ಜ್ಯೋತಿಷಿಗಳು ಹೇಳುವ ಭವಿಷ್ಯದ ಬಗ್ಗೆ ಭಾರತೀಯ ಸಮಾಜದಲ್ಲಿ ಅಂದಾಜು ಸುಮಾರು ಶೇಕಡಾ 80-90 ರಷ್ಟು ಮಹಿಳೆಯರು ಮತ್ತು ಶೇಕಡಾ 60-70 ರಷ್ಟು ಪುರುಷರಿಗೆ ನಂಬಿಕೆ, ಗೌರವ, ವಿಶ್ಬಾಸವಿದೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವರು ಇದಕ್ಕೆ ಶರಣಾಗಿದ್ದಾರೆ. ಆರೋಗ್ಯ ಸಮಸ್ಯೆಗೆ ಡಾಕ್ಟರುಗಳು, ಜಮೀನು ವಿವಾದಗಳಿಗೆ ಲಾಯರ್ ಮತ್ತು ನ್ಯಾಯಾಧೀಶರು , ಸಾಂಸಾರಿಕ ಸಮಸ್ಯೆಗಳಿಗೆ ಪೋಲಿಸ್ ಮತ್ತು ಸಂಬಂಧಿಗಳು, ಶೈಕ್ಷಣಿಕ ಸಮಸ್ಯೆಗೆ ಶಿಕ್ಷಕರು ಮತ್ತು ವಿದ್ಯಾಸಂಸ್ಥೆಗಳು, ಆರ್ಥಿಕ ಸಮಸ್ಯೆಗಳಿಗೆ ಆಡಳಿತಾತ್ಮಕ ವ್ಯವಸ್ಥೆಗಳು ಇತ್ಯಾದಿ ಇದ್ದರೂ ಜ್ಯೋತಿಷಿಗಳ ಮೊರೆ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾದರೆ ಜ್ಯೋತಿಷ್ಯ ನಿಜವೇ.?
ಸಮಸ್ಯೆಗಳಿಗೆ ಪರಿಹಾರ ಮತ್ತು ಭವಿಷ್ಯದ ಭದ್ರ ಬುನಾದಿ ಇವರಿಂದ ಸಾಧ್ಯವೇ ? ನಿಜವಾದ ಕುತೂಹಲ ಇರುವುದೇ ಇಲ್ಲಿ. ಕೆಲವು ಚಾಣಾಕ್ಷ ಜ್ಯೋತಿಷಿಗಳು ಶೇಕಡ 70-80 ರಷ್ಟು ಸರಿಯಾಗಿಯೇ ಹೇಳುತ್ತಾರೆ ಎಂದೆನಿಸುತ್ತದೆ. ಇದು ಹೇಗೆ ಸಾಧ್ಯ ? ಸೃಷ್ಟಿಯ ಸ್ವಾಭಾವಿಕತೆಯನ್ನು ಭೇದಿಸುವ ಶಕ್ತಿ ಜ್ಯೋತಿಷಿಗಳಿಗೆ ಇದೆಯೇ ? ಇದನ್ನು ಅರ್ಥಮಾಡಿಕೊಳ್ಳಲು ಭಾರತೀಯ ಸಮಾಜದ Social structure ಹೇಗೆ Construct ಆಗಿದೆ ಎಂಬುದನ್ನು ಗಮನಿಸಬೇಕು. ಇಡೀ ಭಾರತೀಯರ ಸಾಮಾಜಿಕ ವ್ಯವಸ್ಥೆ ಭಕ್ತಿ, ಭಾವನೆ, ನಂಬಿಕೆಗಳ ಆಧಾರದ ಮೇಲೆ ನಿಂತಿದೆ. ಮನುಷ್ಯ ಸಂಬಂಧಗಳು ಮುಖ್ಯವಾಗಿ ತಂದೆ, ತಾಯಿ, ಮಕ್ಕಳು ಮುಂತಾದ ರಕ್ತ ಸಂಬಂಧಗಳು ಬಹಳಷ್ಟು ಬೆಸೆದುಕೊಂಡಿದೆ. ಅಜ್ಞಾನ, ಬಡತನ, ಭಯ ಮತ್ತು ಮೌಢ್ಯ ಇಲ್ಲಿನ ಜನರ ಬದುಕಲ್ಲಿ ಹಾಸುಹೊಕ್ಕಾಗಿದೆ. ಪ್ರೀತಿ, ಪ್ರೇಮ, ಪ್ರಣಯಗಳ ಬಗ್ಗೆ ತೀರಾ ಸಂಕುಚಿತ ಮನೋಭಾವವಿದೆ. ಮಕ್ಕಳ ಪಾಲನೆ ಪೋಷಣೆಯಲ್ಲಿ ಯಾವುದೇ ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞೆ ಇಲ್ಲ.
