ದೇಹ ಮತ್ತು ಮನಸ್ಸಿನ ನಿಯಂತ್ರಣಕ್ಕಾಗಿ ಮನುಷ್ಯ, ಸಮಾಜ ಮತ್ತು ದಾರ್ಶನಿಕರು ತಮ್ಮ ಅನುಭವ ಮತ್ತು ಅನುಭಾವದಿಂದ ಕಂಡುಕೊಂಡ ಒಂದು ವಿಧಾನ ಧ್ಯಾನ. ಆ ವಿಷಯದಲ್ಲಿ ಈಗಲೂ ಸಾಕಷ್ಟು ಪ್ರಯೋಗಗಳು ನಡೆಯುತ್ತಲೇ ಇದೆ. ಇದರ ಅರ್ಥ ಮತ್ತು ಮಾರ್ಗಗಳು ಹಲವಾರು ಇವೆ. ಪ್ರಯೋಗಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅ ವಿಷಯದ ಬಗ್ಗೆ ಒಂದಷ್ಟು ಸರಳ ಅನಿಸಿಕೆಗಳು.
ವಿಶ್ವ ಧ್ಯಾನ ದಿನ, ಡಿಸೆಂಬರ್ 21. ಒತ್ತಡದ ಬದುಕಿನಲ್ಲಿ ಮತ್ತೊಮ್ಮೆ ಧ್ಯಾನದ ಮಹತ್ವ ನೆನಪಿಸುತ್ತಾ....
ಸರಳ ಧ್ಯಾನ: ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು. ಒಂದು ಸಣ್ಣ ವಿವರಣೆ.
ಇದು ಆಧ್ಯಾತ್ಮಿಕ ಚಿಂತನೆಯಲ್ಲ. ಆಧುನಿಕ ಒತ್ತಡದ ಬದುಕಿನಲ್ಲಿ ಧ್ಯಾನ ಎಂಬ ಕ್ರಿಯೆಯಿಂದ ವಾಸ್ತವವಾಗಿ ಸ್ವಲ್ಪಮಟ್ಟಿನ ಲಾಭ ಪಡೆದು ನೆಮ್ಮದಿ ಅಥವಾ ಮನಸ್ಸಿನ ಶಾಂತಿಯ ಮಟ್ಟ ಹೆಚ್ಚಿಸುವ ಪ್ರಯತ್ನ ಮಾತ್ರ. ಧ್ಯಾನದ ಆಳವಾದ ಅರ್ಥ ಏನೇ ಇರಲಿ ಅಥವಾ ನಿಮಗೆ ಅರ್ಥವಾಗದೇ ಇರಲಿ ಆದರೆ ಧ್ಯಾನದಿಂದ ನಿಜವಾಗಿಯೂ ಕನಿಷ್ಠ ಮಟ್ಟದ ಸ್ವಯಂ ನಿಯಂತ್ರಣ ಸಾಧ್ಯ. ಧ್ಯಾನಕ್ಕೆ ಹಲವಾರು ವ್ಯಾಖ್ಯಾನಗಳು ಇದ್ದರೂ ಸರಳವಾಗಿ ಹೇಳುವುದಾದರೆ ದೇಹ ಹಾಗು ಮನಸ್ಸಿನ ಮೇಲೆ ಪ್ರಭಾವ ಬೀರುವ ಮತ್ತು ಉಸಿರಿನ ಮೇಲೆ ನಿಯಂತ್ರಣ ಸಾಧಿಸುವ ಯೋಗದ ಒಂದು ವಿಧಾನ.
ಆತ್ಮಾವಲೋಕನದ, ಆತ್ಮವಿಶ್ವಾಸ ಹೆಚ್ಚಿಸುವ ಮಾರ್ಗವೂ ಹೌದು. ಸಾಮಾನ್ಯ ಜನ ಸಾಮಾನ್ಯ ರೀತಿಯಲ್ಲಿ ಎಲ್ಲರೂ ಧ್ಯಾನ ಮಾಡಬಹುದು. ಯಾವುದೇ ನಿರ್ಬಂಧವಿಲ್ಲ. ಧ್ಯಾನ ಮಾಡುವಾಗ ನಿದ್ದೆ ಬರುವ ಸಾಧ್ಯತೆ ಇರುತ್ತದೆ. ಅದರಿಂದ ಏನೂ ತೊಂದರೆ ಇಲ್ಲ. ಕೆಲವು ಕ್ಷಣ ಚೇತರಿಸಿಕೊಂಡು ಮತ್ತೆ ಧ್ಯಾನ ಮುಂದುವರಿಸಿ. ಧ್ಯಾನದ ಅಭ್ಯಾಸ ಮಾಡುವಾಗ ಅದರ ನಿರಂತರತೆ ಕಾಪಾಡುವುದು ಕಷ್ಟ. ಆಗಾಗ ವಿಫಲವಾಗುತ್ತಲೇ ಇರುತ್ತೇವೆ. ಇದನ್ನು ಸೋಲು ಎಂದು ಭಾವಿಸಬೇಡಿ. ಜೀವನದ ಕೊನೆಯ ಉಸಿರಿನವರೆಗೂ ಇದೊಂದು ಅನಿವಾರ್ಯ ಕ್ರಿಯೆ ಎಂದು ಭಾವಿಸಿ ಅಭ್ಯಾಸ ಮಾಡುತ್ತಲೇ ಇರಿ. ಇಲ್ಲಿ ಸೋಲೂ ಗೆಲುವೂ ಇಲ್ಲವೇ ಇಲ್ಲ.. ಇದೊಂದು ಭಾವ ಅಷ್ಟೇ..
