ಮುದ್ದಣ

‘ಶ್ರೀ ರಾಮಾಶ್ವಮೇಧಂ’ ಎಂಬ ಹಳೆಗನ್ನಡ ಗದ್ಯಕಾವ್ಯದ ಕತೃವೆಂದು ಮಾತ್ರವೇ ಅನೇಕ ವರ್ಷಗಳವರೆಗೆ ಪರಿಚಯವಾಗಿದ್ದು, ನಿಜನಾಮಧೇಯ ಲಕ್ಷ್ಮಿನಾರಾಯಣಪ್ಪ ಎಂದು ಬೆಳಕಿಗೆ ಬಂದ ಮುದ್ದಣ ತನ್ನ ಕೃತಿಗಳ ಪ್ರಕಟಣೆಗಾಗಿ ಕೀರ್ತಿಗೆ ಹಂಬಲಿಸದೆ ತೆರೆಯ ಮರೆಯಲ್ಲೇ ಇದ್ದ ಮಹಾನ್ ಕವಿ. ಈ ಕವಿ ಪ್ರೌಢಶಾಲೆಯ ವ್ಯಾಯಾಮ ಶಿಕ್ಷಕನಾಗಿದ್ದನೆಂಬುದು ನಿಜ ಸಂಗತಿ. ಕೊನೆಗೆ ಶಾಲೆಯಲ್ಲಿ ಕನ್ನಡ ಅಧ್ಯಾಪಕ ಹುದ್ದೆ ಸಿಕ್ಕಿದಾಗ ತೃಪ್ತಿ ಹೊಂದಿದನಂತೆ. ಕೇವಲ ಕವಿತ್ಯ ಮಾತ್ರವಲ್ಲದೆ ವ್ಯಾಕರಣ, ಛಂದಸ್ಸು ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿ ನಮಗೆ ಆತ ನೀಡಿರುವ ಸಲಹೆಗಳನ್ನು ನಾವು ಪಾಲಿಸಬೇಕು. 

ಈ ಕೃತಿಯಲ್ಲಿ ಒಂದು ಅಧ್ಯಾಯವಿದೆ. ಅದರ ಹೆಸರು “ಇದ್ದಾಗ ರೊಟ್ಟಿ ಕೊಡದ ಜನ ಸತ್ತ ಮೇಲೆ ಶಾಸನ ಬರೆಸಿದರು” ಎಂದು. ಅದರಲ್ಲಿ ಮುದ್ದಣನ ಬಗ್ಗೆ ಬಹಳ ಚೆನ್ನಾಗಿ ವಿವರಣೆ ನೀಡಲಾಗಿದೆ.

“ಒಳ್ಳೆಯ ಕಥೆಯನ್ನು ಅರಮನೆಯಲ್ಲಿ ವಿಸ್ತರಿಸಿ ಹೇಳಿದರೆ ರತ್ನ ಖಚಿತವಾದ ಕಡಗಗಳನ್ನೂ ಸುವರ್ಣದ ಪದಕಗಳನ್ನೂ ಬಹುಮಾನವಾಗಿ ಕೊಡುವರು ಎಂದು ಮುದ್ದಣ ತನ್ನ ಕಾವ್ಯದಲ್ಲಿ ಹೇಳಿದ್ದಾನೆ. ಆದರೆ ಅವನು ಅರಮನೆಯನ್ನು ಕಂಡವನೂ ಅಲ್ಲ. ಹಾರ ಕಡಗಗಳನ್ನು ಪಡೆದವನೂ ಅಲ್ಲ; ತನ್ನ ಕಾವ್ಯಾಭ್ಯಾಸದಿಂದ ಸಂತೋಷಪಟ್ಟಾಗ ಅಂಥ ತೃಪ್ತಿಯನ್ನು ಆತನು ಅನುಭವಿಸಿದನು.

