ನಾವು ದೃಷ್ಟಿಯಂತೆ ಸೃಷ್ಟಿ ಎನ್ನುತ್ತೇವೆ. ನಾವು ಹೇಗೆ ಬೇಕು ಹಾಗೆ ನೋಡುವುದಿಲ್ಲ. ವಿಶ್ವ ಇರುವಂತೆ ನೋಡಬೇಕು. ದೃಷ್ಟಿ ಪರಿವರ್ತನೆಯಾದರೆ ವಿಶ್ವವೇ ಸ್ವರ್ಗವಾಗುತ್ತದೆ. ದೃಷ್ಟಿ ಹೊಲಸಾದರೆ ಜಗತ್ತು ನರಕವಾಗುತ್ತದೆ. ಈ ಜಗತ್ತನ್ನು ಒಬ್ಬೊಬ್ಬ ಸಂತ ಒಂದೊಂದು ರೀತಿ ನೋಡಿದರು. ಒಬ್ಬರು ಈ ಜಗತ್ತು ಅನಿತ್ಯ ಅಂತ ನೋಡಿದರು. ಇನ್ನೊಬ್ಬರು ಇದು ಸತ್ಯ ಅಂತ ನೋಡಿದರು. ಮತ್ತೊಬ್ಬರು ಅತ್ಯದ್ಭುತ ಅಂತ ನೋಡಿದರು. ಇದೆಲ್ಲ ಮಾಯ ಅಂತ ನೋಡಿದವರಿದ್ದಾರೆ. ಇದೆಲ್ಲ ದಿವ್ಯ ಅಂತ ನೋಡಿದವರಿದ್ದಾರೆ. ಕೆಲವರು ಪವಿತ್ರ ಅಂತ ನೋಡಿದರು. ನೋಡುವುದನ್ನು ಕಲಿಯಬೇಕು. ಭಕ್ತನ ಮನಸ್ಸು ಮಧುರ ಇರುವುದರಿಂದ ಈ ಜಗತ್ತೆಲ್ಲ ಮಧುರವೇ, ದಿವ್ಯವೇ. ಈ ದೃಷ್ಟಿ ಇದ್ದರೆ ಮನುಷ್ಯನ ಬದುಕು ಜೇನುಮಯವಾಗುತ್ತದೆ. ಬದುಕು ಪರಮಾನಂದ ರೂಪವಾಗುತ್ತದೆ. ಕೆಲವರಿಗೆ ಇದು ಸಾಧ್ಯವಿಲ್ಲ. ಕಾರಣ ಮನಸ್ಸು ಕಹಿಯಾಗಿರುತ್ತದೆ. ಆ ಕಹಿಯನ್ನು ಗುರುತಿಸಿ ತೆಗೆದು ಹಾಕಿದರೆ ಮನಸ್ಸು ಸವಿಯಾಗುತ್ತದೆ.
ಈ ಹಿಂದೆ ಈ ಕಥೆ ಹೇಳಲಾಗಿತ್ತು. ಒಂದು ಇರುವೆ ತಲತಲಾಂತರದಿಂದ ಅದರ ಕುಟುಂಬ ಬೇವಿನ ಮರದಲ್ಲಿ ವಾಸವಾಗಿತ್ತು. ಅದರ ದೇಹ ಸಣ್ಣದಾಗಿತ್ತು. ಏಕೆಂದರೆ ತಿನ್ನುವುದಕ್ಕೆ ಕಹಿಬಿಟ್ಟರೆ ಬೇರೇನು ಇರಲಿಲ್ಲ. ಬೇವಿನ ಕಹಿ ಕುಡಿದು ಕುಡಿದು ಜಗತ್ ಎಂದರೆ ಕಹಿ ಅಂತ ತಿಳಿದುಕೊಂಡಿತ್ತು. ನೋಡುವುದು ಅದೇ, ರುಚಿ ನೋಡುವುದು ಅದೇ ಕಹಿ. ಅದರ ಮನಸ್ಸು ಕಹಿಯಾಗಿತ್ತು.
