ಕೃಷಿ ತೋಟಗಾರಿಕೆ

ಕನ್ನಡ ಪುಸ್ತಕ ಪ್ರಾಧಿಕಾರವು ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ಸಮಯದಲ್ಲಿ ಹೊರತಂದ ಸಂಗ್ರಾಹ್ಯ ಕೃತಿ ‘ಕೃಷಿ ತೋಟಗಾರಿಕೆ - ಐದು ದಶಕಗಳ ನೆಲ ಜಲದ ಕೃಷಿ ನೋಟ’. ಈ ಕೃತಿಯನ್ನು ವಿವಿಧ ಲೇಖಕರ ಅಮೂಲ್ಯ ಬರಹಗಳ ಮೂಲಕ ಮೆರುಗು ಹೆಚ್ಚಿಸಿದ್ದು ಇದರ ಸಂಪಾದಕರಾದ ಶಿವಾನಂದ ಕಳವೆ. ಇವರು ಸ್ವತಃ ಕೃಷಿಕರೂ, ಬರಹಗಾರರೂ ಆಗಿರುವುದು ಪ್ಲಸ್ ಪಾಯಿಂಟ್ ಎನ್ನಬಹುದು. 

ಈ ಕೃತಿಗೆ ‘ಸಂಪಾದಕರ ಮಾತು’ ಬರೆಯುತ್ತಾ ಶಿವಾನಂದ ಕಳವೆಯವರು “ ಭಾಷಾವಾರು ಪ್ರಾಂತ್ಯಗಳ ಪುನರ್ವಿಂಗಡನೆಯಿಂದ ಕ್ರಿ.ಶ. ೧೯೫೬ರಲ್ಲಿ ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಮಾನ್ಯ ಶ್ರೀ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕ್ರಿ.ಶ.೧೯೭೩ರ ನವೆಂಬರ್ ೧ರಂದು ಕರ್ನಾಟಕವೆಂದು ನಾಮಕರಣಗೊಂಡು ಇಂದು ೫೦ ವರ್ಷಗಳಾಗಿವೆ. ಕನ್ನಡ ಪುಸ್ತಕ ಪ್ರಾಧಿಕಾರ ಕರ್ನಾಟಕ ಸುವರ್ಣ ಸಂಭ್ರಮದಲ್ಲಿ ಕೃಷಿ ಕುರಿತು ಪುಟ್ಟ ಅವಲೋಕನದ ಸವಿನೆನಪಿನ ಪುಸ್ತಕ ಪ್ರಕಟಣೆಯ ಕಾರ್ಯ ಕೈಗೆತ್ತಿಕೊಂಡಿದ್ದು ಖುಷಿಯ ಸಂಗತಿಯಾಗಿದೆ. ಈ ಸಂಪುಟಕ್ಕೆ ಸಂಪಾದಕನಾಗಬೇಕೆಂಬ ಪ್ರಸ್ತಾಪ ಬಂದಾಗ ಕೆಲಸದ ಅಗಾಧತೆ, ಸವಾಲು ಯೋಚಿಸಿ ತಕ್ಷಣ ನಿರಾಕರಿಸಿದೆ. ಒಬ್ಬ ವ್ಯಕ್ತಿಯಿಂದ ಈ ಕಾರ್ಯ ಸೀಮಿತ ಸಮಯದಲ್ಲಿ ವಿಶಾಲ ಕೃಷಿ ರಂಗದ ಕುರಿತು ಬರಹ ಅಸಾಧ್ಯವೆಂಬುದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಹಾಗೂ ಆಡಳಿತಾಧಿಕಾರಿಗಳಾದ ಶ್ರೀ ಕೆ.ಬಿ.ಕಿರಣ್ ಸಿಂಗ್ ರವರು ನಾಡಿನ ತಜ್ಞ ಲೇಖಕರ ನೆರವಿನಿಂದ ವಿವಿಧ ವಿಷಯ ಬರೆಸಿದರೆ ಕೃತಿ ಸಮಯಮಿತಿಯಲ್ಲಿ ರೂಪಿಸಬಹುದೆಂಬ ಸಲಹೆ ನೀಡಿದರು. ಪುಸ್ತಕ ಪ್ರಾಧಿಕಾರ ಆಯ್ದ ಲೇಖಕರಿಗೂ ಈ ಬಗ್ಗೆ ವಿನಂತಿಸಿತು. ಹತ್ತಾರು ಕೆಲಸದ ಒತ್ತಡಗಳ ಮಧ್ಯೆ ಲೇಖನ ಬರೆಯಲು ಅವರೆಲ್ಲ ಸಮ್ಮತಿಸಿದ್ದರಿಂದ ಕೃತಿ ತಮ್ಮ ಕೈಯಲ್ಲಿದೆ.

