ಕಿರಾತಕ - ರಾಕ್ಷಸ ಭಯೋತ್ಪಾದಕರನ್ನು ಮತ್ತು ಅವರ ಬೆಂಬಲಿಗರನ್ನು ಹುಡುಕಿಕೊಂಡು ಹೋಗಿ ಅವರನ್ನು ಸಂಪೂರ್ಣ ನಾಶ ಮಾಡುವುದನ್ನು ಮನುಷ್ಯತ್ವ ಇರುವ ಯಾರೂ ತಡೆಯುವುದಿಲ್ಲ ಮತ್ತು ಅದಕ್ಕೆ ಪೂರ್ಣ ಬೆಂಬಲ ಕೊಡುತ್ತಾರೆ. ಆದರೆ, ಅದು ಸೈನ್ಯ ಮಾತ್ರದಿಂದ ಸಾಧ್ಯವೇ ? ಅದು ಸುಲಭವೇ ? ಮತ್ತೆ ಎಷ್ಟೊಂದು ಸೈನಿಕರು ಸಾಯುವರು ತಿಳಿದಿದೆಯೇ ? ಅವರು ಯೋಚಿಸಲು - ಯೋಜಿಸಲು ಬಿಡದೆ ದೇಶಭಕ್ತಿಯ ಹೆಸರಲ್ಲಿ ಅವರ ಮೇಲೆ ಅಸಾಮಾನ್ಯ ಒತ್ತಡ ಹೇರಿ ಮತ್ತಷ್ಟು ಸಾವಿಗೆ ನಾವೇ ಕಾರಣವಾಗಬೇಕೆ ? ಯುದ್ದದ ಕಾರ್ಯಾಚರಣೆ ಎಂದರೆ ಉರಿ ಚಲನಚಿತ್ರ ನಿರ್ಮಿಸಿದಷ್ಟು ಸುಲಭವೇ ? ಒಮ್ಮೆ ಏಕಾಂತದಲ್ಲಿ ಕುಳಿತು ಭಾವುಕರಾಗದೆ ಎಲ್ಲಾ ದೃಷ್ಟಿಕೋನದಿಂದ ಯೋಚಿಸಿ. ಭಾರತಕ್ಕೆ ಪದೇ ಪದೇ ತೊಂದರೆ ಕೊಡುತ್ತಿರುವ ಭಯೋತ್ಪಾದಕರು ಯಾರು ? ಅವರು ಎಲ್ಲಿದ್ದಾರೆ ? ಅವರು ಹೇಗೆ ಸೃಷ್ಟಿಯಾಗಿತ್ತಾರೆ ? ಅದರ ಮೂಲಕ್ಕೆ ಸೈನ್ಯ ಹೋಗಲು ಸಾಧ್ಯವೇ ?

ಸ್ನೇಹಿತರೆ, ಬಹುತೇಕ ಎಲ್ಲರೂ ತಿಳಿದಿರುವಂತೆ ಭಾರತದ ವಿರುದ್ಧ ಭಯೋತ್ಪಾದನೆ ಮಾಡುತ್ತಿರುವವರು ಕಾಶ್ಮೀರದ ಸ್ವಾತಂತ್ರ್ಯಕ್ಕೆ ಒತ್ತಾಯಿಸುತ್ತಿರುವವರು, ಧರ್ಮದ ಅಮಲಿಗೆ ಬಿದ್ದ ಒಂದಷ್ಟು ಜಿಹಾದಿಗಳು, ಪಾಕಿಸ್ತಾನ ಪರವಾದ ಕಾಶ್ಮೀರಿಗಳು ಮತ್ತು ಇವರನ್ನು ಸಂಪೂರ್ಣವಾಗಿ ಹಾಗೂ ಪರೋಕ್ಷವಾಗಿ ಪ್ರಾಯೋಜಿಸಿತ್ತಿರುವವರು ಪಾಕಿಸ್ತಾನದ ಸೈನ್ಯ ಮತ್ತು ಐಎಸ್ಐ. ಅಂದರೆ ದೇಶದ ಒಳಗೆ ಮತ್ತು ಹೊರಗೆ ಹರಡಿರುವ ಇವರುಗಳಲ್ಲಿ ಗಡಿಯಾಚೆಗಿನ ಭಯೋತ್ಪಾದಕರೇ ಅತ್ಯಧಿಕ. ಒಳಗಿರುವವರನ್ನು ಮನಸ್ಸು ಮಾಡಿದರೆ‌ ಸಂಪೂರ್ಣ ಹೊಡೆದು ಹಾಕಬಹುದು.

