ಹಗಲೆಂದರೆ ಬೆಳಕಲ್ಲ

“ಅಪರೂಪದ ಕಥೆಗಾರ ಸದಾಶಿವ ಸೊರಟೂರು ಅವರದು ಒಂದು ವಿಸ್ಮಯದ ಕಥಾಲೋಕ. 'ಜೀವವಿಲ್ಲದ ಒಂದು ತುಣುಕು ಕಾಗದ ಆಧಾರ್ ನನ್ನ ಇರುವನ್ನು ಸಾಬೀತು ಪಡಿಸಬೇಕೇ?' ಎಂದು ಟ್ರ್ಯಾಕ್ಟರ್ ಪರಸಪ್ಪ ಪ್ರಭುತ್ವಕ್ಕೆ ಎಸೆದ ಅಸಹಾಯಕ ಸವಾಲೊಂದು ನೇಗಿಲು ಹಿಡಿದು ಹಸ್ತದ ಗೆರೆ ಅಳಿಸಿಹೋದ ಎಲ್ಲ ಬಡರೈತರ ಒಡಲ ಬೆಂಕಿಯಂತಿದೆ.

ಕೆಲವು ಕಥೆಗಳಲ್ಲಿ ದಾಂಪತ್ಯವನ್ನು ಮೀರಿದ ಮಧುರ ಸಂಬಂಧಗಳು ಸಹಜ ನಡಿಗೆಯ ಹಂತದಲ್ಲೇ ಬೆಳೆಯುತ್ತ ವಿವಾಹವೆಂಬ ಸಂಸ್ಥೆಯನ್ನು ಪ್ರಶ್ನಿಸತೊಡಗುತ್ತವೆ. ವ್ಯಕ್ತಿ-ವ್ಯಕ್ತಿಗಳ ನಡುವಿನ ಭಾವನಾತ್ಮಕ ಸಂಬಂಧದ ಜೊತೆ ಅದನ್ನು ಮೀರಿದ ಅಪೂರ್ವ ಸ್ನೇಹ ಭಾವ 'ಮುರಿದ ಮರದ ಚಿಗುರು' ಕಥೆಯ ತಿರುಳನ್ನು ಬಗೆದುಕೊಡುತ್ತದೆ. ಮನಸ್ಸಿನ ಹೊಯ್ದಾಟಕ್ಕೆ ಸೋತು ವಂಚನೆಗೊಳಗಾದರೂ ಆತ್ಮವಂಚನೆ ಮಾಡಿಕೊಳ್ಳದೇ ಬದುಕುವ ಅಮ್ಮ 'ಬೆಡಗಿನ ಕೀಲು ಮುರಿದು' ಕಥೆಯಲ್ಲಿ ಕಾಣಸಿಗುತ್ತಾಳೆ. ಮನೆ, ಮಡದಿ ಮತ್ತು ಮಗುವಿನ ನೆನಪು ತೊರೆದರೆ ಬದುಕನ್ನೇ ತೊರೆದಂತೆ ಎನ್ನುವ ಅನನ್ಯ ಮನಸ್ಸಿನ ಜೀವವೊಂದು 'ತೊರೆದು ಜೀವಿಸಬಹುದೆ?' ಕತೆಯಲ್ಲಿದೆ. ಹೆಣ್ಣು ಹಾಗೂ ಕೆಂಪು ಬಣ್ಣವನ್ನು ಅವ್ಯಾಹತವಾಗಿ ಜೋಡಿಸುವ ತಂತುವೊಂದನ್ನು 'ಹಗಲೆಂದರೆ ಬೆಳಕಲ್ಲ' ಕಥೆ ಶೋಧಿಸುತ್ತದೆ.

ಇಲ್ಲಿಯ ಮನುಷ್ಯ ಸಂಬಂಧಗಳು ಕತ್ತಲಿನಿಂದ ಬೆಳಕಿನ ಕಡೆಗೆ ಒಯ್ಯುವ ಅವ್ಯಕ್ತ ರೂಪಕವನ್ನು ಹಿಡಿದಿಟ್ಟುಕೊಂಡೇ ಮೂಡಿನಿಂತಿವೆ. ಉಪಮೆಗಳಲ್ಲಿ ಜನ್ನಿಸುವ ಕಥೆಯ ಎಳೆಗಳು ಅರ್ಥವಿಸ್ತಾರಕ್ಕೆ ತೆರೆದುಕೊಳ್ಳುವುದಲ್ಲದೇ ನಿರೂಪಣೆಯ ತಂತ್ರದಿಂದಲೇ ಆತ್ಯಂತಿಕವಾಗಿ ಗಮನಸೆಳೆಯುತ್ತವೆ. ಕಾವ್ಯಮಯವಾದ ಸೊರಟೂರರ ಭಾಷೆ ಓದಿನ ತನ್ಮಯತೆಯನ್ನು ಹೆಚ್ಚಿಸುವಂತಿದೆ.” ಎಂದು ಈ ಕಥಾ ಸಂಕಲನದ ಬಗ್ಗೆ ಬೆನ್ನುಡಿಯಲ್ಲಿ ಬರೆದಿದ್ದಾರೆ ಖ್ಯಾತ ಲೇಖಕಿ ಸುನಂದಾ ಕಡಮೆ.