ಒಂದು ದಿನ ಮತ್ತೊಂದು ಸವಿ ಗಿಡದ ದಷ್ಟಪುಷ್ಟ ಇರುವೆ ಭೇಟಿಯಾಗಿ ಯಾಕೆ ಹೀಗೆ ಸೊರಗಿದೆಯಲ್ಲ? ಎಂದು ಕೇಳಿತು. ಆಗ ಬೇವಿನ ಮರದ ಇರುವೆ ಹೇಳಿತು "ಏನು ಮಾಡುವುದು ಹೇಳಿ, ಜಗತ್ತು ಹೀಗಿದೆ. ತಿಂದರೂ ಕಹಿ, ಊಟ ಮಾಡಿದರು ಕಹಿ, ನೋಡಿದರೂ ಕಹಿ, ಕೇಳಿದರೂ ಕಹಿ, ಜೀವನವೇ ಕಹಿ. ಇದರಿಂದ ಪುಷ್ಟ ಆಗುವುದು ಹೇಗೆ ಸಾಧ್ಯ?". ಆಗ ಸವಿ ಗಿಡದ ಇರುವೆ ಹೇಳಿತು"ಹಾಗಾದರೆ ನನ್ನ ಊರಿಗೆ ಬಾ ಅಲ್ಲಿ ಬರಿ ಸವಿ. ನೋಡು ನಾನು ಹೇಗಿದ್ದೀನಿ?." ಆಗ ಆ ಬೇವಿನ ಮರದ ಇರುವೆ ಹೇಳಿತು, "ಅದಕ್ಕೆ ಇಷ್ಟವಾಯಿತು. ಹೇಳು ಜಗತ್ತು ಸವಿಯಿದೆ ಏನು?". ಅಲ್ಲಿಯವರೆಗೆ ಜಗತ್ತು ಸವಿ ಇದೆ ಅಂತ ಗೊತ್ತೇ ಇರಲಿಲ್ಲ. ಆಗ ಸವಿ ಗಿಡದ ಇರುವೆ ಹೇಳಿತು, "ಬಾ ನನ್ನ ಜೊತೆ, ಅದ್ಭುತ ಇದೆ, ನೋಡು ನನ್ನ , ನಾ ಹೇಗಿದ್ದೀನಿ..?" ಅಂದಿತು. ಬಾ ಅಂತ ಆಮಂತ್ರಣ ನೀಡಿ ತನ್ನ ಜೊತೆ ತನ್ನ ಸವಿ ಗಿಡಕ್ಕೆ ಕರೆದುಕೊಂಡು ಹೋಯಿತು. ಆ ಸವಿ ಗಿಡ ಹೇಗಿತ್ತು ಅಂದರೆ ಅದರ ನೋಟ ಸವಿ, ರಸ ಸವಿ, ವಾಸನೆ ಸವಿ, ಅಂತಹ ಗಿಡದಲ್ಲಿ ವಾಸ ಮಾಡಿತ್ತು. ಸವಿ ಗಿಡದ ಇರುವೆ ಕೇಳಿತು, ಹೇಗಿದೆ ಅಂತ. ಆಗ ಬೇವಿನ ಗಿಡದ ಇರುವೆ ಹೇಳಿತು "ಇದುವೇ ಕಹಿ ಇದಿಯಲ್ಲ ಅಂದಿತು". ಸವಿ ಗಿಡದಲ್ಲಿ ಬಂದಿದೆ, ಕಹಿ ಅಂತ ಹೇಳುತ್ತಿದೆ. ಸವಿ ಗಿಡದ ಇರುವೆಗೆ ಆಶ್ಚರ್ಯವಾಯಿತು. ಕೇಳಿತು ಏನಾದರೂ ಬಾಯಲ್ಲಿ ಇಟ್ಟುಕೊಂಡು ಬಂದಿದ್ದೇನು?. ಆಗ ಬೇವಿನ ಗಿಡದ ಇರುವೆ ಹೇಳಿತು, "ಹೌದು. ದಾರಿಯಲ್ಲಿ ಹೋಗುವಾಗ ಬುತ್ತಿ ಇರಲಿ ಅಂತ ಇಟ್ಟುಕೊಂಡು ಬಂದಿದ್ದೇನೆ. ನಿನ್ನ ಮಾತು ಸುಳ್ಳಾದರೆ ಏನು ಮಾಡುವುದು ಅಂದಿತು". ಸವಿ ಗಿಡದ ಇರುವೆ ನೋಡಿತು, ಇಟ್ಟುಕೊಂಡು ಬಂದಿತ್ತು. ಆಗ ತೆಗೆದು ಬಿಸಾಡು ನಿನ್ನ ಬುತ್ತಿನ ಅಂದಿತು. ಆಗ ಬೇವಿನ ಗಿಡದ ಇರುವೆ ಬಾಯಲ್ಲಿದ್ದ ಬೇವಿನ ಕಡ್ಡಿಯನ್ನು ತೆಗೆದು ಬಿಸಾಕಿತು. ಆಗ ಬರಿ ಸವಿ ಸವಿ ಅನುಭವಿಸಿತು.
ನಮ್ಮ ಮನಸ್ಸು ಹಾಗೆ ಮನಸ್ಸು ಕಹಿ ಇತ್ತು ಅಂದರೆ ಜಗತ್ತೆಲ್ಲ ಕಹಿಯಾಗುತ್ತದೆ. ನಮ್ಮ ಮನಸ್ಸು ಸವಿಯಾಯ್ತು ಅಂದರೆ ಜಗತ್ತೆಲ್ಲ ಸವಿಯಾಗುತ್ತದೆ. ಇರುವೆ ಬೇರೆ ಯಾರು ಅಲ್ಲ. ಅದು ನಾವು. ನಾವು ಏನಾದರೂ ತಲೆಯಲ್ಲಿ ಕಹಿ ಹಾಕಿಕೊಂಡಿದ್ದರೆ, ಇವರೆಲ್ಲ ಕೆಟ್ಟವರು, ದೇಶಕೆಟ್ಟಿದೆ, ಜಗತ್ತು ಕೆಟ್ಟಿದೆ, ಮನುಷ್ಯ ಕೆಟ್ಟವನು, ಅಂತ ನೋಡುತ್ತೇವೆ. ಆಗ ಜಗತ್ತು ಕಹಿಯಾಗುತ್ತದೆ.
ಒಂದು ಪಾತರಗಿತ್ತಿ ಕೇಳಿ ಈ ಜಗತ್ತಿನಾಗ ಏನಿದೆ? ಅಂತ. ಅದಕ್ಕೇನು ಗೊತ್ತಿದೆ?. ಹೂ ಅಷ್ಟೇ ಗೊತ್ತಿದೆ. ಅದರ ದೃಷ್ಟಿಯಲ್ಲಿ ಜಗತ್ತು ಹೂ. ಆ ಬೇವಿನ ಮರದ ಇರುವೆಯ ದೃಷ್ಟಿಯಲ್ಲಿ ಕಹಿ. ಇನ್ನೊಂದು ಇರುವೆ ದೃಷ್ಟಿಯಲ್ಲಿ ಬರಿ ಸವಿ. ನಮ್ಮ ಮನಸ್ಸು ಹೇಗೆ ಇದೆ ಹಾಗೆ ಜಗತ್ತು ಕಾಣೋದಕ್ಕೆ ಶುರುವಾಗುತ್ತದೆ. ಆ ಮನಸ್ಸನ್ನು ಸುಂದರಗೊಳಿಸುವ ಶಾಸ್ತ್ರ ಆಧ್ಯಾತ್ಮ. ಆಧ್ಯಾತ್ಮ ಎಂದರೆ ಯಾವುದರಿಂದ ಜಗತ್ತು ಕೆಟ್ಟದಾಗಿ ಕಾಣಿಸುತ್ತದೆಯೋ, ಯಾವುದರಿಂದ ಬದುಕಿನ ವೈಭವ ನಾಶವಾಗುತ್ತದೆಯೋ, ಅಂತಹದನ್ನು ತೆಗೆದುಹಾಕಿ ಮನಸ್ಸನ್ನು ಸುಂದರಗೊಳಿಸುವುದು ಆಧ್ಯಾತ್ಮ. ಮನಸ್ಸನ್ನು ಸುಂದರ, ಸುಶಾಂತ ಮತ್ತು ಶ್ರೀಮಂತ ಗೊಳಿಸಬೇಕು. ಆಗ ಇರುವ ಜಗತ್ತು ಅದ್ಭುತವಾಗುತ್ತದೆ. ಇರುವ ಮನೆ ಅರಮನೆ. ಇರುವ ದೇಹ ಅಮೃತವಾಗುತ್ತದೆ. ಹೀಗೆ ಆಗಬೇಕಾದರೆ ಎದೆಯಲ್ಲಿ (ಮನಸ್ಸು) ಮಧುರ ಭಾವ ತುಂಬ ಬೇಕಾಗುತ್ತದೆ. ಆದರೆ ಇದಕ್ಕೆ ಅಡೆತಡೆ ಇದೆ. ಏನೇನನ್ನೊ ಕೇಳ್ತಿವಲ್ಲ ಅದೇ ಅಡೆತಡೆ. ಅಂತಹುದನ್ನು ಕೇಳದಿರುವುದೇ ಪರಿಹಾರ. ಅವು ಯಾವುವು?.
1. ವೈರಿ ಚರಿತ್ರೆ ಕೇಳಬಾರದು : ವೈರಿ ಸಂಗ ಮಾಡಿ, ವೈರಿ ಮಾತು ಕೇಳಿದರೆ, ವೈರತ್ವದ ಶಬ್ದ, ಚರಿತ್ರೆ ಕೇಳಿದರೆ, ಮನಸ್ಸು ವೈರತ್ವದಿಂದ ತುಂಬಿ ಹೋಗುತ್ತದೆ. ಆಗ ನೋಡಿದೆಡೆ ಎಲ್ಲೆಲ್ಲ ವೈರಿ ಕಾಣುತ್ತಾರೆ. ಚಂದ ಇರುವ ಮನೆಯನ್ನು ಕೆಡಿಸುವುದು ಕೆಲವರಿಗೆ ಸುಖ. ಉದಾಹರಣೆಗೆ. ನೀನು ಇನ್ನು ಮನೆಗೆ ಹೋಗಿಲ್ಲವೇ?. ಎಂದು ಒಬ್ಬ ಹೇಳಿದ. ಇಷ್ಟೇ ಸಾಕು. ಈತನಿಗೆ ಮನೆಯಲ್ಲಿ ಏನು ಆಗಿದೆ ಅಂತ. ವೈರಿ ಎಂದರೆ, ಯಾರು ನಮ್ಮ ಸಹಜ ಸುಂದರ ಜೀವನ ಕೆಡಿಸುತ್ತಾರೆ?, ಹಾಲಿನಂತ ಜೀವನದಲ್ಲಿ ವಿಷ ನೀಡುತ್ತಾರೆ? ಅಂತಹವರು ವೈರಿ. ಯಾರು ಸಂತೋಷ ತೆಗೆದು ಹಾಕಿ ಖಿನ್ನತೆ ಉಂಟಾಗುವಂತೆ ಮಾಡುತ್ತಾರೆ?, ಅವರು ವೈರಿ. ಯಾವುದರಿಂದ ಜೀವನ ಹಾಳಾಗುತ್ತದೆ? ಅದು ವೈರ ರೂಪ. ಇದರಿಂದ ಮನಸ್ಸಿನ ಮಧುರತೆ ನಾಶವಾಗುತ್ತದೆ. ವೈರಿಗಳ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಬಾರದು. ಸುಮ್ಮನೆ ನಿನ್ನ ಮುಖದಲ್ಲಿ ಕಳೆ ಇಲ್ಲ ಅಂದರು. ಇದನ್ನು ಕೇಳಿ ತನಗೇನು ಇಲ್ಲದೆ ಇದ್ದರೂ ವೈದ್ಯರ ಬಳಿ ಹೋದನು. ವೈದ್ಯರು ಇಡೀ ದೇಹ ತಪಾಸಣೆ ಮಾಡಿ, ಹಣ ಎಲ್ಲ ಖರ್ಚಾದ ಮೇಲೆ ಕಂಡು ಹಿಡಿದರು. ನಿನಗೇನು ಆಗಿಲ್ಲ ಅಂತ. ವಿರೋಧದ ಹಾನಿಕಾರಕ ಮಾತುಗಳನ್ನು ಕೇಳಬಾರದು. ಕೇಳಿದರು ಕೇಳದ ಹಾಗೆ ಇರಬೇಕು. ಅವರ ದೃಷ್ಟಿ ಯಾಕೆ?. ನಮ್ಮದನ್ನ ನಾವು ನೋಡುವುದು.
