ಆಂಟೀ ನಿನ್ನೊಲುಮೆಯಿಂದಲೇ

ಖ್ಯಾತ ಪತ್ರಕರ್ತ, ಕಾದಂಬರಿಕಾರ ರವಿ ಬೆಳಗೆರೆಯವರ ನಿಧನಾ ನಂತರ ಹೊರ ಬಂದಿರುವ ‘ಆಂಟೀ ನಿನ್ನೊಲುಮೆಯಿಂದಲೇ’ ಕೃತಿ ಅವರ ಮಗಳು ಭಾವನಾ ಬೆಳಗೆರೆಯವರ ಚೊಚ್ಚಲ ಕಾದಂಬರಿ ಎನ್ನಲಡ್ಡಿಯಿಲ್ಲ. ಡೋರೀನ್ ಓರಿಯನ್ ನ I Know you really love me ಎನ್ನುವ ಕಾದಂಬರಿಯ ಪ್ರೇರಣೆಯಿಂದ ಹೊರಬಂದಿರುವ ಪುಟ್ಟ ಕಾದಂಬರಿ. 

“ಈ ಪತ್ರಿಕೋದ್ಯಮದಲ್ಲಿ ಯಾರೂ ಮಾಡದ ಸಾಹಸಗಳು ಎಂದರೆ ಕೇವಲ ನನ್ನ ಅಪ್ಪನದ್ದು. ಟೀಕೆಗೆ ಒಳಗಾದರೂ, ಪ್ರಶಂಸೆಗೆ ಒಳಗಾದರೂ ಎರಡನ್ನೂ ಸಮಾನವಾಗಿ ಸ್ವೀಕರಿಸಿದ್ದಾರೆ ಮತ್ತು ಅದಕ್ಕೆ ಸಮಜಾಯಿಸಿ ಕೊಡದೇ ಒಪ್ಪಿಕೊಂಡಿದ್ದಾರೆ. ಅವರ ಜೀವನವೇ ಕಲ‌ರ್ ಫುಲ್. ಇಂಗ್ಲಿಷ್ ನಲ್ಲಿ ಒಂದು ಮಾತಿದೆ. ಬಹುಶಃ ಅದು ಅಪ್ಪನಿಗೆ ಹೇಳಿ ಮಾಡಿಸಿರಬಹುದು. "You can love him or you can hate him" ಆದರೆ "you can't ignore him" ಅಂತ! ಇದನ್ನ ಯಾಕೆ ಹೇಳ್ತಿದೀನಿ ಅಂದ್ರೆ ಒಮ್ಮೆ ಅಪ್ಪನನ್ನು ಯಾರೋ ಕೇಳಿದರು; ನಿಮ್ಮಂತಹ ಬರಹಗಾರನಿದ್ದಾನಾ? ಅಪ್ಪನ ಉತ್ತರ ಇದ್ದಾರೆ. ನಿಮ್ಮಂತಹ ಧೈರ್ಯಶಾಲಿ ಇದ್ದಾರಾ? ಮತ್ತೆ ಉತ್ತರ ಇದ್ದಾರೆ. ನಿಮ್ಮಂತಹ ವಾಗ್ಮಿ ಇದ್ದಾರಾ? ಅಪ್ಪನ ಉತ್ತರ ಮತ್ತದೇ ಇದ್ದಾರೆ. ಮತ್ತೆ ನೀವ್ಯಾಕೆ ವಿಭಿನ್ನ? ಅಂದಾಗ ಅಪ್ಪ ಉತ್ತರಿಸಿದ್ದು; ಈ ಮೂರು combination ನನ್ನೊಬ್ಬನಲ್ಲೇ ಇರೋದಕ್ಕೆ ನಾನು ರವಿ ಬೆಳಗೆರೆ. ಅವರಿಗೆ ಅಪ್ಪ ಕೇಳಿದರು; ನಿಮ್ಮ ತಂದೆ ಯಾರು? ನಿಮಗೆ ಗೊತ್ತಾ? ಗೊತ್ತು, ಅಂದ ವ್ಯಕ್ತಿ. ಆದರೆ ನನಗೆ ನನ್ನ ಅನುಭವಗಳೇ ತಂದೆ. ಅದನ್ನು ಜೀವನವು ಹೇಳಿ ಕೊಟ್ಟಿತು ಮತ್ತು ಎಡವಟ್ಟಾದರೂ ನನ್ನ ಜೀವನವನ್ನು ತಿದ್ದಿದ್ದಾರೆ. ಈಗ ನಿಮ್ಮ ಕೈಯಲ್ಲಿರುವ ಪುಸ್ತಕವೂ ಹಾಗೇನೇ; ನಿಮ್ಮ ಎಡವಟ್ಟನ್ನು ಅಥವಾ ನಿಮ್ಮ ಬಲಹೀನತೆಯನ್ನು ನಿಮಗೇ ಅರಿವಿಲ್ಲದೆ ನೀವು ಅನುಭವಿಸುತ್ತೀರಿ. ನೈಜತೆಗೆ ಹತ್ತಿರದ್ದೇನಿದ್ದರೂ ಅದನ್ನು ಹೇಳಿಕೊಂಡಿದ್ದೇನೆ ಮತ್ತು ಬರೆದಿದ್ದೇನೆ. ಅಪ್ಪ ಈಗ ಇದ್ದಿದ್ದರೆ ಇದೇ ಮಾತುಗಳನ್ನು ಹೇಳುತ್ತಿದ್ದರು ಎನ್ನುವ ಭರವಸೆಯಿಂದ ಇದನ್ನೆಲ್ಲಾ ಬರೆದಿದ್ದೇನೆ. ನನ್ನ ಈ ಮೊದಲನೆಯ ಪ್ರಯತ್ನಕ್ಕೆ ನಿಮ್ಮ ಪ್ರೀತಿ ಮತ್ತು ಹಾರೈಕೆ ಇರಲಿ.” ಎಂದು ಬೆನ್ನುಡಿಯಲ್ಲಿ ಭಾವನಾ ಬೆಳಗೆರೆ ಬರೆದುಕೊಂಡಿದ್ದಾರೆ.

