ಹಂಪೆ

ಸಪ್ನ ಬುಕ್ ಹೌಸ್ ಪ್ರಕಾಶನ ಸಂಸ್ಥೆಯವರು ‘ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ’ ಎನ್ನುವ ಮಾಲಿಕೆಯಲ್ಲಿ ಹೊರತಂದ ೨೫ನೇ ಕೃತಿ ‘ಹಂಪೆ’. ಈ ಕೃತಿಯನ್ನು ಡಾ ಪಾಂಡುರಂಗರಾವ್ ದೇಸಾಯಿಯವರು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ಕಿರಿಯರಿಗಾಗಿ ಎಂದು ಬರೆದ ಈ ಪುಸ್ತಕದಲ್ಲಿ ಹಿರಿಯರಾದವರೂ ಓದಿ ವಿಚಾರ ಮಾಡತಕ್ಕಂತಹ ವಿಷಯಗಳು ಸಾಕಷ್ಟು ಇವೆ. ಅವುಗಳಲ್ಲಿ ಮುಖ್ಯವಾದವು ಇವು. ವಿಜಯನಗರದ ಸಂಸ್ಥಾಪಕರಾದ ಹರಿಹರ, ಬುಕ್ಕರು ವರಂಗಲ್ಲಿನಿಂದ ಬಂದವರು. ಆಂಧ್ರ ಮೂಲದವರು ಎಂಬ ಅಭಿಪ್ರಾಯವು ಈಚೆಗೆ ಬಹುವಾಗಿ ಪ್ರಚಾರ ಪಡೆದಿದೆ. ಇದಕ್ಕೆ ಕಾರಣ ಕೆಲವು ಇತಿಹಾಸ ಲೇಖಕರು ತೋರಿಸಿದ ತಪ್ಪುದಾರಿ. ನಿಜವಾಗಿ ಇದಕ್ಕೆ ಇತಿಹಾಸದ ಆಧಾರವೇ ಇಲ್ಲ. ಇದೊಂದು ನಿರಾಧಾರ ದಂತಕಥೆ. ಈ ವಿಷಯವನ್ನು ಇತರತ್ರ ನನ್ನ ಇಂಗ್ಲಿಷ ಲೇಖನಗಳಲ್ಲಿ ಸಪ್ರಮಾಣವಾಗಿ ವಿವರವಾಗಿ ಸಿದ್ಧಪಡಿಸಿದ್ದೇನೆ.

ವಿಜಯನಗರ ಸಂಸ್ಥಾಪಕರು ಕನ್ನಡ ನಾಡಿನಲ್ಲಿ ಹುಟ್ಟಿದವರು. ಕನ್ನಡ ತಾಯಿಯು ಮಕ್ಕಳೇ ಆಗಿದ್ದರು. ಈ ಶತಸತ್ಯವನ್ನು ಈ ಕಿರುಹೊತ್ತಿಗೆಯಲ್ಲಿ ಮೊದಲಬಾರಿ ಘಂಟಾಘೋಷವಾಗಿ ಸಾರಿ ಹೇಳಿದ್ದೇನೆ. ಇದಲ್ಲದೆ, ಹೊಯ್ಸಳ ಮುಮ್ಮಡಿ ವೀರಬಲ್ಲಾಳನು ವಿಜಯನಗರದ ಪೂರ್ವದಲ್ಲಿ ದಕ್ಷಿಣ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ದೇಶಾಭಿಮಾನಿ ಮಹಾವೀರ. ಈ ಸತ್ಯ ಇತಿಹಾಸವನ್ನು ಇಲ್ಲಿ ನಿವೇದಿಸಿದ್ದೇನೆ. ಭಾರತದ ಚಾರಿತ್ರಿಕ ಮಹಾನಗರಗಳಲ್ಲಿ ವಿಜಯನಗರದ ಸ್ಥಾನವು ಮಿಗಿಲಾದುದು. ಅಂತೆಯೇ ಅದರ ಉಳಿಕೆಯಾದ ಇಂದಿನ ಹಂಪೆಯ ಹಿರಿಮೆ ಅವಿಸ್ಮರಣೀಯ, ಅಮರವಾಗಿದೆ.” ಎಂದು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