ಒಂದು ಘಟನೆ. ಒಬ್ಬ ಒಂದು ಸುಂದರ ಮನೆ ಕಟ್ಟಿಸಿದ್ದ. ಅಲ್ಲಿಗೆ ಒಬ್ಬ ಬಂದನು, ಆತ ಹೇಳಿದ. ಈ ಮನೆ ಅಲಕ್ಷಣ. ನೀನು ಮನೆಗೆ ಪ್ರವೇಶ ಮಾಡಿದ ಆರು ತಿಂಗಳಲ್ಲಿ ನಿಮ್ಮ ಮಗ ಸಾಯ್ತಾನೆ. ಎಲ್ಲಾ ಹಾಳಾಗುತ್ತದೆ ಎಂದು ಹೇಳಿ ಹೋದನು. ಈತ ಹೆದರಿಕೊಂಡು ಉದ್ಘಾಟನೆ ಮಾಡಲಿಲ್ಲ. ಆರು ತಿಂಗಳು ಮನೆ ಬಿಡಿಸಿದರು. ಆ ಬಳಿಕ ಭೂತ ಸಂಚಾರ ಮನೆಗಿದೆ ಎಂದು ಪ್ರಚಾರ ಮಾಡಿದರು. ಮನೆ ತೆಗೆದುಕೊಳ್ಳಲು ಯಾರು ಮುಂದೆ ಬರಲಿಲ್ಲ. ಈತನು ಕಟ್ಟಿಸಿದ ಮನೆಗೆ ಹೋಗುತ್ತಿಲ್ಲ. ಕೊನೆಗೆ ಮೊದಲು ಹೇಳಿದನಲ್ಲ ಅದೇ ವ್ಯಕ್ತಿ ಬಂದು ಏನಾದರೂ ಆದರೆ ನನಗೆ ಆಗಲಿ ಎಂದು. ಅತೀಕಡಿಮೆ ಬೆಲೆಗೆ ಆ ಮನೆ ಕೊಡುತ್ತೀರಿ ಅಂತ ಹೇಳಿ ಕೊಂಡು ಕೊಂಡನು. ಕೇಳಿದ ಒಂದು ಶಬ್ದ ಜೀವನವನ್ನೇ ಹಾಳು ಮಾಡುತ್ತದೆ. ವೈರಿ ಮಾತು ಕೇಳಬಾರದು. ಕೇಳಿದರೂ ತಲೆಗೆ ಹಾಕಿಕೊಳ್ಳಬಾರದು. ಹಾಕಿಕೊಂಡರು ತಲೆಯಲ್ಲಿ ಇಟ್ಟುಕೊಳ್ಳಬಾರದು. ಇಟ್ಟುಕೊಂಡರು ತಲೆ ತಾಪ ಮಾಡಿಕೊಳ್ಳಬಾರದು. ಏನಾಗುವುದಿಲ್ಲ. ಈ ಜಗತ್ತು ನಮ್ಮದಲ್ಲ. ಇದು ದೇವನ ಕಲಾ ರಚನೆ. ಇದು ಭಗವಂತನದು ಅಂತ ನೋಡಬೇಕು. ಕಹಿ ಮಾತುಗಳನ್ನು ತಲೆಗೆ ಹಾಕಿಕೊಳ್ಳಬಾರದು. ನೀನು ಒಳ್ಳೆಯವನಲ್ಲ ಎಂದು ಯಾರಾದರೂ ಹೇಳಿದರೆ, ನಾನೇನು ಮಾಡಿದ್ದೀನಿ ಅಂತ ಬೆನ್ನು ಬಿದ್ದು ಕೇಳಬಾರದು. ಆತ ಸೃಷ್ಟಿಸಿ ಬೇಕಾದ್ದನ್ನು