ಶಿಕಾರಿಪುರ ಈಶ್ವರ ಭಟ್ ಇವರು ಸಂಗ್ರಹಿಸಿದ ಅತ್ಯಮೂಲ್ಯ ದಾಖಲೆಗಳ ‘ಮಹಾಭಾರತದ ಪಾತ್ರಾನುಸಂಧಾನ’ ಕೃತಿ ನಿಜಕ್ಕೂ ಒಂದು ಸಂಗ್ರಹ ಯೋಗ್ಯ ಪುಸ್ತಕ. ಹಿರಿಯ ಪತ್ರಕರ್ತರಾದ ದು ಗು ಲಕ್ಷ್ಮಣ ಇವರು ತಮ್ಮ “ಲಕ್ಷ್ಮಣ ರೇಖೆ"ಯಲ್ಲಿ ಬರೆಯುತ್ತಾ “ಮಹಾಭಾರತ.... ಅತ್ಯಂತ ವೈವಿಧ್ಯಮಯ ಅಷ್ಟೇ ವೈರುಧ್ಯಮಯ ಮಹಾಕಾವ್ಯ. ಅಲ್ಲಿ ಬರುವಷ್ಟು ಚಿತ್ರ-ವಿಚಿತ್ರ ಪಾತ್ರಗಳು, ಪಾತ್ರತ್ವಗಳ ಪೋಷಣೆ, ಮನುಕುಲಕ್ಕೆ ರವಾನೆಯಾಗುವ ಜೀವನ ಸಂದೇಶಗಳು... ಬೇರಾವ ಮಹಾಗ್ರಂಥದಿಂದಲೂ ದೊರಕಲು ಸಾಧ್ಯವಿಲ್ಲ. ಹಾಗೆಂದೇ ಮಹಾಭಾರತ ಇಂದಿಗೂ ಜಗತ್ತಿನ ಮೇರುಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಹಾಭಾರತದಲ್ಲಿ ಏನುಂಟು? ಏನಿಲ್ಲ? ಅಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಸಂದೇಶವಿದೆ. ಅದು ಭಾರತೀಯರ ಜೀವನದರ್ಶನ. ಭಾರತದ ಪ್ರಾತಿನಿಧಿಕ ಮಹಾಕಾವ್ಯ ಪಾಂಡವ-ಕೌರವರ ನಡುವಣ ದಾಯಾದಿ ಕಲಹದ ಕಥಾನಕವೆಂದು ಮೇಲ್ನೋಟಕ್ಕೆ ತೋರಬಹುದಾದರೂ, ಮಹಾಭಾರತ ಕಥಾನಕದಲ್ಲಿ ಮಾನವ ಬದುಕಿನ ಎಲ್ಲ ಮಗ್ಗುಲುಗಳೂ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅಂತಿಮವಾಗಿ ಕುರುಕ್ಷೇತ್ರ ಯುದ್ದದಲ್ಲಿ ಗೆದ್ದ ಪಾಂಡವರು ಗೆದ್ದವೆಂದು ಬೀಗುವುದಿಲ್ಲ. ಬದಲಿಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಪಾಪ ಪರಿಹಾರಕ್ಕೆ ತೊಡಗುತ್ತಾರೆ. ಗೆದ್ದವರು ಬೀಗದೆ ಬಾಗುವುದಿದೆಯಲ್ಲ, ಮನುಷ್ಯತ್ವ ಅರಳುವುದು ಅಲ್ಲಿಯೇ.
ಭಾರತದ ಅಷ್ಟೇಕೆ ಜಗತ್ತಿನ ಸಾಹಿತಿ-ಕಲಾವಿದ-ಲೇಖಕರಿಗೆ ಮಹಾಭಾರತ-ರಾಮಾಯಣ ಗ್ರಂಥಗಳು ನೀಡಿದಷ್ಟು ಸ್ಫೂರ್ತಿ, ಪ್ರೇರಣೆಯನ್ನು ಇನ್ನಾವ ಗ್ರಂಥಗಳೂ ನೀಡಿರಲಿಕ್ಕಿಲ್ಲ. ಅಲ್ಲಿ ಬರುವ ಕರ್ಣ, ದ್ರೋಣ, ಭೀಷ್ಮ, ಕೃಷ್ಣ, ಪಾಂಡವ-ಕೌರವರ ಪಾತ್ರಗಳು ಸಾವಿರಾರು ಲೇಖಕರಿಗೆ ಕಥೆ-ಕಾವ್ಯ-ಕಾದಂಬರಿ, ನಾಟಕ, ಚಿತ್ರಕಲೆಗಳನ್ನು ರಚಿಸಲು ಇಂದಿಗೂ ಪ್ರೇರಣೆಯನ್ನು ನೀಡುತ್ತಿವೆ ಎಂದರೆ ಮಹಾಭಾರತದ ಔನ್ನತ್ಯ ಎಂತಹದಿರಬಹುದೆಂದು ನಾವೇ ಊಹಿಸಬಹುದು.” ಎಂದು ಬರೆದಿದ್ದಾರೆ.
ಲೇಖಕರಾದ ಈಶ್ವರ ಭಟ್ ಅವರು ತಮ್ಮ 'ಶಿಕಾರಿ'ಯ ಬಗ್ಗೆ ಬರೆದಿರುವುದು ಹೀಗೆ…. "ಮಹಾಭಾರತ ಪಾತ್ರಾನುಸಂಧಾನ"-ಇಪ್ಪತ್ತೈದು ವರ್ಷಗಳ ದೀರ್ಘಪಯಣ. ಅದು ಆರಂಭವಾದುದು ೧೯೯೫-೯೬ರಲ್ಲಿ "ಜಾಗೃತಪೀಠ" ಉಡುಪಿಯಲ್ಲಿ. ಅದೀಗ “ಜೈನಕಾಶಿ" ಮೂಡುಬಿದಿರೆಗೆ ಬಂದು ತಲುಪಿದೆ. ಮುಂದೆಲ್ಲಿಗೆ? ಸಹೃದಯ ಪಾಠಕರ ಮನ-ಮನೆಗಳಿಗೆ.
ಇಲ್ಲಿ ಒಂದು ಮಾತನ್ನು ನಾನು ಹೇಳಲೇಬೇಕು. ಇದು ಮೂಲತಃ ಖ್ಯಾತ ಪ್ರವಚನಕಾರ ಬನ್ನಂಜೆ ಗೋವಿಂದಾಚಾರ್ಯರ, ಮಹಾಭಾರತದ ಕೆಲವು ಪ್ರಮುಖ ಪಾತ್ರಗಳ ಕುರಿತ ಪ್ರವಚನಮಾಲಿಕೆಯನ್ನು ಆಧರಿಸಿ ರೂಪುಗೊಂಡಿರುವ ಪುಸ್ತಕ. ೧೯೯೫ರ ಮಧ್ವಜಯಂತಿಯ ಶುಭಸಂದರ್ಭದಲ್ಲಿ ಆ ಪ್ರವಚನ ಜರಗಿತ್ತು. ೧೯೯೬ರಲ್ಲಿ ಆ ಪ್ರವಚನಮಾಲೆ "ಹೊಸದಿಗಂತ" ಪತ್ರಿಕೆಯಲ್ಲಿ ವರ್ಷಪೂರ್ತಿಯಾಗಿ ಲೇಖನಮಾಲೆಯಾಗಿ ಬೆಳಕುಕಂಡಿತ್ತು. ಅದೇ ಈಗ ಪುಸ್ತಕವಾಗಿದೆ ಅಷ್ಟೆ. "ಮಹಾಭಾರತ ಪಾತ್ರಾನುಸಂಧಾನ" ಪುಸ್ತಕದಲ್ಲಿ ನನ್ನದು ಕೇವಲ "ಲಿಪಿಕಾರ'ನ ಪಾತ್ರ. ಅದೊಂದು ರೀತಿಯಲ್ಲಿ “ಗುರುತ್ರಯ" ರ ಸೇವೆ ಅಷ್ಟೆ.
ನಿಜ. ಬನ್ನಂಜೆಯವರು ಬದುಕಿದ್ದಾಗ "ಮಹಾಭಾರತ ಪಾತ್ರ ಪರಿಚಯ" ಪುಸ್ತಕ ಪ್ರಕಟವಾಗಬೇಕಾಗಿತ್ತು. ಕಾರಣಾಂತರಗಳಿಂದ ಅದು ಆಗಲಿಲ್ಲ. "ಪುಸ್ತಕಪ್ರಿಯ" ಬನ್ನಂಜೆಯವರ ಬಯಕೆ ಇದೀಗ ಈಡೇರಿದೆ. ಇದೊಂದು ರೀತಿಯಲ್ಲಿ ಬನ್ನಂಜೆಯವರಂತಹ ಮಹಾನ್ಚೇತನಕ್ಕೆ ಅಕ್ಷರಾಂಜಲಿ, ನುಡಿ-ನಮನ.
ಕೊನೆಯದಾಗಿ ಒಂದು ಮಾತು, ಈಗಾಗಲೇ ಹೇಳಿರುವಂತೆ "ಮಹಾಭಾರತ ಪಾತ್ರಾನುಸಂಧಾನ" ಕೃತಿಯ ಪ್ರಧಾನ ಭಾಗವಾದ ಪ್ರವಚನ-ಲೇಖನಮಾಲೆ ಬನ್ನಂಜೆ ಗೋವಿಂದಾಚಾರ್ಯರದು. ಇನ್ನುಳಿದುದು ನಾನೋರ್ವ ಇತಿಹಾಸದ ವಿದ್ಯಾರ್ಥಿ-ಶಿಕ್ಷಕ ಮತ್ತು ಪತ್ರಕರ್ತನಾಗಿ ಓದಿದ್ದು, ಕೇಳಿದ್ದು, ಗ್ರಹಿಸಿದ್ದು..... ಓದುಗರು ಅನ್ಯಥಾ ಭಾವಿಸಬಾರದು ಎಂಬುದು ನನ್ನ ನಮ್ಮ ನಿವೇದನೆ.” ಸುಮಾರು ೧೪೦ ಪುಟಗಳ ಈ ಕೃತಿ ಮಹಾಭಾರತದ ಮತ್ತೊಂದು ಮಗ್ಗುಲನ್ನು ಅನಾವರಣಗೊಳಿಸುವಲ್ಲಿ ಸಫಲವಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!