ಹೆಗ್ಗುರುತು (ಕತೆಗಳು)

ಆದಾಯ ತೆರಿಗೆ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿರುವ ಕೆ. ಸತ್ಯನಾರಾಯಣ ಅವರು 2010 -2012 ಅವಧಿಯಲ್ಲಿ ಬರೆದ 10 ಕತೆಗಳು ಈ ಸಂಕಲನದಲ್ಲಿವೆ. ಅವರು ನಮ್ಮ ದೇಶದ ವಿವಿಧ ಸ್ಥಳಗಳಲ್ಲಿ ದುಡಿದಿರುವ ಕಾರಣ ವಿಭಿನ್ನ ಅನುಭವಗಳನ್ನು ಗಳಿಸಿದ್ದಾರೆ; ಹಲವು ವ್ಯಕ್ತಿಗಳೊಂದಿಗೆ ಒಡನಾಡಿದ್ದಾರೆ. ಆ ವಿಸ್ತಾರವಾದ ಅನುಭವ ಹಾಗೂ ಒಡನಾಟದ ದೆಸೆಯಿಂದಾಗಿ ಅಪರೂಪದ ಹಂದರಗಳು ಮತ್ತು ಒಳನೋಟಗಳಿರುವ ಕತೆಗಳನ್ನು ಬರೆಯಲು ಅವರಿಗೆ ಸಾಧ್ಯವಾಗಿದೆ. 

ಸಂಕಲನದ “ಕತೆ ಕತೆಯಾಗುವ ರೀತಿ” ಎಂಬ ಅನುಬಂಧದಲ್ಲಿ ಕೆ. ಸತ್ಯನಾರಾಯಣ ಬರೆದಿರುವ ಮಾತುಗಳು ಕುತೂಹಲದಾಯಕ: “ಕತೆಯೊಂದು ಹುಟ್ಟುವ, ಬೆಳೆಯುವ, ದಕ್ಕುವ ಕ್ರಮವನ್ನಾಗಲಿ, ಬರೆಯಿಸಿಕೊಳ್ಳುವ ರೀತಿಯನ್ನಾಗಲಿ ಪೂರ್ಣವಾಗಿ, ತೃಪ್ತಿಕರವಾಗಿ ವಿವರಿಸಿಬಿಡಬಹುದೆಂಬ ನಂಬಿಕೆಯಾಗಲೀ, ಅಹಂಕಾರವಾಗಲೀ ನನಗಿಲ್ಲ. ಇನ್ನೊಬ್ಬರಿಗೆ ಇದನ್ನು ವಿವರಿಸುವ ಮಾತಿರಲಿ, ಸ್ವತಃ ಕತೆಗಾರನೇ ತನ್ನ ಬರವಣಿಗೆಯ ನಿಗೂಢತೆಯನ್ನು ತನಗೇ ವಿವರಿಸಿಕೊಳ್ಳಬಲ್ಲನೇ ಎಂಬುದರ ಬಗ್ಗೆಯೂ ನನಗೆ ಅನುಮಾನಗಳಿವೆ.

ಕತೆಯ ಬೀಜವೇನೋ ಒಂದು ಕ್ಷಣ ಹೊಳಹಿನಲ್ಲಿ ಸಿಕ್ಕಿ ಬಿಡುತ್ತದೆ. ಈ ಹೊಳಹಿಗೆ ಪ್ರೇರಣೆ ಒತ್ತಿಕೊಂಡು ಬಂದ ಒಂದು  ನೆನಪಾಗಿರಬಹುದು. … ಇಲ್ಲೆಲ್ಲ ಕತೆ ಪ್ರಕಟವಾಗುತ್ತಲೇ ಇರುತ್ತದೆ - ಏಕಕಾಲಕ್ಕೇ ಕೇಳುವ, ಕಾಣುವ ಒಪ್ಪಿಕೊಳ್ಳುವ ಮನಸ್ಸಿದ್ದರೆ. ಹೊಳಹಿನಲ್ಲಿ ಒಂದು ಕ್ಷಣದ ಅವಧಿಯಲ್ಲಿ ಸಿಕ್ಕುವ ಕತೆ ತಕ್ಷಣವೇ ಮುಂದಿನ ಕ್ಷಣದಿಂದ ಬೆಳೆಯುತ್ತಾ ಹೋಗುವುದಿಲ್ಲ. ನಂತರದ ದಿನಗಳ ಯಾವುದೋ ಮಾತು, ಘಟನೆ, ಕನಸು, ಓದು - ಕತೆಯ ವಿನ್ಯಾಸವನ್ನು ಬೆಳೆಸುತ್ತಾ ಹೋಗುತ್ತದೆ. ಹಾಗೆ ವಿನ್ಯಾಸವೊಂದು ಸುಮಾರಾಗಿಯಾದರೂ ಸಿಕ್ಕಿದೆಯೆಂದೆನಿಸಿದ ಮೇಲೆ ಕತೆಯ ಬರವಣಿಗೆ ಪ್ರಾರಂಭವಾಗುತ್ತದೇನೋ…”

ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಸತ್ಯನಾರಾಯಣ ಅವರು 2009ರಲ್ಲಿ ಬರೆದ “ನಕ್ಸಲ್ ವರಸೆ” ಎಂಬ ಕತೆಯು ಕತೆಯಾಗಿ ಬೆಳೆದ ಬಗೆಯನ್ನು ವಿವರಿಸಿದ್ದಾರೆ. ನಂತರ, ನಕ್ಸಲ್-ವಾದಿಗೆ ಸಂಬಂಧಿಸಿದ ಇನ್ನೊಂದು ಘಟನೆಯನ್ನು ತಿಳಿಸಿ, ತಾನು ಅದನ್ನು ಹಲವು ಸ್ನೇಹಿತರಿಗೆ ಅನೇಕ ಸಲ ಹೇಳಿದ್ದನ್ನೂ ದಾಖಲಿಸಿದ್ದಾರೆ. ಕೊನೆಗೆ ಅವರು ಬರೆದಿರುವ ಮಾತು “ನಾನೇಕೆ ಇನ್ನೂ ಈ ಕತೆ ಬರೆದಿಲ್ಲ? ನನಗೂ ನಿಗೂಢವೇ! ನಿಗೂಢವಾದರೂ ಬರೆಯದ ಕತೆ ಕೂಡ ನನ್ನ ಬಗ್ಗೆ ಏನನ್ನೋ ಹೇಳುತ್ತಿರಬೇಕು.” 

ಈ ಸಂಕಲನಕ್ಕೆ ವಿಸ್ತಾರವಾದ ಮುನ್ನುಡಿ ಬರೆದಿದ್ದಾರೆ ಮಲ್ಲಿಕಾರ್ಜುನ ಹಿರೇಮಠ. ಅವರು ಮುಕ್ತಾಯದಲ್ಲಿ ಬರೆದ ಮಾತುಗಳು ಹೀಗಿವೆ: “ಸತ್ಯನಾರಾಯಣ ಸಮಕಾಲೀನ ಸಾಮಾಜಿಕ ವಾಸ್ತವಗಳ ಶೋಧನೆಯನ್ನು ಬದುಕಿನ ವೈರುಧ್ಯಗಳು ಹಾಗೂ ಜಟಿಲತೆಗಳನ್ನು ಗ್ರಹಿಸಿಕೊಂಡು ಗಟ್ಟಿಯಾದ ಹಾಗೂ ಸಮೃದ್ಧವಾದ ಕಥಾ ವಿವರಗಳ ಮೂಲಕ ವಿಭಿನ್ನ ಕೋನಗಳಿಂದ ಮಾಡಬಲ್ಲವರು. ನವ್ಯದ ಬಿಗಿ ಬಂಧದ ಕಲ್ಪನೆಯನ್ನು ಸಡಿಲಿಸಿ ಮುಕ್ತವಾಗಿ ಆರಾಮಾಗಿ ಕಥೆ ಹೇಳುವ ವಿಧಾನವನ್ನು ಅವರು ಕಂಡುಕೊಂಡಿದ್ದಾರೆ. ವರ್ತಮಾನದ ಚರಿತ್ರೆಯನ್ನು ನಿರೂಪಿಸುವುದಕ್ಕೆ ಮಾಸ್ತಿ ಶೈಲಿಯನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ಸಣ್ಣಕತೆಯ ಸ್ವರೂಪ ಮತ್ತು ಸಾಧ್ಯತೆಗಳನ್ನು ವಿಸ್ತರಿಸುತ್ತಿದ್ದಾರೆ. ಈ ಶೈಲಿಯಿಂದಾಗಿ ಕಥೆಗಾರ ವಸ್ತುವಿನ ಜೊತೆ ಒಂದು ಅಂತರವನ್ನು ಕಲ್ಪಿಸಿಕೊಂಡು ವಸ್ತುನಿಷ್ಠವಾಗಿ, ಸಾಧ್ಯವಾದಷ್ಟು (ಕಥಾ ಸಂದರ್ಭದ ಪರಿಧಿಯಲ್ಲಿ) ಸಮಗ್ರವಾಗಿ ನಿರೂಪಿಸಲು ಸಾಧ್ಯವಾಗಿದೆ. … ಸತ್ಯನಾರಾಯಣರ ಅನುಭವಲೋಕ ದೊಡ್ಡದು ಮತ್ತು ವಿಭಿನ್ನವಾದುದು. ಅವರ ಕತೆಗಳು ನಮ್ಮ ಇವತ್ತಿನ ಬದುಕಿನ ಅನೇಕ ಮಗ್ಗಲುಗಳ, ನೆಲೆಗಳ ಅನ್ವೇಷಣೆಗೆ ತೊಡಗಿಕೊಳ್ಳುತ್ತವೆ. ಸಮಷ್ಟಿಹಿತ, ಸಹಬಾಳ್ವೆಗಾಗಿ ಅವು ಸದಾ ತುಡಿಯುವಂಥವು.” 

