ಲೋಕಮಾನ್ಯರ ಜೀವನ ಕಥೆಗಳು

ಕೃ ನಾರಾಯಣ ರಾವ್ ಅವರು ಬರೆದ ‘ಲೋಕಮಾನ್ಯರ ಜೀವನ ಕಥೆಗಳು’ ಪುಸ್ತಕದಲ್ಲಿ ಆರು ಮಂದಿ ಮಹನೀಯರ ಬಗ್ಗೆ ಮಾಹಿತಿ ನೀಡಲಾಗಿದೆ. “ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು' ಎಂದು ಸಾರಿದ ಬಾಲಗಂಗಾಧರ ತಿಲಕ್, “ಹಿಂದೂ ಸಾಮ್ರಾಜ್ಯ ಸ್ಥಾಪನೆಯೇ ನನ್ನ ಗುರಿ” ಎಂದು ಘೋಷಿಸಿದ ಛತ್ರಪತಿ ಶಿವಾಜಿ, ಧರ್ಮ ರಕ್ಷಣೆಗಾಗಿ ಯುದ್ಧ ಘೋಷಿಸಿದ ಗೂಗೋವಿಂದ ಸಿಂಹ, “ಏಳಿ, ಎದ್ದೇಳಿ” ಎಂದು ಜಾಗೃತಗೊಳಿಸಿದ ಸ್ವಾಮಿ ವಿವೇಕಾನಂದ, “ಭಾರತದ ಸ್ವಾತಂತ್ರ್ಯ ಸಮರದಲ್ಲಿ ಹುತಾತ್ಮನಾದ ರಾಮಪ್ರಸಾದ್ ಬಿಸ್ಮಿಲ್ಲಾ, ಸಂಪೂರ್ಣ ಕ್ರಾಂತಿಯ ಜನನಾಯಕ ಜಯಪ್ರಕಾಶ್ ನಾರಾಯಣ ಮೊದಲಾದವರ ಚುಟುಕಾದ ಮಾಹಿತಿ ನೀಡಲಾಗಿದೆ.

ಪುಸ್ತಕದ ಮೊದಲ ಅಧ್ಯಾಯವಾದ ಬಾಲಗಂಗಾಧರ ತಿಲಕರ ಬಗ್ಗೆ ಬರೆಯುತ್ತಾ “ ಒಂದು ದಿನ ತರಗತಿಗೆ ಉಪಾಧ್ಯಾಯರು ಬಂದಿರಲಿಲ್ಲ. ಹುಡುಗರು ಕಡಲೆಕಾಯಿ ತಿನ್ನುತ್ತಾ ಸಿಪ್ಪೆಯನ್ನು ಡೆಸ್ಕ್ ಗಳ ಮೇಲೆ ಹರಡಿಕೊಂಡು ಕುಳಿತಿದ್ದರು. ಉಪಾಧ್ಯಾಯರು ಬಂದರು. ಡೆಸ್ಕ್ ಮೇಲೆ ಏನು? ಟೇಬಲ್ ಮೇಲೂ ಕಡಲೆಕಾಯಿ ಸಿಪ್ಪೆಗಳು ಬಿದ್ದಿದ್ದುವು. ತುಂಬಾ ಕೋಪ ಬಂದುಬಿಟ್ಟಿತು. "ಯಾರೋ ಕ್ಲಾಸ್‌ನಲ್ಲಿ ಕಡಲೆಕಾಯಿ ತಿಂದಿರೋರು? ತಿಂದಿದ್ದು ಅಲ್ಲದೆ ಡೆಸ್ಕ್ ಮೇಲೆ, ಮೇಜಿನ ಮೇಲೆಲ್ಲಾ ಸಿಪ್ಪೆ ಹಾಕಿ ಗಲೀಜು ಮಾಡಿರೋದು? ಎಂದು ಗದರುತ್ತಾ, ಹುಡುಗರ ಕಡೆ ನೋಡಿದರು. ಯಾರೊಬ್ಬರೂ ಏನೊಂದು ಉತ್ತರ ಕೊಡದೆ, ಇನ್ನೆಲ್ಲಿ ಬೆತ್ತದ ಏಟು ತಿನ್ನಬೇಕೋ ಎಂದು ಅಂಗೈಗಳನ್ನೇ ಮುಟ್ಟಿ? ಮುಟ್ಟಿ ನೋಡುತ್ತಾ ಬೆದರುಗಣ್ಣುಗಳೊಂದಿಗೆ ನಿಂತಿದ್ದರು.

