ಊರಿನ ಜಾತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಮಕ್ಕಳು ಒತ್ತಾಯ ಮಾಡ್ತಾ ಇರ್ತಾರೆ, ಪ್ರತಿಸಲ ಒತ್ತಾಯ ಮಾಡಿದಾಗಲೂ ಅಪ್ಪ ಸಿಟ್ಟಿನಿಂದ ಅವರಿಗೆ ಬೈದು ಸುಮ್ಮನಾಗಿಸುತ್ತಿದ್ದ ಕಾರಣ ಆತನ ದುಡಿಮೆ ಮನೆ ನಡೆಸುವುದಕಷ್ಟೇ ಸಾಕಾಗಿತ್ತು ಮಕ್ಕಳು ಜಾತ್ರೆಯಲ್ಲಿ ಕಣ್ಣಲ್ಲಿ ಕಂಡ ಕನಸುಗಳನ್ನು ಕೊಡಿಸಲಾಗದಿದ್ದರೆ ನೋವಿನಿಂದ ನರಳುವಂತೆ ಮಾಡುವುದನ್ನು ಅವನಿಗೆ ಸಹಿಸಲಾಗುತ್ತಿರಲಿಲ್ಲ. ಹಾಗಾಗಿ ತನ್ನ ಮೇಲೆ ದ್ವೇಷ ಬೆಳೆದರೂ ತೊಂದರೆ ಇಲ್ಲ ಅನ್ನುವ ಕಾರಣಕ್ಕೆ ಸ್ವಲ್ಪ ಹೆಚ್ಚೇ ಬೈಯುತ್ತಿದ್ದ. ಹಾಗಾಗಿ ಮಕ್ಕಳು ತಂದೆಯಲ್ಲಿ ಕೇಳುವುದನ್ನೇ ಬಿಟ್ಟು ಬಿಟ್ಟಿದ್ದರು. ಒಂದು ಸಲ ತಂದೆಗೂ ಅನ್ನಿಸುತ್ತದೆ ಅವರ ಕನಸುಗಳನ್ನ ಸಣ್ಣದಿರುವಾಗಲೇ ಚಿವುಟಿ ಹಾಕಿಬಿಟ್ಟರೆ ಮುಂದೆ ಭವಿಷ್ಯದಲ್ಲಿ ಹೊಸ ಕನಸುಗಳನ್ನು ಕಾಣುವುದಕ್ಕೆ ಭಯಪಡಬಹುದು ಅನ್ನುವ ಯೋಚನೆಯಿಂದ ಸ್ವಲ್ಪ ಹೆಚ್ಚೇ ದುಡಿದು ಮಕ್ಕಳ ಕನಸಿನ ಜಾತ್ರೆ ತೋರಿಸುವುದಕ್ಕೆ ಉಳಿತಾಯ ಪ್ರಾರಂಭ ಮಾಡಿದ. ಜಾತ್ರೆಗೆ ಇನ್ನೇನು ಕೆಲವೇ ದಿನ ಇದೆ ಅನ್ನುವಾಗ ಮಕ್ಕಳಲ್ಲಿ ಹೇಳಿಯೇ ಬಿಟ್ಟಿದ್ದ ಮಕ್ಕಳೇ ಈ ಸಲದ ಜಾತ್ರೆಗೆ ನಿಮ್ಮನ್ನ ಕರೆದುಕೊಂಡು ಹೋಗುತ್ತೇನೆ. ಮಕ್ಕಳ ಆಸೆಗೆ ಪಾರವೇ ಇರಲಿಲ್ಲ. ಕನಸುಗಳನ್ನು ಕಟ್ಟಿಕೊಂಡಿದ್ದರು ರೆಕ್ಕೆಗಳನ್ನ ಕಟ್ಟಿ ಹಾರುವುದಕ್ಕೆ ತಯಾರಿ ನಡೆಸಿದ್ದರು. ಜಾತ್ರೆಯೂ ಬಂದಿತ್ತು ಮಕ್ಕಳು ಸಂಭ್ರಮದಿಂದ ತಯಾರಾಗಿ ಜಾತ್ರೆಯೊಳಗೆ ನಡೆದುಬಿಟ್ಟಿದ್ದರು. ಅಪ್ಪನ ಕಿಸೆಯೊಳಗಿನ ಗಂಟಿನ ಅರಿವು ಮಕ್ಕಳಿಗೆ ಇರಲಿಲ್ಲ. ಅವರ ಕಣ್ಣು ಹಲವನ್ನ ಇಷ್ಟ ಪಡ್ತಾ ಹೋದ್ವು ಅಪ್ಪನ ಕಿಸಿಯೋಳಗಿನ ಗಂಟು ಖಾಲಿಯಾಗುವವರೆಗೂ ಆಸೆಗಳನ್ನು ಪೂರೈಸಿ ಮತ್ತೆ ಅಪ್ಪ ಮನೆ ಕಡೆಗೆ ನಡೆದು ಬಿಟ್ರು. ಮಕ್ಕಳಿಗೆ ಜಾತ್ರೆ ತಿರುಗಿದ ಖುಷಿ ಆಸೆ ಪಟ್ಟದ್ದು ಸಿಕ್ಕ ಖುಷಿ ಆದ್ರೆ ಇನ್ನೂ ಹೆಚ್ಚು ಬೇಕಿತ್ತು ಅನ್ನೋದು ಮನದಲ್ಲಿ ಹಾಗೆ ಉಳಿದುಬಿಟ್ಟಿತ್ತು, ಅಮ್ಮ ಹೇಳಿದ್ರು ನೋಡಿ ಮೊದಲು ಮಕ್ಕಳ ಬಳಿ ನಮ್ಮ ನಿಜದ ಸ್ಥಿತಿಯನ್ನು ಹೇಳಿಬಿಡಿ ಆಗ ಮಕ್ಕಳು ಎಲ್ಲ ವಿಷಯಕ್ಕೂ ತಯಾರಾಗ್ತಾರೆ ಒಪ್ಪಿಕೊಳ್ಳುತ್ತಾರೆ ಆಸೆ ಕನಸುಗಳನ್ನು ನಿರ್ದಿಷ್ಟ ಮಿತಿಯೊಳಗೆ ಕಟ್ಟಿಕೊಳ್ಳುತ್ತಾರೆ ನಾವು ನಮ್ಮ ಕಷ್ಟವನ್ನು ಹೇಳದೆ ಹೋದ್ರೆ ಮಕ್ಕಳು ಭ್ರಮೆಯಲ್ಲಿ ಬದುಕುವಂತಾಗುತ್ತದೆ ಅಪ್ಪನಿಗೆ ಅರ್ಥವಾಗಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