ಹದಿನೆಂಟು ವರ್ಷ ಎಲ್ಲರಂತೆ ಜಗತ್ತಿನ ಸೌಂದರ್ಯವನ್ನು ತನ್ನ ಕಣ್ಗಳಿಂದ ಸವಿಯುತ್ತಿದ್ದ ಯುವಕ ಅನಿರೀಕ್ಷಿತವಾಗಿ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರೆ.... ಪರಿಣಾಮ ಏನಾಗಬಹುದು? ನಮಗೆ ಈ ಬಗ್ಗೆ ಯೋಚನೆ ಮಾಡುವಾಗಲೇ ಮೈಕೈ ನಡುಗುತ್ತದೆ. ಹಲವಾರು ವೈದ್ಯರ ಬಳಿ ತೋರಿಸಿ, ಆಪರೇಶನ್ ಮಾಡಿಸಿದ ಬಳಿಕವೂ ದೃಷ್ಟಿ ಹಿಂದಿರುಗಿ ಬಾರದೇ ಇದ್ದಾಗ ಎಷ್ಟೇ ಧೈರ್ಯವಂತರೂ ಕುಗ್ಗಿ ಹೋಗುವುದು ಸಹಜ. ಇದು ನಡೆದದ್ದು ಚಿತ್ರದುರ್ಗದಿಂದ ಅರ್ಧಗಂಟೆ ಪ್ರಯಾಣದ ದೂರವಿರುವ ಹಿರೇಗುಂಟನೂರಿನ ಹದಿಹರೆಯದ ಹುಡುಗ ಸಿದ್ದೇಶ್ ನ ಬಾಳಿನಲ್ಲಿ. ಆಪರೇಶನ್ ಬಳಿಕ ಕಣ್ಣು ಕಾಣಿಸಬಹುದೆಂಬ ಆಶಾಭಾವನೆಯೂ ಕಮರಿದಾಗ ಮೊದಲಿಗೆ ಕುಗ್ಗಿ ಹೋದರೂ ಬದುಕಿನ ಘೋರ ಸತ್ಯವನ್ನು ಅರಗಿಸಿಕೊಂಡು ಆತ ಬೆಳೆದು ನಿಂತ ಕಥೆಯಿದೆಯಲ್ಲ ಅದು ಎಲ್ಲರಿಗೂ ದಾರಿದೀಪವಾದೀತು.
ಅಂಧರು ದಾರಿ ತಿಳಿಯಲು ಬಳಸುವ ಕೋಲು ಇಲ್ಲಿ ಸಿದ್ದೇಶ್ ಬದುಕಿನ ಕಥೆ ಹೇಳುವ ‘ಕೋಲು ದಾರಿ’ ಆಗಿದೆ. ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದ ಸಿದ್ದೇಶ್, ದೃಷ್ಟಿ ಕಳೆದುಕೊಂಡ ಬಳಿಕ ಬೇರೆಯವರ ಸಹಾಯದಿಂದ ಪರೀಕ್ಷೆ ಬರೆದು ಪಿಯುಸಿಯಲ್ಲಿ ಶೇ. ೭೨ ಅಂಕಗಳನ್ನು ಗಳಿಸುತ್ತಾರೆ. ಅಲ್ಲಿಂದ ಪ್ರಾರಂಭವಾದ ಅವರ ವಿಶೇಷ ಚೇತನ ಬದುಕು ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕನಾಗುವ ತನಕ ಬೆಳೆಯುತ್ತದೆ ಎಂದರೆ ಅಚ್ಚರಿಯ ವಿಷಯ ಅಲ್ಲವೇ?
‘ಕೋಲು ದಾರಿ’ ಆತ್ಮಕತೆಗೆ ಪ್ರೇರಣಾದಾಯಕ ಮುನ್ನುಡಿ ಬರೆದಿದ್ದಾರೆ ಖ್ಯಾತ ಲೇಖಕಿ ನೇಮಿಚಂದ್ರ. ಅವರು ಮುನ್ನುಡಿಯಲ್ಲಿ ಒಂದೆಡೆ ಬರೆಯುತ್ತಾರೆ “ಒಂದು ಕ್ಷಣ ಊಹಿಸಿ, ಹದಿನೆಂಟರ ಹರೆಯದಲ್ಲಿ, ಇಡೀ ಜಗತ್ತೇ ರಂಗುರಂಗಾಗಿ ಕಾಣುವ ಕಿಶೋರದಲ್ಲಿ ಒಂದು ದಿನ ನೀವು ಏಳುತ್ತೀರಿ, ಲೈಟ್ ಆಫ್ ಮಾಡಿದಂತೆ ಕತ್ತಲು, ಕಗ್ಗತ್ತಲು. ಮತ್ತೆ ಆ ಸ್ವಿಚ್ ಆನ್ ಮಾಡಲಾರಿರಿ, ನಿಮ್ಮ ಜಗತ್ತಿನಿಂದ ಬೆಳಕು ಶಾಶ್ವತವಾಗಿ ನಿರ್ಗಮಿಸಿದೆ. ಅದರೊಡನೆ ಜಗತ್ತೇ ಕಣ್ಮರೆಯಾಗಿದೆ.
