ಹಳೇಬೀಡು

‘ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ’ ಮಾಲಿಕೆಯಲ್ಲಿ ಸಪ್ನ ಬುಕ್ ಹೌಸ್ ವತಿಯಿಂದ ಪ್ರಕಟವಾದ ೧೦ನೇ ಕೃತಿ ‘ಹಳೇಬೀಡು’. ಬೇಲೂರು ಮತ್ತು ಹಳೇಬೀಡು ದೇಗುಲಗಳು ಅತ್ಯಂತ ಅದ್ಭುತ ಶಿಲ್ಪಕಲೆಗೆ ಹೆಸರುವಾಸಿಯಾಗಿವೆ. ಹಳೆಬೀಡು ದೇಗುಲಗಳ ಬಗ್ಗೆ ಸಂಪೂರ್ಣ ವಿವರಗಳಿರುವ ಈ ಪುಟ್ಟ ಪುಸ್ತಕ ಅತ್ಯಂತ ಮಾಹಿತಿದಾಯಕವಾಗಿದೆ.

“ಪರೀಕ್ಷೆಯಲ್ಲಿ ಉತ್ತೀರ್ಣರಾದರೆಂದು ತಿಳಿದಾಗ ನೀವು ಬಹಳ ಸಂತೋಷ ಪಡುತ್ತೀರಿ. ಏಕೆಂದರೆ ಇಡೀ ವರ್ಷವೆಲ್ಲಾ ಕಷ್ಟಪಟ್ಟು, ನಿದ್ದೆಗೆಟ್ಟು, ಕಲಿತು ಮನನ ಮಾಡಿರುತ್ತೀರಿ. ತೇರ್ಗಡೆಯಾದುದಕ್ಕೆ ಗುರುತಾಗಿ ಸಿಗುವ ಸರ್ಟಿಫಿಕೇಟನ್ನು ಅಂದವಾದ ಚೌಕದಲ್ಲಿ ಇರಿಸಿ ಹೆಮ್ಮೆ ಪಡುತ್ತೀರಿ. ಆ ಸರ್ಟಿಫಿಕೇಟನ್ನು ನೋಡುವಾಗಲೆಲ್ಲಾ, ನಿಮ್ಮ ಶ್ರಮ ಯಶಸ್ವಿಯಾದುದು ನೆನಪಿಗೆ ಬಂದು ಮೈ ಮರೆಸುತ್ತದೆ. ಇದೇ ರೀತಿ ಒಂದು ಜನಾಂಗವೂ ಸಹ. ಜನಾಂಗಕ್ಕೆ ಪರೀಕ್ಷೆ ಉಂಟೇ ಎಂದು ನೀವು ಆಶ್ಚರ್ಯಪಡಬಹುದು. ನಿಜವಾಗಿಯೂ ದೊಡ್ಡ ಪರೀಕ್ಷೆ ಅದು. ಅದನ್ನು ಜನಾಂಗದ ಸರ್ವತೋಮುಖ ಅಭಿವೃದ್ಧಿ, ಸಾಂಸ್ಕೃತಿಕ ಪ್ರಗತಿ ಎನ್ನುತ್ತೇವೆ. ಆ ಪರೀಕ್ಷೆ ಒಂದು ವರ್ಷದಲ್ಲಿ ಅಥವಾ ಒಂದು ಘಟನೆಯಲ್ಲಿ ಮುಗಿಯುವಂತಹುದಲ್ಲ. ಅನೇಕ ಶತಮಾನಗಳಲ್ಲಿ ಅಲ್ಲಲ್ಲಿ ಮೂಡಿದ ಪ್ರಗತಿಯ ದೊಡ್ಡ ಹೆಜ್ಜೆಗಳವು. ನಮ್ಮನಾಡಿನ ಒಂದು ಪ್ರದೇಶದಲ್ಲಿ ಅಂತಹ ದೊಡ್ಡ ಹೆಜ್ಜೆಯೊಂದು ಮೂಡಿದುದನ್ನು ನೋಡಿ ಬರೋಣ. 

