ಕರ್ನಾಟಕ ಪತ್ರಿಕೋದ್ಯಮ

ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ ಮಾಲಿಕೆ ಅಡಿಯಲ್ಲಿ ಪ್ರಕಟವಾದ ೧೫ನೇ ಕೃತಿ ‘ಕರ್ನಾಟಕ ಪತ್ರಿಕೋದ್ಯಮ’. ನಾವು ಇಂದು ಹಿಂದಿನ ರಾಜಮಹಾರಾಜರುಗಳ ಕಾಲದ "ಡಂಗುರ"ದಿಂದ ಪತ್ರಿಕೆಗಳಿಗೆ ತಲುಪಿದ್ದೇವೆ. ಮುದ್ರಣಯಂತ್ರ, ಅಚ್ಚಿನ ಮೊಳೆಗಳೇ ಇಲ್ಲದ ಕಾಲದಿಂದ ನಾವಿಂದು ಹಲವಾರು ಗಂಟೆಗಳಲ್ಲಿ ಸಾವಿರಾರು ವರ್ತಮಾನ ಪತ್ರಿಕೆ ಪಡೆಯುತ್ತಿದ್ದೇವೆ. ೧೬೧೫ರಲ್ಲಿ ಮೊದಲ ವೃತ್ತಪತ್ರಿಕೆ ಪ್ರಕಟವಾಯಿತು. ಕನ್ನಡದಲ್ಲಿ ಮುದ್ರಣ ಕೆಲಸ ಪ್ರಾರಂಭವಾದದ್ದು ಪಾದ್ರಿಗಳಿಂದ ಈ ಕ್ಷೇತ್ರದಲ್ಲಿ ಅನೇಕ ಮಹಾನುಭಾವರು ದುಡಿದಿದ್ದಾರೆ. ಸಾವಿರಗಳ ಸಂಖ್ಯೆಯಲ್ಲಿ ಮುದ್ರಣವಾಗುತ್ತಿದ್ದ ವರ್ತಮಾನ ಪತ್ರಿಕೆಗಳು ಈಗ ಲಕ್ಷಗಳ ಸಂಖ್ಯೆಯಲ್ಲಿ ಮುದ್ರಣವಾಗುತ್ತಿದ್ದು ಪತ್ರಿಕೋದ್ಯಮದ ಭವಿಷ್ಯ ಉಜ್ವಲವಾಗಿದೆ. 

ಈ ಕೃತಿಯ ಪುಟಗಳನ್ನು ತಿರುವಿದಾಗ ಕಂಡ ಒಂದು ಅಧ್ಯಾಯ ಪತ್ರಿಕೋದ್ಯಮ. ಅದರಲ್ಲಿ ಬರೆದ ಒಂದಿಷ್ಟು ಮಾಹಿತಿ ಹೀಗಿದೆ “ಪೈಸೆಗಳಿಂದ ಪತ್ರಿಕೆ ತಯಾರಿಸುವುದು ಸಾಧ್ಯವಿಲ್ಲ. ಜಾಹೀರಾತುಗಳಿಂದ ಬೇಕಾದಷ್ಟು ಹಣ ಬರುತ್ತದೆ. ಅದರಿಂದ ಪತ್ರಿಕೆಯ ಆಫೀಸನ್ನು ನಡೆಸುವುದಕ್ಕೂ, ಪತ್ರಿಕೆಯನ್ನು ಓದುಗರಿಗೆ ಆದಷ್ಟು ಕಡಮೆ ಬೆಲೆಗೆ ಕೊಡುವುದಕ್ಕೂ ಸಾಧ್ಯವಾಗುತ್ತದೆ.

ಪ್ರತಿಯೊಂದು ಪತ್ರಿಕೆಗೂ ಬೇರೆಬೇರೆ ಊರುಗಳಲ್ಲಿ ಪ್ರತಿನಿಧಿಗಳಿರುತ್ತಾರೆ. ಅವರು ತಮ್ಮೂರಿನಲ್ಲಿ ನಡೆಯುವ ಸುದ್ದಿಗಳನ್ನು ಸಂಗ್ರಹಿಸುತ್ತಾರೆ. ಸುದ್ದಿ ಮಾಡುವ ವ್ಯಕ್ತಿಗಳನ್ನು ಭೇಟಿಮಾಡುತ್ತಾರೆ. ಅಲ್ಲಲ್ಲಿ ಫೋಟೋ ತೆಗೆದುಕೊಳ್ಳುತ್ತಾರೆ. ಇವೆಲ್ಲವನ್ನೂ ಸೇರಿಸಿ ತಮ್ಮ ಪತ್ರಿಕೆಗೆ ರಸವತ್ತಾದ ಸಮಾಚಾರ ವೊಂದನ್ನು ಕಳುಹಿಸುತ್ತಾರೆ. ಅಂಚೆಯ ಮೂಲಕ, ಟೆಲಿಫೋನ್ ಮೂಲಕ ಮತ್ತು ಟೆಲಿಪ್ರಿಂಟರ್‌ಗಳ ಮೂಲಕ ಸುದ್ದಿ ಪತ್ರಿಕೆಯ ಆಫೀಸನ್ನು ತಲುಪುತ್ತದೆ.

