‘ಕೃಷ್ಣಯ್ಯನ ಕೊಳಲು’ ಇದು ಡಾ. ಟಿ. ಗೋವಿಂದರಾಜು ಅವರ ಮೊದಲ ಕಾದಂಬರಿ. ಈ ಕಾದಂಬರಿಯ ಬಗ್ಗೆ ಖ್ಯಾತ ಸಾಹಿತಿ ಓ.ಎಲ್.ನಾಗಭೂಷಣ ಸ್ವಾಮಿಯವರು ಹಿತನುಡಿಗಳನ್ನು ಬರೆದಿದ್ದಾರೆ…
“'ಕೃಷ್ಣಯ್ಯನ ಕೊಳಲು' ಟಿ. ಗೋವಿಂದರಾಜು ಅವರ ಮೊದಲನೆಯ ಕಾದಂಬರಿ. ಅವರು ಇಲ್ಲಿ ಪುರಾಣದ ಕೃಷ್ಣನ ಕಥೆಯನ್ನು ನಮ್ಮ ಕಾಲದ ದೈನಂದಿನ ರಾಜಕೀಯದಿಂದ ಬಳಲುವ ಜನರ ಕಥೆಯಾಗಿಸಿ ಹೇಳುವ ಪ್ರಯೋಗವನ್ನು ಮಾಡಿದ್ದಾರೆ. ಕೊಳಲನ್ನು ಹಿಡಿವ ಕೃಷ್ಣ, ಚಕ್ರಧಾರಿಯಾಗುವ ಕೃಷ್ಣರ ಕಥೆಯ ಪದರದ ಹಿಂದೆ ಒಬ್ಬಂಟಿಯಾಗುವ, ಆಸಹಾಯಕನಂತೆಯೂ ತೋರುವ ಜನನಾಯಕನ ಕಥೆಯೂ ಆಡಗಿದೆ. ಕೃಷ್ಣಯ್ಯನ ಪಾತ್ರದ ನೆನಪುಗಳ ಸುರುಳಿ ಬಿಚ್ಚಿದಂತೆ ಅವನ ಒಳಗಿನ ಆಪ್ತ ಲೋಕವೂ ಭಾಗವತ, ಮಹಾಭಾರತದ ಕಥಾ ಹೂರಣವಾಗಿ ಬರುತ್ತವೆ. ದ್ವಾರಕೆಯಲ್ಲಿರುವ ಉಳ್ಳವರ ಮಕ್ಕಳ ವರ್ತನೆ, ಸಮಕಾಲೀನ ಸಿರಿವಂತ ಯುವಜನತೆಯ ವರ್ತನೆಯ ಚಿತ್ರಣವಾಗಿ ಕಾಣುತ್ತದೆ. ಜನರ ಅಸಹಾಯಕತೆ, ಧರ್ಮದ ಅಮಲನ್ನು ರಾಜಕೀಯಕ್ಕೆ ಬಳಸುವ ರೀತಿ ಇವು ಅಂದಿನ ಮತ್ತು ಇಂದಿನ ಕಾಲದ ವಾಸ್ತವಗಳೂ ಆಗುತ್ತವೆ. ಕೃಷ್ಣಯ್ಯ ಮಾತ್ರವಲ್ಲದೆ ಯುಧಿಷ್ಠಿರನಂಥ ಇತರ ಪೌರಾಣಿಕ ಪಾತ್ರಗಳೂ ಕಾಲದ ದಿಕ್ಕುತೋಚದ, ನಿರ್ಣಯಕ್ಕೆ ಬರಲಾರದ ನಿಷ್ಪಲವಾಗಿ ಕೊರಗುವ ಪಾತ್ರಗಳಾಗಿ ಎಷ್ಟೋ ಸಲ ಕಾಣುತ್ತವೆ. ಕೊಳಲು ಕೃಷ್ಣಯ್ಯನ ಆಪ್ತಲೋಕದ ಚಿತ್ರಣಕ್ಕೆ ಒದಗಿಬಂದರೆ ದ್ವಾರಕೆಯ ರಾಜಕೀಯ ನಮ್ಮ ಕಾಲದ ಘರ್ಷಣೆಗಳಿಗೆ ಕನ್ನಡಿಯಾಗುತ್ತದೆ. ಈ ಕಥನದ ಓದುಗರು ಗೋವಿಂದ ರಾಜು ಅವರ ಉದ್ದೇಶವನ್ನೂ ದಾಟಿ ಸಮಕಾಲೀನ ಬದುಕನ್ನು ಕುರಿತು ತಮ್ಮ ನಿರ್ದಿಷ್ಟ ನಿಲುವಿನಿಂದ ವಾಗ್ವಾದಕ್ಕೆ ಇಳಿಯುವಂತೆ ಮಾಡುವುದರಲ್ಲಿ ಸಫಲವಾಗಿದೆ.”