ಯಾರು ಬಾಯಿ ಬಿಡದಿರುವುದನ್ನು ಕಂಡು ಇನ್ನೂ ಕುಪಿತರಾದ ಉಪಾಧ್ಯಾಯರು ಮೇಜಿನ ಮೇಲಿದ್ದ ಬೆತ್ತವನ್ನು ಕೈಗೆತ್ತಿ ಕೊಂಡರು. ಎಲ್ಲರಿಗೂ ಅಂಗೈಗಳ ಮೇಲೆ ಎರಡೆರಡು ಜೋರಾಗಿ ಮುಟ್ಟಿಸುತ್ತಾ ಬಂದರು. ತಿಲಕರ ಬಳಿ ಬಂದಾಗ ಉಪಾಧ್ಯಾಯರ ಕಣ್ಣುಗಳಷ್ಟೇ ಅವರ ಕಣ್ಣುಗಳೂ ಕೆಂಪಾಗಿದ್ದವು. ಉಪಾಧ್ಯಾಯರು ಬೆತ್ತವನ್ನು ಮೇಲೆತ್ತಿದರೂ ಸಹ ಕೈ ಒಡ್ಡಲಿಲ್ಲ. ಬದಲಾಗಿ ವಾದಿಸಿಯೇ ಹೇಳಿದರು- “ಸರ್, ನಾನು ಕಡಲೆಕಾಯಿ ತಿಂದಿಲ್ಲ. ಅದ್ದರಿಂದ ಕೈಯನ್ನೂ ಚಾಚುವುದಿಲ್ಲ, ಏಟನ್ನೂ ತಿನ್ನುವುದಿಲ್ಲ.”

"ಹಾಗಾದರೆ ತಿಂದವರು ಯಾರು? ನಿಜ ಹೇಳು. ತರಗತಿಯೆಲ್ಲಾ ಹೀಗೆ ಗಲೀಜು ಮಾಡಿರುವವರು ಯಾರು? ಬೇಗ ಹೇಳು” ಗುರುಗಳು ಗರ್ಜಿಸಿದರು. "ತಿಂದವರು ಯಾರು ಎಂದು ನನಗೆ ಗೊತ್ತು. ನಾನು ಅವರ ಹೆಸರನ್ನು ಹೇಳುವುದಿಲ್ಲ. ಅಗ ಚಾಡಿ ಹೇಳಿದ ಹಾಗಾಗುತ್ತದೆ. ಅವರ ಮನಸ್ಸನ್ನು ನೋಯಿಸಿದ ಹಾಗಾಗುತ್ತದೆ. ನಾನೇಕೆ ಅಂತಹ ಕೆಲಸ ಮಾಡಲಿ?" ಉಪಾಧ್ಯಾಯರ ಸವಾಲಿಗೆ ಈ ವಿದ್ಯಾರ್ಥಿ ತಿಲಕ್ ಮರು ಸವಾಲು ಹಾಕಿದರು.

"ಹಾಗಿದ್ದರೆ ತರಗತಿ ಬಿಟ್ಟು ಹೊರಡು. ನಮ್ಮ ಸ್ಕೂಲಿನಲ್ಲಿ ಇಂತಹ ಅವಿಧೇಯ ಹಾಗೂ ಉದ್ದಂಡತನದ ಹುಡುಗರಿಗೆ ಜಾಗ ಇಲ್ಲ" ಅನ್ನುತ್ತಾ ಅವರನ್ನು ತರಗತಿಯಿಂದ ಹೊರಗಡೆಗೆ ಅಟ್ಟಿಯೇ ಬಿಟ್ಟರು. ತಿಲಕ್ ಅವರು ಚಿಂತಿಸಲಿಲ್ಲ. ನ್ಯಾಯಕ್ಕಾಗಿ ಕಷ್ಟ-ದುಃಖ ಗಳನ್ನು ಸಹಿಸುವ ಸಹನಶೀಲತೆಯನ್ನು ಈ ಚಿಕ್ಕವಯಸ್ಸಿಗೇ ರೂಢಿಸಿ ಕೊಂಡಿದ್ದರು. ಬೇರೊಂದು ಶಾಲೆಯನ್ನು ಸೇರಿದರು. ಅಲ್ಲಿನ ಉಪಾಧ್ಯಾಯರುಗಳು ಇವರ ಚುರುಕು ಬುದ್ಧಿಯನ್ನು ತುಂಬಾ ಹೊಗಳಿದರು, ಪ್ರೋತ್ಸಾಹಿಸಿದರು. ಇಷ್ಟಾದರೂ ಪರೀಕ್ಷೆಯಲ್ಲಿ ಇವರು ಹೆಚ್ಚಿನ ಅಂಕಗಳನ್ನು ಪಡೆಯಲಿಲ್ಲ. ಇವರ ಆಪ್ತ ಸ್ನೇಹಿತರು ಕೇಳಿದರು-"ಯಾಕೆ ತಿಲಕ್, ನೀನಾಗಿ ನಿನ್ನ ಅಂಕಗಳನ್ನು ಕಳೆದು ಕೊಂಡೆ? ನಮ್ಮ ಹಾಗೇ ಸುಲಭದ ಲೆಕ್ಕಗಳಿದ್ದುವಲ್ಲಾ? ಅವನ್ನೇ ಮಾಡಿ ಹೆಚ್ಚು ಅಂಕಗಳನ್ನು ಪಡೆಯಬಾರದಿತ್ತಾ?”