ಕೃಷಿ ಸಾಧಕರ ಭೇಟಿ, ಕೆರೆ, ನದಿ, ಬರ, ಅರಣ್ಯ ವೀಕ್ಷಣೆಯ ಕಾರಣಗಳಿಗೆ ೧೫ ವರ್ಷಗಳಿಂದ ನಾನು ರಾಜ್ಯದ ಪ್ರವಾಸಿಯಾಗಿದ್ದೇನೆ. ಕೆಲವು ವಿಷಯಗಳನ್ನು ದಾಖಲಿಸುವ ಕಾರ್ಯ ನನ್ನ ಮಿತಿಯಲ್ಲಿ ಹಿಂದಿನಿಂದ ಮಾಡಿದ್ದೇನೆ. ಹೀಗಾಗಿ ಕೃಷಿಯನ್ನು ನೆಲ ಜಲದ ಪರಿಸರದ ಹಿನ್ನೆಲೆಯಲ್ಲಿ ನೋಡಿ ಈಗಾಗಲೇ ಬರೆದ ಬರಹಗಳಲ್ಲಿ ಸೂಕ್ತವಾಗಿದ್ದನ್ನು ಅಳವಡಿಸಲು ಅನುಕೂಲವಾಯಿತು. ಗಮನಿಸಿ, ಪುಸ್ತಕ ರಾಜ್ಯದ ಕೃಷಿಯ ೫೦ ವರ್ಷಗಳ ಸಮಗ್ರ ಅವಲೋಕವಲ್ಲ, ಕರ್ನಾಟಕದ ಕೃಷಿ ಎಂದರೆ ಇಷ್ಟೇ ಎಂದು ದಯವಿಟ್ಟು ಯಾರೂ ಭಾವಿಸಬಾರದು. ಬೆಂಗಳೂರು, ಧಾರವಾಡ, ರಾಯಚೂರು ಕೃಷಿ ವಿಶ್ವವಿದ್ಯಾಲಯಗಳು, ಶಿವಮೊಗ್ಗ, ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯಗಳು ನೀಡುತ್ತಿರುವ ಕೊಡಗೆಗಳು ಮಹತ್ವದ್ದಾಗಿದೆ. ಕೃಷಿ ತಜ್ಞರ ದೊಡ್ಡ ತಂಡವೇ ರಾಜ್ಯದಲ್ಲಿದೆ, ಅವರೆಲ್ಲರ ಕೊಡುಗೆಗಳನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ.

