ಗಾನ ವಿಜ್ಞಾನ ಚೇತನ" ಎಂಬ ಈ ಕಾವ್ಯ ಕೃತಿಗೆ ಈಗಾಗಲೇ ವಿಜ್ಞಾನ ಪರಿಷತ್ತು ಹೊರತಂದಿರುವ ಕಾಲದ ಕೂಗು, ನಿಸರ್ಗ ಮತ್ತು ಚಿಂತನದ ಧ್ವನಿ ಸುರುಳಿಗಳು ಪ್ರೇರಣೆಯಾಗಿವೆ. ಈ ಹಿಂದೆಯೇ ಪ್ರಕಟಗೊಂಡ "ವಿಚಾರ ಕ್ರಾಂತಿಗೆ ಕುವೆಂಪು ಕರೆ" ಎನ್ನುವ ಪುಸ್ತಕದಲ್ಲಿಯೂ ಕೆಲವು ಪದ್ಯಗಳನ್ನು ರೂಪಕವಾಗಿ ಬಳಸಿಕೊಳ್ಳಲಾಗಿದೆ.

“ಗಾನ ವಿಜ್ಞಾನ ಚೇತನ"ದಲ್ಲಿ ಒಟ್ಟು ನೂರು ಪದ್ಯಗಳಿವೆ. ಬಹುಪಾಲು ಪದ್ಯಗಳು ವಿಜ್ಞಾನ ಸಾಹಿತ್ಯಕ್ಕೆ ಪೂರಕವಾಗಿವೆ. ಇಲ್ಲಿಯ ಒಂದೊಂದು ಪದ್ಯವು ಒಂದೊಂದು ಕ್ಷೇತ್ರದ ಆಶಯವನ್ನು ಸಂದೇಶವಾಗಿ ನಮ್ಮ ಓದುಗರಿಗೆ ತಲುಪಿಸಬಹುದು. ಅನೇಕ ಪದ್ಯಗಳನ್ನು ನಮ್ಮ ವಿಜ್ಞಾನ ಕಾರ್ಯಕ್ರಮಗಳಲ್ಲಿ ಗಟ್ಟಿಯಾಗಿ, ರಾಗಬದ್ಧವಾಗಿ ಹಾಡಬಹುದಾಗಿವೆ. ಇಲ್ಲಿಯ ಕೆಲವು ಪದ್ಯಗಳು ಚಿಂತನ, ಮಂಥನಕ್ಕೆ ಸಮಂಜಸವಾಗಿವೆ. ಒಂದಲ್ಲಾ ಒಂದು ಕಾರಣಕ್ಕೆ ಈ ಪದ್ಯಗಳನ್ನು ನೀವು ಮೆಚ್ಚುಕೊಳ್ಳಬಹುದು. ಯಾವುದೇ ಒಂದು ಪದ್ಯ ಯಾರಿಗೇ ಸಂತಸಕೊಟ್ಟರೂ ನಮ್ಮ ಶ್ರಮ ಸಾರ್ಥಕವಾದಂತೆ !

ಕನ್ನಡದ ಕಾವ್ಯ ಕಣಜದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಬಡತನವಿಲ್ಲ. ಗಿಡ, ಮರ, ಹಕ್ಕಿ, ಪಕ್ಷಿ, ಸಮುದ್ರ, ಮಳೆ, ಮೋಡ, ಅಕ್ಷರ ಕಲಿಕೆ ಇನ್ನೂ ಮುಂತಾದ ವೈವಿಧ್ಯಮಯವಾದ ವಿಷಯಗಳ ಪದ್ಯಗಳನ್ನು ಆಯ್ದು ತಂದು ಇಲ್ಲಿ ಪ್ರಕಟಿಸಲಾಗಿದೆ. ರಾಷ್ಟ್ರಕವಿಗಳ, ಜ್ಞಾನಪೀಠ ಪುರಸ್ಕೃತರ ಹಾಗೂ ಕನ್ನಡ ಕಾವ್ಯ ಜಗತ್ತಿನ ಚಿರಪರಿಚಿತ ಪ್ರಬುದ್ಧ ಕವಿಗಳ ಕವಿತೆಗಳು ಇಲ್ಲಿವೆ. ಹಾಗೆಯೇ ಹೊಸ ದನಿಗಳ ಹುಡುಕಾಟದ ಕವಿಗಳೂ ಇಲ್ಲಿ ಸೇರಿದ್ದಾರೆ. ನಮಗೆ ಗೊತ್ತಿಲ್ಲದ ಅತ್ಯುತ್ತಮವಾದ ಅನೇಕ ಕವಿತೆಗಳು ಈ ಕೃತಿಯಿಂದ ದೂರ ಉಳಿದಿರಬಹುದು, ಅದಕ್ಕೆ ನಮ್ಮ ಕೃತಿಯ ಮಿತಿಯೂ ಕಾರಣವಾಗಿದೆ.” ಎಂದು ತಮ್ಮ ಸಂಪಾದಕರ ನುಡಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂತಹ ಮಹತ್ವದ ಕೃತಿಗೆ ಮುನ್ನುಡಿ ಬರೆದಿದ್ದಾರೆ ಸತ್ಯನಾರಾಯಣರಾವ್ ಅಣತಿ. ಅವರ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ..

“ಇಂದಿನ ದಿನಮಾನಗಳಲ್ಲಿ ಬದುಕನ್ನು 'ರೂಢಿ ರಾಕ್ಷಸರು', ಅಂದರೆ ನಂಬಿಕೆಯ ಅತಿರೇಕಗಳು, ಪರಂಪರಾಗತ ಅವೈಚಾರಿಕ ನಡಾವಳಿಗಳು ಆಳುತ್ತಿವೆ. ಮನುಷ್ಯರ ನಡುವೆ ಬಿರುಕುಗಳು ಹಿರಿದಾಗುತ್ತಿವೆ. ಪ್ರಕೃತಿ ಸಹಜವಾದ ಸಹಬಾಳ್ವೆ, ಸೌಹಾರ್ದ, ಸ್ನೇಹ ಪ್ರೀತಿಯೂ ಕೇವಲ ಪ್ರಚಾರದ ಸರಕು ಆಗುತ್ತಿವೆ. ದುರಾಸೆಯ ಮನಸ್ಸುಗಳು ಬದುಕನ್ನು ಅಸಹನೀಯವಾಗಿಸುತ್ತಿವೆ.

ನಾವು ಬದುಕುತ್ತಿರುವ ಈ ಭೂಮಿ ನಿಸರ್ಗ ನೀಡಿರುವ ದೊಡ್ಡ ಸಂಪತ್ತು. ಅದನ್ನು ವಿವೇಕದಿಂದ ಬಳಸಿದರೆ ಮಾತ್ರ ಸಹನೀಯ ಬದುಕು ಸಾಧ್ಯ. ಅದ್ದರಿಂದಲೇ ಮಹಾತ್ಮ ಗಾಂಧೀಜಿ ಹೇಳಿದರು : ಪ್ರಕೃತಿ ನಮ್ಮ ಅವಶ್ಯಕತೆಗೆ ಬೇಕಾದಷ್ಟನ್ನು ನೀಡಿದೆ; ದುರಾಸೆಯನ್ನು ಪೂರೈಸಲು ಅಲ್ಲ ಎಂದು. ಭೂಮಿ, ನೀರು, ಗಾಳಿ, ಅಗ್ನಿ, ಸೂರ್ಯ, ಮನುಷ್ಯ, ಪ್ರಾಣಿ ಪಕ್ಷಿ ಎಲ್ಲವೂ ಈ ನಿಸರ್ಗ ಸೃಷ್ಟಿಯ ಸಖ್ಯ ಲೀಲಾ ವಿನೋದ. ಈ ಎಲ್ಲವೂ ಸಹಜವಾದ ಸಖ್ಯದಲ್ಲಿ ಮನುಷ್ಯ ಸುಖಿ. ಆಯ ತಪ್ಪಿದರೆ ಬದುಕು ದುರ್ಭರ. ಹಾಗಾಗದಂತೆ ಬದುಕನ್ನು ಸಹನೀಯವಾಗಿಸುವ ಸಾಮರಸ್ಯದಿಂದ ಕೂಡಿದ ಬದುಕನ್ನೇ 'ಪರಿಸರ ಸ್ನೇಹ' ಎಂದು ಹೇಳುವುದು. ಹಾಗಾಗದೇ ಮನುಷ್ಯನ ಸ್ವಾರ್ಥ ದುರಾಸೆಯಿಂದ ನಿಸರ್ಗದ ಮೇಲಿನ ದಬ್ಬಾಳಿಕೆಯಿಂದಾಗಿ ಪರಿಸರ ಸ್ನೇಹ ವಿಷಮಿಸಿದೆ. ನಿಸರ್ಗ ವಿಕೋಪ ಆಹಾರ ವಸ್ತುಗಳ ಬೆಳವಣಿಗೆಯಲ್ಲಿ ವ್ಯತ್ಯಯ ಉಂಟಾಗಿರುವುದು.

