ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಕೈವಲ್ಯ ಉಪನಿಷತ್ತು ಶ್ರದ್ಧೆ ಪ್ರವಚನದಲ್ಲಿ ಹೇಳಿದ್ದನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಅಸ್ವಲಾಯನ ಮಹಾಗುರು. ಪರಮೇಶ್ಟಿಯನ್ನು ಭೇಟಿಯಾಗಿ ವಿಧೇಯನಾಗಿ ಕೋರುತ್ತಾನೆ. ಪರಮ ಜ್ಞಾನ ಅಂದರೆ ಬ್ರಹ್ಮ ಜ್ಞಾನ. ಅದನ್ನು ತಿಳಿಸಿಕೊಡುವಂತೆ ಬೇಡಿಕೊಳ್ಳುತ್ತಾನೆ. ಅಸ್ವಲಾಯನ ಪಂಡಿತ. ಗ್ರಂಥ ರಚಿಸಿದವನು. ಅವನ ಜ್ಞಾನದ ಹಸಿವು ಅಷ್ಟೇ ತೀವ್ರ. ಆ ಬ್ರಹ್ಮ ಜ್ಞಾನದ ಮಹತ್ವ ಆತನಿಗೆ ಗೊತ್ತು. ಅದು ಸಾಮಾನ್ಯ ವಿದ್ಯೆಯಲ್ಲ, ಶ್ರೇಷ್ಠ ವಿದ್ಯೆ. ಸಂತರು, ಋಷಿಗಳು ಆ ವಿದ್ಯೆಗಾಗಿ ಜೀವನ ಮುಡುಪಾಗಿ ಇಟ್ಟರು. ಆ ವಿದ್ಯೆಯನ್ನು ತಮ್ಮ ಮಾತುಗಳ ಮೂಲಕ ಜಗತ್ತಿನ ಮುಂದಿಟ್ಟರು. ಅಂತಹ ವಿದ್ಯೆಯನ್ನು ನನಗೆ ಕರುಣಿಸಬೇಕೆಂದು ಕೋರಿದ. ಏಕೆಂದರೆ ಆತ ಹೇಳುತ್ತಾನೆ, "ನನ್ನ ಮನಸ್ಸು ಹೊಲಸಾಗಿದೆ. ಜೀವನದಲ್ಲಿ ಅನೇಕ ಒಳ್ಳೆಯ ಕಾರ್ಯ ಮಾಡಿದ್ದೇನೆ. ಆದರೆ ಸಮಾಧಾನ ಸಿಗಲಿಲ್ಲ. ಮನಸ್ಸು ಶಾಂತಿ ಅನುಭವಿಸಲಿಲ್ಲ. ಅಂತಹ ಪರಮ ಶಾಂತಿ ಇಷ್ಟು ವರ್ಷ ದೊರಕಲಿಲ್ಲ. ಪರಮ ಸತ್ಯದ ದರ್ಶನ ಆಗದಿದ್ದರೆ ಶಾಂತಿ, ಸಮಾಧಾನ ಸಿಗುವುದಾದರೂ ಹೇಗೆ?. ಅದಕ್ಕಾಗಿ ಶ್ರೇಷ್ಠ ಜ್ಞಾನ ನೀಡಿ" ಎಂದು ಭಿನ್ನವಿಸಿದ. ಆಗ ಪರಮೇಶ್ಟಿ ಪರಮ ಗುರು ಉಪದೇಶ ಮಾಡುತ್ತಾನೆ. ಇಂತಹ ಶ್ರೇಷ್ಠ ಜ್ಞಾನ ಸ್ವೀಕರಿಸುವ ಪಾತ್ರೆ ಸ್ವಚ್ಛವಾಗಿರಬೇಕು. ಬಹಳ ಪವಿತ್ರವಾದ ಪದಾರ್ಥ ಹಿಡಿಯಬೇಕಾದರೆ ಪಾತ್ರೆ ಸ್ವಚ್ಛವಾಗಿರಬೇಕು. ನೀರು ಸ್ವಚ್ಛ. ಯಾವ ಬೊಗಸೆಯಿಂದ ನೀರು ಕುಡಿಯುತ್ತೇವೆಯೋ, ಆ ಬೊಗಸೆ ಸ್ವಚ್ಛ ಇರಬೇಕು. ಇದು ಜೀವನದ ಅಮೃತ ಜ್ಞಾನ. ಇದನ್ನು ಮಾತಿನ ಮೂಲಕ ನೀಡುತ್ತೇನೆ. ಅದನ್ನು ತುಂಬಿಕೊಳ್ಳುವ ಮನಸ್ಸು ಸ್ವಚ್ಛವಾಗಿರಬೇಕು. ಇಲ್ಲದೇ ಹೋದರೆ ಎಷ್ಟು ಒಳ್ಳೆಯ ನೀರಿದ್ದರೆ ಏನು?. ಕೈ ಹೊಲಸು ದುರ್ವಾಸನೆ ಇದ್ದರೆ ನೀರನ್ನು ಕೆಡಿಸಿಬಿಡುತ್ತದೆ. ಆಗ ನೀರಿನ ರುಚಿ ಅನುಭವಿಸಲು ಆಗುವುದಿಲ್ಲ. ಮನುಷ್ಯ ಅನುಭವಿಸುವುದು ಬಹಳ ಮುಖ್ಯ ಮಹತ್ವದ್ದು. ಜ್ಞಾನ ಮಹತ್ವದಲ್ಲ, ಅನುಭವಿಸುವುದು ಮಹತ್ವ. ಹೂಗಳು ಎಲ್ಲಿ ಬೆಳೆಯುತ್ತವೆ?. ಎಷ್ಟು ಬೆಳೆಯುತ್ತದೆ?. ಹೇಗಿದೆ?. ಅನ್ನೋ ಜ್ಞಾನ ಇರಬಹುದು. ಆದರೆ ಏನು ಮಾಡುವುದು?. ಒಂದು ದಿನ ಹೂ ತೋಟಕ್ಕೆ ಹೋಗಲಿಲ್ಲ. ಹೂಗಳನ್ನು ಕಣ್ಣಿನಿಂದ ನೋಡಲಿಲ್ಲ. ಮನಸ್ಸನ್ನು ಹೂವಿನ ಸೌಂದರ್ಯ, ಸುವಾಸನೆಯಿಂದ ತುಂಬಿಕೊಳ್ಳಲಿಲ್ಲ. ಅನುಭವಿಸಲೇ ಇಲ್ಲ. ಜ್ಞಾನ ಅನುಭವದಲ್ಲಿ ಕೊನೆ ಆಗಬೇಕು. ಜ್ಞಾನ ಪಕ್ವಗೊಳ್ಳುವುದು ಅನುಭವದಿಂದ. ಮಾಡೋದು ಎಷ್ಟು ಮಹತ್ವದ್ದು?. ತಿಳಿದುಕೊಳ್ಳೋದು ಎಷ್ಟು ಮಹತ್ವದ್ದು?. ಅದಕ್ಕಿಂತ 10 ಪಾಲು ಅನುಭವಿಸಬೇಕು. ನೋಡಿದಾಗ ಜ್ಞಾನ ಆಗುತ್ತದೆ. ಆ ಜ್ಞಾನದೊಂದಿಗೆ ಭಾವ (ಮನಸ್ಸು) ಬೆರೆಯದಿದ್ದರೆ ಅನುಭವ ಆಗುವುದಿಲ್ಲ.

ಉದಾಹರಣೆಗೆ ಒಬ್ಬ ಹಾಡುತ್ತಾನೆ ಅಂತ ಭಾವಿಸಿ. ನಾವು ಕುಳಿತು ಹೇಳುತ್ತಾ ಇರುತ್ತೇವೆ. ಹಾಡುಗಾರ ಹಾಡಿನಲ್ಲಿ ಮಗ್ನಾಗಿರುತ್ತಾನೆ. ನಾವು ಕೇಳುವವರು. ಎಲ್ಲಿ ತಪ್ಪು ಹಾಡುತ್ತಾನೆ ?.ಎಲ್ಲಿ ಸರಿ ಇದೆ?. ಹೀಗೆ ವಿಚಾರ ಮಾಡಿಕೊಳ್ಳುತ್ತಾ ಹೋದರೆ, ಜ್ಞಾನ ಆಗುತ್ತದೆ ವಿನಃ ಅನುಭವ ಆಗುವುದಿಲ್ಲ. ಅನುಭವ ಬೇರೆ. ಜ್ಞಾನ ಬೇರೆ. ಜ್ಞಾನ ಪರಿಪೂರ್ಣಗೊಳ್ಳುವುದು, ಸಾರ್ಥಕತೆ ಪಡೆಯುವುದು, ಅನುಭವದಲ್ಲಿ. ಆನಂದ ಪಡೆಯಬೇಕು ಮನುಷ್ಯ. ಆನಂದ ಪಡೆಯಬೇಕಾದರೆ ಜ್ಞಾನದೊಂದಿಗೆ ಮನಸ್ಸು ಕೂಡಬೇಕಾಗುತ್ತದೆ. ಭಾವ ಮಿಶ್ರಣ ಆಗಬೇಕು. ಭಾವದಲ್ಲಿ (ಮನಸ್ಸಿನಲ್ಲಿ) ತುಂಬಬೇಕಾಗುತ್ತದೆ. ಆಗ ಅನುಭವ. ನಾವು ಜಗತ್ತಿಗೆ ಬಂದಿದ್ದು ಏಕೆ? ಎಲ್ಲವನ್ನು ಅನುಭವಿಸಬೇಕು. ಒಬ್ಬ ಮಹರ್ಷಿ ಹೇಳುತ್ತಾನೆ. ನಾವಿಲ್ಲಿಗೆ ಬಂದಿದ್ದು ಏಕೆ? ಇನ್ನೇನು ಮಾಡುವುದು?. ಏನು ಮಾಡಬೇಕೊ ಅದೆಲ್ಲ ಇದೆ. ಬದುಕು ಶ್ರೀಮಂತ ಗೊಳಿಸಲು ಏನೇನು ಬೇಕು ಅದೆಲ್ಲ ಇದೆ. ನಾವೇನು ಮಾಡುವುದಿದೆ. ನಾವು ಅನುಭವಿಸುವುದು ಅಷ್ಟೇ.