ತಮ್ಮ ಅಪ್ಪನ ಶೈಲಿಯಲ್ಲೇ ‘ಅಫಿಡವಿಟ್ಟು’ ಬರೆದು “ನಾನು ಭಾವನಾ ಬೆಳಗೆರೆ. ನನ್ನಪ್ಪನ (ರವಿ ಬೆಳಗೆರೆ) ಮುದ್ದಿನ ಮಗಳು. ಜರ್ನಲಿಸಂ ಅನ್ನೋದು ಬಹುಶಃ ಸಣ್ಣ ವಯಸ್ಸಿನಿಂದಲೇ ನನ್ನ ತಲೆಯೊಳಗೆ ಅಚ್ಚಾಗಿ ಕುಳಿತುಬಿಟ್ಟಿದೆ. ಅಪ್ಪ ಬರೆಯುತ್ತಿದ್ದ ಬರಹಗಳು, ಅವರ ಧೈರ್ಯ, ಹುರುಪು, ರಾತ್ರಿಯಿಡೀ ಕೂತು ಬರೆಯುತ್ತಿದ್ದುದು, ಅವರಿಗಿದ್ದ ಸಂಗೀತ ಪ್ರೇಮ ಎಲ್ಲವೂ ನನ್ನ ಮೇಲೆ ಬಹಳ ಪರಿಣಾಮ ಬೀರಿತ್ತು. ಎಷ್ಟಾದರೂ ರವಿ ಬೆಳಗೆರೆಯ ಮಗಳು ತಾನೇ. ಈಗಾಗಲೇ 'ಭಾವನಾ ಪ್ರಕಾಶನ'ದ ಮೂಲಕ ಹಲವಾರು ಪುಸ್ತಕಗಳು ಹೊರಬಂದಿದ್ದು, ಓದುಗರಿಗೆ ತುಂಬ ಇಷ್ಟವಾಗಿದೆ.