ತಮ್ಮ ಕಾದಂಬರಿಯ ಬಗ್ಗೆ ಸ್ವತಃ ಡಾ. ಟಿ ಗೋವಿಂದರಾಜು ಅವರು ಪ್ರಸ್ತಾವನೆಯೊಂದನ್ನು ಬರೆದಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ…”ರಾಮಾಯಣ, ಮಹಾಭಾರತಗಳು ಭಾರತದ ಬಹು ಜನಪ್ರಿಯ ಮಹಾಕಾವ್ಯಗಳು. ತಮ್ಮ ವಿಸ್ತಾರ, ಪ್ರಾಚೀನತೆ, ಕಥನ ಕೌಶಲ, ಮಾನವ ಸ್ವಭಾವಗಳ ಚಿತ್ರಣ, 'ಧರ್ಮಕ್ಕೇ ಜಯ' ಎಂಬ ಸಾರ್ವಕಾಲಿಕ ಮೌಲ್ಯದ ಪ್ರತಿಪಾದನೆ, ಕಾವ್ಯ ನಿರೂಪಣೆಯಲ್ಲಿನ ಕೌಶಲ್ಯ ಮೊದಲಾದುವು ಈ ಕಾವ್ಯಗಳನ್ನು ಜಾಗತಿಕವಾಗಿಯೂ ಮೇಲ್ಮಟ್ಟದಲ್ಲಿ ಪ್ರಚುರಗೊಳಿಸಿವೆ.
ಪ್ರಸ್ತುತ, ಮಹಾಭಾರತ ಕಾವ್ಯವನ್ನು ವ್ಯಾಸರು ರಚಿಸಿದ್ದಾಗಿ ನಂಬಲಾಗಿದೆ. ವ್ಯಾಸ ಒಬ್ಬರಲ್ಲ, ಅನೇಕರು ಎಂಬ ಹೇಳಿಕೆಗಳೂ ಇವೆ. ಇದು ವೇದ, ಉನಿಷತ್ತುಗಳ ಬಳಿಕದ ಕಾಲಾವಧಿಯಲ್ಲಿ ರಚಿತವಾಗಿರಬಹುದೆಂದೂ ನಂಬಲಾಗಿದೆ. 'ಮೂಲದಲ್ಲಿ ಈ ಕಥನದ ಹೆಸರು 'ಜಯ' ಎಂದು ಎಂಟು ಸಾವಿರ ಶ್ಲೋಕಗಳಲ್ಲಿ ಇದ್ದದ್ದು ಕಾಲ ಕಾಲಕ್ಕೆ ಅನೇಕ(ವ್ಯಾಸ)ರಿಂದ ಅನೇಕ ಸಂಗತಿ, ವಿವರಣೆಗಳು ಸೇರ್ಪಡೆಯಾಗಿ ಸು.ಒಂದು ಲಕ್ಷಶ್ಲೋಕಗಳಾಗಿ ಬೆಳೆದು ಬೃಹದ್ ಕಾವ್ಯವಾಗಿದೆ'ಎಂದು ಅಧ್ಯಯನಕಾರರು ವಿಶ್ಲೇಷಿಸಿದ್ದಾರೆ.
ಮಹಾಭಾರತ ಕತೆ ಓದು ಬರೆಹ ಬಾರದ ಗ್ರಾಮೀಣರಿಗೂ ಏಕೆ ಬಹು ಇಷ್ಟವಾಗಿದೆ ಎಂದರೆ, ಅದು ಊರೂರಲ್ಲಿ ಸಾಮಾನ್ಯವಾಗಿ ಕಂಡುಬರುವ 'ಮನೆಮನೆಯ ಕತೆ'. ಆಸ್ತಿಗಾಗಿ, ಬದುಕಿಗಾಗಿ ದಾಯಾದಿಗಳೊಂದಿಗೆ ಜಗಳಾಡುವುದು, ಅದರಿಂದ ಏರ್ಪಡುವ ಮನಸ್ತಾಪ, ಎದುರಾಗುವ ಸಂಕಷ್ಟಗಳು, ನಿರ್ಣಾಯಕ ಹಂತದಲ್ಲಿ ಇತರ ಬಂಧುಗಳೂ, ಆಪ್ತರೆನಿಸಿದವರೂ 'ಗೆಲ್ಲುವವರ' ಪರ ವಹಿಸುವ ಮೂಲಕ ಅಸಹಾಯಕರ ಮನಸಿಗೆ ಉಂಟು ಮಾಡುವ ಆಘಾತ.. ಈ ಎಲ್ಲದರ ನಡುವೆಯೂ ನ್ಯಾಯದಲ್ಲಿ ಭರವಸೆ ಇಟ್ಟು ಸೆಣಸಬೇಕಾದ ಹೊಣೆಗಾರಿಕೆ.. ಇವು ತಮ್ಮದೇ ಕತೆಯ ಪೂರ್ವ ನಿದರ್ಶನಗಳೆಂದು, ಮಹಾ ಪಾಠಗಳೆಂದು ನಂಬಿ ತಮ್ಮೊಂದಿಗೆ ಇರಿಸಿಕೊಳ್ಳುವಂತೆ ಮಾಡಿವೆ. ಈ ಇಂತಹ ಕತೆಗಳು ಜನಸಾಮಾನ್ಯರಿಗೆ ಆಪತ್ಕಾಲೀನ ಸಂಗಾತಿಗಳಿದ್ದಂತೆ ಎಂದರೆ ಸೂಕ್ತವಾದೀತು.
ಈ ಮಹಾಕಾವ್ಯಗಳು ಕಾಲ, ದೇಶ, ಭಾಷೆಗಳಲ್ಲಿ ವೈವಿಧ್ಯದ 'ಜನ್ಮ'ಗಳನ್ನು, ರೂಪಾಂತರಗಳನ್ನು ಮಾಡಿಕೊಂಡು ಬಂದಿದ್ದರೂ ಎಲ್ಲಾ ಕೇಳುಗರೂ ತಮ್ಮದೇ ಒಂದು ಮನೋಪಠ್ಯವನ್ನು 'ಅಚ್ಚು' ಮಾಡಿಟ್ಟುಕೊಂಡಿರುತ್ತಾರೆ. ಅಂತೆಯೇ, ನಿರೂಪಣೆ, ನಾಟಕ, ಸಿನಿಮಾ ಇತ್ಯಾದಿಗಳಲ್ಲಿ ಏನೇ ಬದಲಾವಣೆ ಇದ್ದರೂ, ಯಾವುದಾದರೂ ಸನ್ನಿವೇಶ ಲುಪ್ತವಾಗಿದ್ದರೂ, ಮಾತುಗಾರಿಗೆ ಅಸ್ಪಷ್ಟವಾದರೂ ತಮ್ಮ ಮನೋಪಠ್ಯದೊಂದಿಗೆ ಸರಿಹೊಂದಿಸಿಕೊಂಡು ಮುಂದುವರೆಯುತ್ತಾರೆ. ಕಥನ, ಅಭಿನಯ ಇವರ 'ಸಹೃದಯ' ಮುಟ್ಟಿದರೆ ಸಾಕು; ವಿಮರ್ಶೆ, ವಿಶ್ಲೇಷಣೆಗಳು ಏನಿದ್ದರೂ ಓದು ಬಲ್ಲ ವಿದ್ವಾಂಸರದು. ಬಹುಶ:, ಈ ಕಾರಣಕ್ಕೇ ಇರಬಹುದು. ಗ್ರಾಮೀಣರ ಕಲ್ಪನೆ, ಪ್ರಸ್ತುತಿಗಳಲ್ಲಿ ಏನೆಲ್ಲಾ ಪಾಠ ಭೇದಗಳು, ವೈವಿಧ್ಯಗಳು ಇದ್ದರೂ ಅವು ಎಲ್ಲವೂ ಅವರವರಿಗೆ ಸ್ವೀಕೃತವೇ ಆಗಿರುತ್ತವೆ. ಉದಾ.ಗೆ. ನಮ್ಮ ಊರಿನ ಎಲ್ಲಮ್ಮ, ಬೆಂಗಳೂರಿನ ಒಬ್ಬ ಲಂಬಾಣಿ ಗೃಹಿಣಿಯಿಂದ ಕೇಳಿದ ಕತೆಗಳಲ್ಲಿ ಸೀತೆಯು ರಾವಣನ ಮಗಳು; ರಾವಣ ಸೀನಿದಾಗ ಹುಟ್ಟಿದ್ದರಿಂದ, ಜ್ಯೋತಿಷಿಗಳು ಇದು ಕೇಡು ತರುವ ಕೂಸು ಎಂದು ಎಚ್ಚರಿಸಿದ್ದರಿಂದ ರಾವಣ ಅದನ್ನು ದೂರ ಮಾಡಿದ್ದ. ಜನಕನ ಶಿವ ಧನುಸ್ಸನ್ನು ಸೀತೆ ಬಾಲೆಯು ಎಡಗೈಲೇ ಎತ್ತಿ, ನೆಲ ಸಾರಿಸುತ್ತಿದ್ದಳು; ಯುದ್ಧ ಮಾಡುವಾಗ ರಾಮ ಸುಸ್ತಾಗಿ ಬಿದ್ದಾಗ, ಸೀತೆ ಧಾವಿಸಿ ಅದೇ ಧನುಸ್ಸು ಹಿಡಿದು ರಾವಣನ್ನು ಕೊಂದು, ಮರಳಿ ಹೋಗಿ ತಲೆ ಮೇಲೆ ಸೆರಗು ಹೊದ್ದು ಕುಳಿತಳು; ಕಪಿ ಸೈನ್ಯ, ಇದು ರಾಮನೇ ಹೊಡೆದದ್ದು ಎಂದು ಜೈಕಾರ ಹಾಕಿತು. ಉತ್ತರ ಕರ್ನಾಟಕ ಭಾಗದ ಒಂದು ಕೋಲಾಟ ಗೀತೆಯಲ್ಲಿ ದ್ಯೋತದಲ್ಲಿ ಗೆದ್ದ ಕೌರವನು, ದೌಪದಿಯನ್ನು ಎಳೆದು ತರಿಸುವಾಗ, ವಿಷಯ ತಿಳಿದು ಸಿಟ್ಟೇರಿದ ಆಕೆ ಓಡಿಬಂದದ್ದೇ, ಮತ್ತೊಮ್ಮೆ ಪಗಡೆ ಆಡು ಎಂದು ಕೌರವನಿಗೆ ಆವಾಜಿಸಿ, ಆಟದಲ್ಲಿ ಗೆದ್ದು, ಪಗಡೆ ಹಾಸನ್ನು ಎತ್ತಿ ಕೌರವನ ಮುಖದ ಮೇಲೆ ಚೆಲ್ಲಾಡಿ ಅವನ ಮುಖಭಂಗ ಮಾಡುತ್ತಾಳೆ.. ಇಂತಹ ನಿರೂಪಣೆಗಳನ್ನು ವಾಲ್ಮೀಕಿ, ವ್ಯಾಸರ ಕೃತಿ ಓದಿಕೊಂಡ ಅನೇಕ ಅಕ್ಷರಸ್ಥರು ನಿರಾಕರಿಸಬಹುದು.