ರಾಜ್ಯದ ಕೃಷಿಕರಲ್ಲಿ ಕೃಷಿ ತೋಟಗಾರಿಕೆಯ ಪ್ರೀತಿ ಮೂಡಿಸಲು ಶ್ರೀಯುತರಾದ ಡಾ.ಎಮ್.ಎಚ್.ಮರಿಗೌಡರು, ಡಾ.ನಾರಾಯಣ ರೆಡ್ಡಿ, ಕುರುವಳ್ಳಿ ಎಂ.ಪುರುಷೋತ್ತಮರಾವ್, ಚೇರ್ಕಾಡಿ ರಾಮಚಂದ್ರ ರಾಯರು, ಡಾ. ಎಲ್.ಸಿ.ಸೋನ್ಸ್, ಡಾ.ಎಲ್.ಎ.ದೀಕ್ಷಿತ್, ಡಾ.ಡಿ.ಆರ್. ಪ್ರಮಲ್ಲಚಂದ್ರ ಶಿವಮೊಗ್ಗ ಮುಂತಾಗಿ ಎಷ್ಟೊಂದು ಮಹನೀಯರು ದುಡಿದಿದ್ದಾರೆ. ಕಾಳುಮೆಣಸು ತಜ್ಞ ವೇಣುಗೋಪಾಲ, ಬೆಳಗಾವಿಯ ಸುರೇಶ ದೇಸಾಯಿ, ತಿಪಟೂರಿನ ಜಿ.ಎನ್.ಎಸ್.ರೆಡ್ಡಿ, ದುಮ್ಮನಳ್ಳಿ ಶಿವಮ್ಮ, ವನಜಾ ರಾಮಪ್ರಸಾದ್, ಕುಷ್ಟಗಿಯ ದೇವೇಂದ್ರಪ್ಪ ಬಳೂಟಗಿ, ವಿಜಯಪುರದ ವಿಠಲ ಗೌಡ ಬಿರಾದಾರ್, ಡಾ.ರಾಮಕೃಷ್ಣಪ್ಪ, ಮೈಸೂರಿನ ಎ.ಪಿ.ಚಂದ್ರಶೇಖರ್, ಬದನಾಜೆ ಶಂಕರ ಭಟ್ಟ, ಸೇಡಿಯಾಪು ಜನಾರ್ಧನ ಭಟ್, ಗದಗದ ಡಿ.ಡಿ.ಭರಮಗೌಡ್ರ, ತುಮಕೂರಿನ ಶಿವನಂಜಯ್ಯ ಬಾಳೇಕಾಯಿ, ಬಿ.ಕೆ.ದೇವರಾಜ, ತುಮಕೂರಿನ ಓದೇಕಾರ್ ಫಾರ್ಮ್, ಅಥಣಿಯ ಎಸ್.ಎಂ.ಪಾಟೀಲ್, ಬೀದರಿನ ಚಂದ್ರಶೇಖರ ಕಾಡಾದಿ, ಕೋಲಾರ ನೆನಮನಹಳ್ಳಿ ಚಂದ್ರಶೇಖರ, ರಾಂಪುರ ಅಶೋಕ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕೃಷಿ ಜಾಗೃತಿಗೆ ಮಹತ್ವದ ಕೊಡುಗೆ ನೀಡಿದ ಸಾಧಕರ ದೊಡ್ಡ ಪಟ್ಟಿಯೇ ಇದೆ. ವಿವಿಧ ಹವಾಗುಣದ ಕೃಷಿ ನೋಡುತ್ತ 'ಗೆಜೆಟಿಯರ್' ಮಾದರಿಯಲ್ಲಿ ರಾಜ್ಯದ ಪ್ರತೀ ಜಿಲ್ಲೆಯ ಕೃಷಿ ಇತಿಹಾಸ, ವರ್ತಮಾನದ ಸಂಶೋಧನಾತ್ಮಕ ದಾಖಲಾತಿಯ ಕಾರ್ಯ ಅತ್ಯಂತ ಅಗತ್ಯವಿದೆ. ಮುಂದೆ ಅಂಥ ಕಾರ್ಯ ನಡೆಯಲೆಂದು ಆಶಿಸುತ್ತೇವೆ. ಕೃತಿಯಲ್ಲಿ ಈ ವಿಷಯಗಳನ್ನು ಏಕೆ ಬರೆದಿಲ್ಲ? ಟೀಕೆ, ಪ್ರಶ್ನೆಗಳು ಪುಸ್ತಕ ಗಮನಿಸಿದಾಗ ಮೂಡಬಹುದು. ತಿಂಗಳ ಸಮಯಮಿತಿಯಲ್ಲಿ ಸಮಗ್ರತೆ ಕಾರ್ಯ ಸುಲಭವಲ್ಲ, ಸರಳವಲ್ಲವೆಂಬುದು ತಮಗೂ ಗೊತ್ತಿದೆ. ಇದರ ಹೊರತಾಗಿಯೂ ನಾಡಿನ ಕೃಷಿ ನೋಡಲು ಪ್ರೇರೇಪಿಸುವ, ಹೊಸ ಹೊಸ ವಿಷಯ ತಿಳಿಯಲು ನೆರವಾಗುವ ಸಣ್ಣ ಕಾರ್ಯವಷ್ಟೇ ೨೦೨೪ರ ನವೆಂಬರ್ ಸುವರ್ಣ ಸಂಭ್ರಮದಂದು ನಡೆದಿದೆ. ಇಂಥ ಅವಕಾಶ ನೀಡಿದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ, ಓದುಗರಿಗೆ ಹೃತ್ತೂರ್ವಕ ಕೃತಜ್ಞತೆಗಳು.

ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲು ಸೀಮೆಯಲ್ಲಿ ರಾಜ್ಯದ ಕೃಷಿ ವ್ಯಾಪಿಸಿದೆ. ವಾರ್ಷಿಕ ೩೦೦ ಮಿಲಿ ಮೀಟರ್ ಮಳೆ ಕೂಡಾ ಸುರಿಯದ ಮೊಳಕಾಲ್ಕೂರು, ಚೆಳ್ಳಕೆರೆಯ ಪ್ರದೇಶದಲ್ಲಿಯೂ ಪರಿಸರಕ್ಕೆ ತಕ್ಕುದಾಗ ಕೃಷಿ ವಿನ್ಯಾಸವಿದೆ. ೬೦೦೦-೮೦೦೦ ಮಿಲಿ ಮೀಟರ್ ಮಳೆಯ ಆಗುಂಬೆಯ ಕಾಡು ಬೆಟ್ಟದ ಸನಿಹದಲ್ಲಿಯೂ ಅನ್ನದ ಕಾಯಕವಿದೆ. ಕಡಿದಾದ ಬೆಟ್ಟದ ಇಳಿಜಾರಿನಲ್ಲಿ ಕೊಡಗಿನ ಕಾಫಿ ಇದೆ. ಮಣ್ಣು ನೀರಿನ ತೀವ್ರ ಸಮಸ್ಯೆಯ ಬಯಲು ನಾಡಿನ ಕಲ್ಲು ನೆಲದಲ್ಲಿ ನೆಲಗಡಲೆ, ಹುರಳಿಯ ಹಸಿರಿದೆ. ಇಬ್ಬನಿಯ ಮಂಜು ಸುರಿದರೂ ಚಳಿಯ ವಾತಾವರಣದಲ್ಲಿ ಎರೆ ಹೊಲದ ಕಡಲೆ ನಗುತ್ತದೆ, ಕುಸುಬಿ ಹೂವರಳಿಸುತ್ತದೆ. ಗೋಧಿಯ ಚಳಿಗಾಲದ ಸುವರ್ಣವಿನ್ಯಾಸ ಬೀದರ ತುದಿಯಿಂದ ಬೆಳಗಾವಿಯ ತನಕ ಅಲ್ಲಲ್ಲಿ ಸೊಬಗು ಸೂಸುತ್ತಿದೆ. ದನಕರು ಮೇವಿಗೂ ತೀವ್ರ ಸಮಸ್ಯೆಯ ಬರ ಬಂದಾಗ ತುಮಕೂರಿನ ರಾಗಿ ದಿನ್ನೆಗಳು ಹಸುಕರು ಉಳಿಸಿವೆ. ಕೆರೆ, ಬಾವಿ. ಒಡ್ಡು, ನದಿಗಳ ಮೂಲಕ ಸಾಂಪ್ರದಾಯಿಕ ನೀರಾವರಿ ಒಂದಾನೊಂದು ಕಾಲದ ಕೃಷಿ ಚೇತನ. ಕರಾವಳಿ ಒಕ್ಕಲ ಮಕ್ಕಳ ಮರಳ ಬಾವಿಗಳಿವೆ. ಈಗ ಇವುಗಳ ಜೊತೆಗೆ ಬೃಹತ್ ನೀರಾವರಿ ಯೋಜನೆಗಳು ಜಾರಿಯಾಗಿ ಹೊಲದ ಸಂಪರ್ಕ ಕಾಲುವೆ ಜಾಲಗಳಿವೆ. ಭತ್ತ, ಕಬ್ಬು, ಅಡಿಕೆ, ಬಾಳೆ, ತೆಂಗು ಮುಂತಾದ ಬೆಳೆ ಸಿರಿ ಸೂಸುತ್ತಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ೪೫ ಲಕ್ಷ ಕೊಳವೆ ಬಾವಿಗಳಿವೆ. ಇವು ಕೃಷಿ ನೀರಾವರಿಗೆ ನೆರವಾಗುತ್ತಿವೆ.

ಒಂದು ತೆಂಗಿನ ಮರದ ಬೇರಿನಿಂದ ಕೊನೆಯ ಸುಳಿ ತನಕದ ಭಾಗಗಳನ್ನು ಹಿರಿಯರು ಪರಿಚಯಿಸುತ್ತಾ ಸುಮಾರು ೩೨ ಶಬ್ದಗಳಲ್ಲಿ ಹೇಳಿದ್ದರು. ಸಿಂಗಾರ, ಕಠಾರಿ, ಕಣ್ಣು, ಕರಟ, ತೆಂಗಿನ ಹತ್ತಿ, ಗಣ್ಣು, ಹೆಡ, ಗರಿ ಹೀಗೆ ವಿವರಿಸಿದ ಹಿರಿಯರ ನುಡಿಗಳಲ್ಲಿ ಕನ್ನಡದ ಜನಪದರ ಭಾಷಾ ಬೆರಗಿದೆ. ನೇಗಿಲು ಉಳುಮೆ ಮಾಡುವ ಕಾಲಕ್ಕೆ ಕೊರಡು, ಕೂರಿಗೆ, ನೊಗ ಮುಂತಾಗಿ ಎಷ್ಟೊಂದು ಪದಗಳು ಜೊತೆಗಿದ್ದವು! ನಮ್ಮ ಅನ್ನ, ಆದಾಯದ ಕೃಷಿಯ ಕಾಲುದಾರಿಯಲ್ಲಿ ಸವಿಗನ್ನಡದ ಹಿರಿದಾದ ಸಂಪತ್ತಿದೆ. ಬೀದರ, ವಿಜಯಪುರ, ಹುಣಸೂರು, ಮಂಡ್ಯ, ಸುಳ್ಯ, ಹಾವೇರಿ ಹೀಗೆ ರಾಜ್ಯದ ಬೇರೆ ಬೇರೆ ಭಾಗಕ್ಕೆ ಹೋದರೆ ಕೃಷಿ ಕೊಟ್ಟ ಪದ ಸಂಪತ್ತೇ ನಾಡಿನ ಸಾಹಿತ್ಯ ಸಿರಿಯ ಶ್ರೀಗಂಧವಾಗಿದೆ. ಪುಟಾಣಿ ಮಕ್ಕಳು ಹಿರಿಯರ ಜೊತೆಗೆ ಒಡನಾಡಿದ ಕಾರಣಕ್ಕೆ ಕೃಷಿಯ ನಾಡು ಭಾಷೆ ಹಬ್ಬಿದೆ. ಇಡೀ ರಾಜ್ಯದ ಮಣ್ಣಿನ ಓದು ಪ್ರತೀ ಕಾಲಕ್ಕೂ ಹೊಸತನ್ನು ಹೇಳುತ್ತಿರುತ್ತದೆ. ಮುಖ್ಯ ಕೇಳುವ ಆಸಕ್ತಿ ಬೇಕು.