ಆದರೆ ಹೊರಗಿನವರನ್ನು ? ಸಮಸ್ಯೆ ಇರುವುದು ಇಲ್ಲಿಯೇ, ಭಯೋತ್ಪಾದಕರು ಯಾವುದೋ ಒಂದು ಪ್ರದೇಶದಲ್ಲಿ ನಿರ್ಧಿಷ್ಟವಾಗಿ ಇರುವುದಿಲ್ಲ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕೆಲವೊಮ್ಮೆ ಒಂಟಿಯಾಗಿ ದೇಶದ ಹೊರಗೆ ಇರುತ್ತಾರೆ. ಅವರು ಬಹಳಷ್ಟು ಬಾರಿ ಪಾಕಿಸ್ತಾನ ಸೈನ್ಯದ ನೆರಳಲ್ಲಿ ಅಡಗಿರುತ್ತಾರೆ. ಆಫ್ಘಾನಿಸ್ತಾನದ ಎಲ್ಲೋ ಅಜ್ಞಾತ ಸ್ಥಳದಲ್ಲಿ ತರಭೇತಿ ಹೊಂದುತ್ತಾರೆ. ಅವರಿಗೆ ಹಣ ಮತ್ತು ‌ಧರ್ಮದ ಅಮಲನ್ನು ತಿನ್ನಿಸಲಾಗುತ್ತದೆ. ಅಂದರೆ ನಮ್ಮ ದೇಶದ ಗಡಿಯಾಚೆ ಅದರಲ್ಲೂ ಪಾಕಿಸ್ತಾನದ ನೆಲದಲ್ಲಿ ಅಡಗಿರುವ ಭಯೋತ್ಪಾದಕರನ್ನು ಹೊಡೆಯಬೇಕಾದರೆ ಅವರ ನೆಲಕ್ಕೆ ಕಾಲಿಡಬೇಕು. ನಮ್ಮ ದೇಶದ ಸೈನ್ಯದ ಸಾಮರ್ಥ್ಯಕ್ಕೆ ಇದು ಸುಲಭವಿರಬಹುದು. ಆದರೆ ಅದು ಪಾಕಿಸ್ತಾನದೊಂದಿಗೆ ನೇರ ಯುದ್ಧ ಮಾಡಿದಂತೆ ಆಗುತ್ತದೆ. ಅಲ್ಲಿಗೆ ವಿಷಯ ಬೇರೆಯದೇ ಆಯಾಮ ಪಡೆಯುತ್ತದೆ. ಭಯೋತ್ಪಾದನೆಯ ವಿರುದ್ಧದ ಹೋರಾಟವೇ ಬೇರೆ ಯುದ್ದವೇ ಬೇರೆ.

