ಅಂಕದ ಪರದೆ

‘ಅಂಕದ ಪರದೆ’ ಎನ್ನುವ ಮರಾಠಿ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ. ಖ್ಯಾತ ರಂಗಕರ್ಮಿ ಕೆ ವಿ ಅಕ್ಷರ ಅವರು ಬೆನ್ನುಡಿಯನನ್ನು ಬರೆಯುತ್ತಾ “ತಮ್ಮ ಜೀವನದ ಕಡೆಯ ವರ್ಷಗಳನ್ನು ಕಳೆಯುತ್ತಿರುವ ಹಿರಿಯ ನಾಗರಿಕರ ಒಂದು ಆಶ್ರಯಧಾಮದೊಳಗೆ ಈ ನಾಟಕ ಸಂಭವಿಸುತ್ತದೆ. ಆದರೆ ಇಲ್ಲಿರುವ ವ್ಯಕ್ತಿಗಳು ಬರಿದೇ ಬದುಕಿನ ಸಂಧ್ಯಾಕಾಲವನ್ನು ನೋವಿನಿಂದ ನೂಕುತ್ತಿರುವ ಹತಾಶರಲ್ಲ; ಹಲವು ಬಗೆಯಲ್ಲಿ ಕ್ರಿಯಾಶೀಲರು.

ಪತ್ನಿಯಿಂದಲೇ ಹೀಗಳೆಯಲ್ಪಟ್ಟು, ಮಕ್ಕಳಿಂದಲೂ ಬೇರ್ಪಟ್ಟರೂ ಅವರೆಲ್ಲರಿಗೂ ಹಣ ಕಳಿಸುತ್ತಿರುವ ದಿಬ್ಬುಷ್ ಮನುಷ್ಯ ದೇಸಾಯಿ ಇಲ್ಲಿದ್ದಾನೆ; ಹಾಗೇ, ಮಗನ ವಿದ್ಯಾಭ್ಯಾಸಕ್ಕಾಗಿ ಕಷ್ಟಪಟ್ಟು ಹಣ ಸಂಪಾದಿಸಿ ತಮ್ಮ ಆಸೆಗಳನ್ನು ಅದುಮಿಟ್ಟು ಬದುಕಿದ ನಾನಾ- ಮಾಯಿ ಎಂಬ ಗಂಡಹೆಂಡಿರು ಇಲ್ಲೀಗ ತಮ್ಮ ಹೊಸ ಬದುಕನ್ನು ಅವಿಷ್ಕರಿಸುತ್ತಿದ್ದಾರೆ; ಅಂತೆಯೇ, ಬದುಕಿನುದ್ದಕ್ಕೂ ಸಮಾಜಮುಖಿ ಚಳವಳಿಗಾರನಾಗಿ ದುಡಿದ ಭಾಯೀಜಿ, ಅವನಿಗಾಗಿಯೇ ತನ್ನ ಬದುಕನ್ನು ಮುಡುಪಿಟ್ಟ. ಅವನ ಪತ್ನಿ ಸೇವಾತಾಯಿ ಇಲ್ಲೀಗ ಹಳೆಯ ನೆನಪುಗಳನ್ನು ಪರಿಷ್ಕರಿಸಿಕೊಳ್ಳುತ್ತಿದ್ದಾರೆ. ಹಳೆಯ ರಂಗಭೂಮಿ ಕಲಾವಿದ ಜನುಭಾಯಿ ಇಲ್ಲೀಗ ತನ್ನ ಬಣ್ಣದ ಬದುಕಿನ ಗೋಮಾಂಚನಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಇಂಥವರೆಲ್ಲರ ನಡುವೆ, ಹರ್ಷನೆಂಬ ಹೊಸಗಾಲದ ಯುವ ರಂಗಕರ್ಮಿಯೊಬ್ಬ ಈ ವಾರ್ಧಕ್ಯದ ತಥ್ಯ ತಿಳಿಯಲಿಕ್ಕೆಂದು, ತನ್ನ ತಂದೆಯ ವೇಷಾಂತರದಲ್ಲಿ ಈ ವೃದ್ಧಾಶ್ರಮಕ್ಕೆ ಸೇರಿಕೊಂಡು ಅವರೊಂದಿಗೆ ರಂಗಭೂಮಿಯ ಪಾಠಗಳನ್ನು ಕಲಿಯತೊಡಗುತ್ತಾನೆ. ಹೀಗೆ ವೃದ್ಧಾಪ್ಯವೆಂಬ ವಾಸ್ತವವು ರಂಗಭೂಮಿಯ ಭೂಮಿಕೆಗಳಾಗಿ ಪರಿವರ್ತನೆಯಾಗುವ ವಿಸ್ಮಯದ ದಿಕ್ಕಿಗೆ ನಾಟಕ ಮುನ್ನಡೆಯುತ್ತದೆ.” ಎಂದಿದ್ದಾರೆ.