ಪುಸ್ತಕದ ‘ಹಕ್ಕಿನೋಟ’ ಅಧ್ಯಾಯದಲ್ಲಿ ಕಂಡು ಬಂದ ಸಾಲುಗಳು ನಿಮ್ಮ ಓದಿಗಾಗಿ… “ಹಂಪೆ! ಸರ್ವರು ಸಂದರ್ಶಿಸತಕ್ಕಂತಹ ಪುಣ್ಯಕ್ಷೇತ್ರ. ಅವಲೋಕಿಸಿ, ಚೈತನ್ಯ ಪಡೆದು, ಜೀವಮಾನದ ಉದ್ದಕ್ಕೂ ಮರೆಯಲಾರದ, ಚಿರಸ್ಮರಣಿಯ ಇತಿಹಾಸದ ಆಗರ. ಹಂಪೆ! ಪ್ರಕೃತಿ ಸಿರಿಯನ್ನು ವಿಪುಲವಾಗಿ ಹೊತ್ತುಕೊಂಡು, ನಿಸರ್ಗರಮಣೀಯವಾಗಿ ರಾಜಿಸುವ ರಮ್ಯ ಸ್ನಾನ, ಭೂದೇವಿಯ ಮಡಿಲಲ್ಲಿ ಹುಟ್ಟಿ ಬೆಳೆದ, ಮಹತ್ತಾದ ನಾಗರಿಕ ಪಟ್ಟಣ. ಒರಟು ಬಂಡೆಗಳ, ಕಾಡು ಮೇಡು, ಮೊರಡಿ ಬೆಟ್ಟಗಳ ಆವರಣದಲ್ಲಿ ನಿರ್ಮಾಣವಾದ, ಅದ್ಭುತ ವೈಭವಶಾಲಿ ಮಹಾನಗರ.

ಮಧ್ಯೆ, ಮಧ್ಯೆ, ಬೆಳ್ಳಿಯ ಬಳ್ಳಿಯಂತೆ ಬಳುಕುತ್ತ, ಮಿನುಗುತ್ತ, ಮಧುರ ಶೀತಲ ಜಲರಾಶಿಯನ್ನು ತುಂಬಿಕೊಂಡು ಪ್ರವಹಿಸುತ್ತಿರುವಳು ತುಂಗಭದ್ರೆ. ಈ ತಾಯಿ ತನ್ನ ಮಂದತ್ವರಿತ ಹರಿನೀರಿನಿಂದ ಕಲಶದಿಂದ ಸುಧೆಯನ್ನು ಸುರಿಸುವ ಸುರಲೋಕದ ಸುಂದರಿಯಂತೆ, ಕಣ್ಣು ಮನಸ್ಸುಗಳಿಗೆ ಹಬ್ಬವನ್ನು ಉಂಟು ಮಾಡುವಳು.

ಹಂಪೆ! ಎಲ್ಲಿ ನೋಡಿದರೂ ಗುಡಿ, ಗುಂಡಾರ, ಪ್ರಾಕಾರ, ಗೋಪುರಗಳಿಂದ ಹಬ್ಬಿಕೊಂಡ ವಿಸ್ತಾರವಾದ ಧರ್ಮಸ್ಥಳ. ಇವೆಲ್ಲಕ್ಕೂ ಮಿಗಿಲಾಗಿ ಧಾರ್ಮಿಕತೆಯ ಧ್ವಜವನ್ನೇ ಎತ್ತಿ ಮೆರೆಯಿಸುವಂತೆ ಶ್ರೀ ವಿರೂಪಾಕ್ಷ ದೇವಾಲಯದ ಉನ್ನತ ಗೋಪುರವು ಈ ದೇವನ ದಿವ್ಯತೆಯನ್ನು ಭವ್ಯತೆಯನ್ನು ಸಾರುತ್ತ ನಿಂತಿದೆ.

