ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಕಠೋಪನಿಷತ್ತಿನ ಪ್ರವಚನದಲ್ಲಿ ಹೇಳಿದ್ದು. ಉದ್ದಾಲಕನು ವಿಶ್ವಜಿತ್ ಯಾಗ ಮಾಡುವಾಗ ನೀಡಿದ ವಯಸ್ಸಾದ ಮುದಿ ದನಗಳ ದಾನದಿಂದ ಬೇಸತ್ತ ನಚಿಕೇತ ತಂದೆಗೆ ಹೇಳುತ್ತಾನೆ. ನಿನ್ನ ಪ್ರೀತಿಯ ವಸ್ತು ನಾನು. ವಿಶ್ವಜಿತ್ ಯಾಗದಲ್ಲಿ ಪ್ರಿಯವಾದದನ್ನೇ ನೀಡಬೇಕು. ನನ್ನನ್ನು ಯಾರಿಗೆ ದಾನ ನೀಡುತ್ತಿ ಎಂದು ಪದೇ ಪದೇ ಕೇಳಿದಾಗ, ಕೋಪಗೊಂಡ ಉದ್ದಾಲಕನು, ಯಮನಿಗೆ ನೀಡುತ್ತೇನೆ ಎಂದನು. ತಂದೆಯ ಮಾತಿನಂತೆ ಯಮನ ಬಳಿಗೆ ಬರುತ್ತಾನೆ. ಯಮ ಮನೆಯಲ್ಲಿ ಇರುವುದಿಲ್ಲ. ಮೂರು ದಿನದ ನಂತರ ಬರುತ್ತಾನೆ. ನಚಿಕೇತ ಮನೆಯ ಹೊರಗೆ ಕಾಯುತ್ತಿರುತ್ತಾನೆ. ಈತ ಬಾಲಕ. ಈತನ ಶ್ರದ್ಧೆ ನಿಷ್ಠೆ ಮೆಚ್ಚಿ 3 ವರ ಕೊಡುತ್ತೇನೆ ಕೇಳು ಎಂದು ಯಮ ಹೇಳಿದ. ಒಂದನೆಯ ವರ ನಾನು ವಾಪಸು ಹೋದಾಗ ತಂದೆ ಶಾಂತನಾಗಿ ಸಮಾಧಾನ ಚಿತ್ತನಾಗಿ ಇರಬೇಕು. ಅದರಲ್ಲಿ ಎರಡನೇ ವರವೇ ಅಗ್ನಿವಿದ್ಯೆ.
ವಿಶ್ವದಲ್ಲಿ ಸುಖ-ದುಃಖ, ರೋಗ, ಸಾವು, ಪ್ರಸಂಶೆ, ಅವಮಾನ, ನೋವು ನಲಿವು ಎಲ್ಲವೂ ಇರುತ್ತದೆ. ಇವುಗಳ ಮಧ್ಯೆ ಹೇಗೆ ಸಂತೋಷದಿಂದ, ಶಾಂತಿ ಸಮಾಧಾನದಿಂದ ಬಾಳಬೇಕು ಎಂದು ನಚಿಕೇತ ಯಮನನ್ನು ಪ್ರಶ್ನಿಸುತ್ತಾನೆ. ಇದುವರೆಗೂ ಯಾರೂ ಪ್ರಶ್ನಿಸಿರುವುದಿಲ್ಲ. ನಚಿಕೇತ ಮೊದಲ ಬಾರಿಗೆ ಪ್ರಶ್ನಿಸಿ ವರ ಪಡೆದಿದ್ದರಿಂದ ಯಮನೆ ಹೇಳುತ್ತಾನೆ, ಇದು ನಚಿಕೇತಾಗ್ನಿ ಎಂದು ಹೆಸರಾಗಲಿ ಎಂದು. ಇದರಲ್ಲಿ ಮೂರು ಸಂಗತಿಗಳು ಒಳಗೊಂಡಿದೆ. ಇದನ್ನು