ಯುದ್ಧ ನೇರವಾಗಿ ಮಾಡಬಹುದು. ಆದರೆ ಭಯೋತ್ಪಾದಕರೊಡನೆ ಹೋರಾಟ ಪರೋಕ್ಷವಾಗಿ ಇರುತ್ತದೆ ಮತ್ತು ವಿಶ್ವದ ಯಾವುದೇ ಒಂದು ದೇಶ ಅದರ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಅದು ಜಾಗತಿಕವಾಗಿ ವಿಷದಂತೆ ಹರಡಿದೆ. ಅಮೆರಿಕ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ್, ಇರಾಕ್, ಇಸ್ರೇಲ್ ಮುಂತಾದ ದೇಶಗಳು ಮತ್ತು ಸ್ವತಃ ಪಾಕಿಸ್ತಾನ - ಆಫ್ಘಾನಿಸ್ತಾನ ಸಹ ಭಯೋತ್ಪಾದನೆಗೆ ನಲುಗಿದೆ. ಕೇವಲ ಸೈನಿಕ ಕಾರ್ಯಾಚರಣೆಯಿಂದ ಇದನ್ನು ನಿಯಂತ್ರಿಸಲು ಅಸಾಧ್ಯ.

ಒಳ್ಳೆಯವರಿಗೆ ಕೆಲವು ಮಿತಿಗಳು ಇರುತ್ತವೆ. ಆದರೆ ದುಷ್ಟರಿಗೆ ಯಾವ ನಿಯಮಗಳೂ ಇರುವುದಿಲ್ಲ. ಒಳ್ಳೆಯದನ್ನು ಮಾಡುವುದು ತುಂಬಾ ಕಷ್ಟ. ಕೆಟ್ಟದ್ದನ್ನು ಬಹುಬೇಗ ಸುಲಭವಾಗಿ ಮಾಡಬಹುದು. ಈ ಅನುಕೂಲಗಳು ಭಯೋತ್ಪಾದಕರಿಗೆ ಇದೆ. ಸಾವಿರ ಜನ ಒಳ್ಳೆಯವರನ್ನು ಒಬ್ಬ ಭಯೋತ್ಪಾದಕ ಎದುರಿಸಿ ಓಡಿಸಬಲ್ಲ.  ಒಳ್ಳೆಯವರು ಹೇಡಿಗಳು ಅಥವಾ ಸೌಮ್ಯ ಸ್ವಭಾವದವರಾಗಿರುವುದನ್ನು ಮತ್ತು ಭಯೋತ್ಪಾದಕರು ಆಕ್ರಮಣಕಾರಿಯಾಗಿರುವುದನ್ನು ನಾವು ಗಮನಿಸಬಹುದು.

ಅಮೆರಿಕ, ರಷ್ಯಾ, ಇಸ್ರೇಲ್, ಚೀನಾ ಮಾಡಿದಂತೆ ನಾವು ಮಾಡುವುದು ಸಾಧ್ಯವಿಲ್ಲ. ಭಾರತೀಯರು ಮೂಲಭೂತವಾಗಿ ಸೌಮ್ಯ ಸ್ವಭಾವದ ಶಾಂತಿ ಪ್ರಿಯರು. ಹೆದರಿಕೆ ಸ್ವಲ್ಪ ಹೆಚ್ಚೇ ಇದೆ. ಯುದ್ಧ ಎಂದರೆ ಎಷ್ಟೋ ಜನ ಸಾಮಾನ್ಯರು ನಿಂತಲ್ಲೇ ನಡುಗುತ್ತಾರೆ. ಕಳೆದ ೫೦ ವರ್ಷಗಳಲ್ಲಿ ಭಾರತ ಯಾವ‌ ದೊಡ್ಡ ಯುದ್ದವನ್ನೂ ನೋಡಿಲ್ಲ. ಕಾರ್ಗಿಲ್ ಯುದ್ಧ ಸಣ್ಣ ಪ್ರಮಾಣದಲ್ಲಿ ಕೆಲವೇ ದಿನ ನಡೆಯಿತು. ಈ ಯುವ ಜನಾಂಗ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಉಡಾಫೆಯಿಂದ ಪಾಕಿಸ್ತಾನದ ಮೇಲೆ ಯುದ್ದದ ಮಾತನಾಡುತ್ತಿದೆ.  ಪಾಕಿಸ್ತಾನವನ್ನು ವಿಶ್ವ ಭೂಪಟದಿಂದ ಇಲ್ಲವಾಗಿಸಬೇಕು ಎನ್ನುತ್ತಿದೆ. ಇದು ಕಮರ್ಷಿಯಲ್ ಸಿನಿಮಾ ಅಲ್ಲ. ಅಮಿತಾಭ್ ರಜನಿಕಾಂತ್ ಸಲ್ಮಾನ್ ಖಾನ್ ಗಳೆಂಬ ಸೂಪರ್ ಸ್ಟಾರ್ ಗಳ ನಟನೆ - ಸ್ಟಂಟ್ ಗಳು ಇಲ್ಲಿ ನಡೆಯುವುದಿಲ್ಲ. 