ಈ ಎಂಟುನೂರು ವರ್ಷಗಳ ಸಮಯ ಹಿಂದೆ ಸರಿದು ಆ ಪ್ರದೇಶದ ವಿಹಂಗಮ ದೃಶ್ಯವನ್ನೊಮ್ಮೆ ನೋಡೋಣ. ಬಾಬಾಬುಡನ್ ಗಿರಿಗಳ ರಮ್ಯ ಸಾಲು ದೂರದಲ್ಲಿ ತೋರುತ್ತಿದೆ. ಎಲ್ಲಿ ನೋಡಿದರೂ ಹಸಿರು ಬಣ್ಣದ ಚೆಲ್ಲಾಟ, ಪೈರುಗಳ ಹಸಿರು ಜಮಖಾನೆಯನ್ನು ತೂರಿ ಇಣುಕು ನೋಡುತ್ತಿರುವ ಗಿಡ, ಬೇಲಿಗಳು. ಆದರಾಚೆ ಸುತ್ತಿ ನಿಂತ ದಟ್ಟವಾದ ಕಾಡುಗಳು. ದೊಡ್ಡ ಸಮುದ್ರದಂತಹ ಕೆರೆ. ಅದರ ಹೆಸರು ಧ್ರುವ ಸಮುದ್ರ ಎಂದು. ಅಲ್ಲಿಯೇ ಹತ್ತಿರದಲ್ಲಿ ಒಂದು ಅರಮನೆ ಕಾಣಬರುತ್ತದೆ. ಹೊಯ್ಸಳ ರಾಜವಂಶದ ಪ್ರಸಿದ್ಧ ಅರಸು ವಿಷ್ಣುವರ್ಧನನ ನಿವಾಸಸ್ಥಾನ ಅದು. ಯಗಚಿ ನದಿಯಿಂದ ತಿಳಿಯಾದ ನೀರನ್ನು ದೊಡ್ಡ ಸಣ್ಣ ಕಾಲುವೆಗಳು ಹೀರಿ ತರುತ್ತಿವೆ. ಸುತ್ತಮುತ್ತಲೂ ದೊಡ್ಡ ಕೋಟೆ, ಜನ ಸುಖ ಶಾಂತಿಯಿಂದ ಧನ ಧಾನ್ಯ ಸಮೃದ್ಧಿಯಿಂದ ಜೀವನ ನಡೆಸುತ್ತಿರುವರು. 

ಅದೇನು ಕಿವಿಗಳು ಗಡಚಿಕ್ಕುವಂತಹ ಶಬ್ದ ಕೇಳಿ ಬರುತ್ತಿದೆ? ನೂರಾರು ಶಿಲ್ಪಿಗಳು ಸೌಂದರ್ಯ ಕಲಾರಾಧನೆಯಲ್ಲಿ ತೊಡಗಿದ್ದಾರೆ. ಉಳಿಗಳಿಂದ ಹಿಡಿದು ಕೊಡತಿಗಳವರೆಗೂ ಪುರಸೊತ್ತಿಲ್ಲ. ಅಡ್ಡ ತಿಡ್ಡಾದ ಬಂಡೆಗಳಲ್ಲೂ ತಮ್ಮ ಒರಟು ಚರ್ಮವನ್ನು ಕಿತ್ತೊಗೆದು, ನಯವಾಗಿ ಹೊಳಪಾಗಿ, ಕಣ್ಮನಗಳನ್ನು ಸೆಳೆಯುವಂತಹ ರೂಪಗಳನ್ನು ಪಡೆದು ಪುನರ್ಜನ್ಮ ತಾಳುತ್ತಿವೆ. ತನ್ನ ಸಂಸ್ಕೃತಿಯು ಅಳಿಸಿ ಹೋಗದಂತೆ, ತನ್ನ ಪ್ರಗತಿಯು ಕುಂಠಿಸಿ ಹೋಗದಂತೆ ತನ್ನ ಜ್ಞಾನವೆಲ್ಲಾ ಅಮರವಾಗಿಸಲು ಇಲ್ಲಿಯ ಜನಾಂಗ ಕೈ ಕೊಂಡ ಮಹತ್ಕಾರ್ಯ ಇದು. ಈ ಶಿಲ್ಪಿಗಳು ಕೇವಲ ಒರಳು ಕಲ್ಲು ಮಾಡುವ ಕಲ್ಕುಟಿಗರಲ್ಲ. ೬೪ ಕಲೆಗಳನ್ನೂ ಕಲ್ಲಿನ 'ಮನೆ'ಗಳಲ್ಲಿ ಸೆರೆ ಹಿಡಿಯುವ ಚತುರರು. ಅವರ ಮಹತ್ಪಯತ್ನಗಳು ಸಫಲವಾದವು. ೮ ಶತಮಾನಗಳೂ ಉರುಳಿದರೂ, ಅವರುಗಳು ಈಗ ಇಲ್ಲದಿದ್ದರೂ, ಅವರು ತಮ್ಮ ಪ್ರಗತಿಯ ಕುರುಹನ್ನು ನಮಗಾಗಿ ಬಿಟ್ಟು ಹೋಗಿದ್ದಾರೆ. ನಮ್ಮ ನಾಡಿನ ಅತ್ಯಂತ ಹೆಮ್ಮೆಯ ಸ್ಥಳಗಳಲ್ಲಿ ಒಂದಾದ ಇದನ್ನು ವಿವರವಾಗಿ ತಿಳಿಯೋಣ.