೧೯೨೫ನೆಯ ಇಸವಿಯವರೆಗೆ ಎಂದರೆ, ಕವಿ ಕಾಲವಾಗಿ ಕಾಲು ಶತಮಾನ ಪರ್ಯಂತ 'ಶ್ರೀರಾಮಾಶ್ವಮೇಧಂ' ಎಂಬ ಹಳಗನ್ನಡ ಗದ್ಯಕಾವ್ಯ ಮಾತ್ರ ಮುದ್ದಣನ ಹೆಸರಿನಲ್ಲಿತ್ತು. ೧೯೦೧ರಲ್ಲಿ ಮೈಸೂರಿನ 'ಕಾವ್ಯಮಂಜರೀ' ಮಾಸಪತ್ರಿಕೆಯಲ್ಲಿ ಮೊದಲ ಸಲ ಪ್ರಕಟವಾದ ಈ ಗ್ರಂಥಭಾಗ ಜನರ ಮೆಚ್ಚಿಗೆಯನ್ನು ಪಡೆಯಿತು. ಆಮೇಲೆ ಪಠ್ಯಪುಸ್ತಕವೂ ಆಗಿ ಕೆಲವು ಆವೃತ್ತಿಗಳನ್ನು ಕಂಡಿತು. ಆದರೂ ಕವಿಯ ವೃತ್ತಾಂತ ಜನಕ್ಕೆ ಖಚಿತವಾಗಿ ತಿಳಿದಿರಲಿಲ್ಲ. ೧೯೨೫ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದವರು 'ಮುದ್ದಣ'ನ ವಿಷಯವಾಗಿ ಒಂದು ವಿಶೇಷ ಸಂಚಿಕೆಯನ್ನು ಪ್ರಕಟಿಸಿದರು. ಅದರಲ್ಲಿ ಈ ಕವಿಗೆ ಸಂಬಂಧಪಟ್ಟ ಆವರೆಗೆ ತಿಳಿದುಬಂದಿದ್ದ ಎಲ್ಲ ಸಂಗತಿಗಳನ್ನು ಬೆಳಕಿಗೆ ತಂದರು. 

ಈ ಕವಿಯ ಕಾಲ ಕ್ರಿ. ಶ. ೧೮೭೦-೧೯೦೧. ಸಾಯುವಾಗ ಇವನಿಗೆ ೩೧ ವರ್ಷ ತುಂಬಿತ್ತು, ಅಷ್ಟೆ. ಇವನ ಹೆಂಡತಿ ಕಮಲಾಬಾಯಿ ಈಗ ಕೆಲವು ವರ್ಷಗಳ ಹಿಂದೆ ತೀರಿಕೊಂಡಳು. ೭೭ ವರ್ಷದ ಮಗ ರಾಧಾಕೃಷ್ಣ ಈಗ ನಮ್ಮೊಡನಿದ್ದಾರೆ; ಉಪಾಧ್ಯಾಯರಾಗಿದ್ದು ನಿವೃತ್ತರಾಗಿದ್ದಾರೆ. ( ಕೃತಿಯ ಪ್ರಥಮ ಮುದ್ರಣ ೨೦೦೪) ಕವಿಯ ನಿಜವಾದ ಹೆಸರು ಲಕ್ಷ್ಮೀನಾರಾಯಣಪ್ಪ ಅಥವಾ ಲಕ್ಷ್ಮೀನಾರಾಯಣಯ್ಯ, ತಾಯಿ ಚಿಕ್ಕಂದಿನಲ್ಲಿ ಇವನನ್ನು ಮುದ್ದಣ ಎಂದು ಕರೆದರು. ಇದೇ ಕವಿಯ ಕಾವ್ಯನಾಮವಾಯಿತು. ಉಡುಪಿಗೆ ಸಮೀಪವಾಗಿರುವ ನಂದಳಿಕೆ ಕವಿಯ ಜನ್ಮಸ್ಥಳ.

ಇವನು 'ರತ್ನಾವತೀಕಲ್ಯಾಣ' ಮತ್ತು 'ಕುಮಾರ ವಿಜಯ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಮೊದಲು ಬರೆದನು. ಇವೆರಡನ್ನೂ ಉಡುಪಿಯ ಹಿಂದೂ ಪ್ರೆಸ್ಸಿನಲ್ಲಿ ಸ್ವಂತ ವೆಚ್ಚದಿಂದ ತನ್ನ ಹೆಸರಿನಲ್ಲಿ ಅಚ್ಚು ಹಾಕಿಸಿದನು. ಪ್ರತಿಗಳು ಮಾರಾಟವಾಗದೆ ಕವಿಗೆ ಅಪಾರ ನಷ್ಟವುಂಟಾಯಿತು. ತಾನು ಬರೆದ ಕಾವ್ಯಗಳನ್ನು ಅಚ್ಚು ಹಾಕಿಸಲು ಮುಂದೆ ಶಕ್ತಿಯಿಲ್ಲದವನಾಗಿ ತನ್ನ ಹೆಸರನ್ನು ಮರೆಸಿದನು. ತನ್ನ ಕೃತಿಗಳು ಪ್ರಕಟವಾದರೆ ಸಾಕೆಂದು ಆ ಕೃತಿಗಳು ಯಾರೋ