ಅನುಷ್ಠಾನಕ್ಕೆ ತಂದರೆ ಮರಣದ ಸ್ಪರ್ಶ ಕೂಡ ಆಗುವುದಿಲ್ಲ. ಇದನ್ನು ತನ್ಮಯವಾಗಿ ಕೇಳಬೇಕು. ಕೇಳಿದ್ದನ್ನೆಲ್ಲ ಮನಸ್ಸಿನಲ್ಲಿ ತುಂಬಿಕೊಳ್ಳಬೇಕು. ಮನಸ್ಸಿನಲ್ಲಿ ತುಂಬಾ ಬೇಕಾದರೆ ಅದನ್ನು ಮತ್ತೆ ಮತ್ತೆ ಮೆಲುಕು ಹಾಕಬೇಕು. ಇದನ್ನು ಬಳಕೆಗೆ ತರಬೇಕು. ಅಂದರೆ ಅನುಷ್ಠಾನ ಮಾಡಬೇಕು. ಭಯ, ಆತಂಕ, ದುಃಖ ಇದರ ಬಂಧನ ಏನು ಮನಸ್ಸಿನಲ್ಲಿ ಇರುತ್ತದೆ ಅದು ಮುಕ್ತವಾಗುತ್ತದೆ. ಶೋಕ ಮುಕ್ತನಾಗಿ ಸಂತೋಷದಿಂದ ಬಾಳುತ್ತಾನೆ. ಸ್ವರ್ಗದ ಅನುಭವವಾಗುತ್ತದೆ. ಸ್ವರ್ಗ ಎಂದರೆ ಸಂತೋಷ.
1ನೇ ಸಂಗತಿ : ದೇಹ ಬಿಡುವವರೆಗೆ, ಕಟ್ಟ ಕಡೆಯವರೆಗೆ, ದ್ವಂದ್ವದಿಂದ ಕೂಡಿದ ಜಗತ್ತಿನೊಳಗೆ ತನ್ನ ಕೆಲಸ ಮಾಡಿಕೊಳ್ಳುತ್ತಾ, ಮಾಡಿಕೊಳ್ಳುತ್ತಾ ಯಾವ ಕಡೆಗೂ ಲಕ್ಷ್ಯ ವಹಿಸದೆ ಬಾಳಬೇಕು. ತನ್ನ ಮಾರ್ಗದಲ್ಲಿ ತಾನಿರಬೇಕು. ತನ್ನ ಸಾಧನೆಯಲ್ಲಿ ತಾನೇ ಇರಬೇಕು. ಆ ಕಾರ್ಯದಲ್ಲಿ ತನ್ಮಯನಾಗಿರಬೇಕು. ತಾನು ಏನು ಗಳಿಸಬೇಕು ಅಂತ ಬಯಸುತ್ತಾನೆ? ಆ ಮಾರ್ಗದಲ್ಲಿ ಮಗ್ನನಾಗಿರಬೇಕು. ಒಬ್ಬ ಅಧ್ಯಾಪಕನಿದ್ದರೆ ಅತ್ಯಂತ ಶ್ರೇಷ್ಠ ಪ್ರಾಮಾಣಿಕ ಅಧ್ಯಾಪಕನಿರಬೇಕು. ಕೃಷಿಕನಾಗಿದ್ದರೆ ಶೇಕಡ ನೂರರಷ್ಟು ಕೃಷಿಕನಾಗಿರಬೇಕು. ಇಂತಹುದರಲ್ಲಿ ಕಷ್ಟಗಳು ಬರುತ್ತವೆ. ಆ ಕಷ್ಟಗಳ ಕಡೆ ಲಕ್ಷ್ಯ ಕೊಡದೆ ಉಪೇಕ್ಷೆ ಮಾಡಬೇಕು. ಯಾಕೆ?. ನಾವು ಬಾಳೋದು, ಬದುಕೋದು ಮತ್ತು ಸಾಧನೆ ಮಾಡುವುದು ನಮ್ಮ ಹಿತಕ್ಕಾಗಿ. ಹಿತವೇ ನಾಶವಾಗುವಂತಹ ಘಟನೆ ನಡೆಯುತ್ತಿತ್ತು ಅಂದರೆ ಅವುಗಳತ್ತ ಬಹಳ ಲಕ್ಷ್ಯ ಕೊಡಬೇಕಾಗಿಲ್ಲ.