ಮಾಡುತ್ತಾನೆ. ಯಾರ ಸಮೀಪ ಹೋದರೆ ಮನಸ್ಸು ಕಹಿಯಾಗುತ್ತದೆ?. ಅದನ್ನು ತಪ್ಪಿಸಬೇಕು. ನಮ್ಮ ಮನಸ್ಸು ಮಧುರ ಮಾಡಲು ಯಾವ ಮಾತು ನಮ್ಮ ಕಿವಿಗೆ ಬೀಳಬೇಕು, ಯಾವ ನೋಟ ನಮ್ಮ ಕಣ್ಣಿಗೆ ಕಾಣಬೇಕು, ಯಾವ ಭಾವ ನಮ್ಮ ಮನಸ್ಸಿನಲ್ಲಿ ಉಂಟಾಗಬೇಕು? ಅದನ್ನು ಮಾಡುವುದು. ದಿನ ಗಿಡ ಗಂಟಿಗಳನ್ನು ನೋಡಿದರೆ ಮನ ಸ್ವಚ್ಛವಾಗುತ್ತದೆ. ಕತ್ತಲೆಯಲ್ಲಿ ಕತ್ತಲನ್ನು ನೋಡದೆ, ಆಕಾಶ ನೋಡಿದರೆ ನಕ್ಷತ್ರ ಕಾಣುತ್ತದೆ. ಅದನ್ನು ನೋಡಿ ಆನಂದ ಪಡಬಹುದು.
2. ನಾಸ್ತಿಕ ಚರಿತ್ರೆ ಕೇಳಬಾರದು : ಯಾರ ಸಂಘ ಮಾಡಿದರೆ ಆತ್ಮವಿಶ್ವಾಸ ಹೋಗುತ್ತದೆ?. ಇದರಲ್ಲಿ ಏನಿದೆ?. ಹೂನಲ್ಲಿ ಏನಿದೆ?. ದೇವರೆಲ್ಲಿದ್ದಾನೆ?. ಇದೆಲ್ಲ ಹುಚ್ಚುತನ ಅನ್ನುತ್ತಾನೆ. ಆತನೇನೂ ತಿಳಿದಿಲ್ಲ. ಅಂತಹವರ ಚರಿತ್ರೆ ಕೇಳಬಾರದು. ಜಗತ್ತಿನಲ್ಲಿ ಸತ್ಯವಿಲ್ಲದಿದ್ದರೆ ಜಗತ್ತೇ ಇರುತ್ತಿರಲಿಲ್ಲ. ಮೂಲ ತತ್ವ ವಸ್ತು ಬೇಕಲ್ಲ. ಮೂಲತತ್ವವೇ ದೇವರು. ದೇವರಿಲ್ಲ ಅನ್ನುವುದು ನಾಸ್ತಿಕ ಚರಿತ್ರೆ. ಮನುಷ್ಯ ಆಶಾವಾದಿಯಾಗಿರಬೇಕು, ಶ್ರದ್ಧಾವಂತನಾಗಿರಬೇಕು, ನಮ್ಮಲ್ಲಿ ವಿಶ್ವಾಸವಿರಬೇಕು. ನಾನು ಅನುಭವಿಯಾಗಬಲ್ಲೆ, ನಾನು ಜಗತ್ತು ನೋಡಬಲ್ಲೆ, ಜಗತ್ತಿನಾದ್ಯಂತ ಮನಸ್ಸು ಹರಿಸಬಲ್ಲೆ, ವಿಶ್ವದಲ್ಲಿ ಬೆರೆತು ಹೋಗಬಲ್ಲೆ, ಎನ್ನುವ ಆತ್ಮವಿಶ್ವಾಸ ಇರಬೇಕು. ಆತ್ಮವಿಶ್ವಾಸ, ಶ್ರದ್ಧೆ ಕೆಡಿಸುವ ಮಾತು ಕೇಳಬಾರದು. ಒಂದು ಬೀಜ ಎತ್ತರದ ಹುಲ್ಲಿನ ನಡುವೆ ಬಿದ್ದಿತ್ತು. ಮಳೆ ಬಂತು ಆ ಬೀಜದಿಂದ ಅಂಕುರ ಹೊರ ಬಂದಿತ್ತು. ತೆಳು ಗಿಡವಾಗಿ ರೂಪಗೊಂಡಿತ್ತು, ಕೃಷವಾಗಿತ್ತು. ಹುಲ್ಲು, ಆ ಕೃಷ ಗಿಡ ನೋಡಿ ನೀನೇನು ಬದುಕುತ್ತೀಯ? ಅಂದಿತು. ಆಗ ಸಣ್ಣಗಿಡ ಹೇಳಿತು. ನಾನು ಬದುಕುತ್ತೀನಿ. ನನ್ನ ತಾಯಿ ಹೇಳಿದ್ದಾಳೆ "ನೀನು ಮುಗಿಲೆತ್ತರಕ್ಕೆ ಬೆಳೆಯುತ್ತಿ ಅಂತ". ನನ್ನ ತಾಯಿ ಮಾತಿನಲ್ಲಿ ಶ್ರದ್ಧೆ ಇದೆ. ನೀನು ಏನಾದರೂ ಹೇಳಿಕೋ ನಾನು ಮುಗಿಲೆತ್ತರಕ್ಕೆ ಬೆಳೆಯಬೇಕು. ಆ ಗಿಡಕ್ಕೆ ಆತ್ಮವಿಶ್ವಾಸ ಇತ್ತು. ಇವುಗಳ ಮಾತಿಗೆ ಕಿವಿ ಕೊಡಲಿಲ್ಲ. ಬೆಳೆದು ಬೆಳೆದು ಎತ್ತರವಾಯಿತು. ಅದು ಗಗನ ಮಲ್ಲಿಗೆ. ಗಗನ ಮಲ್ಲಿಗೆ ಹೂವು ಹುಲ್ಲಿನ ಮೇಲೆ ಬಿದ್ದಿರುತ್ತದೆ. ಬೆಳೆಯುವಾಗ ಆಸರೆ ನೀಡಿದೆ. ಎತ್ತರವಾದರೇನು? ನೀವು ನಮ್ಮ ಮಿತ್ರರು. ಅದಕ್ಕೆ ಹೂವು ಅಂತ ನೀಡುತ್ತದೆ.
ನಾವೆಲ್ಲಾ ಅದ್ಭುತ ಅನ್ನುವ ಭಾವ ಇರಬೇಕು. ಶ್ರದ್ಧೆ, ಆತ್ಮವಿಶ್ವಾಸ ಹಾಳು ಮಾಡೋ ಮಾತು ಕೇಳಬಾರದು. ಪ್ರತಿಯೊಬ್ಬರಲ್ಲೂ ಜ್ಞಾನಾಂಶ ಇದೆ. ಆ ಜ್ಞಾನಾಂಶ ಬೆಳೆಯಲು ಅಗತ್ಯವಾದದ್ದು ದೊರಕಬೇಕು. ಗುರು, ಪರಿಸರ ಮತ್ತು ಅಭ್ಯಾಸ ಬೇಕಾಗುತ್ತದೆ. ಅದೇ ಸತ್ಸಂಗ. ಪ್ರೋತ್ಸಾಹದಾಯಕವಲ್ಲದ ನಿಷೇದಾತ್ಮಕ ಮಾತು ಕೇಳಬಾರದು.
