ಈ ಪ್ರಸಂಗವನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಕಠೋಪನಿಷತ್ತು ಪ್ರವಚನದಲ್ಲಿ ಹೇಳಿದ್ದು. ಜಗತ್ತಿನ ತುಂಬಾ ಸುಂದರ ಸುಂದರ ವಸ್ತುಗಳಿವೆ. ಮಧುರತೆ ತುಂಬಿದೆ. ಸುವಾಸನೆ ಹರಡಿದೆ. ಇವುಗಳನ್ನು ಕೇಳಬೇಕು. ಕೇಳಿದ ಶಬ್ದಗಳು ಮರೆಯಾಗುತ್ತವೆ. ಹಾಗೆ ನೋಡಿದ ವಸ್ತು ಎಲ್ಲ ಮರೆಯಾಗುತ್ತದೆ. ಆದರೆ ನೋಡಿದ್ದು ಕೇಳಿದ್ದು ಮುಟ್ಟಿದ್ದು ಮೂಸಿದ್ದು ಭಾವದಲ್ಲಿ ಉಳಿದಿರುತ್ತದೆ.
ಮನಸ್ಸಿನಲ್ಲಿ ಉಳಿದಿರುವ ಸೌಂದರ್ಯ ಮಾಧುರ್ಯವನ್ನು ಆಸ್ವಾದಿಸಬೇಕು. ಹಾಗೆ ಉಪನಿಷತ್ ಶಬ್ದಗಳನ್ನು ಆಸ್ವಾದಿಸಬೇಕು. ಆ ಆಸ್ವಾದನೆಯಲ್ಲಿ ತನ್ಮಯನಾದರೆ ಅದೇ ದಿವ್ಯ ದರ್ಶನ. ನಮ್ಮ ದೇಹ ಮನಸ್ಸು ಕೈ ಎಷ್ಟೇ ಹೊಲಸಿರಬಹುದು ಆ ಹೊಲಸು ಎಲ್ಲಿಯವರೆಗೆ ಅಂದರೆ ತನ್ಮಯನಾಗುವವರೆಗೆ ಮಾತ್ರ. ಆ ತನ್ಮಯಾವಸ್ಥೆಯನ್ನು ಭಾವ ಸಮಾಧಿ ಎನ್ನುವರು. ಇದು ಸಹಜ ಜ್ಞಾನ ಭಾವ ಸಮಾಧಿ. ಈ ಸಮಾಧಿ ಅವಸ್ಥೆಯಲ್ಲಿ ಏನು ಅನುಭವಿಸುತ್ತೀವಿ ಅದು ಋಷಿಯ ಅನುಭವ. ಈ ಸಮಾಧಿ ಸ್ಥಿತಿಯಲ್ಲಿ ಏನನ್ನು ದರ್ಶನ ಮಾಡುತ್ತೀರಿ ಅದೇ ಆತ್ಮದರ್ಶನ, ಸತ್ಯದರ್ಶನ.
"ಈಶವಾಸ್ಯಮಿದಂ ಸರ್ವಂ ಯತ್ಕಿಂಚ್ ಜಗತ್ಯಾನ್ ಜಗತ್ ತೇನ ತೆಕ್ತೇನ ಬುಂಜಿತ: ಮಹಾಗೃದಂ ಕಸ್ಯಸ್ವಿದನಂ" ಜಗತ್ತೆಲ್ಲ ಈಶನಿಂದ ತುಂಬಿ ತುಂಬಿ ತುಳುಕುತ್ತಿದೆ. ಅಂದರೆ ಸತ್ಯದಿಂದ ಜಗತ್ತು ತುಂಬಿ ತುಂಬಿ ಹೋಗಿದೆ. ಆದ್ದರಿಂದ ನೀನು ಮಾಲಿಕ ಅಂತ ಭಾವಿಸಬೇಡ. ನಿನಗೆ ಏನು ದೊರುಕುತ್ತದೆ ಅದನ್ನು ತೃಪ್ತಿಯಿಂದ ಅನುಭವಿಸಬೇಕು. ಈ ಜಗತ್ತು ಅನುಭವ ಯೋಗ್ಯ ಜಗತ್ತು. ನಿಶ್ಚಿಂತವಾಗಿ ಅನುಭವಿಸುತ್ತಿರಬೇಕು. ಕಣ್ಣು ಬಿಡಬೇಡ. ಕಣ್ಣು ಬಿಟ್ಟದ್ದನ್ನೆಲ್ಲ ಬಯಸಬೇಡ. ಜಗತ್ತಿನಲ್ಲಿ ಬೇಕಾದಷ್ಟು ತುಂಬಿಕೊಂಡಿದೆ. ಯಾವುದಕ್ಕೆ ಏನೂ ಕೊರತೆ ಇಲ್ಲ ಈ ಭೂಮಂಡಲದೊಳಗೆ. ಅಷ್ಟು ಅದ್ಭುತವಾಗಿ ಈ ಜಗತ್ತು ಶ್ರೀಮಂತಗೊಂಡಿದೆ. ಬೆಳಕಿಗೆ ಕೊರತೆ ಇಲ್ಲ. ನೀರಿಗೆ ಕೊರತೆ ಇಲ್ಲ. ಆಹಾರಕ್ಕೆ ಕೊರತೆ ಇಲ್ಲ. ನೋಡುವುದಕ್ಕೆ ಕೇಳುವುದಕ್ಕೆ ಮುಟ್ಟುವುದಕ್ಕೆ ಮೂಸುವುದಕ್ಕೆ ರುಚಿಸುವುದಕ್ಕೆ ಕೊರತೆ ಇಲ್ಲ. ಆದರೆ ಮನುಷ್ಯನ ಆಸೆಯಿಂದ ಕೊರತೆಯಾಗಿದೆ. ಲಕ್ಷ ಲಕ್ಷ ಕೋಟಿ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳು ಲಕ್ಷ ಲಕ್ಷ ವರ್ಷಗಳಿಂದ ಬದುಕಿವೆ. ಅವು ಯಾವುವು ನನ್ನದು ಅಂತ ತಕರಾರು ಮಾಡಿಲ್ಲ. ಮನುಷ್ಯ ಇತ್ತೀಚೆಗೆ ಬಂದಿದ್ದು. ಸುಮಾರು 5 ಲಕ್ಷ ವರ್ಷವಿರಬಹುದು. ಮೀನು ಮನುಷ್ಯನಿಗಿಂತ ಮೊದಲು ಬಂದಿದ್ದು. ಮನುಷ್ಯ ಬಂದಾಗ ಈ ಜಗತ್ತು ಪ್ರಾಣಿ, ಪಕ್ಷಿ , ಗಿಡ ಮರಗಳಿಂದ ತುಂಬಿ ತುಳುಕುತ್ತಿತ್ತು. ಯಾವುದಕ್ಕೆ ಏನು ಕೊರತೆ ಇರಲಿಲ್ಲ. ಧಾರಾಕಾರ ಮಳೆ ಬೀಳುತ್ತಿತ್ತು. ಸ್ವಚ್ಛ ಗಾಳಿ ಬೀಸುತ್ತಿತ್ತು. ಮನುಷ್ಯ ಬಂದ ಮೇಲೆ ಏನು ಕಣ್ಣಿಗೆ ಕಂಡಿತು ಅದನ್ನು ತನ್ನದಾಗಿಸಬೇಕೆಂಬ ಹವ್ಯಾಸಕ್ಕೆ ಬಿದ್ದನು. ಅವನಿಗೆ ಅನುಭವ ಮಹತ್ವದಾಗಲಿಲ್ಲ. ಸಂಗ್ರಹ ಬಹಳ ಮಹತ್ವದಾಯಿತು. ಇದನ್ನು ಋಷಿ ಗುರ್ತಿಸಿದನು. ಮನುಷ್ಯ ಎರಡನ್ನೂ ಮಾಡಬಲ್ಲ. ಒಂದು ಸಂಗ್ರಹ, ಇನ್ನೊಂದು ಅನುಭವ. ಸಂಗ್ರಹಕ್ಕೆ ಮಹತ್ವ ಕೊಟ್ಟರೆ ಕಡಿಮೆ ಅನುಭವ ಬರುತ್ತದೆ. ಅನುಭವಕ್ಕೆ ಮಹತ್ವ ನೀಡಿದರೆ ಮನುಷ್ಯ ಜೀವನ ಶ್ರೀಮಂತವಾಗುತ್ತದೆ. ಸಂಗ್ರಹ ಬಡತನಕ್ಕೆ ಕಾರಣ. ಅನುಭವ ಶ್ರೀಮಂತಿಕೆಗೆ ಕಾರಣ.