ಬದುಕು ಕೆಡವಿ ಬೀಳಿಸಿದ ಇಂತಹ ಹೊತ್ತು, ತಡವರಿಸಿದರೂ ಕುಸಿಯದೆ 'ನಿಮಗೆಂದಿಗೂ ಹೊರೆಯಾಗೋಲ್ಲ' ಎಂಬ ಆತ್ಮವಿಶ್ವಾಸದ ಆಶ್ವಾಸನೆಯನ್ನು ಹೆತ್ತವರಿಗಷ್ಟೇ ಅಲ್ಲ, ತಮಗೇ ಕೊಟ್ಟುಕೊಂಡ ಅದ್ಭುತದ ವ್ಯಕ್ತಿ ಸಿದ್ದೇಶ. ಯೌವನಕ್ಕೆ ಕಾಲಿಡುವ ಹರೆಯದಲ್ಲಿ ಎರಡೂ ಕಣ್ಣು ಕಳೆದುಕೊಂಡ ಪುಟ್ಟ ಹಳ್ಳಿಯೊಂದರ ಬಡ ಹುಡುಗ ಸಿದ್ದೇಶ್ ಸವೆಸಿದ ಆ ಹಾದಿ ಸುಗಮವಿರಲಿಲ್ಲ.
ಕಡು ಕಷ್ಟದ ಬದುಕಿನ ಪರ್ವತಾರೋಹಣ ಮಾಡಿ ಸಂತಸದ ಶಿಖರದಲ್ಲಿ ನೆಮ್ಮದಿಯ ನಿಲ್ದಾಣ ತಲುಪಿದ ವ್ಯಕ್ತಿಯೊಬ್ಬರು ಹಂಚಿಕೊಂಡ ಈ ಕಥನ, ಬಿಡದೆ ಓದಿಸಿಕೊಂಡು ಹೋಗುತ್ತದೆ. ಸಾಧ್ಯತೆಯ ಹೊಸ ಜಗತ್ತನ್ನು ನಮ್ಮೆದುರು ತೆರೆದು ತೋರಿಸುತ್ತದೆ. ತಮ್ಮ ಅನುಭವಗಳ ಬುತ್ತಿ ಬಿಚ್ಚಿಡುವ ಸಿದ್ದೇಶ್ ಅವರ ಬದುಕು ಪ್ರೀತಿಯ ಈ ಕತೆ ಮನಸ್ಸನ್ನು ಆದ್ರ್ರಗೊಳಿಸುತ್ತದೆ; ನಾವು ಕಾಣದ ಜಗತ್ತಿಗೆ ಕಿಂಡಿ ಕೊರೆಯುತ್ತದೆ; ನಮ್ಮ ಕಣ್ಣು ತೆರೆಸುತ್ತದೆ.
ತೋಳಿನವರೆಗೂ ಮುಳುಗುವ ಮಳೆ ನೀರಿನೊಳಗೆ ಕೈ ಹಾಕಿ ಕಸ ತೆಗೆದು ನೀರು ಹರಿದು ಹೋಗಲು ದಾರಿ ಮಾಡುವ ಅಗಾಧ ಯತ್ನವನ್ನು ಅದ್ಭುತವಾಗಿ ವಿವರಿಸಿದ್ದಾರೆ. ಅವರ ನಿರುದ್ವೇಗದ ನಿರಾಯಾಸದ ನಿರೂಪಣಾ ಶೈಲಿಗೆ ಬೆರಗಾಗಿದ್ದೇನೆ. ಸಿದ್ದೇಶ್ ತಮ್ಮ ಜಗದೊಳಗೆ ನಮ್ಮನ್ನು ಸೆಳೆದೊಯ್ಯುತ್ತಾರೆ, ಅವರೊಳಗೊಬ್ಬ ಉತ್ತಮ ಕತೆಗಾರನಿದ್ದಾನೆ.