ಸದ್ಯದ ಭಾರತದ ಪರಿಸ್ಥಿತಿಯಲ್ಲಿ ಭಯೋತ್ಪಾದನೆ ಆಗಾಗ ನಡೆಯುತ್ತಲೇ ಇದೆ.  ಎಷ್ಟೇ ಪ್ರಯತ್ನ ಪಟ್ಟರೂ ಕಳೆದ ೨೫ ವರ್ಷಗಳಿಂದ ಇದರ ಮೂಲೋಚ್ಚಾಟನೆ ಸಾಧ್ಯವಾಗಿಲ್ಲ. ಸಾವು ನೋವು ಸಂಭವಿಸುತ್ತಲೇ ಇದೆ. ಇದರ ವಿರುದ್ಧ ಹೋರಾಡಲೇ ಬೇಕು ನಿಜ. ಆದರೆ ಅದು ಭಾವನಾತ್ಮಕವಾಗಿರದೆ ವಾಸ್ತವದ ನೆಲೆಯಲ್ಲಿರಬೇಕು. ಇಲ್ಲದಿದ್ದರೆ ಇನ್ನಷ್ಟು ಅಪಾಯ ಹೆಚ್ಚಾಗುತ್ತದೆ. ಸೈನ್ಯಕ್ಕಿಂತ ರಾಜಕೀಯ ಹೋರಾಟವೇ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಈಗ ಯುದ್ಧದ ಬಗ್ಗೆ ಮಾತನಾಡುವ ಉತ್ತರ ಕುಮಾರರು ಕೆಲವೇ ದಿನಗಳಲ್ಲಿ ಅದರ ಭೀಕರತೆಗೆ ಬಳಲಿ ಬೆಂಡಾಗಿ ಅಯ್ಯೋ ಸಾಕಪ್ಪ ಎನ್ನುತ್ತಾರೆ. ಯುದ್ಧದಿಂದ ನಾವು ಬಹಳಷ್ಟು ಹಿಂದೆ ಹೋಗುತ್ತೇವೆ.

ಗೆಳೆಯರೆ, ಯುದ್ದ ಕೊನೆಯ ಅಸ್ತ್ರ. ನಮ್ಮ ರಕ್ಷಣೆಗೆ ಅದು ಅನಿವಾರ್ಯವಾದರೆ ಸೃಷ್ಟಿಯ ಎಲ್ಲಾ ಪ್ರಾಣಿಗಳು ಹೋರಾಡಲೇ ಬೇಕು. ಇಲ್ಲದಿದ್ದರೆ ಅವು ಅಳಿಯುತ್ತವೆ. ಆದರೆ ಭಾರತದ ಪರಿಸ್ಥಿತಿ ಇನ್ನೂ ಅಷ್ಟು ಹದಗೆಟ್ಟಿಲ್ಲ. ೧೦ ಜನರ ಸಾವಿನ ಪ್ರತಿಕಾರಕ್ಕಾಗಿ ೫೦೦೦೦ ಜನರನ್ನು ಬಲಿ ಕೊಡುವುದು ಬೇಡ. ಕೆಲವೇ ಕೆಲವು ಭಯೋತ್ಪಾದಕರೆಂಬ ಹುಚ್ಚರ ಕಾರಣಕ್ಕೆ ನಾವು ಧೃತಿಗೆಡುವುದು ಬೇಡ. ನಮ್ಮ ಸೈನ್ಯಕ್ಕೆ ಜವಾಬ್ದಾರಿ ಇದೆ. ಅದು ಎಂದಿನಂತೆ ಸಹಜವಾಗಿ ಕಾರ್ಯ ನಿರ್ವಹಿಸಲಿ. ಭಯೋತ್ಪಾದಕರನ್ನು ಸದೆ ಬಡಿಯಲಿ. ನಮ್ಮ ಬೆಂಬಲ ಅದಕ್ಕೆ ಸದಾ ಇರುತ್ತದೆ.

