ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರ ನಿಧನಾ ನಂತರ ಅವರ ಒಡನಾಟದಲ್ಲಿದ್ದ ಪತ್ರಕರ್ತ ದೀಕ್ಷಿತ್ ನಾಯರ್ ಭೈರಪ್ಪನವರ ಜೀವನದ ಕೆಲವು ಅಪರೂಪದ ಪ್ರಸಂಗಗಳನ್ನು ಆಯ್ದು ಪುಸ್ತಾ ರೂಪದಲ್ಲಿ ಹೊರತಂದಿದ್ದಾರೆ.
“ಎಸ್.ಎಲ್. ಭೈರಪ್ಪನವರು ಇದ್ದ ಕಾಲದಲ್ಲೂ ಅವರ ಯಶಸ್ಸು ಮತ್ತು ಜನಪ್ರಿಯತೆಯನ್ನು ಸಹಿಸದ ವಿರೋಧಿಗಳು ಅವರು ಅಗಲಿದ ಅನಂತರವೂ ಅವರ ಬಗ್ಗೆ ಇಲ್ಲಸಲ್ಲದ್ದು ಬರೆದರು. ಅಪಪ್ರಚಾರ ಮಾಡಿದರು. ಅವರು ಸಾಹಿತಿಯೇ ಅಲ್ಲ ಎಂದರು. ಅವರಿಗೆ ಜಾತಿವಾದಿ ಹಣೆಪಟ್ಟಿ ಅಂಟಿಸಿದರು. ಸ್ವಯಂಘೋಷಿತ ಘನ ಪಂಡಿತರಂತೆ ಭೈರಪ್ಪನವರ ಕಾದಂಬರಿಗಳನ್ನು ಸರಣಿಯಾಗಿ ಟೀಕಿಸಿದರು. ಹುಳುಕು ಹುಡುಕುವ ವ್ಯರ್ಥ ಪ್ರಯತ್ನ ಮಾಡಿದರು. ಗತಿಸಿದವರ ಬಗ್ಗೆ ಅಪದ್ಧ ಮಾತನಾಡಬಾರದು ಎಂಬುದನ್ನೂ ಮರೆತು ನಿಂದಿಸಿದರು. ಅದು ಅವರ ಎತ್ತರಕ್ಕೆ ಏರಲಾರದವನೊಬ್ಬನ ಪ್ರಲಾಪದಂತಿತ್ತು. ಭೈರಪ್ಪನವರ ಕೀರ್ತಿ ಯಾವ ಮಟ್ಟದ್ದು ಎಂಬುದು ಅವರು ಬದುಕಿದ್ದಾಗಲೇ ಸಾಬೀತಾಗಿತ್ತು. ಅವರು ಗತಿಸಿದ ಮೇಲಂತೂ ಅವರ ಸಾಹಿತ್ಯ ಮತ್ತು ಖಾಸಗಿ ಬದುಕಿನ ವಿರಾಟ ದರ್ಶನವೇ ಆಗಿ ಹೋಯಿತು. ಭೈರಪ್ಪ ಅತಿಹೆಚ್ಚು ಓದಿಸಿಕೊಂಡ ಮತ್ತು ಅಪಾರ ಓದುಗರನ್ನು ಸಂಪಾದಿಸಿದ ಅಪರೂಪದ ಲೇಖಕ. ಅವರ ಹಾಗೆ ಬರೆದ ಮತ್ತು ಜಗತ್ತನ್ನು ಸುತ್ತಿದ ಲೇಖಕ ಕನ್ನಡದ ಮಟ್ಟಿಗಂತೂ ಇಲ್ಲವೇ ಇಲ್ಲ. ಅವರು ಅಖಿಲ ಭಾರತೀಯ ಸ್ತರದ ಲೇಖಕ. ಅಷ್ಟೇ ಅಲ್ಲ; ವಿಶ್ವಮಾನ್ಯ ಲೇಖಕರೂ ಹೌದು. ಅವರ ಕೃತಿಗಳು ನಲವತ್ತಕ್ಕೂ ಹೆಚ್ಚು ಭಾಷೆ ಮತ್ತು ಉಪಭಾಷೆಗಳಿಗೆ ಅನುವಾದಗೊಂಡಿವೆ.