ಇದರಲ್ಲಿರುವ ಕೆಲವು ಕತೆಗಳ ಬಗ್ಗೆ ಸಂಕ್ಷಿಪ್ತ ಪರಿಚಯ ಇಲ್ಲಿದೆ:

ಮೊದಲ ಕತೆ “ಪೂರ್ವನಾಮದ ವಲಸೆ”ಯ ವಸ್ತು: ದಲಿತ ಮತ್ತು ದಲಿತೇತರ ದೃಷ್ಟಿಕೋನಗಳ ತಾಕಲಾಟ. ಮುಂಬಯಿಯಲ್ಲಿ  ಅಧಿಕಾರಿಯಾಗಿರುವ ದಲಿತ ಮರಿಸ್ವಾಮಿ, ಆಕಸ್ಮಿಕವಾಗಿ ಅವನ ಪಕ್ಕದೂರಿನ ನಿರೂಪಕನ ಪರಿಚಯವಾದರೂ ಸೌಹಾರ್ದತೆಯಿಂದ ವರ್ತಿಸುವುದಿಲ್ಲ. ಅವನ ಬಾಲ್ಯದ ನೆನಪುಗಳನ್ನು ಮರೆಯಬೇಕು ಎನ್ನುತ್ತಲೇ ಅವುಗಳ ಗಾಢ ನೆನಪಿನಲ್ಲಿ ಹಳೆಯ ನೋವುಗಳನ್ನು ಮತ್ತೆಮತ್ತೆ ಅನುಭವಿಸುತ್ತಿರುತ್ತಾನೆ.  

ಎರಡನೆಯ ಕತೆ “ಚಿಕ್ಕ ತಾಯಿ”. ದುಡಿಯುವ ಮಹಿಳೆ ಕಚೇರಿಯಲ್ಲಿ ಅನುಭವಿಸುವ ಲೈಂಗಿಕ ಶೋಷಣೆಯ ಸುತ್ತ ಹೆಣೆದಿರುವ ಕತೆ. ಅಂತೂ ಕಚೇರಿಯ ಮುಖ್ಯಸ್ಥರು ಅವಳನ್ನು ಶೋಷಣೆ ಮಾಡುವ ಮೇಲಾಧಿಕಾರಿಯನ್ನು ವರ್ಗ ಮಾಡಿದಾಗ ಅವಳ ಇನ್ನೊಂದು ಮುಖ ಅನಾವರಣ ಆಗುತ್ತದೆ. “ಆ ವರ್ಗಾವಣೆ ಬೇಡವೇ ಬೇಡ” ಎಂದು ಅವಳು ದುಂಬಾಲು ಬೀಳುತ್ತಾಳೆ. ಯಾಕೆಂದರೆ, ಮೇಲಾಧಿಕಾರಿಯ ಕುಟುಂಬದ ಕಷ್ಟಗಳ ಅರಿವು ಆಕೆಗಿದೆ. 