ದಿನಪತ್ರಿಕೆಗಳಲ್ಲಿ ಬಿಡುವಿಲ್ಲದಂತೆ ಪ್ರತಿದಿನವೂ ಕೆಲಸ ನಡೆಯುತ್ತಿರುತ್ತದೆ. ಬೇರೆಬೇರೆ ಊರುಗಳಿಂದ ಸುದ್ದಿಗಳು ಬಂದ ಕೂಡಲೇ ಸಂಪಾದಕೀಯ ವಿಭಾಗದವರು ಚುರುಕಾಗುತ್ತಾರೆ. ಯಾವುದು ಮುಖ್ಯವಾದ ಸುದ್ದಿ, ಯಾವುದು ಮೊದಲ ಪುಟದಲ್ಲಿ ಪ್ರಕಟವಾಗಬೇಕು, ಯಾವುದು ಸ್ವಾರಸ್ಯವಾಗಿದೆ, ಯಾವುದು ಉಪಯೋಗವಿಲ್ಲ ಎನ್ನುವುದನ್ನೆಲ್ಲಾ ತೀರ್ಮಾನಿಸುತ್ತಾರೆ. ಪ್ರಕಟಣೆಗೆ ಸಹಾಯವಾಗುವಂತೆ ಸುದ್ದಿಗಳನ್ನು ಸರಿಪಡಿಸಿ ಕೊಳ್ಳುತ್ತಾರೆ, ಆದರೆ ಹೀಗೆ ಸರಿಮಾಡುವಾಗ ಸುದ್ದಿಗಳನ್ನು ವಿರೂಪಗೊಳಿಸದೆ, ಇಲ್ಲದ್ದನ್ನು ಸೇರಿಸದೆ ತಯಾರಿಸುತ್ತಾರೆ. ಅಲ್ಲಲ್ಲಿ ಚಿತ್ರಗಳನ್ನು ಜೋಡಿಸಿಟ್ಟುಕೊಳ್ಳುತ್ತಾರೆ.

ಮುದ್ರಣಕ್ಕೆ ಸಿದ್ಧವಾದ ಸುದ್ದಿ ಮುದ್ರಣಾಲಯ ಸೇರುತ್ತದೆ. ದೊಡ್ಡ ದೊಡ್ಡ ಆಧುನಿಕ ಮುದ್ರಣಯಂತ್ರಗಳು ಕೆಲವೇ ಘಂಟೆಗಳಲ್ಲಿ ಪತ್ರಿಕೆಯನ್ನು ತಯಾರಿಸಿಬಿಡುತ್ತವೆ. ಬೆಳಗಾಗುತ್ತಿದ್ದಂತೆಯೇ ಕಾರು, ವ್ಯಾನು, ರೈಲು, ವಿಮಾನಗಳಲ್ಲಿ ಅವು ದೂರದೂರದ ಊರುಗಳಿಗೂ, ಅಂಗಡಿಗಳಿಗೂ ತಲುಪುತ್ತವೆ.

ಹೀಗೆ ಪತ್ರಿಕೆ ಪ್ರಕಟಿಸುವ ಕೆಲಸ ದೊಡ್ಡ ಉದ್ಯಮವಾಗಿ ಬೆಳೆದಿದೆ. ಪತ್ರಿಕೆಗಳ ಆಫೀಸಿನಲ್ಲಿ, ಅದರ ಪ್ರಕಟಣೆಯಲ್ಲಿ ದುಡಿಯುವವರಿಗೆ 'ಪತ್ರಿಕೋದ್ಯೋಗಿಗಳು' ಎಂದು ಕರೆಯುತ್ತಾರೆ. ಪತ್ರಿಕೆಯ ಕೆಲಸ 'ಪತ್ರಿಕೋದ್ಯಮ' ಆಗಿದೆ.”

ಈ ಪುಸ್ತಕದಲ್ಲಿ ಪತ್ರಿಕೋದ್ಯಮದ ವಿವಿಧ ಮಜಲುಗಳನ್ನು ಪರಿಚಯಿಸುವ ಕೆಲಸ ನಡೆದಿದೆ. ಮುದ್ರಣ ಯಂತ್ರದ ಕಥೆ, ಕನ್ನಡದ ಪ್ರಪ್ರಥಮ ಪತ್ರಿಕೆ, ಕನ್ನಡ ನೆಲದಲ್ಲಿ ಸ್ವಾತಂತ್ರ್ಯ ನುಡಿ, ಕನ್ನಡವನ್ನು ಬೆಳೆಸಿದ ಪತ್ರಿಕೆಗಳು, ಈಗಿನ ಆಧುನಿಕ ಪತ್ರಿಕಾಲಯ ಮೊದಲಾದ ವಿಷಯಗಳ ಮಾಹಿತಿ ಇದೆ. ಸುಮಾರು ೯೨ ಪುಟಗಳ ಈ ಪುಸ್ತಕ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಹೊಂದಿದವರಿಗೆ ದಾರಿದೀಪವಾದೀತು.