ಈ ನಡುವೆಯೇ ಎಲೆಕ್ಟ್ರಾನಿಕ್ ರಂಗದಲ್ಲಿಯ ಕ್ರಾಂತಿ ಅಂಧರಾದವರ ಬದುಕನ್ನು ಬದಲಿಸುವ ರೀತಿಯೂ ಇಲ್ಲಿ ದಾಖಲಾಗಿದೆ. ಲ್ಯಾಂಡ್ಲೈನ್ ಎಂಬ ಪದವಿನ್ನೂ ಹುಟ್ಟದಿದ್ದ ಕಾಲದಲ್ಲಿ, ಸಂವಹನ ಹಾಗೂ ಕಲಿಕೆಯ ಕಡುಕಷ್ಟಗಳನ್ನು ನೋಡುತ್ತೇವೆ; ಮೊಬೈಲ್, ಬೆಂಕಿಪೊಟ್ಟಣದಂತಹ ಐ-ಪ್ಯಾಡ್, ಕಂಪ್ಯೂಟರ್, ಅದಕ್ಕೆ ಪರದೆ ವಾಚಕ ತಂತ್ರಾಂಶ- ಇವೆಲ್ಲವೂ ಬಂದಮೇಲೆ ಅಂಧರಾದ ವ್ಯಕ್ತಿಯ ಬದುಕು ಬದಲಾಗುವ ಪರಿಯನ್ನು ಇಲ್ಲಿ ಕಾಣುತ್ತೇವೆ.
ತತ್ತಕ್ಷಣದ ಸುಖ, ದಿಢೀರ್ ಶ್ರೀಮಂತಿಕೆ ಬಯಸುವ ಧಾವಂತದ ಜಗದಲ್ಲಿ ಸಿದ್ದೇಶ್ ವೇಗ ಮುಖ್ಯವಲ್ಲ, ಹೊರಟ ದಿಕ್ಕು, ಹಿಡಿದ ಹಾದಿ ಮುಖ್ಯವೆಂದು ನಡೆದವರು. ಅವರದು ಸರಿದಾರಿಯಲ್ಲಿ ಯೋಚಿಸಿ, ಯೋಜಿಸಿ ಇಟ್ಟ ನಿಧಾನದ ಹೆಜ್ಜೆಗಳು, ಆದರೆ ದೃಢತೆಯ ಪ್ರಾಮಾಣಿಕ ಪ್ರಯತ್ನದ ಸಂತಸದ ಹೆಜ್ಜೆಗಳು, ಪರಿಶ್ರಮದ ಹೆಜ್ಜೆಗಳು, ಸದಾ ಕೌಶಲವನ್ನು ಕಲಿಕೆಯನ್ನು ಹೆಚ್ಚಿಸಿದ ಹೆಜ್ಜೆಗಳು, ಎಳೆಯರಿಗೆ ಮಾದರಿಯಾಗಬಲ್ಲ ಜೀವನ ಪಯಣ ಅವರದು. ಸಹನೆ, ಸಂಯಮ, ಸನ್ಮಾರ್ಗ, ಕಲಿಕೆ, ಕಾಯುವಿಕೆ ಜಗತ್ತು ಇಂದು ಮರೆತಿರುವ ಮೌಲ್ಯಗಳನ್ನು ಸಿದ್ದೇಶ್ ಬದುಕಿ ತೋರಿಸಿದ್ದಾರೆ. ಬದುಕು ಪ್ರೀತಿಯ ಈ ಕತೆ ಮನಸ್ಸನ್ನು ಆದ್ರ್ರಗೊಳಿಸುತ್ತದೆ, ನಾವು ಕಾಣದ ಜಗತ್ತಿಗೆ ಕಿಂಡಿ ಕೊರೆಯುತ್ತದೆ. ಈ ಹೊತ್ತಿಗೆ ಕಣ್ಣಿರುವ ಪ್ರತಿಯೊಬ್ಬರೂ ಕಣ್ಣು ತೆರೆಯಲು ಓದಬೇಕಾದ ಕಥನ, ಕಣ್ಣಿಲ್ಲದವರನ್ನು ಕೈಹಿಡಿದು ಬೆಳಕಿನೆಡೆಗೆ ಕರೆದೊಯ್ಯುವ ಕೈಪಿಡಿ.”