ಹಿಂದಿನವರು ಬರೆದುವೆಂದು ತನ್ನ ಪ್ರಕಾಶಕರಿಗೆ ತಿಳಿಸಿದನು. ಇದರಿಂದ ಕವಿಯು ತನ್ನ ಕೀರ್ತಿಗಾಗಿ ಹಂಬಲಿಸಲಿಲ್ಲ ಎಂಬುದು ವ್ಯಕ್ತವಾಗುತ್ತದೆ. ಮುದ್ದಣ ಸಾಹಿತ್ಯಪ್ರಿಯ, ಅದರ ಕೃಷಿಯಲ್ಲೇ ತೊಡಗಿದವ. ಸಾಹಿತ್ಯಾಭ್ಯಾಸಿಯಾದ ಅವನು ವಿದ್ವಾಂಸರ ಮತ್ತು ಕವಿ ಜನರ ಒಡನಾಟವನ್ನು ಬಯಸಿದನು. ತನ್ನ ಸಾಹಿತ್ಯ ಸೇವೆಯಿಂದ ಧನವನ್ನಾಗಲಿ, ಕೀರ್ತಿಯನ್ನಾಗಲಿ ಗಳಿಸಬೇಕೆಂಬುದು ಅವನ ಉದ್ದೇಶವಾಗಿರಲಿಲ್ಲ.

ಮುದ್ದಣನಲ್ಲಿ ಸಾಹಿತ್ಯ ಪ್ರತಿಭೆ ಇದ್ದರೂ ಅದನ್ನು ಗುರುತಿಸಿದವರು ಇರಲಿಲ್ಲ. ಎಲೆಮರೆಯ ಕಾಯಿಯಂತೆ ನಿಸ್ವಾರ್ಥತೆಯಿಂದ ಸಾಹಿತ್ಯ ಸೇವೆಯನ್ನು ಮುದ್ದಣ ಮಾಡಿದನು. ಈತನಿಗೆ ಹೇಳಿಕೊಳ್ಳುವಂಥ ಯಾವ ವಿದ್ಯಾ ಪದವಿಗಳೂ ಇರಲಿಲ್ಲ. ಆ ಕಾಲದಲ್ಲಿ ಕನ್ನಡಕ್ಕೆ ಅಷ್ಟು ಮನ್ನಣೆಯೂ ಇರಲಿಲ್ಲ. ಹೀಗಿರುವಲ್ಲಿ ವೃತ್ತಿಯಿಂದ ವ್ಯಾಯಾಮ ಶಿಕ್ಷಕನಾದ ಮುದ್ದಣನನ್ನು ಕೇಳುವವರಾರು? ಕಡೆಯವರೆಗೂ ತನ್ನ ಮನಸ್ಸಿನ ಸಂತೋಷಕ್ಕಾಗಿಯೇ ಕನ್ನಡ ಸಾಹಿತ್ಯ ಸೇವೆಯನ್ನು ಮಾಡಿ ಕಡುಬಡತನದಲ್ಲಿ ಮಡಿದ ಕವಿ ಮುದ್ದಣ.

“ಇದ್ದಾಗ ರೊಟ್ಟಿ ಕೊಡದ ಜನ ಸತ್ತ ಮೇಲೆ ಶಾಸನ ಬರೆಸಿದರು” ಎಂಬ ಆಂಗ್ಲರ ಗಾದೆ ಮುದ್ದಣನ ವಿಷಯದಲ್ಲಿ ಚೆನ್ನಾಗಿ ಅನ್ವಯಿಸುತ್ತದೆ. ಕಳೆದ ಅರ್ಧ ಶತಮಾನದ ಕಾಲದಲ್ಲಿ ಮುದ್ದಣನ ಬಗೆಗೆ ಬಂದಷ್ಟು ಲೇಖನಗಳು ಇನ್ನಾವ ಪ್ರಸಿದ್ಧ ಕವಿಯ ಬಗೆಗೂ ಬಂದಿಲ್ಲ. ಕನ್ನಡ ಕವಿಗಳ ಅಗ್ರಪಂಕ್ತಿಯಲ್ಲಿ ಇವನಿಗೆ ಸ್ಥಾನ ದೊರೆತಿದೆ ಎಂಬುದು ನಿರ್ವಿವಾದ.