ಈ ಕೃತಿಯಲ್ಲಿ ಡಾ. ಎಸ್.ಎಲ್. ಭೈರಪ್ಪನವರ ಬದುಕಿನ ಅಪರೂಪದ ಪ್ರಸಂಗಗಳಿವೆ. ಹೆಚ್ಚಿನವರಿಗೆ ಗೊತ್ತಿರದ ಸಂಗತಿಗಳಿವೆ. ವಿರೋಧಿಗಳೂ ಮೆಚ್ಚಿಕೊಳ್ಳುವಂಥ ಭೈರಪ್ಪನವರ ಖಾಸಗಿ ಬದುಕಿನ ವಿಷಯಗಳನ್ನು ಇಲ್ಲಿ ದಾಖಲಿಸಲಾಗಿದೆ. ಇದು 'ಎತ್ತರೆತ್ತರ ಭೈರಪ್ಪ: ಅಗೆದಷ್ಟೂ ಆಳ ಮೊಗೆದಷ್ಟೂ ಬೆರಗು!' ಇಲ್ಲಿ ದಾಖಲಾಗಿರುವ ಯಾವ ಪ್ರಸಂಗವೂ ಕಪೋಲಕಲ್ಪಿತವಲ್ಲ. ದಂತಕತೆಯೂ ಅಲ್ಲ. ನೋಡಿ-ಕೇಳಿ-ಓದಿ ಅರಿತ ಮತ್ತು ಕಂಡವರಿಂದ ತಿಳಿದು ಹೆಕ್ಕಿ ಅಕ್ಷರ ರೂಪಕ್ಕಿಳಿಸಿದ ಪ್ರಸಂಗಗಳು. ಇದು 'ಗ್ಲೋಬಲ್ ಸ್ಟಾರ್' ಲೇಖಕನೊಬ್ಬನ ಕುರಿತಾದ ಬೊಗಸೆ ಗಾತ್ರದ ಕೈಪಿಡಿ. ಒಂದಂತೂ ಸತ್ಯ. ಮುಂದಿನ ನೂರು ವರ್ಷಗಳವರೆಗೂ ಭೈರಪ್ಪನವರು ಓದಿಸಿಕೊಳ್ಳುತ್ತಾರೆ. ಅವರ ಖ್ಯಾತಿ ಬೆಳೆಯುತ್ತಲೇ ಇರುತ್ತದೆ. ಅವರು ಮಾನ್ಯ; ನಾವು ಧನ್ಯ ಅಷ್ಟೇ.” ಇದು ಕೃತಿಯ ಬೆನ್ನುಡಿಯಲ್ಲಿ ಕಂಡ ನುಡಿಗಳು.
ಲೇಖಕರಾದ ದೀಕ್ಷಿತ್ ನಾಯರ್ ಅವರು ‘ಅಗೆದಷ್ಟೂ ಆಳ ಮೊಗೆದಷ್ಟೂ ಬೆರಗು’ ಎಂದು ಹೇಳುತ್ತಾ ಬರೆಯುತ್ತಾರೆ… “ಇಂಥದೊಂದು ಮಹತ್ಕಾರ್ಯ ನನ್ನಿಂದಾಗುತ್ತದೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಇದು ರಾತ್ರೋರಾತ್ರಿ ನನಗೆ ಒದಗಿ ಬಂದ ಸೌಭಾಗ್ಯ. ಪ್ರೀತಿಗೆ ಮತ್ತು ಒತ್ತಾಯಕ್ಕೆ ಮಣಿದು ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾಯಿತು. ಈ ಪುಸ್ತಕ ಬರೆಯಲು ನನಗಿದ್ದ ಅರ್ಹತೆ? ಈಗಲೂ ನನಗೆ ಗೊತ್ತಾಗುತ್ತಿಲ್ಲ. ಇದು ಯೋಗ ಮತ್ತು ಯೋಗ್ಯತೆಗೂ ಮೀರಿದ ಅವಕಾಶ. ನನಗಿರುವ ಒಂದೇ ಒಂದು ಅರ್ಹತೆ ಎಂದರೆ ನಾನು ಎಸ್.