ಬಹಳಷ್ಟು ಜನ ದನ ಸಾಕುವುದು ಮಾಸಿಕ ವರಮಾನ ನಿಶ್ಚಿತವಾಗಿ ಪಡೆಯುವ ಆಶೆಯಿಂದ. ಹಸು ಸಾಕುವಂತೆ ರೇಷ್ಮೆ ಹುಳು ಸಾಕುವುದರಿಂದಲೂ ಮಾಸಿಕ ನಿರ್ದಿಷ್ಟ ವರಮಾನ ಪಡೆಯಬಹುದು. ಇದು ಸರಕಾರಿ ಸಂಬಳಕ್ಕಿಂತ ಕಡಿಮೆ ಏನಿಲ್ಲ. ಹಸು ಸಾಕುವ ಕೆಲಸಕ್ಕಿಂತ ಸುಲಭ ಕೂಡಾ.

ಹಸುಗಳ ಹೊಟ್ಟೆ ತುಂಬಲು ಮೇವು ಮುಖ್ಯ ಆಹಾರ. ಮೇವಿನ ಆಕರಗಳಾದ ಹುಲ್ಲು, ಹಸಿ ಸೊಪ್ಪನ್ನು ತಂದು ಹಸುವಿನ ಎದುರು ಹಾಕಿದರೆ ಸಾಕು ಹಸುಗಳು ಅದನ್ನು ಗಬಗಬನೆ ಭಕ್ಷಿಸಿ, ಜೀರ್ಣಿಸಿ ಸಗಣಿ ರೂಪದಲ್ಲಿ ಹೊರ ಹಾಕುತ್ತವೆ. ದೇಹಾರೋಗ್ಯ ವೃದ್ಧಿಸಿಕೊಳ್ಳುತ್ತವೆ. ಇದಕ್ಕೂ ರೇಷ್ಮೆ ಹುಳು ಸಾಕಣೆಗೂ ಯಾವುದೇ ವ್ಯತ್ಯಾಸವಿಲ್ಲ. ಹಸುಗಳಿಗೆ ಹುಲ್ಲು, ಸೊಪ್ಪು ಸದೆಗಳನ್ನು ತಿನಬಡಿಸಿದಂತೆ ರೇಷ್ಮೆ ಹುಳುಗಳಿಗೂ ಹಿಪ್ಪು ನೇರಳೆ ಸೊಪ್ಪು ತಿನ ಬಡಿಸಿದರೆ ಸಾಕಾಗುತ್ತದೆ. ಇದು ರೇಷ್ಮೆ ವ್ಯವಸಾಯದಲ್ಲಿ ಇಂದು ಬದಲಾವಣೆಯಾದ ಸರಳ ತಾಂತ್ರಿಕತೆಗಳು. ಈಗ ಹಸುಗಳಿಗೆ ಮೇವು ಹಾಕುವುದೂ, ಹುಳುಗಳಿಗೆ ಸೊಪ್ಪು ಹಾಕುವುದೂ ಒಂದೇ ಎನ್ನುತ್ತಾರೆ ರೇಶ್ಮೆ  ವ್ಯವಸಾಯವನ್ನು ಮಾಡುವವರು.