ಬರಹಗಾರ ಎನ್ ಎಸ್ ಶ್ರೀಧರಮೂರ್ತಿ ಈ ಕಥಾ ಸಂಕಲನದ ಬಗ್ಗೆ ವ್ಯಕ್ತ ಪಡಿಸಿದ ಅನಿಸಿಕೆ ಹೀಗಿದೆ… “ನಿಮ್ಮ ʼಹಗಲೆಂದರೆ ಬೆಳಕಲ್ಲʼ ಕಥಾ ಸಂಕಲನದ ಕಥೆಗಳನ್ನು ಕುತೂಹಲ ಮತ್ತು ಆಸಕ್ತಿಯಿಂದ ಓದಿದೆ. ನೀವು ಅಪರೂಪದ ಕಥೆಗಾರರು ಎನ್ನುವುದನ್ನು ಈ ಹಿಂದೆಯೇ ಗುರುತಿಸಿದ್ದೆ. ಸಂಕಲನದ ಕಥೆಗಳು ಇದಕ್ಕೆ ಪೂರಕವಾಗುವಂತಿವೆ. ಮನಷ್ಯ ಸಂಬಂಧದ ಸೂಕ್ಷ್ಮಗಳನ್ನು ನೀವು ಗಮನಿಸುವ ಮತ್ತು ಅದಕ್ಕೆ ರೂಪ ಕೊಡುವ ಕ್ರಮ ನಿಜಕ್ಕೂ ಅಚ್ಚರಿಯನ್ನು ಹುಟ್ಟಿಸುತ್ತದೆ.

ಹೆಜ್ಜೆ ಸಪ್ಪಳದ ಸದ್ದನ್ನು ಆಸಕ್ತಿಯಿಂದ ಆಲಿಸ ಬಲ್ಲ ನೀವು ಪಿಸುಮಾತಿಗೂ ಭಾಷೆಯ ರೂಪ ನೀಡಿದ್ದೀರಿ. ಸಂಬಂಧಗಳ ಚೌಕಟ್ಟು ನಿಮ್ಮ ಎಲ್ಲಾ ಕಥೆಗಳಲ್ಲಿಯೂ ಮತ್ತೆ ಮತ್ತೆ ಚರ್ಚಿತವಾಗುತ್ತದೆ. ನೈತಿಕತೆಯ ಪ್ರಶ್ನೆಯನ್ನು ನಿಮ್ಮ ಕಥೆಗಳು ಪ್ರಶ್ನೆ ಮಾಡುವುದರ ಜೊತೆಗೆ ಆತ್ಮ ನಿರೀಕ್ಷಣೆಯ ಹಾದಿಯನ್ನು ತೆರೆದಿಡುತ್ತವೆ. ರೂಪಕಗಳಲ್ಲಿ ನೀವು ಮಾತನಾಡುವ ಜೊತೆಗೆ ಅದಕ್ಕೆ ಜೀವಂತಿಕೆಯನ್ನೂ ನೀಡ ಬಲ್ಲಿರಿ.

ಮುರಿದ ಮರದ ಚಿಗುರು, ಹಗಲೆಂದರೆ ಬೆಳಕಲ್ಲ, ತೊರೆದು ಜೀವಿಸ ಬಹುದೆ? ಬೆಡಗಿನ ಕೀಲು ಮುರಿದು ಮೊದಲಾದ ನಿಮ್ಮ ಕಥೆಗಳು ಕನ್ನಡ ಕಥನ ಪರಂಪರೆಗೆ ಹೊಸ ಧಾರೆಯನ್ನು ನೀಡಬಲ್ಲಷ್ಟು ಶಕ್ತವಾಗಿವೆ. ನಿಮ್ಮ ಕಥೆಗಳು ಓದಿಸಿ ಕೊಳ್ಳುತ್ತವೆ. ಹಾಗೆ ಕಾಡುತ್ತವೆ. ಬದುಕಿನ ಕುರಿತ ಅತ್ಯಂತಿಕ ಪ್ರಶ್ನೆಗಳನ್ನೂ ನಮ್ಮದಾಗಿಸುತ್ತವೆ. ಹೀಗೇ ಬರೆಯುತ್ತಿರಿ, ಬೆಳೆಯುತ್ತಿರಿ.”. ಉತ್ತಮವಾದ ಓದಿಗೆ ಈ ಸಣ್ಣ ಕಥಾ ಸಂಕಲನ ಒಂದು ಒಳ್ಳೆಯ ರಹದಾರಿ ಎಂದರೆ ತಪ್ಪಲ್ಲ.