ಈ ಎಲ್ಲಾ ಹಿನ್ನೆಲೆಯಲ್ಲಿ ಮತ್ತು ಜಾಗತೀಕರಣದ ಪ್ರಭಾವದಿಂದಾಗಿ ಭಾರತೀಯ ಜನರ ಜೀವನಶೈಲಿ ತುಂಬಾ ಏರಿಳಿತಗಳನ್ನು ಉಂಟುಮಾಡುತ್ತಿದೆ. ಇದೇ ಈ ಜ್ಯೋತಿಷಿಗಳ ಮೂಲ ಬಂಡವಾಳ. ಇಡೀ ವ್ಯವಸ್ಥೆಗೆ ಮತ್ತು ಸಾಮಾನ್ಯ ಜನರಿಗೆ ಅನ್ವಯಿಸುವ ಕೆಲವು ಅಂಶಗಳನ್ನು ಬಹಳ ಕಲಾತ್ಮಕವಾಗಿ ಹೇಳುತ್ತಾರೆ. ಅದನ್ನು ಕೇಳಿದರೆ " ಅರೆ , ಇದೇನಿದು ಎಷ್ಟೊಂದು ಸತ್ಯ. ನನ್ನ ಜೀವನದಲ್ಲಿ ನಡೆದಿರುವುದೇ ಅಲ್ಲವೆ. ಜ್ಯೋತಿಷ್ಯ ನಿಜವಾಗಿ ಸತ್ಯ " ಎಂಬ ನಂಬಿಕೆ ಬರುತ್ತದೆ.
ನಿಮ್ಮ ಹಿರಿಯರಿಗೆ ಆರೋಗ್ಯ ಸಮಸ್ಯೆ ಇದೆ, ನಿಮಗೆ ಸ್ನೇಹಿತರಿಂದ ಮೋಸವಾಗುತ್ತದೆ, ನಿಮ್ಮ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇದೆ, ನಿಮಗೆ ವಾಹನಗಳಿಂದ ಗಂಡಾಂತರವಿದೆ, ನೀವು ಬೇರೆಯವರನ್ನು ಬೇಗ ನಂಬಿ ಮೋಸ ಹೋಗುವಿರಿ " ಇತ್ಯಾದಿ ಇತ್ಯಾದಿ.... ಚುನಾವಣಾ ಸಂಧರ್ಭದ ಫಲಿತಾಂಶ ಬಿಡಿ. ಈ ದೇಶದ ಪ್ರತಿಯೊಬ್ಬರೂ ಭವಿಷ್ಯಕಾರರೇ, ಆದರೆ , ವಾಸ್ತವದಲ್ಲಿ ಇದೊಂದು ಭ್ರಮೆ. ನಮ್ಮ ಮದುವೆ, ಮಕ್ಕಳು, ಉದ್ಯೋಗ, ಆರೋಗ್ಯ, ಕೌಟುಂಬಿಕ ಕಲಹ, ಆರ್ಥಿಕ ಅಧೋಗತಿ, ಶತ್ರುಗಳ ಕಾಟ, ಕೆಲವೊಮ್ಮೆ ಯಶಸ್ಸು ಎಲ್ಲವೂ ಸಹಜ, ಸ್ವಾಭಾವಿಕ ಮತ್ತು ನಾವು ವಾಸಿಸುವ ದೇಶ, ಕಾಲ, ಪರಿಸ್ಥಿತಿ ಮತ್ತು ನಮ್ಮ ಮನೋಭಾವವನ್ನು ಅವಲಂಬಿಸಿರುತ್ತದೆ. ಅದನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವ ತಾಳ್ಮೆ ಮತ್ತು ಜಾಣತನ ನಮ್ಮ ಸಾಮಾನ್ಯ ಜನರಿಗೆ ಇನ್ನೂ ಮೂಡಿಲ್ಲ. ಅದಕ್ಕೆ ಬದಲಾಗಿ ಮೌಢ್ಯಕ್ಕೆ ಮತ್ತು ಸುಲಭ ಪರಿಹಾರದ ಆಕರ್ಷಣೆಗೆ ಒಳಗಾಗಿ ಜ್ಯೋತಿಷಿಗಳ ಮೊರೆ ಹೋಗುತ್ತಾರೆ.
ಮೊದಲು ಗಿಣಿ, ಕವಡೆ, ಹಸ್ತ ಮುದ್ರಿಕೆ, ತಿಥಿ, ನಕ್ಷತ್ರ, ರಾಶಿ, ಜಾತಕ ಮುಂತಾದ ಕೆಲವು ವಿಷಯಗಳ ಮೇಲೆ ಯಾರೋ ಕೆಲವರು ಹೊಟ್ಟೆಪಾಡಿಗಾಗಿ ಶಾಸ್ತ್ರ ಹೇಳುತ್ತಾ, ಕೊಟ್ಟಷ್ಟು ಹಣ ಪಡೆಯುತ್ತಾ, ಹೇಗೋ ಉಪ ಉದ್ಯೋಗದಂತೆ ಜೀವಿಸುತ್ತಿದ್ದರು. ಆದರೆ ಈ ಮಾಧ್ಯಮಗಳ ಪ್ರಭಾವ ಹೆಚ್ಚಾದ ಮೇಲೆ ಇದೊಂದು ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿತು ಮತ್ತು ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾಯಿತು. ಬದುಕಿನ ಅನಿಶ್ಚಿತತೆ ಹೆಚ್ಚಾದಷ್ಟು ಜ್ಯೋತಿಷ್ಯ ತನ್ನ ಪ್ರಾಮುಖ್ಯತೆ ಪಡೆಯುತ್ತಿದೆ. ಅವರು ಹೇಳುವುದು ನಿಜವೆಂಬ ಭ್ರಮೆ ಸೃಷ್ಟಿಸುತ್ತಿದೆ.
ಪೌರಾಣಿಕ ದೇವರುಗಳನ್ನೇ Overtake ಮಾಡಿ ಹೊಸ ರೀತಿಯ ದೇವಮಾನವರೆಂಬ ನಕಲಿಗಳು ಜ್ಯೋತಿಷಿಗಳ ರೂಪದಲ್ಲಿ ಉಧ್ಭವವಾಗಿದ್ದಾರೆ. ಈ ಬಗೆಗೆ ಗಂಭೀರವಾಗಿ ಯೋಚಿಸುವ ಕಾಲ ಬಂದಿದೆ. ಇದಕ್ಕೆ ಪರಿಹಾರವೆಂದರೆ, ಹೆಚ್ಚು ಹೆಚ್ಚು ಸೃಷ್ಟಿಯನ್ನು ಅರಿಯಿರಿ. ಪ್ರಕೃತಿಗೆ ನಿಯತ್ತಾಗಿ ಬದುಕಿ. ಪರಿಸ್ಥಿತಿಯನ್ನು ವಿಶಾಲ ಅರ್ಥದಲ್ಲಿ ಗ್ರಹಿಸಿ. ಸಮಸ್ಯೆ ನನಗೆ ಮಾತ್ರ ಎಂಬ ಸಂಕುಚಿತತೆ ಬಿಡಿ. ಎಲ್ಲರೂ ಒಂದಲ್ಲಾ ಒಂದು ಸಮಸ್ಯೆಗಳಲ್ಲಿ ಇರುವವರೇ. ಅದರ ರೂಪ ಮಾತ್ರ ಭಿನ್ನವಾಗಿರುತ್ತದೆ. ಅದೇ ವಾಸ್ತವ. ಯೋಚಿಸಿ ನಿರ್ಧರಿಸುವ, ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳುವ, ನಿಮ್ಮದೇ ಅಭಿಪ್ರಾಯ ರೂಪಿಸಿಕೊಳ್ಳುವ ಎಲ್ಲಾ ಸ್ವಾತಂತ್ರ್ಯ ನಿಮಗಿದೆ.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!