ಸೂರ್ಯಪ್ರಕಾಶ ದಿನ ಬರುತ್ತದೆ. ಎಲ್ಲಾ ಕಡೆ ಹರಡುತ್ತದೆ. ಬರೀ ಬೆಳಕಲ್ಲ ಆ ಕಿರಣಗಳ ಮೂಲಕ ಬಣ್ಣ ಬಳಿಯುತ್ತಿದ್ದಾನೆ. (ವಸ್ತುವಿಗೆ ಬಣ್ಣವಿರಲ್ಲ, ಯಾವ ಬಣ್ಣ ಪ್ರತಿಫಲಿಸುತ್ತೋ ಆ ಬಣ್ಣ ಕಾಣುತ್ತದೆ). ನಾವು ಬಣ್ಣ ಬಳಿಯುವುದಲ್ಲ .ಇದ್ದುದ್ದನ್ನು ನೋಡಿ ಆನಂದ ಪಡುವುದು. ಸೂರ್ಯನ ಬೆಳಕೆ ಇಲ್ಲದಿದ್ದರೆ ಎಷ್ಟು ದೀಪ ಹಚ್ಚಿದರೇನು?. ಮದುವೆ ಮನೆಯಲ್ಲಿ ಮನೆ ತುಂಬಾ ದೀಪಾಲಂಕಾರ ಮಾಡುತ್ತೇವೆ. ಯಾರು ಆ ಕಡೆ ಲಕ್ಷ್ಯ ಕೊಡುವುದಿಲ್ಲ. ಎಷ್ಟು ಚಂದವಾಗಿ ಅಲಂಕಾರ ಮಾಡಿರುತ್ತಾರೆ! ಆದರೆ ನಮ್ಮ ಲಕ್ಷ್ಯ ಬೇರೆ ಕಡೆ. ನಾವು ನೋಡುತ್ತಿರುವುದು ಬೇರೆ ವಸ್ತುಗಳನ್ನು ವಿನಃ ಬೆಳಕನ್ನಲ್ಲ, ಬೆಳಕಿನ ವೈಭವವನ್ನಲ್ಲ. ಹಾಗೆ ಜಗತ್ತಿನ ವೈಭವ ಮರೆತು, ಕೇವಲ ಸಣ್ಣ ವಸ್ತುಗಳ ಮಧ್ಯೆ ಮನಸ್ಸು ಬೆರೆತು ಹೋಗಿಬಿಡುತ್ತದೆ. ಆ ಕ್ಷಣವೇ ಹೋಗಿಬಿಡುತ್ತದೆ. ಅನುಭವಿಸಬೇಕಾದ ಕ್ಷಣ ಹೋಗಿಬಿಡುತ್ತದೆ. ನಾವು ಜಗತ್ತಿನಲ್ಲಿ ಅನುಭಾವಿಯಾಗಬೇಕು. ಅನುಭವಕ್ಕಾಗಿಯೆ ಕಣ್ಣು, ಕಿವಿ, ಮೂಗು, ನಾಲಿಗೆ, ಮೈ, ಮನಸ್ಸು ಮತ್ತು ಬುದ್ದಿ ಎಲ್ಲ ಇರುವುದು. ಇಂತಹ ಸುಂದರ ಜಗತ್ತಿನಲ್ಲಿ ರಕ್ಷಿಸಲು, ಪೋಷಿಸಲು ಕೈ. ಅನುಭವಿಸಲು ದೇಹ ಮನ ಮತ್ತು ಇಂದ್ರಿಯ. ಮನಸ್ಸು ಬಿಟ್ಟು ಅನುಭವಿಸಲು ಆಗುವುದಿಲ್ಲ. 

