ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸುವ ಉದ್ಯೋಗದಾತರ ಪ್ರತಿನಿಧಿಗಳು ಉದ್ಯೋಗಾಕಾಂಕ್ಷಿಗಳ ಒತ್ತಡ ಕಡಿಮೆ ಮಾಡಲಿಕ್ಕಾಗಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅಂತಹ ಒಂದು ಪ್ರಶ್ನೆ: ನಿಮ್ಮ ಬಿಡುವಿನ ಸಮಯದಲ್ಲಿ ಏನು ಮಾಡುತ್ತೀರಿ?
ಈ ಪ್ರಶ್ನೆಗೆ ಉದ್ಯೋಗಾಕಾಂಕ್ಷಿ ನೀಡುವ ಉತ್ತರವು ಸಂದರ್ಶನದ ಫಲಿತಾಂಶವನ್ನೇ ಬದಲಾಯಿಸಬಲ್ಲದು. ಆದರೆ ಹಲವು ಅಭ್ಯರ್ಥಿಗಳು ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಯಾಕೆಂದರೆ, ತಮ್ಮ ವಿದ್ಯಾರ್ಹತೆ ಮತ್ತು ಉದ್ಯೋಗಕ್ಕೆ ಅವಶ್ಯವಾದ ಕೌಶಲ್ಯಗಳಿಗೂ ಈ ಪ್ರಶ್ನೆಗೂ ಸಂಬಂಧವಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಭಾವಿಸುತ್ತಾರೆ.
ಉದಾಹರಣೆಗೆ, “ನಾನು ಈಜುಗೊಳದಲ್ಲಿ ಈಜುತ್ತೇನೆ” ಎಂದು ಉದ್ಯೋಗಾಕಾಂಕ್ಷಿ ಉತ್ತರಿಸಿದ ಎಂದಿರಲಿ. ಸಂದರ್ಶನ ನಡೆಸುವ ಅಧಿಕಾರಿ ಕೂಡ ಈಜುಗಾರ ಆಗಿದ್ದಾರೆ, ಆತ ಈ ಬಗ್ಗೆ ಉದ್ಯೋಗಾಕಾಂಕ್ಷಿ ಬಳಿ ಇನ್ನಷ್ಟು ಪ್ರಶ್ನೆಗಳನ್ನು ಕೇಳಬಹುದು. ಒಂದು ವೇಳೆ ಉದ್ಯೋಗಾಕಾಂಕ್ಷಿ ಈಜು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿದ್ದರೆ, ಆತನ ಬಗ್ಗೆ ಸಂದರ್ಶನ ನಡೆಸುವ ಅಧಿಕಾರಿಯಲ್ಲಿ ಸಕಾರಾತ್ಮಕ ಅಭಿಪ್ರಾಯ ಮೂಡಬಹುದು.
ಸಂದರ್ಶನ ನಡೆಸುವ ಅಧಿಕಾರಿ ಸಂದರ್ಶನದ ಆರಂಭದಲ್ಲೇ ಕೇಳುವ “ಆತಂಕ ನಿವಾರಣೆ ಉದ್ದೇಶದ” ಈ ಪ್ರಶ್ನೆಯ ಸಮಸ್ಯೆ ಏನು? ಏನೆಂದರೆ, ಇದಕ್ಕೆ ಉದ್ಯೋಗಾಕಾಂಕ್ಷಿ ನೀಡುವ ಉತ್ತರವನ್ನು ಅನಂತರ ಯಾವುದೇ ಸಂಗತಿಗೆ ಸಮರ್ಥನೆಯಾಗಿ ಬಳಸಿಕೊಳ್ಳಬಹುದು - ಆತ/ಆಕೆಯನ್ನು ಉದ್ಯೋಗಕ್ಕೆ ಆಯ್ಕೆ ಮಾಡಿದ್ದಕ್ಕೆ ಅಥವಾ ನಿರಾಕರಿಸಿದ್ದಕ್ಕೆ ಸಹಿತ!
ಇದರ ಜೊತೆಗೆ ಇನ್ನೊಂದು ಸಮಸ್ಯೆಯೂ ಇದೆ. ಅದೇನೆಂದರೆ, ಸಂದರ್ಶನದ ಮೊದಲ 30ರಿಂದ 90 ಸೆಕೆಂಡುಗಳಲ್ಲಿ, ಸಂದರ್ಶನ ನಡೆಸುವ ಅಧಿಕಾರಿ ಉದ್ಯೋಗಾಕಾಂಕ್ಷಿಯ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿರುತ್ತಾನೆ. ಈ ಪ್ರಶ್ನೆಯ ಉತ್ತರವು ಆ ನಿರ್ಧಾರದ ಮೇಲೆ ಬೀರುವ ಪರಿಣಾಮವನ್ನು ಅನಂತರ ಬದಲಾಯಿಸುವುದು ಸುಲಭವಲ್ಲ.
ಆದ್ದರಿಂದ, ಈ ಪ್ರಶ್ನೆಯನ್ನು ಸಂದರ್ಶನ ನಡೆಸುವ ಅಧಿಕಾರಿ ಕೇಳದಿರುವುದೇ ಉತ್ತಮ. ಬದಲಾಗಿ, ಅಭ್ಯರ್ಥಿ ತನ್ನ ಬಾಲ್ಯ ಕಳೆದದ್ದು ಎಲ್ಲಿ? ವಿದ್ಯಾಭ್ಯಾಸ ಪಡೆದದ್ದು ಎಲ್ಲಿ? ಎಂಬಂತಹ ನೇರಾನೇರ ಪ್ರಶ್ನೆ ಕೇಳಬಹುದು.