ಇವನು ಬರೆದ ಎಷ್ಟೋ ಕೃತಿಗಳು ಬೆಳಕಿಗೆ ಬರದೆ ನಶಿಸಿರಬಹುದು. ಪ್ರಕಟಿಸುವ ಸಲುವಾಗಿ ಅಚ್ಚಾದ ಮೂರು ಕೃತಿಗಳಲ್ಲೂ ಉದ್ದೇಶಪೂರ್ವಕವಾಗಿ ಕವಿ ತನ್ನ ಹೆಸರು ಮರೆಸಿದ್ದಾನೆ. ಇವುಗಳಲ್ಲಿ ಮೊದಲನೆಯದು 'ಅದ್ಭುತ ರಾಮಾಯಣಂ' ಇದರ ಕವಿ 'ಕನ್ನಡ ಕಬ್ಬಿಗರ ಮನೆಯೂಳಿಗದವ' ಎಂದಿದ್ದಾನೆ. ಕನ್ನಡ ಕವಿಗಳ ಮನೆಯ ಆಳು ತಾನು, ಎಂದು ಅಭಿಮಾನದಿಂದ ತಾನು ಒಬ್ಬ ಕವಿಗೆ ಸಮಾನನಲ್ಲ ಎನ್ನುತ್ತ ತನ್ನ ನಿರಹಂಕಾರ ಮನೋಭಾವನೆ ಯನ್ನು ತೋರಿಸಿದ್ದಾನೆ. ಎರಡನೆಯದು 'ಶ್ರೀರಾಮ ಪಟ್ಟಾಭಿಷೇಕಂ ಬರೆದವಳು 'ಚಾವಡಿರಂಗಭಟ್ಟನಾತ್ಮಜೆ ಮಹಾಲಕ್ಷ್ಮಿ' ಎಂದಿದ್ದಾನೆ. ಇದು ಇವನ ತಾಯಿಯ ಹೆಸರು. ತನ್ನ ಕೃತಿಯ ರಚನೆಗೆ ತಾಯಿಯ ಸ್ಫೂರ್ತಿ ಇದ್ದುದರಿಂದ ಅದರ ಪೂರ್ಣ ಗೌರವ ಆಕೆಗೆ ಸಲ್ಲ ತಕ್ಕದ್ದು ಎಂಬುದು ಆತನ ಆಶಯ, ಮೂರನೆಯದು ಇವನ ಸಿದ್ಧಿ ಕಾವ್ಯ 'ಶ್ರೀರಾಮಾಶ್ವಮೇಧಂ'. ತನ್ನ ತಾಯಿ ಮಮತೆಯಿಂದ 'ಮುದ್ದಣ' ಎಂದು ಕರೆಯುತ್ತಿದ್ದ ಹೆಸರನ್ನೇ ಇದರ ಕವಿಯ ಹೆಸರಾಗಿ ಬಳಸಿದ್ದಾನೆ. ಇಲ್ಲೂ ಈತನಿಗೆ ತನ್ನ ತಾಯಿಯಲ್ಲಿ ಇದ್ದ ಮಮತೆ ಹಾಗೂ ಗೌರವಗಳು ವ್ಯಕ್ತವಾಗುತ್ತವೆ.”

ಈ ಕೃತಿಯಲ್ಲಿ ಮುದ್ದಣನ ಬಾಲ್ಯ, ವಿದ್ಯಾಭ್ಯಾಸ, ಪ್ರತಿಭೆ, ಕಾವ್ಯಗಳು ಮತ್ತು ಸಾಹಿತ್ಯ ಸೇವೆಗಳ ಬಗ್ಗೆ ಚುಟುಕಾದ ವಿವರಗಳಿವೆ. ಮುದ್ದಣನ ಮನೆಯ ದಾರಿ, ನಂದಳಿಕೆಯ ದೇವಾಲಯ, ಮುದ್ದಣ ಕಲಿಸಿದ ಶಾಲೆ, ಮುದ್ದಣನ ಮಗನ ಸಂಸಾರದ ಛಾಯಾ ಚಿತ್ರಗಳಿವೆ. ಶಾಲಾ ಮಕ್ಕಳಿಗೆ ಮುದ್ದಣ ಬಗೆಗಿನ ಪ್ರಬಂಧ, ಭಾಷಣ ಸ್ಪರ್ಧೆಗಳಿಗೆ ಮಾಹಿತಿ ಅರಸಲು ಸೂಕ್ತ ಪುಸ್ತಕ ಇದು. ೪೫ ಪುಟಗಳ ಈ ಪುಟ್ಟ ಪುಸ್ತಕವನ್ನು ಸಪ್ನ ಬುಕ್ ಹೌಸ್ ನವರು ‘ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ’ ಎನ್ನುವ ಆಶಯದೊಂದಿಗೆ ಮುದ್ರಿಸಿದ್ದಾರೆ.