3. ಧನ ಚರಿತ್ರೆ ಕೇಳಬಾರದು : ಬರೀ ಹಣದ ಚರಿತ್ರೆ ಕೆಳಬಾರದು. ಅವರು ಹಾಗೆ ಶ್ರೀಮಂತರಾದರು, ಇವರು ಹೀಗೆ ಶ್ರೀಮಂತರಾದರು, ಶ್ರೀಮಂತರಾಗುವುದು ಮುಖ್ಯವಲ್ಲ, ಬದುಕುವುದು ಮುಖ್ಯ. ಅವರ ಅಷ್ಟು ದೊಡ್ಡ ಮನೆ ಕಟ್ಟಿದರು ಅನ್ನುವುದನ್ನು ತಲೆಗೆ ಹಾಕಿಕೊಂಡರೆ, ನಾವು ಹೇಗೆ ಬೆಳೆಯೋಕೆ ಆಗುತ್ತದೆ?. ಎತ್ತರದ ಮನೆ ಕಟ್ಟಿದ್ದಾರೆ. ಹೇಗೆ ನಿದ್ರೆ ಮಾಡುತ್ತಿದ್ದಾರೆ ಯೋಚನೆ ಮಾಡಿ. ದೊಡ್ಡಮನೆ ಕಟ್ಟಿದವ ತಾನಾಗೆ ಮಲಗಿದ್ದಾನೆ ಅಂತ ಇಲ್ಲ. ನಿದ್ರೆ ಬರಲು ಬಹಳ ಪ್ರಯತ್ನ ಮಾಡಬೇಕು. ಗುಡಿಸಲಿನ ಮನುಷ್ಯ ಎಲ್ಲಿ ಮಲಗಿದರೇನು? ಆರಾಮ ನಿದ್ರೆ. ಮನೆ ಮಹತ್ವದಲ್ಲ ನಿದ್ರೆ ಮಹತ್ವದ್ದು.
4. ಸುಖದ ಚರಿತ್ರೆ ಕೇಳಬಾರದು : ಅವರು ಇಂತಹುದರಲ್ಲಿ ತಿನ್ನುತ್ತಾರೆ. ಇಂತಹುದರಲ್ಲಿ ಕುಡಿಯುತ್ತಾರೆ. ಅವರ ಮನೆಯಲ್ಲಿ ಬಂಗಾರದ ಚಮಚಗಳಿವೆ. ಏನು ಅದ್ಭುತ ಅಂತ ವರ್ಣನೆ ಮಾಡಿ. ಏನ್ ನಮ್ಮ ಮನೆಯಲ್ಲಿ ಕೇವಲ ಮಡಿಕೆ ಕುಡಿಕೆ. ಏನು ತಿನ್ನುವುದು? ಮಡಿಕೆ, ಕುಡಿಕೆ ಮತ್ತು ರತ್ನವನ್ನು ತಿನ್ನುತ್ತಾರೆ ಏನು?. ಇಲ್ಲ. ತಿನ್ನೋದು ಅನ್ನ, ಕುಡಿಯುವುದು ನೀರು. ಸುಖ ಬಂಗಾರದ ಕಪ್ ನಿಂದಲ್ಲ. ಕಪ್ಪಿನೊಳಗಿರುವ ಹಾಲಿನದು. ನೀರಿನದು. ಮಣ್ಣಿನಲ್ಲಿ ಕುಡಿದರೂ ಅದೇ ಹಾಲು, ಬಂಗಾರದಲ್ಲೂ ಕುಡಿದರೂ ಅದೇ ಹಾಲು. ನೀರಿನಿಂದ ಸುಖ ಅಂತ ತಿಳಿದುಕೊಂಡರೆ ಆರಾಮವಾಗಿ ಇರಬಹುದು. ಸಾಮಾನುಗಳ ಮೂಲಕ ಸುಖ ಪಡಬಹುದು ಅನ್ನುವ ಮಾತು ಕೇಳಬಾರದು. ಆರೋಗ್ಯ ಇಲ್ಲ. ಊಟ ಮಾಡಿಲ್ಲ. ಒಳ್ಳೆ ಬಟ್ಟೆ ಹಾಕಿಕೊಂಡು ಸುಖಪಡಬೇಕು. ಬಟ್ಟೆಯಿಂದ ಸುಖ ಅಲ್ಲ. ಊಟದಿಂದ ಆರೋಗ್ಯದಿಂದ ಅನ್ನೋದು ಗೊತ್ತಿರಬೇಕು. ಸುಖ ಅನ್ನುವುದು ವಸ್ತುವಿನಲ್ಲಿ ಇಲ್ಲ. ಒಳ್ಳೆಯ ಆರೋಗ್ಯದಲ್ಲಿದೆ. ಹಾಗಾಗಿ ಸುಖದ ಚರಿತ್ರೆ ಕೇಳಬಾರದು.
-ಎಂ. ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!