ಸಿದ್ದೇಶ್ ತಮ್ಮ ಕೋಲು ದಾರಿಯ ಪಯಣದ ಬಗ್ಗೆ “ಬರೆದದ್ದು ಏಕೆ?” ಎನ್ನುತ್ತಲೇ ತಾವು ಸವೆಸಿದ ಕಷ್ಟಕರವಾದ ದಾರಿಯ ಬಗ್ಗೆ ತಮ್ಮದೇ ಮಾತುಗಳಲ್ಲಿ ಹೇಳುತ್ತಾರೆ…”ಕಾಲ ಕನಸು ಕಾಣಲು ಶುರುವಾಗುವ ಹದಿನೆಂಟನೇ ವಯಸ್ಸಿನಲ್ಲಿ ನಾನು ಕಣ್ಣು ಕಳೆದುಕೊಂಡೆ- ಎರಡೂ ಕಣ್ಣನ್ನು, ಬಳಿಕ ಹಲವು ಹೊಂದಾಣಿಕೆಗಳನ್ನು ಮಾಡಿಕೊಂಡು, ಅಗತ್ಯ ಕೌಶಲಗಳನ್ನು ಕಲಿತುಕೊಂಡು, ಸುಮಾರು ಇಪ್ಪತ್ತು ವರ್ಷಗಳ ವಿಶೇಷಚೇತನನಾಗಿ ಬದುಕನ್ನು ಎದುರಿಸಿದ್ದೇನೆ. ಸಮಾಜದಲ್ಲಿ ಗೌರವಯುತ ಮತ್ತು ಸ್ವಾವಲಂಬಿ ಜೀವನ ನಡೆಸಲು ಇದ್ದ ಅವಕಾಶಗಳನ್ನು ಹೇಗೆ ಸದುಪಯೋಗ ಮಾಡಿಕೊಂಡೆ ಎಂಬುದನ್ನು ನಾನು ಈ ಪುಸ್ತಕದಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನೆ.
ಹೋರಾಟಗಳು -ವಿಶೇಷಚೇತನರು ಸಮಾಜದಲ್ಲಿ ಸುಲಲಿತ ಜೀವನ ನಡೆಸಲು ಇರುವ ಅಡೆತಡೆಗಳು, ಸಂಘ-ಸಂಸ್ಥೆಗಳು ಅವರಿಗೆ ನೀಡುತ್ತಿರುವ ತರಬೇತಿಗಳು ಮತ್ತು ಸೇವೆಗಳ ವಿವರಗಳು, ಶೈಕ್ಷಣಿಕ ಅರ್ಹತೆಯ ನಂತರ ಉದ್ಯೋಗ ಅರಸುವಲ್ಲಿ ವಿವಿಧ ವಿಶೇಷಚೇತನರು ಅನುಭವಿಸುವ ಸವಾಲುಗಳು, ಸರ್ಕಾರದ ನೀತಿಗಳು, ನ್ಯಾಯಾಲಯಗಳಲ್ಲಿ ನಡೆದ ಹೀಗೆ ನಮ್ಮ ಜೀವನದೊಂದಿಗೆ ಬೆಸೆದುಕೊಂಡಿರುವ ವಿಭಿನ್ನ ವಿವರಗಳನ್ನು ಯಥಾವತ್ತಾಗಿ ನಿರೂಪಿಸಿದ್ದೇನೆ. ಸಮಾಜ ಮತ್ತು ಕುಟುಂಬದ ಸದಸ್ಯರು ಹೇಗೆ ವಿಶೇಷಚೇತನರನ್ನು ಸಬಲಗೊಳಿಸಿ ಸ್ವತಂತ್ರ ಜೀವನ ನಡೆಸಲು ಅಣಿಗೊಳಿಸಬಹುದು ಎಂಬುದನ್ನು ನನ್ನ ಮತ್ತು ದೈಹಿಕ ವಿಶೇಷಚೇತನರಾಗಿರುವ ನನ್ನ ಶ್ರೀಮತಿಯವರ ಉದಾಹರಣೆಗಳೊಂದಿಗೆ ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ.