ಹೂ ಬೇಕಾದಾಗ ಸ್ವಲ್ಪ ಮುಳ್ಳು ಚುಚ್ಚುತ್ತದೆ. ಇದು ಜಗತ್ತಿನಲ್ಲಿ ಇರುವುದೇ. ಜಗತ್ತಿನಲ್ಲಿ ಬದುಕುತ್ತೇವೆ ಅಂದಾಗ ಏರು ಇಳಿವು ಇರುತ್ತದೆ. ಎಲ್ಲಿ ಸಮ ಇರುತ್ತದೆ?. ಏರಬೇಕಾಗುತ್ತದೆ, ಇಳಿಯಬೇಕಾಗುತ್ತದೆ ಜೀವನ ಅಂದರೆ ಏರಳಿತ. ನಮ್ಮ ದೇಹವೇ ಏರಳಿತ. ನಮ್ಮ ಮನಸ್ಸು ಏರಿಳಿತ. ನಮ್ಮ ಬುದ್ಧಿಯು ಹಾಗೆ ಏರಿಳಿತ. ನಮ್ಮ ಹತ್ತಿರ ಏನೇನು ಇದೆ ಅದು ಒಮ್ಮೆ ಹೆಚ್ಚಾಗುತ್ತದೆ ಒಮ್ಮೆ ಕಡಿಮೆಯಾಗುತ್ತದೆ. ಇದು ಅಕ್ಷಯವಲ್ಲ ಕ್ಷಯ. ಅದು ಚಂದ್ರನ ಬೆಳಕಿದ್ದಂತೆ. ಚಂದ್ರ ಒಮ್ಮೆ ಬೆಳೆಯುತ್ತಾ ಬೆಳೆಯುತ್ತಾ ಹೋಗುತ್ತಾನೆ. ಪೂರ್ಣ ಬೆಳೆಯುತ್ತಾನೆ. ಆದರೆ ಹಾಗೆ ಇರುವುದಿಲ್ಲ. ಮತ್ತೆ ಕಡಿಮೆಯಾಗುತ್ತಾ, ಕಡಿಮೆಯಾಗುತ್ತಾ ಬರುತ್ತಾನೆ. ಪೂರ್ಣ ಕಡಿಮೆಯಾಗುತ್ತದೆ. ಆದರೆ ಅದು ಹಾಗೆ ಇರುವುದಿಲ್ಲ. ನಮ್ಮ ಜೀವನವು ಹಾಗೆ. 50 ವರ್ಷ ಏರುತ್ತಾ ಹೋಗುತ್ತದೆ. ಆಮೇಲೆ ಇಳಿಯುತ್ತಾ ಬರುತ್ತದೆ. ಆಮೇಲೆ ಇಲ್ಲದಂತೆ ಆಗುತ್ತದೆ. ಇದು ಆಗುವುದೇ. ಇದು ಆಗದಂತೆ ಮಾಡಲು ಸಾಧ್ಯವಿಲ್ಲ. ಯಾಕೆ?. ಜಗತ್ತೆ ಬದಲಾಗುವಾಗ ನಾವು ಬದಲಾಗದೇ ಇರಲು ಸಾಧ್ಯವಿಲ್ಲ.
