ಕೆಲವೊಮ್ಮೆ ಒಂದು ಉಡುಗೊರೆಯ ಹಿಂದಿರುವ ಪ್ರೀತಿ, ಪ್ರೇಮ, ಕಾಳಜಿ ಇವುಗಳನ್ನೆಲ್ಲಾ ಲೆಕ್ಕ ಹಾಕುವುದಕ್ಕೆ ಸಾಧ್ಯವೇ ಇರುವುದಿಲ್ಲ. ಅದರ ಮೌಲ್ಯ ಏನು? ಎಷ್ಟು? ಎಂಬುದನ್ನು ವಿವರಿಸುವುದೂ ಸುಲಭ ಸಾಧ್ಯವಲ್ಲ. ವಿವರಣಾತೀತ ಎಂದರೆ ತಪ್ಪಾಗಲಾರದು.

ಮೊನ್ನೆ ಜ.21ರಂದು ನಮ್ಮ ಅಮ್ಮನಿಗೆ 95 ವರ್ಷ ಪೂರ್ತಿಯಾದ ದಿನ. 96ನೇ ಜನ್ಮದಿನಾಚರಣೆಯ ಸಂಭ್ರಮದ ವಿಷಯ. ಆದರೆ ಖೇದಕರ ಸಂಗತಿಯೆಂದರೆ ಅಮ್ಮ ವಿಧಿವಶರಾಗಿ 13 ವರ್ಷಗಳಾದವು.ಅಮ್ಮನ ಹುಟ್ಟಿದ ಹಬ್ಬ ಅಂತ ಒಂದಷ್ಟು ಲಡ್ಡು ಮಾಡಿಸಿ ಶಾಲಾ ಮಕ್ಕಳಿಗೆ ಹಂಚಿ ಖುಷಿಪಟ್ಟಿದ್ದೆವು. ಅದೇ ದಿನ ನನ್ನ ಕೆಲವೊಂದು ಕಕ್ಷಿಗಾರರಿಗೂ, ಸ್ನೇಹಿತರಿಗೂ ಲಡ್ಡು ಹಂಚಿದ್ದೆ. ನನ್ನ ಸ್ನೇಹಿತರೋರ್ವರು ನಾನು ಕೊಟ್ಟ ಎರಡೂ ಲಡ್ಡುಗಳನ್ನು ಬೇಡ ಎನ್ನದೆ ಸ್ವೀಕರಿಸಿ ತಕ್ಷಣ ಪಕ್ಕದಲ್ಲಿದ್ದ ಅಪರಿಚಿತರೀರ್ವರಿಗೆ ನನ್ನ‌ ಮುಂದೆಯೇ ಕೊಟ್ಟು ಬಿಟ್ಟರು. ಅದನ್ನು ಪಡೆದ ಆ ಅಪರಿಚಿತರೀರ್ವರೂ ಒಂದು ಕ್ಷಣ ವಿಚಲಿತರಾದಂತೆ ಭಾಸವಾದರೂ ಅಸಹಾಯಕ ನಗು ಬೀರಿದರು ಮತ್ತು ನನ್ನನ್ನು ನೋಡಿ“ಥ್ಯಾಂಕ್ಸ್ ಸರ್” ಎಂದರು! ನಾನು ಮತ್ತೊಂದು  ಲಡ್ಡು ತೆಗೆದು ನೀವೂ ತಿನ್ನಿ ಅಂತ ಮತ್ತೆ ನನ್ನ ಆ ಸ್ನೇಹಿತರಿಗೆ ಕೊಟ್ಟೆ. "ನನಗೆ ಸ್ವೀಟ್ ಇಷ್ಟ ಇಲ್ಲ ವಕೀಲ್ರೆ…ನನಗೆ ಬೇಡ!” ಎಂದರು.

ಕೆಲವೊಮ್ಮೆ ನಾನು ಉಡುಗೊರೆ ಕೊಟ್ಟದ್ದನ್ನೂ ತಕ್ಷಣ ಎತ್ತಿ ಇನ್ಯಾರಿಗೋ ಕೊಟ್ಟದ್ದರ ಅನುಭವವೂ ನನಗೆ ಆಗಿದೆ.ಕೊಟ್ಟ ಉಡುಗೊರೆ ಇನ್ಯಾರದ್ದೊ ಜೇಬನ್ನೋ ಹೊಟ್ಟೆಯನ್ನೋ ಸೇರಬೇಕೆಂಬ ಕಿಂಚಿತ್ತು ಆಸೆ ಆ ಕೊಡುವವರಲ್ಲಿ ಇರುವುದಿಲ್ಲ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. 

ಯಾರೋ ನಮ್ಮ ಪ್ರೀತಿಪಾತ್ರರು ನಮಗೆ ಉಡುಗೊರೆ ಕೊಟ್ಟಾಗ, ನಮ್ಮೊಂದಿಗೆ ಸಿಹಿ ಹಂಚಿಕೊಂಡಾಗ ಅದಕ್ಕೆ ಪ್ರೀತಿಯಿಂದಲೇ ಸ್ಪಂದಿಸಿ ಪರಮಾನಂದದಿಂದ ಸ್ವೀಕರಿಸುವ ಜವಾಬ್ಧಾರಿಯನ್ನು ನಾವು ತೋರಬೇಡವೆ? ಅವರ ಮುಖ ಆನಂದದಿಂದ ಅರಳುವುದನ್ನು ಕಂಡು ನಾವು ಖುಷಿಪಡಬೇಡವೇ? ಆ ಭಾವನಾತ್ಮಕ ಸಂವೇದನೆ ನಮ್ಮಲ್ಲಿ ಸಾಯಗೊಡಕೂಡದಲ್ಲವೆ? ಅಷ್ಟೂ ಸಣ್ಣ ಜವಾಬ್ದಾರಿಯನ್ನು ತೋರದಿದ್ದರೆ ನಮ್ಮ ಸ್ನೇಹಕ್ಕೇನು ಬೆಲೆ?! ಇಷ್ಟವಿಲ್ಲದಿದ್ದರೂ ಒಮ್ಮೆ ಸ್ವೀಕರಿಸಿ ಮತ್ತೆ ಬಿಡುವು ಮಾಡಿಕೊಂಡು ನಮ್ಮಿಷ್ಟದಂತೆ ವಿಲೇವಾರಿ ಮಾಡುವುದು ಒಳ್ಳೆಯದಲ್ಲವೆ? ಮುಖಕ್ಕೆ ಹೊಡೆದಂತೆ ಇನ್ಯಾರಿಗೋ ಕೊಟ್ಟು ತಾನು ಮಹಾ ದಾನಿ ಅಂತಲೂ, ಸ್ಥಿತಪ್ರಜ್ಞ ಅಂತಲೂ ಅನ್ನಿಸಿಕೊಳ್ಳುವ ಅಗತ್ಯವಾದರೂ ಏನು ಅಲ್ಲವೇ?ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕಾರದ ಶಿಕಾರಿ ನಿರಂತರವಲ್ಲವೇ?  

-ಮೌನಮುಖಿ (ಆತ್ರಾಡಿ ಪೃಥ್ವಿರಾಜ್ ಹೆಗ್ಡೆ ನ್ಯಾಯವಾದಿ & ನೋಟರಿ - ಉಡುಪಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