ಮೂರನೆಯ ಕತೆ “ಡಾಕ್ಟರನ ಹುಚ್ಚು ಮಗು”. ಇದೊಂದು ಮನಕಲಕುವ ಕತೆ. ನಿವೃತ್ತರ ಮಂಡಳಿಯ ಸದಸ್ಯ ಮದ್ದೂರು ಸೀಮೆಯ ಡಾ. ಸೋಮಶೇಖರ್ ಮಕ್ಕಳ ಬಗೆಗಿನ ಹೆತ್ತವರ ಪ್ರೀತಿಯ ಚರ್ಚಾಗೋಷ್ಠಿಯಲ್ಲಿ ಒಂದು ಮುಖ್ಯ ಪ್ರಶ್ನೆ ಎತ್ತುತ್ತಾರೆ: “ನಮ್ಮ ಮಕ್ಕಳು ಪೆದ್ದರಾಗಿದ್ದರೆ, ಊನವಾಗಿದ್ದರೆ ಯಾವ ಕೊಂಕಿಲ್ಲದೆ ಪ್ರೀತಿಸುತ್ತೇವೆಯೇ?” ಮುಂದುವರಿಸಿ ಅವರು ತನ್ನದೇ ಮಗನ ಬಗ್ಗೆ ಹೇಳುತ್ತಾರೆ “ಒಬ್ಬನೇ ಮಗ, ಹುಚ್ಚು ಮಗ. ಬರಿಮೈನಲ್ಲೇ ಇಡೀ ಊರು ತಿರುಗಿ, ಛತ್ರ, ಹೋಟೆಲುಗಳಲ್ಲಿ ಎಂಜಲೆಲೆಯಲ್ಲಿ ತಿಂದ ಮಗ. ಇಂತಹವನನ್ನು ಕೂಡ ಪ್ರೀತಿಸಿದೆ. ನಿಜವಾಗಿ ಪ್ರೀತಿಸಿದೆ”. ಎಲ್ಲ ಊರುಗಳಲ್ಲಿಯೂ ಇಂತಹ ಮಕ್ಕಳನ್ನು ಕಾಣಬಹುದು. ಹಾಗಾಗಿ ಈ ಕತೆ ನಮ್ಮಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ: ಅಂತಹ ಮಕ್ಕಳ ಬಗ್ಗೆ ನಮ್ಮ ನಿಲುವೇನು? ಅವರ ಹೆತ್ತವರ ನೋವುಗಳೇನು? ಅಂತಹ ಮಕ್ಕಳನ್ನು ಕಾಳಜಿಯಿಂದ, ಪ್ರೀತಿಯಿಂದ ಕಾಣಲು ಸಾಧ್ಯವೇ? ಇತ್ಯಾದಿ. ಆ ಮೂಲಕ ಈ ಕತೆ ನಮ್ಮ ಅರಿವನ್ನು ಅನುಭವವನ್ನು ವಿಸ್ತರಿಸುತ್ತದೆ. 