ಎಲ್ ಭೈರಪ್ಪನವರ ಅಪ್ಪಟ ಓದುಗ. ಹೈಸ್ಕೂಲ್ ಮತ್ತು ಕಾಲೇಜು ದಿನಗಳಲ್ಲೇ ಅವರ ಬಹುತೇಕ ಕೃತಿಗಳನ್ನು ಎರಡು-ಮೂರು ಬಾರಿ ಓದಿ ಮುಗಿಸಿದ್ದೆ. ನನ್ನ ಪಾಲಿಗೆ ಭೈರಪ್ಪ ಸಂತನಂಥ ಲೇಖಕ. ಅವರ ಸಾಹಿತ್ಯದಷ್ಟೇ ಅವರ ವ್ಯಕ್ತಿತ್ವ ಮತ್ತು ಬದುಕು ದೊಡ್ಡದು ಎಂದು ನನಗೆ ಯಾವತ್ತೋ ಗೊತ್ತಾಗಿತ್ತು. ಭೈರಪ್ಪನವರು ಬದುಕಿದಂತೆ ಬರೆದ ಮತ್ತು ಬರೆದಂತೆ ಬದುಕಿದ ಅಪರೂಪದ ಸಾಹಿತಿ. ಅವರದ್ದು ಸಾಚವಾದ ಬದುಕು. ಬದುಕಿನ ಕಡೆಯ ದಿನಗಳವರೆಗೂ ತಮ್ಮಿಚ್ಛೆಯಂತೆಯೇ ಬದುಕಿದವರು. ಅವರು ಆರೆಂದರೆ ಹಿಗ್ಗಲಿಲ್ಲ. ಮೂರೆಂದರೆ ಕುಗ್ಗಲಿಲ್ಲ. ಯಶಸ್ಸಿನ ತುತ್ತ ತುದಿಯಲ್ಲಿ ನಿಂತಿದ್ದಾಗಲೂ ಕಾಲುಗಳನ್ನು ನೆಲದಲ್ಲೇ ಊರಿದ್ದರು. ಕೀರ್ತಿಯ ಶನಿ ಅವರ ಹೆಗಲು ಹತ್ತಲಿಲ್ಲ. ಯಾವ ಪ್ರಚಾರ ಮತ್ತು ಪ್ರಸಿದ್ಧತೆಯನ್ನೂ ಭೈರಪ್ಪ ತಮ್ಮ ಮನೆಯ ಬಾಗಿಲತ್ತ ಬಿಟ್ಟುಕೊಳ್ಳಲಿಲ್ಲ. ಅವರು ತಪಸ್ವಿಯಂತೆ ಬರೆದರು. ಬರವಣಿಗೆಯ ಹೊರತಾಗಿ ಅವರು ಮತ್ತೇನನ್ನೂ ನೆಚ್ಚಿಕೊಳ್ಳಲಿಲ್ಲ. ಬರಹವೇ ಅವರನ್ನು ಗ್ಲೋಬಲ್ ಸ್ಟಾರ್ ಲೇಖಕನನ್ನಾಗಿಸಿತು. ಭೈರಪ್ಪನವರ ಪ್ರತಿಭೆ. ಅವರಿಗಿದ್ದ ಖ್ಯಾತಿಯ ಬಗ್ಗೆ ನಾನು ಇಲ್ಲಿ ಹೇಳುವ ಅವಶ್ಯಕತೆ ಇಲ್ಲ. ಕನ್ನಡದಮಟ್ಟಿಗೆ ಅವರ ಹಾಗೆ ಓದಿಸಿಕೊಂಡ ಲೇಖಕ ಮತ್ತೊಬ್ಬರಿಲ್ಲ ಎಂಬುದಂತೂ ನಿರ್ವಿವಾದ. ಭೈರಪ್ಪ ಕನ್ನಡದಲ್ಲಿ ಬರೆಯುತ್ತಲೇ ಇತರೆ ಭಾಷೆಗಳ ಲೇಖಕರಾಗಿ ಪ್ರಸಿದ್ಧಿಗಳಿಸಿದವರು ಅವರ ಕೃತಿಗಳು ಜಗತ್ತಿನ ಹತ್ತಾರು ಭಾಷೆಗಳಿಗೆ ಅನುವಾದಗೊಂಡಿವೆ. ಲಿಪಿಯೇ ಇಲ್ಲದ ಭಾಷೆಗಳಿಗೆ ಮತ್ತು ಬ್ರೇಲ್ ಲಿಪಿಗೂ ಅನುವಾದಗೊಂಡ ಕನ್ನಡದ ಏಕಮಾತ್ರ ಸಾಹಿತಿ ಎಂದರೆ ಅದು ಭೈರಪ್ಪ. ಅವರು ಅಖಿಲ ಭಾರತೀಯ ಸ್ತರದ ಲೇಖಕ. ವಿಶ್ವಮಾನ್ಯ ಸಾಹಿತಿ, ಬದುಕಿದ್ದ ಅಷ್ಟು ದಿನವೂ ಸುದ್ದಿಯಲ್ಲಿದ್ದವರು. ತಮ್ಮ ತೊಂಬತ್ನಾಲ್ಕು ವಯಸ್ಸಿನ ತುಂಬು ಬದುಕನ್ನು ತುಂತುಂಬಿ ಬದುಕಿದವರು. ಭೈರಪ್ಪನವರದ್ದು ವಿವಾದಗಳಾಚೆಗೂ ಇಷ್ಟವಾಗುವಂಥ ವ್ಯಕ್ತಿತ್ವ, ವಿರೋಧಿಗಳು ಅದೆಷ್ಟೇ ಬಾಣಗಳನ್ನು ಬಿಟ್ಟರೂ ಇವರದ್ದು ದಿವ್ಯ ಮೌನ. ಟೀಕೆಯ ಬಾಣಗಳಿಗೆ ಎದೆಕೊಟ್ಟು ನಿಂತರೇ ಹೊರತು ಆಚೀಚೆ ಅಲ್ಲಾಡಲಿಲ್ಲ. ಭೈರಪ್ಪನವರ ಎತ್ತರಕ್ಕೆ ಏರಲಾರದವರು ಮತ್ತು ಅವರ ಜನಪ್ರಿಯತೆಯನ್ನು ಸಹಿಸದವರು ಸರಣಿಯಾಗಿ ಅವರನ್ನು ಟೀಕಿಸಿದರು. ಒಳಗೊಳಗೆ ಹಲುಬಿದರು. ಕರುಬಿದರು. ಭೈರಪ್ಪ ಮಾತ್ರ ಬಿಲ್ಕುಲ್ ಜಗ್ಗಲಿಲ್ಲ. ದೇಶ-ವಿದೇಶ ಸುತ್ತಿಕೊಂಡು ಬಂದರು. ಗಂಭೀರವಾಗಿ ಬರೆದರು. ಪ್ರತಿ ಮನೆಯ ಲೇಖಕರೆನಿಸಿಕೊಂಡರು. ಭೈರಪ್ಪನವರನ್ನು ವಿರೋಧಿಗಳು ತುಳಿಯಲು ಹೊರಟಾಗಲೆಲ್ಲ ಅವರ ಪರವಾಗಿ ನಿಂತಿದ್ದು ಅವರ ಅಸಂಖ್ಯಾತ ಓದುಗರು. ಭೈರಪ್ಪನವರು ಪಟಾಲಂ ಕಟ್ಟಿಕೊಂಡು ತಿರುಗಿದವರಲ್ಲ. ಯಾರಿಗೂ ನೇರವಾಗಿ ಗುರುದೀಕ್ಷೆ ಕೊಟ್ಟವರಲ್ಲ. ಭಟ್ಟಂಗಿಗಳನ್ನು ಬೆಳೆಸಲಿಲ್ಲ. ಅವರು ತಾವಾಯಿತು ತಮ್ಮ ಪಾಡಾಯಿತು ಎಂಬಂತಿದ್ದವರು. ಅವರದ್ದು ಸಣ್ಣ ಮಿತ್ರಕೂಟ. ಅವರ ಬಳಿಯಷ್ಟೇ ತಮ್ಮ ಇಷ್ಟ-ಕಷ್ಟಗಳನ್ನು ಹಂಚಿಕೊಳ್ಳುತ್ತಿದ್ದರು. ಭೈರಪ್ಪನವರ ಕೃತಿಗಳನ್ನು ಕನ್ನಡದ ಯಾವ ವಿಮರ್ಶಕನೂ ಸರಿಯಾದ ರೀತಿಯಲ್ಲಿ ವಿಮರ್ಶಿಸಲಿಲ್ಲ. ಅದು ಕನ್ನಡ ಸಾಹಿತ್ಯಲೋಕದ ದೌರ್ಭಾಗ್ಯ. ವಿಮರ್ಶಕನ ಪೋಷಾಕು ತೊಟ್ಟಿದ್ದವರು ಮಾಡಿದ ಘನಘೋರ ಪಾಪ. ಕಳೆದ ಇಪ್ಪತ್ತು-ಮೂವತ್ತು ವರ್ಷಗಳಾಚೆಗೂ ಕನ್ನಡದ ಪತ್ರಿಕೆಗಳು ಭೈರಪ್ಪನವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಷ್ಟೆಲ್ಲ ತಿರಸ್ಕಾರಗಳ ನಡುವೆಯೂ ಭೈರಪ್ಪ ಅವರ ಸಾಹಿತ್ಯವು ಭಾಷೆ ಮತ್ತು ಗಡಿಗಳನ್ನು ಮೀರಿ ಹೊರಟಿತ್ತು. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಭೈರಪ್ಪನವರಿಗೆ ಹೊರ ರಾಜ್ಯ ಮತ್ತು ದೇಶಗಳಲ್ಲಿ ಮನ್ನಣೆ ದೊರೆಯಿತು. ವಿರೋಧಿಗಳಿಗೆ ಇದು ನುಂಗಲಾರದ, ನುಂಗಿದರೂ ಅರಗಿಸಿಕೊಳ್ಳಲಾಗದ ತುತ್ತಾಯಿತು. ಎದುರಿನವರ ಟೀಕೆ-ಟಿಪಣಿಗಳಿಗೆ ಅಂಜದ ಭೈರಪ್ಪ ಹಿಂದಿರುಗಿ ನೋಡದೆ ಹೆಜ್ಜೆ ಹಾಕಿದರು. ತಮ್ಮ ಕೃತಿಯ ಬಗ್ಗೆ ಓದುಗ ಏನು ಹೇಳುತ್ತಾನೆ ಎಂಬುದಷ್ಟೇ ಅವರಿಗೆ ಮುಖ್ಯವಾಗಿತ್ತು. ಓದುಗರೇ ಅವರ ಪಾಲಿನ ಘನ ವಿಮರ್ಶಕರು. ಬದುಕಿದ್ದಾಗ ಅಷ್ಟೆಲ್ಲ ತೊಂದರೆ ಕೊಟ್ಟವರು ಅವರ ಅಗಲಿಕೆಯ ನಂತರವಾದರೂ ಸುಮ್ಮನಾಗಬಹುದಿತ್ತು. ಉಹೂಂ, ಭೈರಪ್ಪನವರನ್ನು ಪ್ರತಿಸ್ಪರ್ಧಿ ಎಂದು ಭಾವಿಸಿದ್ದ ಮಹಾನ್(?) ಲೇಖಕರ ಶಿಷ್ಯ ವರ್ಗ ಒಂದೇ ಸಮನೆ ಊಳಿಟ್ಟಿತು. ಹಿರಿಯ ಜೀವವೊಂದು ಕಣ್ಮುಚ್ಚಿದೆ ಎಂಬುದನ್ನೂ ಮರೆತು ಅಪದ್ಧ ನುಡಿದರು. ಕೆಸರೆರಚಿದರು. ಏನೆನೋ ಹಣೆಪಟ್ಟಿ ಕಟ್ಟಿದರು. ಅದೊಂದು ಕೈಲಾಗದವರ ಪ್ರಲಾಪದಂತಿತ್ತು.