ತಿಲಕ್ ಅವರು ಅವರ ಕಡೆ ನೋಡಿ, ನಸುನಗುತ್ತಾ ಹೇಳಿದರು “ಓದುವುದು ಹೆಚ್ಚು ಅಂಕಗಳನ್ನು ಗಳಿಸುವುದಕ್ಕಲ್ಲಾ, ಜ್ಞಾನಾರ್ಜನೆ ಗಾಗಿ, ಸುಲಭದ ಲೆಕ್ಕಗಳು ನನಗೆ ಮೊದಲೇ ಗೊತ್ತಿತ್ತು. ಅವುಗಳನ್ನೇ ಮಾಡಿ ಏನು ಸಾರ್ಥಕ? ಅದಕ್ಕೇ ಕಷ್ಟದ ಲೆಕ್ಕಗಳಿಗೆ ಕೈ ಹಾಕಿದೆ.” ಎಂದು ಮಹನೀಯರ ಬದುಕಿನ ಪುಟಗಳನ್ನು ತೆರೆದಿಡಲಾಗಿದೆ.

ಕೃತಿಯ ಲೇಖಕರಾದ ಕೃ ನಾರಾಯಣ ರಾವ್ ತಮ್ಮ ಮುನ್ನುಡಿಯಲ್ಲಿ..”ಮಕ್ಕಳ ಪುರೋಭಿವೃದ್ಧಿಯ ಮಾರ್ಗದಲ್ಲಿ ವಂಶ, ವಾತಾವರಣ ಎರಡೂ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಬೆಳೆಯುವ ಪೈರು ಮೊಳಕೆಯಲ್ಲಿಯೇ ಸರಿ ರೀತಿಯಲ್ಲಿ ಸಸಿಯಾಗಿ, ಗಿಡವಾಗಿ, ಸತ್ಪಲವನ್ನು ಕೊಡುವ ವೃಕ್ಷವಾಗಿ ಬೆಳೆಯಲು ಅವಕಾಶ ಕಲ್ಪಿಸುವ ಹೊರ ಅಂಗಣವೇ ವಾತಾವರಣ.

ಪ್ರಸ್ತುತ ಕೃತಿ 'ಲೋಕಮಾನ್ಯರ ಜೀವನ ಕಥೆಗಳು” ಪುಸ್ತಕದಲ್ಲಿ ಎಂಟರಿಂದ ಹದಿನೈದು ವರ್ಷದ ವಯಸ್ಸಿನ ಮಕ್ಕಳಿಗೆ ಐತಿಹಾಸಿಕವಾಗಿ, ನೈತಿಕವಾಗಿ, ಸಾಮಾಜಿಕವಾಗಿ ಸದ್ವಿಚಾರದ ಸದ್ಭಾವನೆಗಳನ್ನು ಮೂಡಿಸಲು ಯತ್ನಿಸಲಾಗಿದೆ. ಜೊತೆಗೆ ದೇಶಪ್ರೇಮದ ಬೀಜಾಂಕುರವೂ ಈ ಕೃತಿ ಮೂಲಕ ಮಕ್ಕಳ ಚಿಗುರು ಮನದಲ್ಲಿ ಮೂಡಲು ಗಮನ ಹರಿಸಲಾಗಿದೆ. ತಾಯಿ-ತಂದೆಯರು ಮಕ್ಕಳಿಗೆ ಇಂತಹ ಪುಸ್ತಕಗಳನ್ನು ಕೊಂಡು, ಕೊಡುವುದರ ಮೂಲಕ ಸಹಕರಿಸಿದರೆ ನಮ್ಮ ಪ್ರಯತ್ನ ಫಲಪ್ರದ ಎನಿಸೀತು.” ಎಂದು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸುಮಾರು ೭೫ ಪುಟಗಳ ಈ ಪುಟ್ಟ ಪುಸ್ತಕ ಮಕ್ಕಳ ಚಟುವಟಿಕೆಗಳಿಗೆ ಅನುಕೂಲವಾದೀತು.