ದೆಹೀ

ಬಾಳಾಸಾಹೇಬ ಲೋಕಾಪುರ ಅವರ ನೂತನ ಕಾದಂಬರಿ ‘ದೆಹೀ’ ವಿಭಿನ್ನ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿದೆ. ಈ ಕಾದಂಬರಿಗೆ ಲೇಖಕ ಸಿ ಎಸ್ ಭೀಮರಾಯ ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. ಅದರ ಕೆಲವು ಸಾಲುಗಳು…

“ಡಾ. ಬಾಳಾಸಾಹೇಬ ಲೋಕಾಪುರ ಕನ್ನಡದ ಅತ್ಯಂತ ಪ್ರಮುಖ ಗದ್ಯ ಲೇಖಕರಲ್ಲಿ ಒಬ್ಬರು. ಸಣ್ಣಕಥೆ, ಕಾದಂಬರಿ ಮತ್ತು ವಿಮರ್ಶೆ – ಈ ಮೂರು ಕ್ಷೇತ್ರಗಳಲ್ಲಿ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಬಾಳಾಸಾಹೇಬ ಲೋಕಾಪುರ ಹುಟು ಕಥೆಗಾರ. ನಮ್ಮ ಜಾನಪದ ಕಥೆಗಾರರಂತೆ ದಿನನಿತ್ಯದ ಯಾವುದೇ ಸಂಗತಿಗಳನ್ನು ಅವರು ಕಥೆ ಮಾಡಿ ಹೇಳುತ್ತಾರೆ. ಕಥೆಗಳ ಕಣಜವೇ ಅವರಲ್ಲಿದೆ. 

‘ದೆಹೀ’ ಡಾ. ಬಾಳಾಸಾಹೇಬ ಲೋಕಾಪುರರ ಹತ್ತನೇ ಕಾದಂಬರಿ. ಇದು ಕನ್ನಡದ ಅರ್ಥಪೂರ್ಣವಾದ ಕಾದಂಬರಿಗಳ ಸಾಲಿನಲ್ಲಿ ಸಹಜವಾಗಿ ಸೇರುವ ಮಹತ್ವದ ಕಾದಂಬರಿ. ಕನ್ನಡ ‘ನವ್ಯ’ ಕಾದಂಬರಿಯ ಹಲವಾರು ಗುಣಲಕ್ಷಣಗಳನ್ನು ಈ ಕೃತಿ ಮೈಗೂಡಿಸಿಕೊಂಡಿದೆ. ಇಂಥ ಕೃತಿಗಳು ಕನ್ನಡಕ್ಕೆ ಹೊಸದೇನೂ ಅಲ್ಲ. ಗ್ರಾಮೀಣ ಪ್ರದೇಶದ ಜನರ ಸಾಮಾಜಿಕ-ರಾಜಕೀಯ-ಧಾರ್ಮಿಕ-ಆರ್ಥಿಕ ಜೀವನದೊಂದಿಗೆ, ಊಳಿಗಮಾನ್ಯ ವ್ಯವಸ್ಥೆಯ ಅವಸಾನ, ಗಂಡು-ಹೆಣ್ಣಿನ ಸ್ವಭಾವ-ಸಂಬಂಧಗಳ ಸಂಕೀರ್ಣತೆ, ಕೊಲೆ, ಹಾದರ, ಹಿಂಸೆ, ಹತ್ತಿಕ್ಕಲಾರದ ಕಾಮ, ಹೊಸ ಬದುಕಿನ ಹಂಬಲ, ಬದುಕಿನ ಅರ್ಥ ಮತ್ತು ಉದ್ದೇಶಗಳನ್ನು ಶೋಧಿಸುತ್ತಾ, ವ್ಯಕ್ತಿಗತ ನೆಲೆಯಲ್ಲಿ ಮೌಲ್ಯಗಳನ್ನು ವಿಶ್ಲೇಷಿಸುತ್ತಾ ಕಾದಂಬರಿ ಪ್ರಕಾರದ ಸಾಧ್ಯತೆಗಳನ್ನು ವಿಸ್ತರಿಸಿದ ಬಾಳಾಸಾಹೇಬ ಲೋಕಾಪುರರು ‘ದೆಹೀ’ಯಲ್ಲೂ ಮನುಷ್ಯ ಸ್ವಭಾವ ಮತ್ತು ಸಂಬAಧಗಳ ಸಂಕೀರ್ಣತೆಯನ್ನು ಮುಖಾಮುಖಿಯಾಗಿಸುವ ಮೂಲಕ ತಮ್ಮ ಪ್ರಯೋಗದ ಇನ್ನೊಂದು ಆಯಾಮವನ್ನು ಅನಾವರಣಗೊಳಿಸಿದ್ದಾರೆ. ಮನುಷ್ಯನ ಅಂತರAಗದಲ್ಲಿ ನಡೆಯುವ ಮಾನವ ಸಂಬAಧಗಳ ಬಗೆಗಿನ ಸಂಘರ್ಷ ಇಲ್ಲಿ ಮುಖ್ಯವಾಗಿದೆ. ಸಾಮಾಜಿಕ ಮತ್ತು ರಾಜಕೀಯ ಸಂಘರ್ಷಗಳು ಬಹಿರ್ಮುಖಿಯಾಗಿ ವ್ಯಕ್ತವಾದರೆ, ಮನಸ್ಸಿನಲ್ಲಿ ನಡೆವ ಮನುಷ್ಯ ಸಂಬಂಧಗಳ ಸಂಘರ್ಷ ಅಂತರ್ಮುಖಿಯದಾಗಿರುತ್ತದೆ.  

ನಾನು ಕಳೆದ ಇಪ್ಪತ್ತು ವರ್ಷಗಳಿಂದ ಬಾಳಾಸಾಹೇಬ ಲೋಕಾಪುರರ ಸಾಹಿತ್ಯ ಕೃತಿಗಳನ್ನು ಓದುತ್ತ-ವಿಮರ್ಶಿಸುತ್ತ ಬಂದಿದ್ದೇನೆ. ಬಾಳಾಸಾಹೇಬ ಲೋಕಾಪುರರ ಬಹಳಷ್ಟು ಕಥೆ-ಕಾದಂಬರಿಗಳು ತಮ್ಮ ಒಡಲಲ್ಲೇ ಕಥಾ ಮೀಮಾಂಸೆ- ಕಾದಂಬರಿ ಮೀಮಾಂಸೆಗಳನ್ನು ಒಳಗೊಂಡಿರುವುದು ಒಂದು ವಿಶೇಷ. ಅವರ ಎಷ್ಟೋ ಕೃತಿಗಳ ಮುಖ್ಯವಸ್ತುವೇ ವಿವಿಧ ಮಾದರಿಯ ಕಥನಗಳ ಸ್ವರೂಪ ಮತ್ತು ಪರಿಣಾಮಗಳ ಶೋಧ. ಮೀಮಾಂಸೆಯು ಅವರ ವಿಮರ್ಶಾ ಬರಹಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚು ಸೂಕ್ಷö್ಮವಾಗಿ ಮತ್ತು ತೀವ್ರವಾಗಿ ಕಂಡುಬರುವುದು ಅವರ ಕಥೆ-ಕಾದಂಬರಿಗಳಲ್ಲಿಯೇ. ಲೋಕಾಪುರರ ‘ಹೋಟೆಲ್ ಗೋದಾವರಿ’ ಮತ್ತು ‘ಪುರುಷಾವತಾರ’ ಕಾದಂಬರಿಗಳು ಪ್ರಕಟವಾದ ಕೆಲವೇ ವರ್ಷಗಳ ನಂತರ ‘ದೆಹೀ’ ಹೊರಬಂದಿದೆ. ಲೋಕಾಪುರರ ಹೆಚ್ಚಿನ ಕಥೆ-ಕಾದಂಬರಿಗಳಲ್ಲಿ ಬರವಣಿಗೆಯ ಉದ್ದೇಶ-ಸ್ವರೂಪ-ಪರಿಣಾಮಗಳ ಜಿಜ್ಞಾಸೆಯೊಂದು ಉದ್ದಕ್ಕೂ ಬೇರೆ ಬೇರೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತ ಹೋಗುತ್ತದೆ. ಕೃತಿಯಿಂದ ಕೃತಿಗೆ ಲೋಕಾಪುರ ಅವರು ತಮ್ಮ ಕೃತಿಗಳ ಒಳಗೇ ನಡೆಸುವ ಮೀಮಾಂಸೆಯೂ ಹೆಚ್ಚುಹೆಚ್ಚು ಪರಿಷ್ಕೃತ ರೂಪವನ್ನು ಪಡೆಯುತ್ತ ಹೋಗಿರುವುದನ್ನು ಗಮನಿಸಬಹುದಾಗಿದೆ. ವೇಗದ ಬದುಕಿನಲ್ಲಿ ಓದಿಗೆ ಸಮಯ ಸಿಗುವುದೇ ಕಷ್ಟ. ಆದ್ದರಿಂದ ಸೆಮಿಸ್ಟರ್ ಪದ್ಧತಿ, ಪತ್ರಿಕೆಗಳು ಮತ್ತು ಓದುಗರ ಇಂಗಿತಗಳನ್ನು ಅರಿತವರು ಹೆಚ್ಚು ದೀರ್ಘವಲ್ಲದ ಕಾದಂಬರಿ ರಚನೆಯತ್ತ ಗಮನ ಹರಿಸಿರುವುದನ್ನು ಇತ್ತೀಚಿನ ರಚನೆಗಳಲ್ಲಿ ಗುರುತಿಸಬಹುದು.

‘ದೆಹೀ’ ಉತ್ತರ ಕರ್ನಾಟಕದ ಎರಡು ಗ್ರಾಮಗಳ ಗೌಡರಾದ ರಾಜಾಪುರದ ಬಸವೇಗೌಡ ಮತ್ತು ಲಕಮಾಪುರದ ಫಿರಂಗಿಗೌಡರ ದರ್ಪ-ದವಲತ್ತುಗಳು, ಕ್ರೌರ್ಯ-ಕೇಡುಗಳು ಸಡ್ಡು ಹೊಡೆದು ಮುಖಾಮುಖಿಯಾಗುವ ಕಥೆ. ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಆಡಂಬರ, ದಬ್ಬಾಳಿಕೆ, ದೌರ್ಜನ್ಯ, ದರ್ಪ, ದವಲತ್ತು, ಕ್ರೌರ್ಯ, ಕೇಡು, ಅಟ್ಟಹಾಸ ಮತ್ತು ವೈಭವೋಪೇತ ಜೀವನಕ್ಕೆ ಹೆಸರಾಗಿದ್ದ ಗೌಡ ಮನೆತನಗಳು (ವಾಡೆಗಳು) ಕಾಲಕ್ರಮದಲ್ಲಿ ಅವೇ ಕಾರಣಗಳಿಂದ ಅವನತಿಯತ್ತ ಸಾಗಿದ್ದು ಐತಿಹಾಸಿಕ ಸತ್ಯ. ಇಂಥ ಗೌಡ ಮನೆತನಗಳೆರಡರ (ವಾಡೆಗಳೆರಡರ) ವಿಶಿಷ್ಟ ಕಥೆಗಳನ್ನೊಳಗೊಂಡ ‘ದೆಹೀ’ ಒಂದು ಮನೋಜ್ಞ ಸಾಮಾಜಿಕ ಕಾದಂಬರಿ. ಕಾಲಗರ್ಭದಲ್ಲಿ ಮರೆವಿಗೆ ಜಾರುತ್ತಿರುವ ಗೌಡ ಮನೆತನಗಳ (ವಾಡೆಗಳ) ಇತಿಹಾಸವನ್ನು ಮತ್ತೆ ಕಟ್ಟಿಕೊಡುವ ದಾಖಲೆಯಾಗಿಯೂ ಈ ಕಾದಂಬರಿ ಮಹತ್ವ ಪಡೆಯುತ್ತದೆ. ಎರಡು ತಲೆಮಾರುಗಳ ಕಥೆಯನ್ನು ಒಳಗೊಂಡಿರುವ, ಎರಡು ಗೌಡ ಕುಟುಂಬಗಳನ್ನು (ವಾಡೆಗಳನ್ನು) ಕೇಂದ್ರವಾಗಿರಿಸಿಕೊಂಡು  ಈ ಕಾದಂಬರಿಯನ್ನು ಹೆಣೆಯಲಾಗಿದೆ. ರಾಜಾಪುರದ ಬಸವೇಗೌಡ ಮತ್ತು ಲಕಮಾಪುರದ ಫಿರಂಗಿಗೌಡ ಎಂಬ ಜಮೀನ್ದಾರರ ಸುತ್ತ ಈ ಕಥನ ಸಾಗುತ್ತದೆ. ಈ ಆವರಣದಿಂದ ಕೆಲವು ಪಾತ್ರಗಳು ಬೇರೆಬೇರೆ ಕಾರಣಗಳಿಂದ ನಿರ್ಗಮಿಸುವ ಉದಾಹರಣೆಗಳಿವೆ. ಹಾಗೆಯೇ ಇದಕ್ಕಿಂತ ಹೆಚ್ಚು ಭಿನ್ನವಾದ ಭೌಗೋಳಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದಿಂದ ಈ ಊರು-ಮನೆಗಳಿಗೆ ಕೆಲವು ಪಾತ್ರಗಳು ಆಗಮಿಸಿ ಕೆಲಕಾಲ ಈ ಜಾಗದಲ್ಲಿ ಇರುತ್ತವೆ. ಕಥನವು ಲಕಮಾಪುರ ಮತ್ತು ರಾಜಾಪುರದ ಒಳಗೂ-ಹೊರಗೂ ಚಲಿಸುತ್ತಾ ಲೋಕಾಪುರರ ಹಿಂದಿನ ಕಾದಂಬರಿಗಳಿಗಿಂತ ಹೆಚ್ಚಿನ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಈ ಕಾದಂಬರಿಯ ಕೆಲವು ಘಟನೆಗಳು ಉತ್ತರ ಕರ್ನಾಟಕದಿಂದ ಪುಣೆ ಮತ್ತು ಹಿಮಾಯದವರೆಗೆ ನಡೆಯುವಂತವುಗಳು. 

‘ದೆಹೀ’ ಕಾದಂಬರಿಯ ಬಹು ದೊಡ್ಡ ಸಾಧನೆ ಎಂದರೆ, ಹಳ್ಳಿಯ ಜೀವನದ ಪುನರ್‌ಸೃಷ್ಟಿ (ಇದು ಇಂದಿನ ಗ್ರಾಮಲೋಕವಲ್ಲ. ಕೆಲವು ದಶಕಗಳ ಹಿಂದಿನದು. ಅಂದರೆ ಐವತ್ತು-ಅರವತ್ತರ ದಶಕ.) ಹಳ್ಳಿ ಜೀವನದಲ್ಲಿ ನೂರು ವಿವರಗಳನ್ನು ಕಂಡು, ಅದನ್ನು ಪ್ರೀತಿಸಿ, ಪ್ರೀತಿಸುವಾಗಲೂ ಅದರ ಮಿತಿಗಳನ್ನು ಕಾಣಬಲ್ಲ ಕಣ್ಣು-ಹೃದಯಗಳು ಮಾತ್ರ ಹೀಗೆ ಹಳ್ಳಿಯ ಜೀವನವನ್ನು ಪುನರ್‌ಸೃಷ್ಟಿಸಬಲ್ಲವು. ಕಾದಂಬರಿಯ ಪ್ರಾರಂಭದ ಭಾಗಗಳಲ್ಲಿ ಕ್ರಿಯೆಯು ನಿಧಾನವಾಗಿ ಸಾಗುತ್ತದೆ. ಹಲವು ವರ್ಣನೆಗಳಿಗೆ ಅವಕಾಶವಿದೆ. ಅನಂತರ ಇದು ಕಡಿಮೆಯಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದ ಜನರ ನಂಬಿಕೆಗಳು, ರೂಢಿಗಳು, ಗ್ರಾಮಿಣ ಜೀವನದ ದೃಶ್ಯಗಳು ಈ ವೃತ್ತಾಂತದಲ್ಲಿ ಹಾಸುಹೊಕ್ಕಾಗಿ ಬರುತ್ತವೆ. ಈ ಜನರ ಜೀವನ ಕಣ್ಣ ಮುಂದೆ ನಿಲ್ಲುತ್ತದೆ. ಇಲ್ಲಿ ಫ್ಯೂಡಲ್ ವ್ಯವಸ್ಥೆ, ನಂಬಿಕೆಗಳು, ಬೇರೆ ಬೇರೆ ವರ್ಗಗಳ ಸಂಬಂಧಗಳು, ನ್ಯಾಯ ಪದ್ಧತಿ ಇವೆಲ್ಲ ಆ ವ್ಯವಸ್ಥೆಯ ಭಾಗಗಳು. ಹಳ್ಳಿಯ ಜೀವನದ ಕಹಿಗಳು, ದ್ವೇಷಗಳು, ವೈರತ್ವ ಎಲ್ಲ ಕಾದಂಬರಿಯುದ್ದಕ್ಕೂ ಅನುಭವವಾಗುತ್ತದೆ. ಹಸೀಭಾವಗಳು ಪ್ರದರ್ಶಿತವಾಗುತ್ತವೆ. ರಾಜಾಪುರ ಮತ್ತು ಲಕಮಾಪುರ ಬೇರೆ ಬೇರೆಯಾದರೂ ಜೀವನವೈಖರಿ ಭಿನ್ನವಿಲ್ಲ. 

ಬಸವೇಗೌಡ, ಸುಭಾಸಗೌಡ ಮತ್ತು ಫಿರಂಗಿಗೌಡ ಈ ಮೂರೂ ಪಾತ್ರಗಳಿಗೆ ತಾಕಿದಂತೆ ಬರುವ ಹೆಣ್ಣು ಪಾತ್ರಗಳ ವೈವಿಧ್ಯ ಗಮನಾರ್ಹ. ಗೌರವ್ವ, ಭಾಗವ್ವ, ಪಾರವ್ವ, ಕನಕಮಾಲಾ, ಲಾವಣ್ಯಲಕ್ಷ್ಮಿ, ನಿಶಾನಿ ನೀಲವ್ವ ಮತ್ತು ಪಿತಳಿ ಶಾರವ್ವ, ಕಮಲವೇಣಿ, ಅಕಲಂಕ, ಸ್ವಾಮಿ ಅಜಿಂಕ್ಯಾನAದ ಇವರು ಕಾದಂಬರಿಗೇ ಒಂದು ವೇಗವನ್ನು ತಂದುಕೊಟ್ಟವರು. ಕನಕಮಾಲಾ, ಬಸ್ಯಾ, ದುರ್ಬೀನ ಯಮನ್ಯಾ, ಭರ್ಚಿ ಭೀಮ, ನಾಯಿಂದ ಮಲ್ಲಪ್ಪ, ಪಾರವ್ವ, ಗುಲಾಲ ದ್ಯಾಮ್ಯಾ, ಧೂಪವ್ವ, ಪರಮೂಗೌಡ, ಡೋಂಗ್ರಿ ಸಿದ್ಧ, ಚಂದ್ರಿ, ನಿಶಾನಿ ನೀಲವ್ವ, ರುಕುಮವ್ವ, ಶಾಂತವ್ವ, ನಿಂಬೆವ್ವ, ಪಿತಳಿ ಶಾರವ್ವ, ಪುತಳವ್ವ, ಬೆಣ್ಣೆ ವ್ಯಾಪಾರದ ಬುಡ್ಡುಸಾಹೇಬ, ಫಾತಿಮಾ, ಬಟ್ಟೆ ವ್ಯಾಪಾರಿ ಹುಸೇನಿ, ಮಠಪತಿ ಶಂಕ್ರಯ್ಯ, ಹಿರೇಮಠ ಶಿವರುದ್ರಯ್ಯ, ಮುಂತಾದ ಪಾತ್ರಗಳ ಮೂಲಕ ಲೇಖಕರು ನಮ್ಮ ಹಳ್ಳಿಗಳಲ್ಲಿ ಕಾಣುವ ಮುಗ್ಧ ಮತ್ತು ಕ್ರೂರ ಎರಡೂ ಬಗೆಯ ಮುಖಗಳನ್ನು ವೈವಿಧ್ಯದ ಮೂಲಕ ತೋರಿಸಿದ್ದಾರೆ. 