ಬರವಣಿಗೆಯೇ ನನ್ನ ಅತೀ ದೊಡ್ಡ ಶಕ್ತಿ. ನಾನು ಎಲ್ಲೇ ಇರಲಿ, ನನ್ನ ಭಾವನೆಗಳನ್ನು ಬರವಣಿಗೆ ಮುಖಾಂತರ ಹೊರಹಾಕುತ್ತಿದ್ದೆ. ಈ ಬರವಣಿಗೆಗೆ ನನ್ನಪ್ಪ ನನಗೆ ಅದೆಷ್ಟೋ ಸಹಾಯ ಮಾಡಿದಂತಿದೆ. ಅವರ ಆಶೀರ್ವಾದ ನನ್ನ ಮೇಲಿದೆ. ಮೊದಲು ಡಿಗ್ರಿ ಮುಗಿಸಿದ ನಂತರ ಅಪ್ಪ ಕೆಲಸಕ್ಕೆ ಹೋಗ್ತಿನಿ ಅಂದರೆ, ಬೇರೆ ಕಡೆ ಎಲ್ಲೂ ಬೇಡ, ಇದೇ ನಿನ್ನ ಆಫೀಸ್, ಇಲ್ಲೇ ಕೆಲಸ ಮಾಡು ಅಂದುಬಿಟ್ಟರು. ಹಾಗಾಗಿ ನನ್ನ ಮೊದಲ ತಿಂಗಳ ಸಂಬಳ ಆಗ 1,500 ರುಪಾಯಿ. ನನ್ನ ಕೊನೆಯ ಸಂಬಳ 50,000. ಇದನ್ನೆಲ್ಲ ರಿವೈಂಡ್ ಮಾಡ್ಕೊಂಡ್ರೆ ಮತ್ಯಾವುದೋ ಲೋಕಕ್ಕೆ ಹೋದ ಅನುಭವ, ಒಂಥರಾ ಖುಷಿ. ಈಗಾಗಲೇ ನನಗೆ ಕೈಂ ಬ್ಯೂರೋ ಛೀಫ್ ಆಗಿ ಕೆಲಸ ಮಾಡಿದ ಅನುಭವ ಇದೆ. ನಿರ್ಮಾಪಕಿಯಾಗಿ 'ರಾಧಾ' ಅನ್ನೋ ಧಾರಾವಾಹಿಯನ್ನು ಪ್ರೊಡ್ಯೂಸ್ ಮಾಡಿದೆ. ಅಲ್ಲದೇ 'ಬಾಲ್‌ಪೆನ್' ಚಿತ್ರವನ್ನು ನಿರ್ಮಿಸಿದ ಸಂತೋಷ ನನಗೆ ಇನ್ನೂ ಇದೆ. ಹೀಗೆ ಮುಂದೆ ನಿರೂಪಕಿಯಾಗಿ, ಸೆಲೆಬ್ರೆಟಿಗಳ ಸಂದರ್ಶನ, ಮಹಿಳಾ ಸಾಧಕಿ ಅನ್ನೋ ಪ್ರೋಗ್ರಾಮ್ ನಡೆಸಿಕೊಂಡು ಬಂದಿದ್ದೇನೆ. 

ಆದರೆ ಒಂದಂತೂ ನಿಜ. ಇಷ್ಟೆಲ್ಲಾ ಕೆಲಸ ಮಾಡಿದರೂ ನನ್ನ ನೆಚ್ಚಿನ ಆಯ್ಕೆ ಬರವಣಿಗೆ. ಬಹುಶಃ ಅಪ್ಪನ ಅಶೀರ್ವಾದವೂ ಅದೇ ಇರಬೇಕು. ಇಷ್ಟೆಲ್ಲದರ ನಡುವೆ ಆ ಬರವಣಿಗೆ ಪುನಃ ನನ್ನನ್ನು ಕೈ ಬೀಸಿ ಕರೆದಿದೆ. ಅದಕ್ಕಾಗಿ ಈಗ ಮತ್ತೆ ಬರೆಯಲಾರಂಭಿಸಿದ್ದೇನೆ. 'ಓ ಮನಸೇ...'ಯಲ್ಲಿ ಅಂಕಣಗಳು, ಆರ್ಟಿಕಲ್‌ಗಳು ಬರೆಯುತ್ತಿದ್ದೆ. ಆದರೆ ಈಗ ಬರೆದಿರುವುದು ನನ್ನ ಮೊದಲನೇಯ ಕಾದಂಬರಿ. ನಿಮಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ. ನನ್ನ ಈ ಮೊದಲನೇ ಪ್ರಯತ್ನಕ್ಕೆ ನಿಮ್ಮ ಬೆಂಬಲದ ಜೊತೆಗೆ ಹಾರೈಕೆ ಕೂಡ ಇರಲಿ. ನಾನು 'ಆಂಟಿ ನಿನ್ನೊಲುಮೆಯಿಂದಲೇ...' ಎಂಬ ಈ ಕಾದಂಬರಿಯನ್ನು ನಿಮ್ಮ ಕೈಗಿಡುತ್ತಿದ್ದೇನೆ. ಈ ಕಾದಂಬರಿ ನಿಮ್ಮ ಮನಮುಟ್ಟುತ್ತದೆ ಎಂದು ನಂಬಿದ್ದೇನೆ, ಇದನ್ನು ಒಪ್ಪಿಕೊಳ್ಳಿ ಮತ್ತು ಅಪ್ಪಿಕೊಳ್ಳಿ.