ನಾನೇ ಬದಲಾಗುವಾಗ ಉಳಿದವರು ಬದಲಾಗಬಾರದೆಂದು ಭಾವಿಸಬಾರದು. ಜೀವನ ಜೋಕಾಲಿಯಂತೆ. ಹಿಂದೆ ಮುಂದೆ ಮೇಲೆ ಕೆಳಗೆ ಹೋಗುತ್ತದೆ. ಇದೆಲ್ಲ ಇರುವುದೇ. ಆದುದರಿಂದ ಇಷ್ಟವಿಲ್ಲದ ಸಂಗತಿ ಉಪೇಕ್ಷೆ ಮಾಡಬೇಕು. ಮೌನವಾಗಿ ತಡೆದುಕೊಳ್ಳಬೇಕು. ಸಹನೆ ಇರಬೇಕು. ನಾವು ನಮ್ಮ ಕೆಲಸದಲ್ಲಿ ಮಗ್ನವಾಗುವುದರಿಂದ ಅದು ತನ್ನಷ್ಟಕ್ಕೆ ತಾನೇ ಸಹನವಾಗಬೇಕು. ಬದುಕಿನ ಕೆಲಸದಲ್ಲಿ ತನ್ಮಯನಾಗಬೇಕು. ಹರಿದಾಸ ಎನ್ನುವ ಶ್ರೇಷ್ಠ ಸಂಗೀತಜ್ಞ ಇದ್ದನು. ಈತ ಭಾರತದ ಸಂಗೀತ ತಜ್ಞರಲ್ಲಿ ಇವನೊಬ್ಬನು. ಈತ ತಾನ್ಸೇನನ ಗುರು. ಈತನನ್ನು ಕೆಲವರು ಬಯ್ಯುತ್ತಿದ್ದರು. ಹರಿದಾಸರು ಊರಿನ ಆಚೆ ಕಾಡಿನ ಅಂಚಿನಲ್ಲಿ ಗುಡಿಸಲು ಹಾಕಿಕೊಂಡು ಹಾಡುತ್ತಿದ್ದನು. ಅವನ ಜೀವನವೇ ಒಂದು ಹಾಡಾಗಿತ್ತು.
ಹರಿದಾಸ ಹಾಡುತ್ತಿದ್ದರೆ ಯಮುನೇ ಕುಣಿಯುತಿದ್ದಳು ಅನ್ನುತ್ತಾರೆ. ಇಂತಹ ಹರಿದಾಸನನ್ನು ಕೆಲವರು ವಿರೋಧಿಸುತ್ತಿದ್ದರು. ವಿರೋಧಿಗಳು ಒಂದು ದಿನ ಹರಿದಾಸನನ್ನು ಹೊಡೆದು ನೀರಿಗೆ ಹಾಕಿದರು. ಹರಿದಾಸರು ಪ್ರಜ್ಞೆ ತಪ್ಪಿ ತೇಲುತ್ತಾ ತೇಲುತ್ತಾ ಬಂದು ದಂಡೆಗೆ ಮುಟ್ಟಿದರು. ಎಚ್ಚರ ಆದಾಗ ಭೂಮಿಯ ಮೇಲೆ ಇದ್ದರು. ಹೊಡೆದವರು ಹೊರಟು ಹೋಗಿದ್ದರು. ಈ ವಿಚಾರ ತಿಳಿದು ಬಂದು ಅವರ ಶಿಷ್ಯಂದಿರು ಉಪಚಾರ ಮಾಡುತ್ತಿದ್ದರು. ಹರಿದಾಸರು ಎಚ್ಚರವಾದ ಬಳಿಕ ಹಾಡಲು ಶುರು ಮಾಡಿದರು. ಯಾರು ಹೊಡೆದರು ಅಂತ ಅಲ್ಲ. ಎಲ್ಲಿ ನೀರಿಗೆ ಹಾಕಿದರೂ ಅಂತ ಅಲ್ಲ. ನೀವೇನು ಮಾಡುತ್ತಿದ್ದೀರಿ ಅಂತ ಕೇಳಿಲ್ಲ. ಹಾಡೋದಕ್ಕೆ ಶುರು ಮಾಡಿದರು. ಅವರ ತಲೆಯಲ್ಲಿ ಹಾಡು ಬಿಟ್ಟರೆ ಬೇರೇನು ಇರಲಿಲ್ಲ. ಆಗ ಶಿಷ್ಯರು ಹರಿದಾಸರಿಗೆ ನಡೆದ ಘಟನೆ ಹೇಳಿದರು. ಆಗ ಹರಿದಾಸರು ಹೇಳಿದರು "ಏ ಕೇಳಿ ಈ ಹಾಡು ಹಾಡುತ್ತೀನಿ ಕೇಳಿ. ಇದು ಸುಂದರ ಹಾಡು. ಕೇಳಿ. ಇದು ಹೊಸ ಹಾಡು. ಹೊಸ ರಾಗ. ಅದ್ಭುತ. ಕೃಷ್ಣ ಕುಣಿಯಬೇಕು ಹಾಗೆ ಹಾಡುತ್ತೀನಿ" ಅಂದರು. ಹರಿದಾಸರಿಗೆ ಕೃಷ್ಣ ಮಹತ್ವದ್ದು, ಹಾಡು ಮಹತ್ವದ್ದು. ನಮಗೆ ಬೈದವರು ಮಹತ್ವದ್ದು. ಹೊಡೆದವರು ಮಹತ್ವದ್ದು. ನಾವು ಜೀವನದಲ್ಲಿ ಯಾವುದಕ್ಕೆ ಮಹತ್ವ ಕೊಡುತ್ತೀವಿ, ಅದೇ ಜೀವನದಲ್ಲಿ ತುಂಬಿ ಬಿಡುತ್ತದೆ. ವೈರಿಗೆ ಬಹಳ ಮಹತ್ವ ನೀಡಿದರೆ, ವೈರಿ ತಲೆಯಲ್ಲಿ ತುಂಬುತ್ತಾನೆ. ಜೀವನ ಹಸನಾಗುವುದು ಯಾವಾಗ?. ನಾವೇನು ಮಾಡಬೇಕು ಮಾಡ್ತಾ ಇರೋದು.
ಶಿಷ್ಯರು ಹೇಳುತ್ತಿದ್ದರು ಯಾರು ಹೊಡೆದರು ಯಾರು ಹೊಡೆದರು ಅಂತ. ಆದರೆ ಹರಿದಾಸರು ಬರಿ ಹಾಡು ಹೇಳುತ್ತಿದ್ದರು. ನಾನು ದೇವನ ಸೇವಕ. ದೇವನಿಗಾಗಿ ಹಾಡು ಹಾಡುತ್ತೀನಿ ಅಂತ ಹೇಳುತ್ತಿದ್ದರು. ಹಾಗೆ ನಾವು ನಮ್ಮ ಕೆಲಸದಲ್ಲಿ ತನ್ಮಯರಾಗಬೇಕು. ಇದು ಅಗ್ನಿ ವಿದ್ಯೆಯ ಮೊದಲನೇ ಅಂಗ. ನಮ್ಮ ಕೆಲಸ ನಾವು ಮಾಡುವುದು. ಜೀವನದ ತುಂಬಾ ಮಾಡುವುದು. ಆ ಕಡೆ ಈ ಕಡೆ ಲಕ್ಷ ಕೊಡದೆ ಮಾಡುವುದು. ನಮಗೆ ಇಷ್ಟವಿಲ್ಲದರ ಕಡೆ ಉದಾಸೀನರಾಗಿರುವುದು. ಆಕಾಶದಿಂದ ಮಳೆ ಬೀಳುತ್ತದೆ. ಮನೆಯ ಹೊರಗಿದ್ದವರು ಬಯ್ಯುತ್ತಾರೆ. ಮನೆಯ ಒಳಗಿದ್ದವರು ಹೋಗಲಿ ಬಿಡು ಎನ್ನುವರು. ಮಳೆ ಬಂದರೆ ಬತ್ತಿದ ಹೊಳೆ ತುಂಬುತ್ತದೆ. ಜನ ನದಿ ದಾಟಲು ದೋಣಿ ಬಳಸುತ್ತಾರೆ. ಇದರಿಂದ ನಾವಿಕನಿಗೆ ಲಾಭ. ಹಾಗಾಗಿ ಮಳೆ ಬಂದರೆ ನಾವಿಕನಿಗೆ ಖುಷಿ. ರೈತನಿಗೆ ಮಳೆ ಕನಿಷ್ಠ ಬೇಕು. ಹೆಚ್ಚು ಮಳೆ ಬಿದ್ದರೆ ದ್ರಾಕ್ಷಿ ನಾಶವಾಗುತ್ತದೆ ಎನ್ನುವ ಆತಂಕ.