ಪ್ರಸ್ತುತ ಈ "ಕೃಷ್ಣಯ್ಯನ ಕೊಳಲು" ಕೃತಿ ರಚನೆಯ ಆಂತರ್ಯದಲ್ಲಿ ನನಗೆ ಇದ್ದ ಒತ್ತಾಸೆ ಜನಪ್ರಿಯ ಮಹಾಭಾರತವನ್ನಾಗಲೀ, ಆ ಬಳಿಕ ಹುಟ್ಟಿಕೊಂಡ ಹಲವು 'ಭಾರತ'ಕಥನಗಳನ್ನಾಗಲೀ ತೌಲನಿಕವಾಗಿ, ಇಲ್ಲವೇ ವಿಮರ್ಶಾತ್ಮಕವಾಗಿ ನೋಡುವುದಲ್ಲ. ಬದಲಿಗೆ, ದ್ವಾರಕೆಯನ್ನು ಕೇಂದ್ರವಾಗಿರಿಸಿಕೊಂಡು ಕೃಷ್ಣನ ಬದುಕಿನ ಅವಸ್ಥೆಗಳನ್ನು, ಯುದ್ಧದ ಪರಿಣಾಮ ಆದ ಸಮುದಾಯಗಳ ವಿನಾಶದ ಕಥನವನ್ನು ಚಿತ್ರಿಸಬೇಕೆಂಬುದು. ಇದು ಸು.20 ವರ್ಷಕ್ಕೂ ಹಳೆಯ ಆಲೋಚನೆ. ಹಿರಿಯ ಮಿತ್ರರೂ, ರಂಗ ನಟರೂ ಆಗಿದ್ದ ಡಿ.ಟಿ. ಚನ್ನಕೇಶವ ಮೂರ್ತಿ ಅವರೊಂದಿಗೆ ಒಮ್ಮೆ ಮಾತಾಡುವಾಗ, ಕೃಷ್ಣನ ಅಂತ್ಯವನ್ನು ಕುರಿತ ಪ್ರಸಂಗವನ್ನು ನಾಟಕ ಮಾಡಬೇಕೆಂದಿರುವುದಾಗಿ ಹೇಳಿದ್ದರು. ನನ್ನ ಮನದಲ್ಲೂ ಅದು ಇದ್ದದ್ದರಿಂದ, ನಾನೂ ಏನಾದರೂ ಮಾಡಲೇಬೇಕೆಂದುಕೊಂಡಿದ್ದೆ. ಅವರು ಆ ನಾಟಕವನ್ನೇನೂ ಮಾಡಲಿಲ್ಲ.
ಅನೇಕ ಹಿರಿಯ ಕತೆಗಾರರು ತಮ್ಮ ಕೃತಿಗಳ ರಚನೆ ಕುರಿತು ಬಣ್ಣಿಸುವಾಗ 'ಇದು ತಾನೇ ಬರೆಸಿಕೊಂಡಿತು' ಎಂದು ಹೇಳಿಕೊಂಡಿರುವುದುಂಟು. ಆ ಅನುಭವ ನನ್ನದೂ ಆಯಿತು ಎಂಬುದು ಬೆರಗಿನ ಸಂಗತಿ. ಚಿತ್ರಿಸಬೇಕಾದ ಪಾತ್ರಗಳು ತಾವಾಗಿ ಎದಿರು ಬಂದು ಮಾನವದನದವಾಗಿ ನಿಲ್ಲುತ್ತಿದ್ದವು. ಅವುಗಳ ನೆನೆದೇ ನನಗೆ ಸಂಕಟವಾಗುತ್ತಿತ್ತು. ಅವುಗಳ ಮೌನ ಆಕ್ರಂದನಕ್ಕೆ ನುಡಿ ಬರಿಸುವ ಸಲುವಾಗಿ ಸೂಕ್ತವಾದ ಸನ್ನಿವೇಶ, ಮಾತುಗಾರಿಕೆಯನ್ನು 'ಅನಾಯಾಸವಾಗಿ ತುಂಬಿಕೊಂಡವು'. ಇನ್ನೇನು ಸಾಕು, ಎಂದು ಮುಗಿಸಿದ ಹೊತ್ತಿಗೆ ಮಹರ್ಷಿ ವ್ಯಾಸರು, 'ನನ್ನನ್ನು ನಿರ್ಲಕ್ಷಿಸಿದರೆ ನಿನ್ನ ಕೃತಿಗೆ ಸುವರ್ಣ ಚೌಕಟ್ಟು ಇಲ್ಲವಾಗುವುದು' ಎಂದು ಎಚ್ಚರಿಸಿದರು. ಹೌದಲ್ಲಾ, ಎಂದು ವ್ಯಾಸ-ಕೃಷ್ಣರ ಮುಕ್ತ ಆತ್ಮಾವಲೋಕನವನ್ನು ಕೊನೆಗೆ ಸೇರಿಸಿದೆ. ಇದೇ ಹೊತ್ತಿನಲ್ಲಿಯೇ 'ಉತ್ತರ ಭಾರತದ ಕಥನ'ವನ್ನು ನಮ್ಮ ನಾಡಿಗೂ ಕರೆತಂದು ಕಥನಕ್ಕೊಂದು ಜೀವಂತಿಕೆ, ಪ್ರಸ್ತುತತೆ, ಸ್ಥಳೀಯತೆಯನ್ನೂ ಸೃಷ್ಟಿಸಿದೆ. ಕೃಷ್ಣನಿಗೆ ರಾಧೆ, ಕೊಳಲು ದಕ್ಕಿದ ಕಥನ ಲಂಬಾಣಿಗಳ ಕಾವ್ಯದಲ್ಲಿಯೂ ಇದೆ. ಆದರೆ, ಕಾವೇರಿ ಸೀಮೆಯ ವಿರಾಜಪೇಟೆ ಪರಿಸರದ ಒಂದು ಬುಡಕಟ್ಟಿನವರು ಪ್ರತೀವರ್ಷ ಕೃಷ್ಣನ ಕೊಳಲ ಹಬ್ಬ ಮಾಡುವುದಿದ್ದು, ಅನೇಕ ವರ್ಷಗಳಿಂದ ನನ್ನ ಮನದಲ್ಲಿ ಕುಳಿತಿದ್ದ ಈ ಬುಡಕಟ್ಟು-ಜನಪದ ಆಚರಣೆಯನ್ನು ಇಲ್ಲಿ ಸಹಜರೂಪದಂತೆ ಬಳಸಿಕೊಂಡೆ. ಆ ಜನರು ಆರಾಧನೆಯ ಭಾಗವಾಗಿ ಕೃಷ್ಣನ ಕೊಳಲು ಊದಿ ಸಂಭ್ರಮಿಸುತ್ತಾರೆ. ಕೊಳಲು ಅವರ ಜೀವ ಚೈತನ್ಯದ, ಧಾರ್ಮಿಕ ಬದುಕಿನ ಭಾಗವಾಗಿದೆ. ಆಧುನಿಕ ಜಗತ್ತು ಈ ಜನರಲ್ಲಿ ಗಮನಿಸಬೇಕಾದದ್ದು. ಅವರು ಪೂಜಿಸುವುದು, ಮೆರೆಸುವುದು ಕೃಷ್ಣನ ಕೊಳಲನ್ನು, ಚಕ್ರವನ್ನಲ್ಲ- ಎಂಬುದನ್ನು. ಕೃಷ್ಣ ಎಂದರೆ ಯಾರಿಗಾದರೂ ನೆನಪಾಗುವುದೇ ಕೊಳಲು; ಕೊಳಲೇ ಕೃಷ್ಣನ ಪ್ರತೀಕ, ಚಕ್ರವೂ ಅಲ್ಲ, ಶಂಖವೂ ಅಲ್ಲ. ಅಂತಹ ಸಮುದಾಯದವರು ಇರುವ ಕಾವೇರಿ ಮಡಿಲಿಗೂ ವ್ಯಾಸ-ಕೃಷ್ಣಯ್ಯರು ಬರುವುದು ಹೆಮ್ಮೆಯ ಸಂಗತಿಯೇ ಅಲ್ಲವೇ?”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!