ನಮ್ಮ ರಾಜ್ಯದ ರಾಮನಗರ ಜಿಲ್ಲೆ, ಕೋಲಾರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಳ್ಳೇಗಾಲ, ಚಿತ್ರದುರ್ಗದ ಚಳ್ಳಕೆರೆ, ಮೊಳಕಾಲ್ಮೂರು, ಬೆಳಗಾವಿ ಮುಂತಾದ ಕಡೆ ಕೆಲವು ರೈತರಿಗೆ ರೇಷ್ಮೆ ಹುಳು ಸಾಕಣೆಯೇ ಮುಖ್ಯ ಕಸುಬು. ಹಳ್ಳಿಗಳಲ್ಲಿ ಸರಿಸುಮಾರು ವಾಸದ ಮನೆಗಳಿರುವಷ್ಟೇ ತೆಂಗಿನ ಗರಿ ಹೊದಿಸಿ ಮಾಡಿದ ಹುಳು ಸಾಕಣೆ ಮನೆಗಳು ಇರುತ್ತವೆ. ರಸ್ತೆಯಲ್ಲಿ ಎಲ್ಲಿ ಪ್ರಯಾಣಿಸಿದರೂ, ಮನೆ, ರಸ್ತೆ ಪಕ್ಕ, ಹುಳು ಬಿಟ್ಟ ಚಂದ್ರಿಕೆಗಳನ್ನು ಇಟ್ಟಿರುವುದು ಕಂಡುಬರುತ್ತದೆ. ಮನೆಮಂದಿ ಕೆಲವು ಚಂದ್ರಿಕೆ ಸ್ವಚ್ಛ ಮಾಡುತ್ತಾ ಇರುವುದು ಕಂಡುಬಂದರೆ ಮತ್ತೆ ಕೆಲವು ಮನೆಯೊಳಗೆ ಹುಳುಗಳಿಗೆ ಸೊಪ್ಪು ಹಾಕುತ್ತಿರುತ್ತಾರೆ. ಮನೆ ಪಕ್ಕದಲ್ಲಿ ನಿಂತರೆ ಒಳಗೆ ಸಣ್ಣಗೆ ಕಾಗದ ಹರಿದ ಸದ್ದು ಕೇಳಿಸುತ್ತದೆ. ಅದು ಬೆಳೆದ ಹುಳುಗಳು ಎಲೆ ಭಕ್ಷಿಸುವ ಸದ್ದು. ಇನ್ನು ಕೆಲವು ಮನೆ ಚಾವಡಿಯಲ್ಲಿ ರೇಷ್ಮೆ ಗೂಡುಗಳನ್ನು ರಾಶಿ ಹಾಕಿ ಅದನ್ನು ಸ್ವಚ್ಛ ಮಾಡುತ್ತಿರುತ್ತಾರೆ. ಇದು ರಾಮನಗರ, ಕನಕಪುರ ಕಡೆಯಲ್ಲಿ ಕಂಡು ಬರುವ ದೃಶ್ಯ. ಇಲ್ಲಿ ಎಲ್ಲಾ ಮನೆಯಲ್ಲೂ ರೇಷ್ಮೆ ವ್ಯವಸಾಯವೇ ಮುಖ್ಯ ಕಸುಬು. ಎಷ್ಟು ಸಣ್ಣ ರೈತನಾದರೂ ೧೦೦ ಮೊಟ್ಟೆ ಹುಳು ಸಾಕುತ್ತಾರೆ. ಹೆಚ್ಚಿನವರು ಬೆಳೆಸುವುದು ಕೋಲಾರದ ಗೋಲ್ಡ್ ತಳಿ. ಹಳದಿ ಬಣ್ಣದ ಈ ರೇಷ್ಮೆ ಹುಳು ಸಾಕಣೆಗೆ ಸುಲಭ.