ನಂತರದ ಕತೆ: “ಭವ ರೋಗ ವೈದ್ಯ”. ಇದು ವೃದ್ಧನೊಬ್ಬ ಮಾನಸಿಕವಾಗಿ ಎದುರಿಸುವ ಲೈಂಗಿಕ ಸಮಸ್ಯೆಯ ಬಗೆಗಿನ ಕತೆ. ಕ್ರಮೇಣ ಅವನಿಗೆ ಅದನ್ನು ಪರಿಹರಿಸಿಕೊಂಡು ಪತ್ನಿಯೊಂದಿಗೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಮುಂದಿನ ಕತೆ “ಭ್ರಷ್ಟಾಚಾರದ Non-fiction”. ತೆರಿಗೆ ಇಲಾಖೆಯ ಒಬ್ಬ ಮೇಲಧಿಕಾರಿ ವೃತ್ತಿ ಜೀವನದಲ್ಲಿ ತನ್ನ ತೆವಲಿನಿಂದಾಗಿ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿ ಬೀಳುತ್ತಾನೆ. ನಂತರ ಅದರಿಂದ ಹೇಗೋ ಪಾರಾಗುತ್ತಾನೆ. ಈ ಹಂತದಲ್ಲಿ ನಿರೂಪಕ ಪ್ರಶ್ನಿಸುತ್ತಾನೆ: “ನಾವು ಮಾಡಿದ ತಪ್ಪಿನಿಂದ, ನಮ್ಮದೇ ಅನುಭವದಿಂದ ನಾವು ಮಾಗುತ್ತೇವೆ ಎಂಬುದು ಎಂತಹ ಸುಳ್ಳು ಮಾತು?” ಯಾಕೆಂದರೆ, ಆ ಅನುಭವದಿಂದ ಪಾಠ ಕಲಿಯದ ನಿರೂಪಕ ಇನ್ನೊಂದು ತಪ್ಪು ಮಾಡಿ ರಂಗೇ ಗೌಡರ ಮಗಳು ದೇವಕಿಯ ಬದುಕು ನರಕವಾಗಲು ಕಾರಣನಾಗುತ್ತಾನೆ. 

‘ಓಬಳಯ್ಯನ ಸುತ್ತಮುತ್ತ” ಕತೆ ಫುಟ್-ಪಾಟಿನಲ್ಲಿ ತನ್ನ ಸೈಕಲಿನಲ್ಲಿ ಹಲಗೆಯಿಟ್ಟು ಟೀ ಅಂಗಡಿ ನಡೆಸುವ ಓಬಲಯ್ಯನ ಬದುಕಿನ ಪಲ್ಲಟಗಳನ್ನು ದಾಖಲಿಸುತ್ತಾ, “ಚಿಲ್ಲರೆ ವ್ಯಾಪಾರವನ್ನು ಜಾಗತೀಕರಣಕ್ಕೆ ಒಪ್ಪಿಸಬೇಕೇ ಬೇಡವೇ” ಎಂಬ ಚರ್ಚೆಯನ್ನು ಜೊತೆಜೊತೆಯಲ್ಲೇ ಮುನ್ನಡೆಸುವ ಕತೆ. 

“ನಿಜ ಕವಲು” ಕತೆಯ ನಾಯಕಿ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಕಂಡಕ್ಟರ್ ರಾಜಮ್ಮ. ಚೆನ್ನೈಯಲ್ಲಿ ಏಷ್ಯಾಭಿವೃದ್ಧಿ ಸಾಮಾಜಿಕ ಸಂಸ್ಥೆಯಲ್ಲಿ ಮೂರು ದಿನಗಳ ಕಾಲ “ಕವಲು ಕುಟುಂಬ” ಬಗ್ಗೆ ವಿಚಾರ ಸಂಕಿರಣದಲ್ಲಿ ಭಾಗವಹಿಸಿ, ಅಲ್ಲಿಂದ ಬೆಂಗಳೂರಿಗೆ ರಾತ್ರಿ ಬಸ್ಸಿನಲ್ಲಿ ಹಿಂತಿರುಗುತ್ತಿದ್ದಾಗ ನಿರೂಪಕನಿಗೆ ರಾಜಮ್ಮಳ ಪರಿಚಯ. ಹಾದಿಯುದ್ದಕ್ಕೂ ತನ್ನ ಬದುಕಿನ ಬಗ್ಗೆ ಆಕೆ ಹೇಳಿಕೊಳ್ಳುತ್ತಾಳೆ. ಅವಳು ತನ್ನ ಕುಟುಂಬದ ಹಾಗೂ ವೃತ್ತಿಯ ಆತಂಕಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಗಟ್ಟಿಗಿತ್ತಿ. ಅವಳ ಮಾತು ಕೇಳುತ್ತಾ, ವಿಚಾರ ಸಂಕಿರಣದಲ್ಲಿ ದಂತಗೋಪುರದಲ್ಲಿರುವ ಬುದ್ಧಿಜೀವಿಗಳು ಮಂಡಿಸಿದ ವಾದಗಳೆಲ್ಲ ಎಷ್ಟು ಪೊಳ್ಳು ಎಂಬುದು ನಿರೂಪಕನಿಗೆ ಸ್ಪಷ್ಟವಾಗುತ್ತದೆ.