ಮತ್ತೊಂದು ಅತ್ಯಂತ ಪ್ರಮುಖ ವಿಷಯವೆಂದರೆ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಧ್ಯಾನ ಮಾಡುವುದು ತುಂಬಾ ಕಷ್ಟ. ವಾಸ್ತವವಾಗಿ ನಮಗೆ ಧ್ಯಾನದ ಅವಶ್ಯಕತೆ ಇರುವುದೇ ಮನಸ್ಸಿನ ಪ್ರಕ್ಷುಬ್ಧ ಸ್ಥಿತಿಯಲ್ಲಿ. ಇದು ಆಗಲೇ ಕೈ ಕೊಡುತ್ತದೆ. ಶಾಂತ ಮತ್ತು ಸಾಮಾನ್ಯ ಮನಸ್ಸಿನ ಸ್ಥಿತಿಯಲ್ಲಿ ಧ್ಯಾನ ಸುಲಭ. ಋಷಿ ಮುನಿಗಳು ಇದನ್ನೇ ಮಾಡುವುದು. ಅವರಿಗೆ ಇದೊಂದು ರೀತಿ ಅನಿವಾರ್ಯ ಕ್ರಿಯೆ.
ಆದರೆ ನಾವು ಧ್ಯಾನವನ್ನು ಋಷಿ ಮುನಿಗಳ ರೀತಿಯಲ್ಲಿ ನೋಡಬಾರದು ಅಥವಾ ಹೋಲಿಕೆ ಮಾಡಬಾರದು. ಅವರ ಉದ್ದೇಶವೇ ಬೇರೆ ಮತ್ತು ಆಳವಾದದ್ದು. ನಮಗೆ ಬೇಕಿರುವುದು ಇರುವ ವ್ಯವಸ್ಥೆಯಲ್ಲಿ ಅದರ ಪ್ರಯೋಜನ ಮಾತ್ರ. ಅದೇ ನಮ್ಮ ನಿರೀಕ್ಷೆಯಾಗಿರಬೇಕು. ಅಗ ಪ್ರಕ್ಷುಬ್ಧ ಸ್ಥಿತಿಯ ಧ್ಯಾನ ಕನಿಷ್ಠ ನಮ್ಮಿಂದ ಬಹುದೊಡ್ಡ ತಪ್ಪುಗಳನ್ನು ಆಗುವುದು ತಪ್ಪಿಸುತ್ತದೆ.
ಜೊತೆಗೆ ಧ್ಯಾನ ಒಂದರಿಂದಲೇ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ ಎಂಬ ಭ್ರಮೆಗೆ ಒಳಗಾಗಬೇಡಿ. ಜ್ಞಾನಕ್ಕೆ ಇರುವ ಶಕ್ತಿ ಧ್ಯಾನಕ್ಕೆ ಇಲ್ಲ. ಬುದ್ಧ, ಮಹಾವೀರ, ಪರಮಹಂಸ, ಸ್ವಾಮಿ ವಿವೇಕಾನಂದ ಮುಂತಾದವರು ಧ್ಯಾನವನ್ನು ಅತಿ ಹೆಚ್ಚು ಅನುಭವಿಸಿದವರು. ಆದರೆ ಅದು ಅವರ ಜ್ಞಾನ ಮತ್ತು ಶ್ರಮಕ್ಕೆ ಪೂರಕವಾಗಿ ಮಾತ್ರ. ಆದ್ದರಿಂದ ಮನಸ್ಸಿನ ನಿಯಂತ್ರಣಕ್ಕೆ ಜ್ಞಾನವೇ ಅತಿಮುಖ್ಯ. ಅದರ ಸ್ವಲ್ಪ ಕೊರತೆಯನ್ನು ಸರಿದೂಗಿಸುವ ಶಕ್ತಿ ಧ್ಯಾನಕ್ಕೆ ಇದೆ ಎಂದು ಮಾತ್ರ ಹೇಳಬಹುದು. ಬಿಪಿ, ಶುಗರ್ ಸಹ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ. ನನ್ನ ಈ ಅಭಿಪ್ರಾಯಕ್ಕೆ ಯಾವುದೇ ದಾಖಲೆ ಅಥವಾ ಸಾಕ್ಷ್ಯ ನನ್ನ ಬಳಿ ಇಲ್ಲ. ಕೇವಲ ನನ್ನ ಅನುಭವದ ಅನಿಸಿಕೆ ಮಾತ್ರ. ಒಪ್ಪುವ ಅಥವಾ ತಿರಸ್ಕರಿಸುವ ಸಂಪೂರ್ಣ ಸ್ವಾತಂತ್ರ್ಯ ನಿಮಗಿದೆ. ಆದರೆ ಇದರಿಂದ ಯಾವುದೇ ದುಷ್ಪರಿಣಾಮ ಇಲ್ಲ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಲ್ಲೆ. ಜೊತೆಗೆ ಜೀವನದ ಸಂಕಷ್ಟ ಸಮಯದಲ್ಲಿ ಅತಿದೊಡ್ಡ ಅನಾಹುತಕ್ಕೆ ಕೈ ಹಾಕುವ ಮನಸ್ಥಿತಿಯನ್ನು ತಡೆದು ಬದುಕನ್ನು ಎದುರಿಸುವ ಆತ್ಮವಿಶ್ವಾಸ ಖಂಡಿತ ನೀಡುತ್ತದೆ.
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!