ಅನುವಾದಕರಾದ ಜಯಂತ್ ಕಾಯ್ಕಿಣಿಯವರು ತಮ್ಮ ಮುನ್ನುಡಿಯಲ್ಲಿ “ನೀನಾಂಸ ತಿರುಗಾಟಕ್ಕೂ ನನ್ನ ಭಾಷಾಂತರ ನಾಟಕ ಬರವಣಿಗೆಗೂ ಇರುವ ನಂಟಿನ ವಿಸ್ತರಣೆ ಇದು. 1992ರಲ್ಲಿ 'ಸೇವಂತಿ ಪ್ರಸಂಗ'. 1998ರಲ್ಲಿ 'ಜತೆಗಿರುವನು ಚಂದಿರ', ಈಗ 'ಅಂಕದ ಪರದೆ'. ಇದು ಮರಾಠಿಯ ಜೊತೆಗಿನ ನನ್ನ ಸಂವೇದನಾಶೀಲ ಬಾಂಧವ್ಯದ ಆಚರಣೆಯೂ ಹೌದು. ಹೀಗಾಗಿ, ಹೋದ ವರ್ಷ ಕೆ.ವಿ. ಅಕ್ಷರ "ಈ ಬಾರಿಯ ತಿರುಗಾಟಕ್ಕೆ ಅಭಿರಾಮ್ ಭಡ್ಕರ್ ಅವರ ಮರಾಠಿ ನಾಟಕವನ್ನು ಕನ್ನಡಿಸಿ ಕೊಡಿ" ಎಂದಾಗ, "ಹೂಂ" ಎನ್ನುವ ಮೊದಲೇ ತಯಾರಾಗಿ ಬಿಟ್ಟೆ. ನಾಟಕದ ಮಾಂತ್ರಿಕತೆಯೇ ಹಾಗೆ.

ಸಹಜ ಅನುಭವದಿಂದಲೇ ಮಾಗಿದ ವೈವಿಧ್ಯಪೂರ್ಣ ಪಾತ್ರಗಳ ಮೂಲಕ ವಿಶಿಷ್ಟ ತಿಳಿವಿನ ವಿನ್ಯಾಸವೊಂದನ್ನು ಈ ನಾಟಕ ಕಟ್ಟಿಕೊಡುತ್ತದೆ. ಅದರ ಜೊತೆಗೇ ರಂಗಭೂಮಿಯ ಕುರಿತ ಜಿಜ್ಞಾಸೆಯೂ ಈ ಹುಡುಕಾಟದ ಮುಖ್ಯ ಚಡಪಡಿಕೆಯಾಗುತ್ತದೆ. ಹೀಗೆ ವಾಸ್ತವದ ನೆರಳು ಬೆಳಕಿನ ಜೊತೆ ರಂಗಭೂಮಿಯ ನೆರಳು ಬೆಳಕೂ ಇಲ್ಲಿ ಒಂದಾಗುತ್ತ ಜೀವನ್ಮುಖಿ ಯಾಗಿ ಚಲಿಸುತ್ತದೆ.

ನಾಟಕದ ಮೊದಲ ಪ್ರಯೋಗವನ್ನು ಆಸ್ವಾದಿಸುತ್ತ ನೋಡಿದ ಅಭಿರಾಮ್ ಭಡ್ಕಟ್ಕರ್ (ಆಗ ನಾನು ಅವರನ್ನೇ ನೋಡುತ್ತಿದ್ದೆ) ಈ ಪ್ರಕಟಣೆಗೆ ಸಂತಸದಿಂದ ಸಮ್ಮತಿಸಿದ್ದಾರೆ. ತಿರುಗಾಟದ ಕೈಪಿಡಿಗೆ ತಾವು ಬರೆದ ಟಿಪ್ಪಣಿಯನ್ನು ಹಿನ್ನುಡಿಯಾಗಿ ಬಳಸಲು ಅಕ್ಷರ ಒಪ್ಪಿಗೆ ನೀಡಿದ್ದಾರೆ. ವಿದ್ಯಾನಿಧಿ ವನಾರಸೆ (ಪ್ರಸಾದ್) ಅವರು ನಿರ್ದೇಶಿಸಿದ ಈ ನಾಟಕವನ್ನು 2024-25ರಲ್ಲಿ ನೀನಾಸಂ ತಿರುಗಾಟ ಬಳಗದವರು ಊರೂರಿಗೆ ಒಯ್ದು ಆಡಿದ್ದಾರೆ ಮತ್ತು ಈಗ ತಮ್ಮ ಪ್ರಕಾಶನದ ಮೂವತ್ತನೇ ವರುಷದ ಸಂಭ್ರಮದಲ್ಲಿ ಇದನ್ನು ಬೆಳಕಿಗೆ ತರುತ್ತಿದ್ದಾರೆ ಆಪ್ತ ಅಂಕಿತ, ಅಂಕಿತೆಯರಾದ ಪ್ರಕಾಶ್, ಪ್ರಭಾ ಕಂಬತ್ತಳ್ಳಿ ಎಂದಿನಂತೆ ರಾವ್‌ ಬೈಲ್‌ರ ರೇಖಾಚಿತ್ರಗಳ ಮೂಲಕ ಓರಣವನ್ನು ಕಲ್ಪಿಸಿದ್ದಾನೆ ಅಪಾರ. ಪುಸ್ತಕದ ಈ ನೆಂಟರಿಗೆ, ರಂಗಭೂಮಿಯನ್ನು ಹಚ್ಚಿಕೊಂಡಿರುವ ಎಲ್ಲರಿಗೆ, ಎದುರೇ ಇರುವ ನಿಮಗೆ, ಮನಸಾರೆ ಮುಜುರೆ.” ಎಂದಿದ್ದಾರೆ.