ಉದ್ಯೋಗಾಕಾಂಕ್ಷಿ ಏನು ಮಾಡಬಹುದು?
ಬಿಡುವಿನ ಸಮಯದ ಹವ್ಯಾಸಗಳ ಬಗೆಗಿನ ಪ್ರಶ್ನೆಗೆ ಉತ್ತರಿಸಲು ಉದ್ಯೋಗಾಕಾಂಕ್ಷಿ ನಿರಾಕರಿಸಬಹುದು. ಅದರ ಬದಲಾಗಿ, ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ಸಂದರ್ಶನದ ಮುನ್ನವೇ ಉದ್ಯೋಗಾಕಾಂಕ್ಷಿ ತಯಾರಿ ನಡೆಸಬಹುದು.
ಉದಾಹರಣೆಗೆ, ನಿಮ್ಮ ಹತ್ತು ಹವ್ಯಾಸಗಳ ಅಥವಾ ಆಸಕ್ತಿಗಳ ಪಟ್ಟಿ ಬರೆಯಿರಿ. ನಿಮಗೆ ಯಾವೆಲ್ಲದರ ಬಗ್ಗೆ ಮಾತನಾಡಲು ಉತ್ಸಾಹವಿದೆಯೋ ಅಂಥವನ್ನು ಮಾತ್ರ ಪಟ್ಟಿಯಲ್ಲಿ ಬರೆಯಿರಿ. ನಿಮ್ಮ ಯಾವ್ಯಾವ ಹವ್ಯಾಸಗಳು ಭವಿಷ್ಯದ ಉದ್ಯೋಗಕ್ಕೆ ಅಗತ್ಯವಾದ ನಿಮ್ಮ ಕೌಶಲ್ಯಗಳು ಮತ್ತು ಮನೋಗುಣಗಳ ಬಗ್ಗೆ ಸೂಚನೆ ನೀಡಬಲ್ಲವು ಎಂಬುದರ ಬಗ್ಗೆ ಯೋಚಿಸಿ.
ಇನ್ನು ಒಂದು ಹೆಜ್ಜೆ ಮುಂದಿಟ್ಟು, ನಿಮ್ಮ ಹವ್ಯಾಸಗಳ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಲು ಮಾನಸಿಕವಾಗಿ ತಯಾರಾಗಿ. ಉದಾಹರಣೆಗೆ, “ನನಗೆ ಪುಸ್ತಕ ಓದುವುದೆಂದರೆ ಬಹಳ ಇಷ್ಟ” ಎನ್ನುವ ಬದಲಾಗಿ, ಯಾವ ಪುಸ್ತಕದ ವಿಷಯದ ಬಗ್ಗೆ ನೀವು ಆತ್ಮವಿಶ್ವಾಸದಿಂದ 15 - 30 ನಿಮಿಷ ಮಾತನಾಡಲು ಸಾಧ್ಯವಿದೆಯೋ ಆ ಪುಸ್ತಕವನ್ನು ಪ್ರಸ್ತಾಪಿಸಿ. ಯಾಕೆಂದರೆ, ಈ ಮೂಲಕ ಸಂದರ್ಶನ ನಡೆಸುವ ಅಧಿಕಾರಿಯ ಜೊತೆ ಸರಾಗವಾಗಿ, ಮುಕ್ತವಾಗಿ ಮಾತನಾಡುವ ಅವಕಾಶ ಜಾಸ್ತಿ.
ಆದರೆ, ನಿಮಗೆ ಅನುಭವ ಇಲ್ಲದ ಟೆನ್ನಿಸ್ ಅಥವಾ ಬಾಸ್ಕೆಟ್ ಬಾಲ್ ಬಗ್ಗೆ ಪ್ರಸ್ತಾಪಿಸಿ, ಮುಜುಗರಕ್ಕೆ ಒಳಗಾಗಬೇಡಿ. ಯಾಕೆಂದರೆ, ಸಂದರ್ಶನ ನಡೆಸುವ ಅಧಿಕಾರಿಗೆ ಅದರ ಬಗ್ಗೆ ಬಹಳಷ್ಟು ಮಾಹಿತಿ ಮತ್ತು ಅನುಭವ ಇರಬಹುದು, ಅಲ್ಲವೇ?
ಅದೇನಿದ್ದರೂ, ಸಂದರ್ಶನಕ್ಕೆ ಹೋಗುವ ಉದ್ಯೋಗಾಕಾಂಕ್ಷಿಗಳು ಈ ಪ್ರಶ್ನೆಯ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ, ತನ್ನ ಸಂಸ್ಥೆಯ ಅಥವಾ ಘಟಕದ ಉದ್ಯೋಗಕ್ಕೆ ಆಯ್ಕೆ ಮಾಡಬೇಕಾದ ಅಭ್ಯರ್ಥಿಯಲ್ಲಿ ಇರಬೇಕಾದ ಸುಪ್ತ ಗುಣಗಳು ಮತ್ತು ಕೌಶಲ್ಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದು ಉದ್ಯೋಗದಾತರ ಜವಾಬ್ದಾರಿ. ಅದಕ್ಕೆ ಅಗತ್ಯವಾದ ಪ್ರಶ್ನೆಗಳನ್ನು ಅಭ್ಯರ್ಥಿಗಳಿಗೆ ಕೇಳುವುದರ ಬಗ್ಗೆ ಸಂದರ್ಶನ ನಡೆಸುವ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡುವುದು ಕೂಡ ಉದ್ಯೋಗದಾತರ ಹೊಣೆಗಾರಿಕೆ.
ಪ್ರತಿಕ್ರಿಯೆ (3)