ಕೃಷಿ ಬೆಳೆಗಳ ಸಾಲಿನಲ್ಲಿ ನಿರಂತರವಾಗಿ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಾ ಆ ತಂತ್ರಜ್ಞಾನಗಳು ರೈತರ ಹೊಲದಲ್ಲಿ ಅಳವಡಿಕೆಯಾದ ವ್ಯವಸಾಯವೆಂದರೆ ರೇಷ್ಮೆ ಹುಳು ಸಾಕಣೆ ಎನ್ನಬಹುದು. ಇದು ನಮ್ಮ ದೇಶದ ಅಸಂಖ್ಯಾತ ಸಣ್ಣ ಮತ್ತು ಮಧ್ಯಮ ಹಿಡುವಳಿಯ ರೈತರ ಆರ್ಥಿಕ ಭದ್ರತೆಗೆ ಕಾರಣವಾದ ಬೆಳೆ. ವರ್ಷದಿಂದ ವರ್ಷಕ್ಕೆ ರೇಷ್ಮೆಯ ಸಿದ್ಧ ಉಡುಪಿನ ಬಟ್ಟೆಗಳ ಬಳಕೆ ಹೆಚ್ಚಾಗುತ್ತಿದ್ದು, ಇದು ಎಂದೆಂದಿಗೂ ಸಂತೃಪ್ತ ಸ್ಥಿತಿಗೆ ತಲುಪದ ಮಟ್ಟದಲ್ಲಿದೆ. ಪ್ರಪಂಚದಾದ್ಯಂತ ರೇಷ್ಮೆ ಬಟ್ಟೆಗೆ ಬೇಡಿಕೆ ಇದೆ, ಬಳಕೆ ಇದೆ. ಆದುದರಿಂದ ಇದು ಸದಾ ಸುರಕ್ಷಿತ ಬೆಳೆ ಎನ್ನಬಹುದು.

ಕರ್ನಾಟಕದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ರೇಷ್ಮೆ ವ್ಯವಸಾಯದಲ್ಲಿ ತೊಡಗಿಸಿಕೊಂಡ ರೈತರಿರುವ ಪ್ರದೇಶವೆಂದರೆ ರಾಮನಗರ, ರಾಮನಗರ ಜಿಲ್ಲೆಯ ಕನಕಪುರ, ಚನ್ನಪಟ್ಟಣ, ಕೋಲಾರ, ಶೀಡ್ಲಘಟ್ಟ ಚಿತ್ರದುರ್ಗ ಮುಂತಾದ ಪ್ರದೇಶಗಳು. ಎಲ್ಲಿ ನೋಡಿದರೂ ಕಂಡು ಬರುವುದು ಹಿಪ್ಪು ನೇರಳೆ ತೋಟಗಳು. ಹಾಗೂ ಹುಳು ಮೇಯಿಸಲು ಕಟ್ಟಲಾದ ಹುಳು ಮನೆಗಳು. ಮುಖ್ಯ ಕೃಷಿ ಎಂದರೆ ಹಿಪ್ಪುನೇರಳೆ ಬೆಳೆ, ಮುಖ್ಯ ಕಸುಬು ಎಂದರೆ ರೇಷ್ಮೆ ವ್ಯವಸಾಯ.  ಕೆಲವರು ಪ್ರತ್ಯಕ್ಷವಾಗಿ ರೇಷ್ಮೆ ವ್ಯವಸಾಯದಲ್ಲಿ ತೊಡಗಿಸಿಕೊಂಡವರಾದರೆ ಮತ್ತೆ ಕೆಲವರು ಪರೋಕ್ಷವಾಗಿ ಹಿಪ್ಪುನೇರಳೆ ವ್ಯವಸಾಯದ ಮೂಲಕ ಬದುಕು ಕಂಡುಕೊಂಡವರು. 

