ಅನಿವಾರ್ಯ ತೊಡಕಿನಲಿ ಸಿಲುಕಿರುವೆನಲ್ಲ 

ಅಂತರಂಗದ ಭಾವ ಕಲಕಿರುವುದಲ್ಲ 

ಹೊನ್ನಾಗಿಯೇ ಇರಲಿ ಆಶಯದ ಪೂರ 

ಹಪಹಪಿಕೆ ಎದೆತುಂಬಿ ಹರಡಿರುವುದಲ್ಲ 

ಶಬ್ದವಿಲ್ಲದ ಕ್ಷಣವ ಹುಡುಕಿದರೆ ಗೆಲುವೆಲ್ಲಿ 

ಪಿಸುಗುಡುವ ಪರಿಯನ್ನು ಮರೆತಿರುವೆನಲ್ಲ 

ಬೇಡವೆಂದರು ಬಿಡದು ಮಾಯೆ ಎನ್ನುವೆಯಾ 

ಯಾವುದೋ ತಳಮಳಕೆ ಈಡಾದೆನಲ್ಲ 

ಮುಳ್ಳಿರುವ ಹಾದಿಯಲಿ ನಡೆವುದೇತಕ್ಕೆ 

ಹಾವುಗೆಯನೂ ಮರೆತು ಬಂದೆನಲ್ಲ 

ಗಗನದಲಿ ನಿತ್ಯವೂ ಕಾರ್ಮೋಡವೇತಕ್ಕೆ 

ಎದೆ ಬಾನು ಕಪ್ಪಡರಿ ಹೋಗಿರುವುದಲ್ಲ 

ನಂಬುಗೆಯು ಹೊರ ನೋಟದಿಂದ ಬಹುದೇನು 

ಸಹಸ್ರ ಆಸೆಯ ಕಡಲು ಬತ್ತಿರುವುದಲ್ಲ

ಹಲಸನ್ನು ಕೊಳೆತಿಹುದೇ ಎಂದರಿಯ ಬಹುದಂತೆ

ದುರ್ಗುಣದ ಹುಳುಕುಗಳು ಕಾಣದಲ್ಲ 

ಯಾವುದೂ ಬೇಡ ಎಂದಿದ್ದನಾ ಬಾಹುಬಲಿ 

ನಿರ್ವಾಣ ಸ್ಥಿತಿಯಡೆಗೆ ಸಾಗಿರುವೆನಲ್ಲ

-ಡಾ. ಸುರೇಶ ನೆಗಳಗುಳಿ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