ಸಂಗ್ರಹದ ಬಯಕೆ ಹೃದಯ ದಾರಿದ್ರದ ಲಕ್ಷಣ. ದೇಹ, ಕೈ, ಮನಸ್ಸು ಬಳಸಿ ದುಡಿಯುವುದು. ದೊರೆತಿದ್ದರಲ್ಲಿ ತೃಪ್ತಿಯಿಂದ ಬದುಕುವುದು. ಸ್ವಲ್ಪ ಸಂಗ್ರಹ, ಸುಂದರ ಅನುಭವ. ಅನುಭವಕ್ಕಾಗಿ ಸಂಗ್ರಹ, ಸಂಗ್ರಹಕ್ಕಾಗಿ ಸಂಗ್ರಹ ಅಲ್ಲ. ಒಂದು ಕೈಯಲ್ಲಿ ವಸ್ತ್ರ ಇದೆ. ಇದು ಕೈ ಒರೆಸಲು ಕರವಸ್ತ್ರ ವಿನಃ ಬಜಾರ್ ನಲ್ಲಿ ಕರವಸ್ತ್ರಗಳು ಬಹಳ ಇವೆ ಅಂತ ಸಂಗ್ರಹಿಸುವುದಕ್ಕಲ್ಲ. ನೂರಾರು ಕರ ವಸ್ತ್ರಗಳನ್ನು ತೆಗೆದುಕೊಂಡು ಏನು ಮಾಡವುದು?. ಯಾವ ವಸ್ತು ಅನುಭವಿಸುವುದಕ್ಕೆ ಆಗುವುದಿಲ್ಲ. ಅನುಭವಿಸದ ವಸ್ತು ಇದ್ದರೇನು ಬಿಟ್ಟರೇನು?. ಮನುಷ್ಯನ ಮನಸ್ಸು ಸಂಗ್ರಹದತ್ತ ವಾಲಿತು. ಅನುಭವ ಹೆಚ್ಚು ಇರಬೇಕು, ಒಂದಷ್ಟು ಸಂಗ್ರಹ ಇರಬೇಕು. ಸಮನಾಗಿ ಸಾಗಿದರೆ ತೂಕದ ಜೀವನ ಎನ್ನುವರು.