ಅದು ಬಿಟ್ಟು ಮತಿ ಹೀನರಂತೆ ವರ್ತಿಸುವುದು ಬೇಡ. ಅಣು ಬಾಂಬುಗಳ ಜೊತೆ ಸರಸ ಬೇಡ. ಭಯೋತ್ಪಾದಕರು ಕೂಡ ಹುಚ್ಚಿನಲ್ಲಿ ಅಸಮಾನ್ಯ ಕುತಂತ್ರ ಮಾಡುತ್ತಾರೆ. ಆಗ ಆಕ್ರೋಶಕ್ಕಿಂತ ನಮ್ಮ ತಂತ್ರ ಹೆಚ್ಚು ಉಪಯುಕ್ತ ಎಂಬುದನ್ನು ಮರೆಯದಿರಿ.

ಒಂದು ಕಾಲದಲ್ಲಿ ಮನುಷ್ಯನನ್ನು ನಾಗರಿಕರನ್ನಾಗಿ ಮಾಡಿ ಸಮಾಜದ ಬೆಳವಣಿಗೆಗೆ ಬಹುಮುಖ್ಯ ಕಾಣಿಕೆ ನೀಡಿರುವುದು ದೇವರು ಮತ್ತು ಧರ್ಮ ಎಂಬ ಕಾಲ್ಪನಿಕ ಅನುಭವದ ನೀತಿ ನಿಯಮಗಳು. ಆದರೆ ಸಮಾಜ ಬೆಳೆದಂತೆಲ್ಲಾ, ತಂತ್ರಜ್ಞಾನ, ಆಧುನಿಕತೆ ಅಭಿವೃದ್ಧಿ ಹೊಂದಿದ ಪರಿಣಾಮವಾಗಿ, ಜನಸಂಖ್ಯೆಯ ಸ್ಫೋಟದಿಂದಾಗಿ ಮನುಷ್ಯನ ಬೇಡಿಕೆಗಳು ಬೃಹದಾಕಾರವಾಗಿ ಬೆಳೆದವು. ಅದನ್ನು ನಿಯಂತ್ರಿಸುವ ಶಕ್ತಿ ಹಳೆಯ ಕಾಲದ ದೇವರು ಧರ್ಮಗಳಿಗೆ ಇಲ್ಲ. ಅದು ನಿಂತ ನೀರಿನಂತೆ ಕೊಳೆತು ನಾರುತ್ತಿದೆ. ಶೋಷಣೆಯ ಮಾರ್ಗವಾಗಿದೆ. ಕಾನೂನು ಮತ್ತು ಸಂವಿಧಾನ ಸಹ ಈ ಸಮಾಜವನ್ನು ಸಂಪೂರ್ಣವಾಗಿ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅದನ್ನು ಮೀರಿದ ಹೊಸ ವ್ಯವಸ್ಥೆತ್ತ ವಿಶ್ವ ಗಮನಹರಿಸಬೇಕಿದೆ. ಮನುಷ್ಯ ಉಳಿಯಬೇಕಾದರೆ ಭಯೋತ್ಪಾದನೆ ಅಳಿಯಬೇಕು. ಅದನ್ನು ಅತ್ಯಂತ ಸಹಾನುಭೂತಿಯಿಂದ ಪರಿಶೀಲಿಸಿದರೆ ಮಾತ್ರ ಪರಿಹಾರ ಸಾಧ್ಯ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