ಒಬ್ಬ ಸರ್ಕಾರಿ ನೌಕರನಿಗೆ ಮಳೆ ಬೇಕಾಗಿಲ್ಲ. ಈತನಿಗೆ ಮಳೆ ಬಂದರೂ ಬಾರದಿದ್ದರೂ ಒಂದೇ. ಈತನಿಗೆ ಸಂಬಳ ಹೇಗಾದರೂ ಬರುವುದರಿಂದ ಮಳೆ ಏಕೆ ಎನ್ನುವನು. ಈ ಮೂವರ ಮಾತು ಕೇಳಿದರೆ ಮೇಘ ಏನು ಮಾಡಬೇಕು. ಮೇಘ ಹೇಳುತ್ತದೆ ಬೇಕಾದವರು ಬೇಕಾದ ಹಾಗೆ ಹೇಳಲಿ, ನಾನು ನನಗೆ ತಿಳಿದಂಗೆ ಮಾಡುತ್ತೇನೆ ಅನ್ನುತ್ತದೆ. ಎಲ್ಲವನ್ನು ಗಮನಿಸಿ ಮಾಡುತ್ತೀವಿ ಅಂತ ಹೋದರೆ ಈ ಜಗತ್ತಿನಾಗೆ ಸರಿಯಾಗಿ ಬದುಕಲು ಆಗುವುದಿಲ್ಲ. ಹಾಡುವವರು ಹಾಡಬೇಕು. ಕುಣಿಯುವವರು ಕುಣಿಯಲಿ. ಹಾಗೆ ನಾವು ನಮ್ಮ ಕೆಲಸದಲ್ಲಿ ಮಗ್ನರಾಗಬೇಕು. ಕೆಲಸದಲ್ಲಿ ಸಂತೋಷ ಇತ್ತು ಅಂದರೆ ಉಳಿದ ಕಡೆ ಉಪೇಕ್ಷೆ ತಾನಾಗಿ ಶುರುವಾಗುತ್ತದೆ.
ಈಜುವ ಮನುಷ್ಯ ಹೇಗೆ ಮಾಡುತ್ತಾನೆ. ತೆರೆಗಳು ಬರುತ್ತವೆ. ಕಸ ಕಡ್ಡಿ ವಸ್ತು ಹರಿದುಕೊಂಡು ಬರುತ್ತವೆ. ಎಲ್ಲವನ್ನು ಶುದ್ಧಗೊಳಿಸಿ, ಆ ಬಳಿಕ ಈಜುತ್ತೇನೆ ಅಂದರೆ ಸಾಧ್ಯವಿಲ್ಲ. ಏನು ಅಡ್ಡ ಬಂತು ಅದನ್ನು ಸರಿಸಿ ಮುಂದೆ ಹೋಗುವುದು. ಹಾಗೆ ನಮ್ಮ ಜೀವನದಲ್ಲಿ ಕೆಲವೊಂದನ್ನು ಸರಿಸಿ ಹೋಗಬೇಕು. ಅವುಗಳನ್ನು ಬೆನ್ನ ಹತ್ತಿ ಸರಿಸುವುದಲ್ಲ. ನಮ್ಮ ದಾರಿಗೆ ಅಡ್ಡ ಇರಬಾರದು ಅಷ್ಟೇ. ಊರಿನಲ್ಲಿ ಇರಬಾರದು ಅನ್ನಬಾರದು. ಅಂತವರು ಗುರಿ ಮುಟ್ಟುತ್ತಾರೆ. ಗುರಿ ಮುಟ್ಟಿದ ಮೇಲೆ ಯಾರು ಅಡ್ಡ ಅಂತ ವಿಚಾರ ಮಾಡುವುದಿಲ್ಲ. ಗುರಿ ಮುಟ್ಟಿದ್ದು ಸಂತೋಷ ಕೊಡುತ್ತದೆ.
