ಹೊಳೆನರಸೀಪುರ ಅದ್ಯಾತ್ಮ ಪ್ರಕಾಶ ಕಾರ್ಯಾಲಯದ "ಅಧ್ಯಾತ್ಮ ಪ್ರಕಾಶ'

ಹಾಸನ ಜಿಲ್ಲೆ ಹೊಳೆನರಸೀಪುರದ ಅದ್ಯಾತ್ಮ ಪ್ರಕಾಶ ಕಾರ್ಯಾಲಯ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್  ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ " ಅಧ್ಯಾತ್ಮ ಪ್ರಕಾಶ". ೧೯೨೦ರಲ್ಲಿ ಆರಂಭಿಸಿದ ಈ ಪತ್ರಿಕೆಯು "ಏತಜ್ಞೇಯಂ ನಿತ್ಯ ಮೇವಾತ್ಮಸಂಸ್ಥಂ ನಾತಃ ಪರಂ ವೇದಿತವ್ಯಂ ಹಿ ಕಿಂಚಿತ್" ಎಂಬ ಘೋಷವಾಕ್ಯದೊಂದಿಗೆ ಕಳೆದ ೯೪ ವರ್ಷಗಳಿಂದ ಪ್ರಕಟವಾಗುತ್ತಿದೆ.

ಪ್ರಸ್ತುತ, ಡಾ || ಎಸ್. ಹೇಮಲತಾ ಪ್ರಧಾನ ಸಂಪಾದಕರು. ಲಕ್ಷ್ಮೀಶ ಭಟ್, ಡಿ. ಗಣಪತಿ ಶಾಸ್ತ್ರೀ ಹಾಗೂ ಡಾ. ಕೆ. ಅನಂತರಾಮು ಸಂಪಾದಕ ಮಂಡಳಿ ಸದಸ್ಯರು. ಕೆ. ಶ್ರೀನಿವಾಸ್ (ಚಯರ್ ಮೇನ್) ಹಾಗೂ ಶ್ರೀಧರ ಎ. (ಚಯರ್ ಮೇನ್, ವರ್ಕಿಂಗ್ ಕಮಿಟಿ) ಟ್ರಸ್ಟಿಗಳು. ಬೆಂಗಳೂರು ಚುಂಚಗಟ್ಟ ಮುಖ್ಯ ರಸ್ತೆಯ ಸುಪ್ರಜ ನಗರದ ಬಿಕೆಎಂ ಕಾಂಪ್ಲೆಕ್ಸ್ ನಲ್ಲಿರುವ ಶ್ರೀರಾಮ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದೆ.

೩೬ ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಹೊರಬರುತ್ತಿರುವ "ಅಧ್ಯಾತ್ಮ ಪ್ರಕಾಶ" ಮಾಸಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿ. ದ್ವಿ ವಾರ್ಷಿಕ ಚಂದಾ ೨೫೦ ರೂ., ದಾನಿಗಳು (೧೦ ವರ್ಷ) ೧,೨೦೦ ರೂ., ಆಶ್ರಯದಾತರು ೨,೫೦೦ ರೂ. ಮತ್ತು ಮಹಾಶ್ರಯದಾತರು ೫,೦೦೦ ರೂಪಾಯಿಗಳು.

ಪ್ರಾರ್ಥನೆ, ಸಂಪಾದಕೀಯ, ಉಪಕಾರ ಸ್ಮರಣೆ ಇವುಗಳು ಪತ್ರಿಕೆಯ ಖಾಯಂ ಅಂಕಣಗಳು. ಉಳಿದಂತೆ ವೇದ, ಉಪನಿಷತ್ತು, ಪುರಾಣವೇ ಇತ್ಯಾದಿ ಅದ್ಯಾತ್ಮಿಕ, ಧಾರ್ಮಿಕ ಲೇಖನಗಳು ಪ್ರಕಟವಾಗುತ್ತವೆ. ಪ್ರತೀ ಸಂಚಿಕೆಯ ಮುಖಪುಟದಲ್ಲೂ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳ ಭಾವಚಿತ್ರವನ್ನು ಮುದ್ರಿಸಲಾಗುತ್ತಿದೆ. ಇದೇ ಸ್ವಾಮೀಗಳ ಒಂದು ಅದ್ಯಾತ್ಮಿಕ ಲೇಖನವನ್ನೂ ಪ್ರತೀ ಸಂಚಿಕೆಯಲ್ಲೂ ಪ್ರಕಟಿಸಲಾಗುತ್ತಿದೆ. ಶ್ರೀ ಶ್ರೀ ಅದ್ವಯಾನಂದೇಂದ್ರ ಸರಸ್ವತೀ ಸ್ವಾಮಿಗಳು, ಎಸ್. ಹೇಮಲತಾ, ಆರ್. ಡಿ. ಪಾಟೀಲ್ ಗದಗ (ಅನುವಾದಿತ ಬರಹಗಳು), ಡಾ || ಕೆ. ಅನಂತರಾಮು ಮೈಸೂರು, ಎಂ. ಆರ್. ವೆಂಕಟರಾಮಯ್ಯ, ಲಕ್ಷ್ಮೀಶ ಭಟ್ಟ, ಬ್ರಹ್ಮಜ್ಞಕವಿ ದಿ || ದೇವರಾಯ ಕುಲಕರ್ಣಿ, ಎಚ್. ಎಸ್. ಅನಂತನಾರಾಯಣ, ಹೆಚ್. ಆರ್. ಪಾಂಡುರಂಗ ಅರಕಲಗೂಡು, ವಿ. ಎಂ. ಉಪಾಧ್ಯಾಯ ಕೋಣಾರ ಭಟ್ಕಳ, ಶ್ರೀರಾಮ ಪ್ರಕಾಶ ಕಾರಂತ, ಡಾ || ಜಿ. ಕೃಷ್ಣಪ್ಪ ಮುಂತಾದವರ ಲೇಖನಗಳು ಪ್ರಕಟವಾಗುತ್ತಿವೆ.

~ ಶ್ರೀರಾಮ ದಿವಾಣ