ಹಳ ಆಸೆ ಮಾಡಬಾರದು. ಮಹಾತ್ಮ ಗಾಂಧಿ ಹೇಳಿದ್ದು. ನಮ್ಮ ಅವಶ್ಯಕತೆ ಪೂರೈಸುವಷ್ಟು ಜಗತ್ತಿನಲ್ಲಿದೆ. ಆದರೆ ಲೋಭದ ಹೃದಯಕ್ಕೆ ಸಾಕಾಗುವಷ್ಟು ಇಲ್ಲ. ಹಂಚಿಕೊಂಡು ಬದುಕುವುದಾದರೆ ಬೇಕಾದಷ್ಟು ಇದೆ. ಒಬ್ಬ ಮಹಾರಾಜ ಎತ್ತರವಾದ ಸ್ತಂಭ ಮಾಡಿದ. ಸುಮಾರು 100 ಮೀಟರ್ ನಷ್ಟು ಎತ್ತರ ನಿರ್ಮಿಸಿದನು. ಅದರ ಕೆಳಗೆ ಬರೆದ. ಒಂದೊಂದು ಮೀಟರ್ ಗೆ ಗುರುತು ಮಾಡಿದ್ದರು. ಬಹಳ ನಯವಾದ ಕಂಬ ಅಂದರೆ ಜಾರುತ್ತಿತ್ತು. ಅದರ ಕೆಳಗೆ ಬೋರ್ಡು ಹಾಕಿಸಿದ. ಯಾರು ಎಷ್ಟು ಎತ್ತರ ಕಂಬ ಏರುತ್ತಾರೆ, ಅವರು ಏರಿದ ಎತ್ತರಕ್ಕೆ ಇಷ್ಟು ಹಣ ನೀಡುವುದಾಗಿ ಬರೆಸಿದ್ದನು. ಆತ ಏತಕ್ಕಾಗಿ ಬರೆಸಿದ್ದ ಅಂದರೆ ಆತನ ಭಂಡಾರದಲ್ಲಿ ಸಂಪತ್ತಿತ್ತು. ಅವಶ್ಯಕತೆ ಇದ್ದವರು ಬಂದು ಮನವಿ ಮಾಡಿ ಎಂದು ಜಾಹಿರಾತು ನೀಡಿದ್ದನು.
ಆಗ ಊರಿನ ಮನೆಯಲ್ಲಿ ಯಾರು ಇರಲಿಲ್ಲ. ಎಲ್ಲರೂ ಧಾವಿಸಿ ಬಂದಿದ್ದರು. ಆಗ ರಾಜ ಚಿಂತಿಸಿದ. ನಮ್ಮ ಊರು ಭಿಕ್ಷುಕರ ಊರಾಗಿದೆಯಲ್ಲ ಎಂದು. ಈ ಊರಿನ ಜನರನ್ನು ಕೆಲಸಕ್ಕೆ ತೊಡಗಿಸಬೇಕೆಂದು ಚಿಂತಿಸಿದನು. ಅದಕ್ಕಾಗಿ ಈ ಏರ್ಪಾಟು ಮಾಡಿದ್ದನು. ಕನಿಷ್ಠ ಏರಲಾದರೂ ಏರಲಿ ಭಿಕ್ಷುಕರಾಗಬಾರದು ಎಂದು. ಎಲ್ಲರೂ ಬಂದರು ನೋಡಿದರು. ಹತ್ತಿ ಜಾರಿ ಕೈಕಾಲು ಮುರಿದುಕೊಳ್ಳುವುದಕ್ಕಿಂತ ಇರುವುದರಲ್ಲಿ ನೆಮ್ಮದಿಯಾಗಿ ಇರೋಣ ಎಂದು ವಾಪಸ್ ಹೋದರು.
ಇದರ ಅರ್ಥ... ಕಂಡದ್ದಕ್ಕೆ ಆಸೆ ಪಡಬಾರದು. ಅನುಭವಿಸಲು ಯಾರದ್ದೂ ತಕರಾರು ಇಲ್ಲ. ಹೆಸರಿಗೆ ಮಾಡಿಕೊಳ್ಳಲು ತಕರಾರು. ನಮ್ಮನ್ನು ಶ್ರೀಮಂತ ಮಾಡುವುದು ಅನುಭವ ಅಂದಮೇಲೆ ನಾವು ಅನುಭವಕ್ಕೆ ಪ್ರಾಧ್ಯಾನತೆ ನೀಡೋಣ ಅಲ್ಲವೇ?
-ಎಂ. ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!