ಎರಡನೇ ಸಂಗತಿ : ನಿರಂತರವಾಗಿ ಕಲಿಯುವುದು. ಬಲ್ಲವರಿಂದ ನೋಡಿ, ಕೇಳಿ, ಮಾಡಿ ಕಲಿಯುತ್ತಾ ಇರಬೇಕು. ಯಾವಾಗಲೂ ಕಲಿಯುತ್ತಲೇ ಇರಬೇಕು. ಒಮ್ಮೆ ಕಲಿತು ಹಾಗೆ ಇರಬಾರದು. ವಿಚಾರ ಹೊಸದು ಹೊಸದು ಆಗುತ್ತಿರಬೇಕು. ಯಾರದೊ ವಿಚಾರ ಬಾಡಿಗೆ ತೆಗೆದುಕೊಳ್ಳುವುದಲ್ಲ. ನೋಡಿ ಕಲಿಯುವುದು. ಕೇಳಿ ಕಲಿಯುವುದು. ಮಾಡಿ ಕಲಿಯುವುದು. ತಲೆಯಲ್ಲಿ ಹೊಸ ಹೊಸ ವಿಚಾರ ಇರಬೇಕು. ಜಗತ್ತು ಪ್ರವಾಹಿ. ಹಾಗೆ ಕಲಿಯುತ್ತಾ ಹೋಗಬೇಕು. ನಮ್ಮ ಜೀವನದ ವಿಚಾರ ಕೂಡ ಪ್ರವಾಹಿಯಾಗಿರಬೇಕು. ಕಲಿಯುವುದು ನಿಲ್ಲಬಾರದು. ನಾನೆಲ್ಲ ಕಲಿತಿದ್ದೀನಿ ಇನ್ನೇನಿಲ್ಲ ಅನ್ನಬಾರದು. ಅಂದರೆ ಕತ್ತಲೆ ಜೀವನ. ನಿನ್ನೆಯವರೆಗೆ ಭೂಮಿ ಚಪ್ಪಟೆಯಾಗಿದೆ ಅಂದಿರಬಹುದು. ಈಗ ಗೊತ್ತಾಗಿದೆ ಭೂಮಿ ಗೋಲ ಅಂತ. ಯಾವುದು ಸತ್ಯ ಸುಂದರ ಹೊಸದು ಕಲಿಯುತ್ತಾ ವಿಚಾರ ಬದಲು ಮಾಡಿಕೊಳ್ಳುತ್ತಾ ಹೋದರೆ ಜೀವನ ಸುಂದರವಾಗುತ್ತದೆ. ಯಾರು ಎಲ್ಲಿ ಯಾವಾಗ ಎಡವುತ್ತಾರೆ ಬೀಳುತ್ತಾರೆ ನೋಡಿಕೊಳ್ಳುತ್ತಾ ಇರೋದು ಲಕ್ಷ್ಯ ಕೊಟ್ಟು ನಾವು ತಿಳಿದು ಸರಿಯಾಗಿ ವಿಚಾರ ಮಾಡಿ ಬದಲು ಮಾಡಿಕೊಳ್ಳುವುದು. ಇದು ಕಲಿಯುವುದು. ಇದರಿಂದ ದುಃಖ, ಚಿಂತೆ ಕಡಿಮೆಯಾಗುತ್ತದೆ.
ಮೂರನೇ ಸಂಗತಿ : ಪ್ರಣಿದಾನ. ಇಷ್ಟೆಲ್ಲಾ ಮಾಡಿದರೂ ತೊಂದರೆ ಇತ್ತು ಅಂದರೆ ಜಗತ್ತಿಗೆ ಬಿಟ್ಟುಬಿಡುವುದು. ನಿಮಗೆ ಯಾವುದರ ಮೇಲೆ ವಿಶ್ವಾಸವಿದೆ, ನಿಸರ್ಗವೇ, ದೇವರೇ, ಯಾವುದು ಅದಕ್ಕೆ ಬಿಟ್ಟುಬಿಡುವುದು. ಪರಮಾತ್ಮನೇ ಇದು ನಿನ್ನ ಪ್ರಸಾದ ಅಂತ ಹೇಳಿ ಬದುಕುವುದು. ಇದರಿಂದ ಶೋಕ ಕಡಿಮೆಯಾಗುತ್ತದೆ. ಕಷ್ಟ ಬಂದರೂ ಕಷ್ಟದ ಪರಿಣಾಮ ಕಡಿಮೆಯಾಗುತ್ತದೆ. ನಮ್ಮ ಜೀವನ ಅರಳುತ್ತದೆ.
-ಎಂ. ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!