ನಮ್ಮ ಆರೋಗ್ಯದ ನಾಡಿಮಿಡಿತ ಅರಿಯಲು ವೈದ್ಯರಲ್ಲಿ ಹೋಗುತ್ತೇವೆ, ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹುಡುಕುತ್ತೇವೆ. ಆಹಾರದಿಂದ ಆರೋಗ್ಯವೆಂಬ ಸತ್ಯ ಅರ್ಥವಾದರೆ ಎಲ್ಲರ ಆರೋಗ್ಯ ಭವಿಷ್ಯ ನೇಗಿಲ ದಾರಿಯಲ್ಲಿಯೇ ನೋಡಬೇಕು. ಒಂದು ಕುಟುಂಬದಲ್ಲಿ ಒಬ್ಬ ಕ್ಯಾನ್ಸರ್ ರೋಗಿ ಇದ್ದರೆ ಇಡೀ ಕುಟುಂಬ ಮನಸ್ಸು ಅಪಾರ ನೋವಿನಲ್ಲಿ ಮುಳುಗುತ್ತದೆ. ತಿನ್ನುವ ಆಹಾರ, ಆವಾಸದ ಪರಿಸರದ ಬಗ್ಗೆ ಬಹುದೊಡ್ಡ ಚರ್ಚೆ ನಡೆಯುತ್ತದೆ. ಈಗ ನಮ್ಮ ಅಡುಗೆ ಮನೆಯಲ್ಲಿ ಗೊತ್ತಿದ್ದೋ ಗೊತ್ತಲ್ಲದೆಯೋ ಎಷ್ಟು ವಿಷವಿದೆ? ಏಕೆ ಪರಿಸರ ಹೀಗಾಗಿದೆ? ಯೋಚಿಸಿದರೆ ಕೃಷಿ-ಕೃಷಿಕರ ಮಹತ್ವ ನಾಡಿಗೆ ತಿಳಿಯುತ್ತದೆ. ಆಗ ಕಡು ಬರದಲ್ಲಿಯೂ ಅಕ್ಕಡಿ ಬೇಸಾಯದಲ್ಲಿ ಗೆದ್ದ ರೈತರ ನೆನಪಾಗುತ್ತದೆ.” ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.

ಈ ಕೃತಿಗೆ ಕನ್ನಡ ನಾಡಿನ ಖ್ಯಾತ ಬರಹಗಾರರಾದ ಮಲ್ಲಿಕಾರ್ಜುನ ಹೊಸಪಾಳ್ಯ, ಈರಯ್ಯ ಕಿಲ್ಲೇದಾರ, ಪೂರ್ಣಪ್ರಜ್ಞ ಬೇಳೂರು, ಡಾ. ಎನ್ ಬಿ ಶ್ರೀಧರ, ಡಾ. ಮೋಹನ ತಲಕಾಲುಕೊಪ್ಪ, ಅಡ್ಡೂರು ಕೃಷ್ಣ ರಾವ್, ಜಿ ಕೃಷ್ಣ ಪ್ರಸಾದ್ ಮೊದಲಾದವರು ವಿದ್ವತ್ ಪೂರ್ಣ ಲೇಖನಗಳ ಮೂಲಕ ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಇದರ ಜೊತೆಗೆ ಸಂಪಾದಕರಾದ ಶಿವಾನಂದ ಕಳವೆಯವರೂ ತಮ್ಮ ಲೇಖನಗಳನ್ನು ಬರೆದಿದ್ದಾರೆ. ಪುಸ್ರಕದ ಕೊನೆಯಲ್ಲಿ ಕರ್ನಾಟಕ ಕೃಷಿ ಚಿತ್ರಯಾನ ಎಂಬ ವರ್ಣಚಿತ್ರಗಳ ಗ್ಯಾಲರಿಯನ್ನು ಮುದ್ರಿಸಿದ್ದಾರೆ. ಬಹುವರ್ಣದಲ್ಲಿರುವ ಈ ಚಿತ್ರಗಳು ಕೃಷಿಯ ವಿವಿಧ ಆಯಾಮಗಳ ಬಗ್ಗೆ ಬೆಳಕು ಚೆಲ್ಲುತ್ತಿವೆ.

ಈ ಕೃತಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ಎಸ್ ತಂಗಡಗಿ, ಸರ್ಕಾರದ ಕಾರ್ಯದರ್ಶಿ ಡಾ ಅಜಯ್ ನಾಗಭೂಷಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣೀದೇವಿ ಮಾಲಗತ್ತಿ ಇವರು ಶುಭನುಡಿಗಳನ್ನು ಬರೆದಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಇವರು ಅಧ್ಯಕ್ಷರ ನುಡಿ ಮೂಲಕ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಸುಮಾರು ೨೮೦ ಪುಟಗಳ ಈ ಕೃತಿಯು ಕರ್ನಾಟಕ ರಾಜ್ಯದ ಐದು ದಶಕಗಳ ಕೃಷಿ ನೋಟವನ್ನು ತೆರೆದಿಡುವಲ್ಲಿ ಸಫಲವಾಗಿದೆ.