ಭೈರಪ್ಪನವರು ಬದುಕಿದ್ದಾಗಲೇ ಅವರ ಜನಪ್ರಿಯತೆ ಸಾಬೀತಾಗಿತ್ತು. ಅವರು ಗತಿಸಿದ ನಂತರವಂತೂ ಅವರ ಬದುಕಿನ ವಿರಾಟ ದರ್ಶನವೇ ಆಗಿ ಹೋಯಿತು. ನನ್ನಂಥ ಸಾವಿರಾರು ಅಭಿಮಾನಿಗಳಿಗೆ ಭೈರಪ್ಪನವರ ಸಾವಿನ ನೋವು ಗಂಟಲನ್ನು ಬಿಗಿಯಿತು. ಕತ್ತಲು ಆವರಿಸಿದಂತಾಯಿತು. ಭೈರಪ್ಪನಂಥವರಿಗೆ ಸಾವೇ ಇರಬಾರದಿತ್ತು ಎನಿಸಿತು. ತೊಂಬತ್ನಾಲ್ಕು ನಿಜಕ್ಕೂ ದೊಡ್ಡ ವಯಸ್ಸು. ಆದರೆ ಇನ್ನು ಹತ್ತಾರು ವರ್ಷಗಳು ಅವರು ನಮ್ಮ ನಡುವೆ ಬದುಕಿದ್ದರೆ ನಮಗೊಂದಿಷ್ಟು ಪುಣ್ಯ ಪ್ರಾಪ್ತಿಯಾಗುತ್ತಿತ್ತು. ಭೈರಪ್ಪನವರು ಕಾಲವಾದ ನಂತರ ಜಗತ್ತಿನಲ್ಲಿ ಇನಿತು ಪ್ರೀತಿ ಕಮ್ಮಿಯಾಗಿ ತುಸು ದುಃಖ ಹೆಚ್ಚಾದಂತೆ ಭಾಸವಾಯಿತು. ಭೈರಪ್ಪನವರ ಸಾವಿನ ನೋವಿನಲ್ಲಿ ಇದ್ದಾಗಲೇ ಅವರ ಬದುಕಿನ ಅಪರೂಪದ ಪ್ರಸಂಗಗಳನ್ನು ದಾಖಲಿಸಬೇಕು ಎಂಬ ಯೋಚನೆ ಬಂತು. ಪರ್ವತದ ಎದುರು ಕುಬ್ಬನಂತಿದ್ದ ನನ್ನಿಂದ ಅಂಥ ಕೆಲಸ ಸಾಧ್ಯವಿಲ್ಲ ಅಂತಲೂ ಅನ್ನಿಸಿತು. ಆದರೆ ನನ್ನೊಳಗಿನ ಓದುಗ ನನ್ನನ್ನು ಸುಮ್ಮನೆ ಕೂರಗೊಡಲಿಲ್ಲ. ಭೈರಪ್ಪನವರ ಅಷ್ಟು ಪುಸ್ತಕಗಳನ್ನೂ ಮತ್ತೆ ಮತ್ತೆ ಓದಿದೆ. ಅವರ ಕುರಿತು ಪ್ರಕಟವಾಗಿರುವ ಕೃತಿಗಳನ್ನೂ ಶ್ರದ್ದೆಯಿಂದ ಓದಿದೆ. ನೂರಾರು ಪತ್ರಿಕೆಗಳನ್ನು ತರಿಸಿಕೊಂಡೆ. ಭೈರಪ್ಪನವರ ಒಡನಾಡಿಗಳನ್ನು ಭೇಟಿಯಾದೆ. ಅವರ ಗಂಭೀರ ಓದುಗರ ಜತೆಗೆ ಮಾತಿಗಿಳಿದೆ. ನನಗೆ ಅಗತ್ಯವಿದ್ದ ಎಲ್ಲ ಮಾಹಿತಿಗಳನ್ನೂ ಪಡೆದುಕೊಂಡೆ. ಈ ಕೆಲಸಗಳ ನಡುವೆ ಸತತ ಒಂದು ತಿಂಗಳು ನಿದ್ದೆಗೆಡಬೇಕಾಯಿತು. ಕೆಲವರ ಮನೆ ಬಾಗಿಲಿಗೆ ಎಡತಾಕಿ ಬರಬೇಕಾಯಿತು. ನನಗಂತೂ ಪ್ರತಿಯೊಂದರಲ್ಲೂ ಸಂತಸ. ಎಲ್ಲಿಯೂ ದಣಿಯಲಿಲ್ಲ. ಈ ಪುಸ್ತಕ ಬರೆದು ಮುಗಿಸುವವರೆಗೂ ನನ್ನ ಉತ್ಸಾಹ ಬತ್ತಲಿಲ್ಲ. ಎಲ್ಲಿಯೋ ಇರುವ ಸರಸ್ವತಿ ಪುತ್ರ ಭೈರಪ್ಪ ಅಲ್ಲಿಂದಲೇ ನನ್ನನ್ನು ಹರಸಿದ್ದರು ಎಂದು ಕಾಣುತ್ತದೆ. ಹಾಗಾಗಿ ಇಂಥದೊಂದು ಶಿಖರವನ್ನು ಭೇದಿಸುವ ಸಾಹಸಕ್ಕೆ ಕೈಹಾಕಿದೆ. ಬಹುತೇಕರಿಗೆ ಸಾಹಿತಿಯಾಗಷ್ಟೇ ಭೈರಪ್ಪನವರು ಗೊತ್ತು. ಅವರ ಖಾಸಗಿ ಬದುಕಿನ ವಿಶೇಷ ಮತ್ತು ಅಪರೂಪದ ಪ್ರಸಂಗಗಳು ಗೊತ್ತಿರುವುದಿಲ್ಲ. ಈ ಕೃತಿಯು ಭೈರಪ್ಪನವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಅವರ ಬದುಕು ಮತ್ತು ವ್ಯಕ್ತಿತ್ವವನ್ನು ಇಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕಟ್ಟಿಕೊಡಲಾಗಿದೆ. ಪ್ರತಿ ಸಾಹಿತಿಯ ಬದುಕಿನ ಸುತ್ತಲೂ ಕೆಲವು ಅಪರೂಪದ ಪ್ರಸಂಗಗಳು ಇದ್ದೇ ಇರುತ್ತವೆ. ಆದರೆ ಭೈರಪ್ಪನವರ ಬದುಕಿನ ಪ್ರಸಂಗಗಳು ಬೇರೆಲ್ಲ ಸಾಹಿತಿಗಳಿಗಿಂತಲೂ ಭಿನ್ನ ಎಂಬುದು ಈ ಪುಸ್ತಕ ಓದುವಾಗಲೇ ನಿಮ್ಮ ಅರಿವಿಗೆ ಬರುತ್ತದೆ.”
ಎಸ್ ಎಲ್ ಭೈರಪ್ಪನವರ ಬದುಕಿನ ಛಾಯಾಚಿತ್ರಗಳನ್ನು ಒಳಗೊಂಡಿರುವ ಈ ಪುಸ್ತಕ ನಿಜಕ್ಕೂ ಸಂಗ್ರಹ ಯೋಗ್ಯ. ಸುಮಾರು ೧೪೦ ಪುಟಗಳ ಈ ಕೃತಿಯನ್ನು ಲೇಖಕರು ಎಸ್ ಎಲ್ ಭೈರಪ್ಪನವರ ಕುಟುಂಬ ವರ್ಗಕ್ಕೆ ಮತ್ತು ಅವರ ಸಮಸ್ತ ಅಭಿಮಾನಿಗಳಿಗೆ ಅರ್ಪಣೆ ಮಾಡಿದ್ದಾರೆ. ಭೈರಪ್ಪನವರ ಅಭಿಮಾನಿಗಳು ತಪ್ಪದೇ ಓದಬೇಕಾದ ಕೃತಿ. ಈ ಪುಸ್ತಕದಲ್ಲಿರುವ ಸುಮಾರು ೭೫ ಅಧ್ಯಾಯಗಳಿಂದ ಎರಡು ಆಸಕ್ತಿದಾಯಕ ಅಧ್ಯಾಯಗಳನ್ನು ಆಯ್ದು ‘ಸಂಪದ’ದಲ್ಲಿ ಪ್ರಕಟಿಸಲಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!