ಹಂಪೆ!ಹಾಳು ಹಂಪೆ!ಎಲ್ಲೆಲ್ಲಿಯೂ ಹಾಳುಬೀಳು, ಛಿನ್ನ, ಭಿನ್ನ, ನಿರ್ಜನ ದೇವಮಂದಿರಗಳು, ಮೂರ್ತಿ ವಿಗ್ರಹಗಳು, ಅರಮನೆ, ಅಂಗಡಿ ಬೀದಿಗಳು! ಇವು ಯಾತ್ರಿಕನಿಗೆ ಕಿವಿಕಚ್ಚಿ, ಕಣ್‌ ಕುಕ್ಕಿ, ಎದೆಮುಟ್ಟಿ ಹೇಳುವವು ನಾವು ಒಂದು ಮಹಾ ಮಹತ್ತಿನ ಮಹಾನಗರದ ಉಳಿಕೆಗಳು, ಮಹಾ ಸಾಮ್ರಾಜ್ಯದ ಮಹಾರಾಜಧಾನಿಯ ಅವಶೇಷಗಳು, ನಮ್ಮನ್ನು ಹಿಂದೆ ವಿಜಯ ನಗರವೆಂದು ಕರೆಯುತ್ತಿದ್ದರು ಎಂದು.

ಹಂಪೆ! ವಿಜಯನಗರ! ಆರುನೂರು ವರ್ಷಗಳ ಆಚೆ ಇಲ್ಲಿ ಎಂಥ ವಿಲಕ್ಷಣ, ವಿಸ್ಮಯಕಾರಕ ಮಹಾ ಘಟನೆಗಳು ಸಂಭವಿಸಿದವು! ಎಂಥ ಮಹನೀಯರು ಬಾಳಿ ಧನ್ಯರಾದರು. ತಪಸ್ವಿಗಳು, ಯೋಗಿಗಳು, ಚಕ್ರವರ್ತಿಗಳು, ಮಂತ್ರಿಗಳು, ಸೇನಾಪತಿಗಳು, ಮೇಧಾವಿಗಳು ಕವಿಗಳು, ಪುಣ್ಯಶಾಲಿಗಳು, ದೇವಮಾನವರು!

ಹಂಪೆ! ಇತಿಹಾಸದ ಭಂಡಾರ ! ಎಲ್ಲೆಲ್ಲಿಯೂ ಸಿಕ್ಕುವ ಶಿಲೆಯ ಮೇಲಿನ ಬರಹಗಳು, ಶಿಲ್ಪ ಕೃತಿಗಳು, ವರ್ಣಚಿತ್ರಗಳು, ವೈಭವಕಾಲದಲ್ಲಿ ಈ ರಾಜಧಾನಿಯನ್ನು ಕಣ್ಣಾರೆ ಕಂಡು ಇದರ ಹಿರಿಮೆಯನ್ನು ವರ್ಣಿಸಿದ ಈ ದೇಶದ, ದೇಶಾಂತರದ ಪ್ರವಾಸಿಗಳ ರಮ್ಯ ವೃತ್ತಾಂತಗಳು, ಇವೆಲ್ಲ ಆ ಕಾಲದ ಇದರ ಭವ್ಯ ಜೀವನವನ್ನು ಚಿತ್ರಿಸುತ್ತವೆ.”

ಹಂಪೆ ಕೃತಿಯಲ್ಲಿ ವಿರೂಪಾಕ್ಷ ಗುಡಿ, ಕಡಲೇಕಾಳು ಗಣೇಶ, ವಿಜಯ ವಿಠಲ ಗುಡಿ, ಹಜಾರ ರಾಮನಗುಡಿ, ಕೃಷ್ಣ ದೇವನ ಗುಡಿ, ಉಗ್ರ ನರಸಿಂಹ, ಅಚ್ಯುತ ರಾಯನ ಗುಡಿ, ರಾಜನ ಸಭಾಮಂದಿರ, ಕಮಲಮಂದಿರ, ಗಜಶಾಲೆ, ಪೇಟೆ ಬೀದಿ, ಮಸೀದಿ ಬಗೆಗೆಲ್ಲಾ ಮಾಹಿತಿಗಳಿವೆ. ಬರೇ ೫೨ ಪುಟಗಳ ಪುಟ್ಟ ಪುಸ್ತಕವಾದರೂ ಬಹಳಷ್ಟು ಮಾಹಿತಿಗಳನ್ನು ಒಳಗೊಂಡಿದೆ.