ರೋಗ ರುಜಿನಗಳು ಹೊಸ ಹೊಸ ರೂಪದಲ್ಲಿ ನಮ್ಮನ್ನು ಕಾಡುತ್ತಿವೆ. ಇಂಥ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ 'ಗಾನ ವಿಜ್ಞಾನ ಚೇತನ' ಕವನ ಸಂಕಲನದಲ್ಲಿ : ಪ್ರಕೃತಿ ಪರಿಸರ ಕಾಳಜಿ, ನೀರು ನೆಲ ಅವುಗಳ ಸಂರಕ್ಷಣೆ, ಓದು ವಿದ್ಯೆಯ ಮಹತ್ವ, ವಿಜ್ಞಾನ ತಂತ್ರಜ್ಞಾನ ಬಳಕೆಯ ಪರಿಮಿತಿಗಳನ್ನು ತಿಳಿಯಹೇಳುವಂಥ ಕವಿತೆಗಳಿವೆ. ಗ್ರಹ ತಾರೆ ದಿನಮಾನಗಳ ಸಹಜ ಕ್ರಿಯೆಗಳ ಬಗ್ಗೆ ತಿಳಿಯಹೇಳುತ್ತಾ, ಅವುಗಳ ಬಗ್ಗೆ ಇರಬಹುದಾದ ಮೂಢನಂಬಿಕೆಗಳನ್ನು ತೊಡೆದುಹಾಕುವ ಕವಿತೆಗಳು ಸಂಕಲನದಲ್ಲಿವೆ. ನಂಬಿಕೆಯ ಪ್ರಪಂಚದ ಕರಾಳ ಮುಖಗಳಾದ ಮೂಢನಂಬಿಕೆಗಳನ್ನು ಆಚರಣೆಗಳನ್ನ; ಅವೈಜ್ಞಾನಿಕ ಜಾತಿಪದ್ಧತಿಯಂಥ ಕ್ರೂರ ನೀತಿ ನಡವಳಿಕೆಗಳನ್ನು ತಿರಸ್ಕರಿಸಲು ತಿಳಿಯ ಹೇಳುತ್ತವೆ.

ಈ ದಿಸೆಯಲ್ಲಿ ಬೇಕಾಗಿರುವ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರ ದರ್ಶನಗಳಿಂದ ಪ್ರೇರಿತವಾದ ಸಂವೇದನೆಯನ್ನು ಹೊಂದಿರುವ ಮನಸ್ಸುಗಳು ರಚಿಸಿರುವ ಅನೇಕ ಕವಿತೆಗಳು ಸಂಕಲನದಲ್ಲಿವೆ. ಈ ಕವಿತೆಗಳು ಹೊಸ ತಲೆಮಾರಿನ ಓದುಗರಿಗೆ ವೈಚಾರಿಕ-ವೈಜ್ಞಾನಿಕ ತಿಳುವಳಿಕೆಯನ್ನು ಉಂಟುಮಾಡುವುದರ ಮೂಲಕ ಸ್ವಾತಂತ್ರ್ಯ ಸಮಾನತೆ ಸುಖ ಸಮೃದ್ಧಿಯ ದಿನಮಾನಗಳನ್ನು ಕಾಣುವಂತಾಗಲಿ.”

ಸುಮಾರು ೧೧೦ ಪುಟಗಳನ್ನು ಹೊಂದಿರುವ ಈ ಕೃತಿಯಲ್ಲಿ ಪ್ರಖಾತ ಕವಿಗಳ ಕವನಗಳೂ ಹಾಗೆಯೇ ಉದಯೋನ್ಮುಖ ಕವಿಗಳ ಕವನಗಳೂ ಸಂಕಲಿತವಾಗಿವೆ. ವೈಜ್ಞಾನಿಕ ಮನೋಭಾವನೆಯನ್ನು ಹರಡಲು ಈ ಕವನಗಳು ಖಂಡಿತಾ ಸ್ಪೂರ್ತಿಯಾಗಬಲ್ಲವು.