ಸರಳ ಹಾಗೂ ನೇರ ಕಥನಶೈಲಿ ಈ ಇಡೀ ಕಾದಂಬರಿಯನ್ನು ಅಡೆತಡೆಯಿಲ್ಲದೆ ಓದಿಸಿಕೊಂಡು ಹೋಗುವಂತಿದೆ. ಭಾಷೆಯ ದೃಷ್ಟಿಯಿಂದಲೂ ಬಾಳಾಸಾಹೇಬ ಲೋಕಾಪುರ ಅವರು ಮುಂಬೈ ಕರ್ನಾಟಕದ ದೇಸಿ ಕನ್ನಡವನ್ನು ಸೃಜನಾತ್ಮಕವಾಗಿ ಬಳಸಿಕೊಂಡಿದ್ದು ಕಾದಂಬರಿಗೆ ವಾಚ್ಯ ಮೀರಿದ ಧ್ವನಿ ಪ್ರಾಪ್ತವಾಗಿದೆ. ಕಥಾ ಸಂವಿಧಾನ, ಪಾತ್ರ ಪೋಷಣೆ, ನಿರೂಪಣಾ ಶೈಲಿ, ಭಾಷಾ ಬಳಕೆ, ಜೀವನ ದೃಷ್ಟಿ-ಹೀಗೆ ಯಾವ ನೆಲೆಯಲ್ಲಿ ನೋಡಿದರೂ ಈ ಕಾದಂಬರಿಯ ಹೊಸತನ ಎದ್ದು ತೋರುವಂತಿದೆ. ಆಳವಾದ ಚಿಂತನೆ, ಬದುಕಿನ ಮೂಲಭೂತ ಪ್ರಶ್ನೆಗಳ ಅರಿವು, ನಿಕಟವಾದ ಜೀವನಾನುಭವ, ಜಟಿಲವಾದ ಮನಃಕ್ರಿಯೆಯನ್ನು ಪದರು ಪದರಾಗಿ ಬಿಡಿಸಿ ನೋಡುವ ಜಾಣ್ಮೆ, ಸಜೀವ ಭಾಷೆಯ ಮೇಲಿನ ಹಿಡಿತ, ಮೂಲತಃ ಕಾವ್ಯ ಭಾಷೆಯ ಅಂಗಗಳಾದ ಪ್ರತಿಮೆ-ಪ್ರತೀಕಗಳನ್ನು ಗದ್ಯದ ಬರವಣಿಗೆಯಲ್ಲಿ ಅಳವಡಿಸಿಕೊಂಡ ಶೈಲಿ- ಎಲ್ಲಕ್ಕಿಂತ ಹೆಚ್ಚಾಗಿ ಅನುಭವಕ್ಕೆ ಮೂರ್ತ ರೂಪಕೊಡಬಲ್ಲ, ನಾಟ್ಯೀಕರಿಸಬಲ್ಲ ಶಕ್ತಿ ಇವೆಲ್ಲವುಗಳ ಫಲವಾಗಿ ಬಂದ ‘ದೆಹೀ’ ಬಹುಕಾಲ ಬಾಳಬಲ್ಲ ಕೃತಿಯಾಗಿದೆ. ೧೮೪ ಪುಟಗಳ ಈ ಕಾದಂಬರಿ ಉತ್ತಮ ಓದಿಗೆ ಸಹಕಾರಿ.