ಅಂಗವೈಕಲ್ಯಕ್ಕೆ ಯಾರೂ ಧೃತಿಗೆಡಬೇಕಿಲ್ಲ. ನಮ್ಮೊಳಗೆ ಛಲವಿದ್ದರೆ ದಾರಿಗಳು ನೂರಾರಿವೆ ಎಂಬ ಧೈರ್ಯವನ್ನು ನನ್ನ ಕತೆ, ಅದರ ಅಗತ್ಯವಿದ್ದವರಿಗೆ ಕೊಡಲಿ ಎಂಬುದು ನನ್ನ ಆಸೆ. ಸರ್ಕಾರದ ನೌಕರಿಗಳಲ್ಲಿ ಮೀಸಲಾತಿ, ಅದನ್ನು ರಕ್ಷಿಸಲೆಂದು ಕಾನೂನುಗಳು, ಇಲಾಖೆಗಳು, ನ್ಯಾಯಾಂಗ ವ್ಯವಸ್ಥೆ, ಸಂಘಟನೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು -ಹೀಗೆ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ನಿರಂತರ ಕೆಲಸ ನಡೆದಿದೆ. ತಂತ್ರಜ್ಞಾನದ ಕೊಡುಗೆಗಳೂ ನಮ್ಮ ಬದುಕನ್ನು ದಿನೇದಿನೆ ಸರಳಗೊಳಿಸುತ್ತಿವೆ. ಇಂದು ತಾವು ಸ್ವಾವಲಂಬಿಗಳಾಗಿರುವುದಲ್ಲದೇ ಇತರರಿಗೂ ಉದ್ಯೋಗದಾತರಾಗಿರುವ ವಿಶೇಷಚೇತನರ ಉದಾಹರಣೆಗಳು ಸಾಕಷ್ಟಿವೆ. ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ವಿಶೇಷಚೇತನರಿದ್ದಾರೆ.
ಮಧ್ಯದಲ್ಲಿ ದೃಷ್ಟಿ ಕಳೆದುಕೊಂಡ ನಾನು ಜೀವನ ಕಟ್ಟಿಕೊಳ್ಳುವಲ್ಲಿ ದೃಢ ಹೆಜ್ಜೆಗಳನ್ನಿಡಲು ಹೆಣಗುತ್ತಿರುವಾಗ ಸಮಾಜದಿಂದ ಸಾಕಷ್ಟು ಸಹಕಾರ ಸಿಕ್ಕರೂ, ಜೊತೆಗೆ ಹಲವು ಕಹಿ ಅನುಭವಗಳೂ ಆಗಿವೆ. ಅಂಥ ಸಂದರ್ಭಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದರೆ ಅದು ಇನ್ನೊಂದು ತಪ್ಪೆಂಬಂತೆ ನೋಡಿದವರಿದ್ದಾರೆ. ವಿಕಲತೆಯ ಕಾರಣಕ್ಕೆ ನಾವು ಸದಾ ಎದುರಿನವರಿಗೆ ವಿಧೇಯರಾಗಿಯೇ ಇರಬೇಕು ಎಂದು ನಿರೀಕ್ಷಿಸುವವರೇ ಹೆಚ್ಚು. ಪಿ.ಯು.ಸಿ. ವಿದ್ಯಾಭ್ಯಾಸಕ್ಕೆ ಪ್ರವೇಶಾತಿ ಬಯಸಿದಾಗ ಸರ್ಕಾರಿ ಕಾಲೇಜೊಂದರ ಗುಮಾಸ್ತರು ನನ್ನನ್ನು ಕಳ್ಳನಂತೆ ನೋಡಿದ್ದುಂಟು. ಬೆಂಗಳೂರಿಗೆ ಬಂದ ನಂತರ ಒಮ್ಮೆ ಸಿಟಿಬಸ್ ಏರಿದಾಗ ಖಾಲಿ ಇರುವ ಆಸನ ತೋರಿರೆಂದು ಸಹಪ್ರಯಾಣಿಕರನ್ನು ಕೇಳಿದಾಗ ಇಂಥವರೆಲ್ಲಾ ಯಾಕೆ ಬರ್ತಾರೋ ಇಲ್ಲಿ? ಸುಮ್ಮೆ ಮನೇಲಿ ಕೂತಿರಕ್ಕಾಗಲ್ವಾ?" ಎಂಬ ಧ್ವನಿಯೊಂದು ಕಿವಿಗೆ ಅಪ್ಪಳಿಸಿತ್ತು. ಸ್ನೇಹಿತರೊಂದಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಕಾರು ನಿಲ್ಲಿಸಿ ಕೈಗೆ ಹಣ ಕೊಟ್ಟವರೂ ಇದ್ದಾರೆ. ಕಣ್ಣು ಕಾಣದಿದ್ದ ಮಾತ್ರಕ್ಕೆ ನಾನವರಿಗೆ ಭಿಕ್ಷುಕರಂತೆ ಯಾಕೆ ಕಾಣಬೇಕು? ಇನ್ನು ಸರ್ಕಾರಿ ನೌಕರರು ತಮ್ಮಲ್ಲಿಗೆ ಬರುವ ವಿಕಲಚೇತನರು, ಅಶಕ್ತರು, ವಯೋವೃದ್ಧರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಸೃಷ್ಟಿಯಲ್ಲಿ ಎಲ್ಲವೂ ಸುಂದರವಾಗಿದೆ; ನೋಡುವ ದೃಷ್ಟಿ ಚೆನ್ನಾಗಿರಬೇಕು. ಚಾರಣಕ್ಕೆಂದು ಗದಗ ಜಿಲ್ಲೆಯ ಕಪ್ಪತ್ತಗುಡ್ಡಕ್ಕೆ ಹೋಗಿದ್ದಾಗ ಅಲ್ಲಿನ ದೇವಾಲಯದ ಗೋಡೆಯ ಮೇಲೆ ಬರೆದಿದ್ದನ್ನು ವಿದ್ಯಾರ್ಥಿಗಳು ನನಗೆ ಓದಿ ಹೇಳಿದ್ದರು. ಹೌದಲ್ಲವೇ? ಸೃಷ್ಟಿಕರ್ತ ಎಲ್ಲವನ್ನೂ ಒಂದೇ ರೀತಿಯಾಗಿ ಸೃಷ್ಟಿಸಿದ್ದರೆ ಯಾವುದೂ ಸುಂದರವಾಗಿ ಕಾಣುತ್ತಿರಲಿಲ್ಲ. ಅದಕ್ಕೆಂದೇ ದೇವರು ಕೋಟ್ಯಂತರ ಜೀವರಾಶಿಯನ್ನು ವೈವಿಧ್ಯಮಯವಾಗಿ ಸೃಷ್ಟಿಸಿದ್ದಾನೆ. ಒಂದರಂತೆ ಇನ್ನೊಂದಿಲ್ಲ. ಅವಳಿ-ಜವಳಿ ಮಕ್ಕಳೂ ಗುಣ-ಸ್ವಭಾವದಲ್ಲಿ ಭಿನ್ನವಾಗಿರುತ್ತವೆ. ವಿಕಲತೆಯೂ ಅಂಥದ್ದೇ.”
ಸಿದ್ದೇಶ್ ಅವರು ತಮ್ಮದೇ ಆದ ಸರಳ ಭಾಷೆಯಲ್ಲಿ ತಮ್ಮ ಬದುಕಿನ ಕತೆಯನ್ನು ಹೇಳುತ್ತಾ ಹೋಗಿದ್ದಾರೆ. ಪುಸ್ತಕದ ಕೊನೆಯಲ್ಲಿ ಅವರ ಬದುಕಿನ ಒಂದಿಷ್ಟು ಭಾವಚಿತ್ರಗಳಿವೆ. ನೂರು ಚಿಲ್ಲರೆ ಪುಟಗಳ ಈ ಕೃತಿಯನ್ನು “ಹೆತ್ತು, ಹೊತ್ತು, ಅತ್ತಾಗ ಮುತ್ತನಿಟ್ಟು, ನನ್ನ ನಲಿವಿಗೆ ಸಂತೋಷ ಪಟ್ಟು, ಜಗದ ತೊಟ್ಟಿಲಿಗೆ ನನ್ನನಿಟ್ಟ ಅಮ್ಮನ ಅಡಿದಾವರೆಗಳಿಗೆ” ಅರ್ಪಣೆ ಮಾಡಿದ್ದಾರೆ. ಸಿದ್ದೇಶ್ ಅವರ ತ್ರಾಸದಾಯಕ ಪಯಣದುದ್ದಕ್ಕೂ ಬೆಂಗಾವಲಾಗಿದ್ದ ಅವರ ಅಮ್ಮ ನಿಧನ ಹೊಂದಿದ ಕೆಲವೇ ದಿನಗಳಲ್ಲಿ ಸಹ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ದೊರೆತದ್ದನ್ನು ಬಹಳ ನೋವಿನಿಂದ ಹೇಳಿಕೊಂಡಿದ್ದಾರೆ. ಇದನ್ನು ಓದಿದಾಗ ಎಲ್ಲರ ಕಣ್ಣಾಲಿಗಳು ತೇವಗೊಳ್ಳುವುದು ನಿಶ್ಚಿತ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!