ಅಂದು ಹೊಸದಾಗಿ ಬೀಡುಬಿಟ್ಟ ಆ ಪ್ರದೇಶವನ್ನು ಇಂದು 'ಹಳೇಬೀಡು' ಎಂದು ಕರೆಯುತ್ತೇವೆ. ಹಾಸನ ಜಿಲ್ಲೆಯ ಬೇಲೂರಿನಿಂದ ೧೧ ಮೈಲಿಗಳು ಪೂರ್ವಕ್ಕೆ ಹಳೇಬೀಡು ಇದೆ. ಈಗ ಹಳ್ಳಿಗಾಡಿನಂತೆ ತೋರುವ ಹಳೇಬೀಡು ಕ್ರಿ.ಶ. ಹನ್ನೊಂದನೆಯ ಶತಮಾನದಲ್ಲಿ ಹೊಯ್ಸಳ ದೊರೆಗಳ ಮುಖ್ಯ ರಾಜಧಾನಿಯಾಗಿತ್ತು. ಧನ ಕನಕಗಳಿಂದ, ಧಾನ್ಯ ಸಮೃದ್ಧಿಯಿಂದ ತುಂಬಿ ತುಳಕಾಡುತ್ತಿತ್ತು. ಆಗ ಹಳೇಬೀಡು ದೋರ ಸಮುದ್ರ, ದ್ವಾರ ಸಮುದ್ರ ಮತ್ತು ದ್ವಾರಾವತೀಪುರ ಮುಂತಾದ ಹೆಸರುಗಳನ್ನು ಪಡೆದಿತ್ತು. ಕ್ರಿ.ಶ. ೧೩೧೦ ರಲ್ಲಿ ಮಹಮ್ಮದೀಯ ದಂಡನಾಯಕನಾಗಿ ಮಲ್ಲಿಕಾಫರನು ದಂಡಯಾತ್ರೆ ಮಾಡಿ ಹಳೇ ಬೀಡಿನ ಸಂಪತ್ತನ್ನು ದೋಚಿದನು. ಕ್ರಿ.ಶ. ೧೩೨೬ರಲ್ಲಿ ಹಳೇಬೀಡು ಮತ್ತೊಮ್ಮೆ ಮಹಮ್ಮದೀಯರ ಧಾಳಿಗೆ ತುತ್ತಾಗಿ ತನ್ನ ಅಳಿದುಳಿದ ಸಂಪತ್ತನ್ನೂ ಕಳೆದು ಕೊಂಡಿತು. ರಾಜಧಾನಿಯನ್ನು ಸಂಪೂರ್ಣವಾಗಿ ಹಾಳುಗೆಡವಿ ಶತ್ರುಗಳು ಅಲ್ಲಿಂದ ಕಾಲೆಗೆದರು. ಸಾವಿರಾರು ಜನರು ಕಿಕ್ಕಿರಿದು ವಾಸಮಾಡುತ್ತಿದ್ದಂತಹ ಆ ಬೀಡು ದಿಕ್ಕಿಲ್ಲದ ಮೂಲೆಗುಂಪಾಯಿತು. ಅಂದಿನಿಂದ ಅದು 'ಹಳೇಬೀಡು' ಆಗಿಯೇ ಉಳಿಯಿತು.

ಕೇವಲ ಬಂಗಾರವಷ್ಟೇ ಹಳೇಬೀಡಿನ ಸಂಪತ್ತಾಗಿರಲಿಲ್ಲ. ಅದು ಕಲಾಸಂಪತ್ತಿನ ಅದ್ಭುತ ಆಗರವಾಗಿತ್ತು. ಹಿಂದೂ ವಾಸ್ತು ಶಿಲ್ಪದ ತೌರೂರಾಗಿ ಮೆರೆಯುತ್ತಿತ್ತು. ಗತಕಾಲದ ಗುರುತುಗಳಾಗಿ ಇರುವ ಸ್ಥಳಗಳೆಂದರೆ - ಹೊಯ್ಸಳೇಶ್ವರ ದೇವಾಲಯ, ಕೇದಾರೇಶ್ವರ ದೇವಾಲಯ, ಜೈನ ಬಸ್ತಿಗಳು ಮತ್ತು ಬೆಣ್ಣೆಗುಡ್ಡ.” ಇದು ಪುಸ್ತಕದ ಪ್ರಾರಂಭದಲ್ಲಿ ಕಂಡುಬರುವ ಕೆಲವು ಸಾಲುಗಳು. ೫೫ ಪುಟಗಳ ಈ ಪುಟ್ಟ ಪುಸ್ತಕದಲ್ಲಿ ನೀಡಿರುವ ಚಿತ್ರಗಳು ಅಷ್ಟೊಂದು ಸ್ಪಷ್ಟವಾಗಿಲ್ಲದಿರುವುದು ಬಹು ದೊಡ್ಡ ಕೊರತೆ ಎಂದು ಕಾಣಿಸುತ್ತದೆ.