ಮನಸ್ಸು ಭಾವನೆಗಳ ಪಾತ್ರೆ. ಭಾವ ಶುದ್ಧವಾಗಿತ್ತು ಅಂದರೆ ಅನುಭವ ತೀವ್ರವಾಗುತ್ತದೆ. ಅನುಭವಕ್ಕೆ ಆಳ ಬರುತ್ತದೆ. ಹಾಗೆ ಅನುಭವಿಸಬೇಕು. ವರ್ಡ್ಸ್ ವರ್ತ್ ಹೆಸರು ಕೇಳಿದ್ದೀರಿ. ಆತ ದ್ಯಾಪೋಡಿಲ್ಸ್ ಹೂವಿನ ಬಗ್ಗೆ ಕವನ ಬರೆದಿದ್ದಾನೆ. ಬಹಳ ದೊಡ್ಡ ಕವಿ. ಆತ ದಾರಿಯಲ್ಲಿ ಹೋಗುತ್ತಾ ಇರುತ್ತಾನೆ. ಗಾಳಿ ಬೀಸುತ್ತಾ ಇರುತ್ತದೆ. ಆಕಾಶದಲ್ಲಿ ಮೇಘಗಳು ತೇಲುತ್ತಾ ಇರುತ್ತವೆ. ವಾತಾವರಣ ಅಷ್ಟು ಅಪ್ಯಾಯಮಾನವಾಗಿರುತ್ತದೆ. ಇಂತಹ ವಾತಾವರಣದಲ್ಲಿ ದಾರಿಯ ಎರಡು ಬದಿಯಲ್ಲೂ ಡೆಪೋಡಿಲ್ಸ್ ಸಣ್ಣ ಹೂಗಳು ಬಳ್ಳಿಯೊಡನೆ ತಲೆದೂಗುತ್ತಿರುತ್ತವೆ. ಅದನ್ನು ನೋಡುತ್ತಾ ನೋಡುತ್ತಾ ಅದರಲ್ಲಿ ವರ್ಡ್ಸ್ ವರ್ತ್ ಮಗ್ನನಾದನು. ನಮಗೆ ಇಂತಹವು ಇದ್ದರೂ ಲಕ್ಷ್ಯ ಆ ಕಡೆ ಹೋಗುವುದಿಲ್ಲ. ನಮಗೆ ಸಾಮರ್ಥ್ಯ ಇಲ್ಲ ಅಂತ ಅಲ್ಲ. ನಾವು ಆಗಬಲ್ಲವಿ. ಅಷ್ಟೇ ಅಲ್ಲ ಈ ಜಗತ್ತನ್ನು ನೋಡುತ್ತಾ ನೋಡುತ್ತಾ ಮಹಾ ಅನುಭವಿಯಾಗಬಲ್ಲವಿ. ಆದರೆ ಮನಸ್ಸಿರಬೇಕು. ಯಾರಿಗೂ ಅಸಾಧ್ಯನೇ ಇಲ್ಲ. ಅವರಿಗೆ ಸಾಧ್ಯ ಇದೆ ಅಂದಾಗ ನಮಗೂ ಸಾಧ್ಯ ಇದೆ. ವರ್ಡ್ಸ್ ವರ್ತ್ ನೋಡುತ್ತಾ ನೋಡುತ್ತಾ ಹುಚ್ಚಾದ. ಮನಸ್ಸಿನಲ್ಲಿ ಅದು ತುಂಬಿತು. ಮನಸ್ಸಿನಲ್ಲಿ ಸೌಂದರ್ಯ, ಸುವಾಸನೆ ತುಂಬಿತ್ತು. ಮಾತುಗಳನ್ನಾಡಿದ. ಆ ಮಾತಿನಲ್ಲಿ ಸುವಾಸನೆ, ಹೂವಿನ ಸುವಾಸನೆ ಮಾತಿನಲ್ಲಿ ಬಂದಿತ್ತು. ಹೂವಿನ ಸೌಂದರ್ಯ ಮಾತಿನ ಶಬ್ದ ಶಬ್ದಗಳಲ್ಲಿ ತುಂಬಿತ್ತು. 

(ಇನ್ನೂ ಇದೆ)

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