ನನ್ನ ಪಾಡಿಗೆ ನಾನು ನನ್ನ ಅಪ್ಪನಿಂದ ದೂರವಾಗಿ ಸಂದರ್ಶನ, ಸೀರಿಯಲ್‌ನಲ್ಲಿ ಸಿಕ್ಕ ಪಾತ್ರ, ಬಿಗ್‌ಬಾಸ್ ಅಂತೆಲ್ಲಾ ಬೇರೆಯೇ ದಿಕ್ಕಿನಲ್ಲಿ ಸಾಗುತ್ತಿದ್ದೆ. ನಡುವೆ ಸುಮಧುರ ಸಂಸಾರ. ಕಿಟ್ಟಪ್ಪ ಒಂದೊಂದು ನಿಮಿಷವೂ ಎಷ್ಟು ಮುಖ್ಯ ಅನ್ನುವುದನ್ನು ಹೇಳುತ್ತಿದ್ದರೆ, ನಟಿಸಲು ಪ್ರೇರಣೆ ಆಗುತ್ತಿತ್ತು. ಇತ್ತ ಪರಿಣಿತಾ, ನಮ್ಮ ಮಗಳು ಅಮ್ಮ I need you ಅಂದಾಗಲೆಲ್ಲಾ ಓಡಿ ಹೋಗುತ್ತಿದ್ದೆ, ಅಷ್ಟರಲ್ಲಿ ಅವಳ ತಂದೆ (ಕಿಟ್ಟಪ್ಪ) ಕೂತು ಅವಳೊಂದಿಗೆ ಯಾವುದೋ ಬೋರ್ಡ್ ಅನ್ನು ಇಟ್ಟುಕೊಂಡು ಆಟವಾಡುತ್ತಿದ್ದ. ಇಲ್ಲಿ ಕಣ್ಣಾಮುಚ್ಚಾಲೆ ಆಟ ಕೇವಲ ನನ್ನೊಂದಿಗೆ ನಡೆಯುತ್ತಿತ್ತು ಅನ್ನೋದು ಅರ್ಥ ಆಗಿ, ಅವನ ಸಹನೆ ಮತ್ತು ನನ್ನೆಡೆಗಿರುವ ಪ್ರೀತಿ ಹೇಳದೇ ಅರಿವಿಗೆ ಬಂದಿತ್ತು. ಒಂದು ಗಂಡು ಕೊಡುವ I can safe ಅನ್ನುವ ಭಾವ ಅದನ್ನು ಪಡೆದುಕೊಳ್ಳುವ ಹೆಣ್ಣಿಗೆ ಮಾತ್ರ ಅರ್ಥವಾಗುತ್ತದೆ. ಅವನಿಗೆ ಮತ್ತು ಮಗಳಿಗೆ ಧನ್ಯವಾದ” ಎಂದಿದ್ದಾರೆ.

ಸುಮಾರು ೧೨೦ ಪುಟಗಳ ಈ ಪುಟ್ಟ ಕಾದಂಬರಿಯನ್ನು “ಸ್ಪರ್ಶಕ್ಕೆ ಸಿಗದಿದ್ದರೂ, ನನ್ನ ಹೃದಯದಲ್ಲಿ ಬೆಚ್ಚಗೆ ಕುಳಿತು ನನ್ನನ್ನು ಸದಾ ಹುರಿದುಂಬಿಸುತ್ತಿರುವ ‘ಸೂಪರ್ ಹೀರೋ’ ನನ್ನ ಅಪ್ಪನಿಗೆ” ಎಂದು ಭಾವನಾ ಬೆಳಗೆರೆ ಅರ್ಪಣೆ ಮಾಡಿದ್ದಾರೆ.