ಮೇಲಿನ ಪ್ರದೇಶಗಳಲ್ಲೆಲ್ಲಾ ಬೆಳಗ್ಗೆದ್ದರೆ ಸುಮಾರು ೭ ಗಂಟೆ ತನಕ  ಸೊಪ್ಪು ತರುವ ಕೆಲಸ. ನಂತರ ಒಂದು ಗಂಟೆ ಹುಳುಗಳಿಗೆ ಸೊಪ್ಪು ಹಾಕುವ ಮತ್ತು ಸ್ವಚ್ಛ ಮಾಡುವ ಕೆಲಸ. ನಂತರ ಸಂಜೆ ೪ ಗಂಟೆ ತನಕ ಬಿಡುವು. ಮತ್ತ ಪುನಃ ಸೊಪ್ಪು ತರುವುದು, ಹುಳುಗಳಿಗೆ ಹಾಕುವುದು. ಜನ ಪೇಟೆಯಲ್ಲಿ ಹೆಚ್ಚು ಸುತ್ತಾಡುವುದೇ ೧೧ ಗಂಟೆ ನಂತರ. ೪ ಗಂಟೆ ನಂತರ ಜನ ಪೇಟೆಯಿಂದ ಮನೆಗೆ ತೆರಳಿ ರೇಷ್ಮೆ ಕೃಷಿಯಲ್ಲಿ ತಲ್ಲೀನರಾಗುತ್ತಾರೆ. ರೇಷ್ಮೆ ವ್ಯವಸಾಯದಲ್ಲಿ ಸಣ್ಣ ಮತ್ತು ಮಧ್ಯಮ ಸ್ತರದ ಬೆಳೆಗಾರರೇ ಜಾಸ್ತಿ. ಬರೇ ಹಿಪ್ಪುನೇರಳೆ ಸಸಿ ಬೆಳೆಸಿ ಅದನ್ನು ಬಾಡಿಗೆಗೆ ಕೊಡುವವರಿದ್ದಾರೆ. ಹಿಪ್ಪು ನೇರಳೆ ಬೆಳೆಸಲು ಭೂಮಿ ಲೀಸ್‌ಗೆ ಕೊಡುವವರಿದ್ದಾರೆ. ಹುಳು ಸಾಕುವವರಿಗೆ ಚಂದ್ರಿಕೆ ಬಾಡಿಗೆಗೆ ಕೊಡುವವರಿದ್ದಾರೆ. ಹುಳು ಸಾಕಣೆ ಮನೆ ಬಾಡಿಗೆಗೆ ಕೊಡುವವರಿದ್ದಾರೆ, ಚಾಕಿ ಹುಳು ಮಾಡಿ ಕೊಡುವವರಿದ್ದಾರೆ. ಒಟ್ಟಾರೆಯಾಗಿ ರೇಷ್ಮೆ ವ್ಯವಹಾರ ಒಂದಿಲ್ಲೊಂದು ರೀತಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದೆ. ಸಾಮಾನ್ಯವಾಗಿ ಪ್ರತಿಯೊಂದು ಕುಟುಂಬವೂ ತಿಂಗಳಿಗೆ ಒಂದರಂತೆ ಬೆಳೆ ಮಾಡಿ ಮಾಸಿಕ ಕನಿಷ್ಠ ರೂ. ೧೫ ಸಾವಿರವಾದರೂ ಸಂಪಾದನೆ ಮಾಡುತ್ತಾರೆ. ಕೆಲವರು ೫೦-೬೦ ಸಾವಿರ, ಲಕ್ಷ ಲೆಕ್ಕದಲ್ಲೂ ಸಂಪಾದನೆ ಮಾಡುವವರೂ ಇದ್ದಾರೆ. ವರ್ಷಕ್ಕೆ ೧೦-೧೨ ಬೆಳೆ. ಈಗ ರೇಷ್ಮೆ ಹುಳು ಗೂಡುಗಳು ಮಾಡಲು ಹಿಂದಿನಂತೆ ೨೮ ದಿನ ಬೇಕಾಗಿಲ್ಲ. ಈ ಅವಧಿಯಲ್ಲಿ ಸುಮಾರು ೫ ದಿನ ಕಡಿಮೆಯಾಗಿದೆ. ಕಾರಣ ಎಂದರೆ ಹಿಂದೆ ರೈತರೇ ಇಲಾಖೆಯಿಂದ ಮೊಟ್ಟೆ ತಂದು ಅದನ್ನು ಚಾಕಿ ಹುಳುವಾಗಿ ಬೆಳೆಸಿ ಮರಿ ಮಾಡಿ ಸಾಕಬೇಕಿತ್ತು. ಈಗ ಹಾಗಿಲ್ಲ. ಒಂದು ಜ್ವರ ಮುಗಿಸಿದ ಚಾಕಿ ಹುಳುಗಳೇ ಸಿಗುತ್ತವೆ. ಸ್ವಲ್ಪ ಹೆಚ್ಚು ಹಣ ಕೊಟ್ಟರೆ ಎರಡು ಜ್ವರ ಮುಗಿಸಿದ ಹುಳು ಸಿಗುತ್ತವೆ. ಇದನ್ನು ಒದಗಿಸಲು ಅಧಿಕೃತ ಜಾಕಿ ಹೈಟೆಕ್ ಸಾಕಣೆ ಕೇಂದ್ರಗಳು ಇವೆ. ಒಟ್ಟಿನಲ್ಲಿ ರೇಷ್ಮೆ ವ್ಯವಸಾಯದಲ್ಲಿ ದಿನ ಕಳೆದಂತೆ ರೈತರಿಗೆ ಅನುಕೂಲವಾಗುವ ಸುಧಾರಣೆಗಳು ಆಗುತ್ತಲೇ ಇವೆ. ಈ ಸುಧಾರಣೆ ಹೆಚ್ಚು ಹೆಚ್ಚು ಕೃಷಿಕರನ್ನು ಆಕರ್ಷಿಸುತ್ತದೆ. ಹಸು ಸಾಕಣೆಯಲ್ಲಿ ದಿನಕ್ಕೆ ಇಂತಿಷ್ಟು ಎಂಬ ಲೆಕ್ಕಾಚಾರದಲ್ಲಿ ಆದಾಯ ದೊರೆಯುತ್ತದೆ. ಅದೇ ರೀತಿಯಲ್ಲಿ ರೇಷ್ಮೆ ವ್ಯವಸಾಯದಲ್ಲಿ ತಿಂಗಳಿಗೆ ಇಂತಿಷ್ಟು ಎಂಬ ಲೆಕ್ಕಾಚಾರದಲ್ಲಿ ಆದಾಯ ದೊರೆಯುತ್ತದೆ. ಹೆಚ್ಚಿನ ಕೃಷಿ ಕಾಯಕಗಳಲ್ಲಿ ಯುವ ವಯಸ್ಸಿನವರಿಗೆ ಹೆಚ್ಚಿನ ಆದ್ಯತೆಯಾದರೆ ರೇಷ್ಮೆ ವ್ಯವಸಾಯಕ್ಕೆ ಹಾಗಿಲ್ಲ. ಯುವಜನಾಂಗ ಇದಕ್ಕಿಂತ ಹೆಚ್ಚಿನ ಆದಾಯ ದೊರೆಯುವ ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು. ಮನೆಯಲ್ಲಿ ಹೆಂಗಸರು, ವೃದ್ಧರು ನಿರಾಯಾಸವಾಗಿ ಈ ವೃತ್ತಿ ಮಾಡಬಹುದು. ರೇಷ್ಮೆ ಗೂಡು ಉತ್ಪಾದಿಸಲಾಗುವ ಬಹುತೇಕ ಪ್ರತಿಯೊಂದು ಹಳ್ಳಿಯಲ್ಲಿಯೂ ಇಂದು ರೇಷ್ಮೆ ವ್ಯವಸಾಯ ಇದ್ದರೆ ಅದು ಈ ಕಾರಣಕ್ಕಾಗಿ. ಮನೆಯ ಗಂಡಸರು ಉತ್ತಮ ಆದಾಯ ದೊರೆಯುವ ಸರಕಾರಿ ಉದ್ಯೋಗದಲ್ಲಿದ್ದರೂ ಸಹ ಮನೆಯಲ್ಲಿರುವ ಹೆಂಗಸು ರೇಷ್ಮೆ ವ್ಯವಸಾಯ ಮಾಡುತ್ತಾರೆ.

(ಇನ್ನೂ ಇದೆ)

ಮಾಹಿತಿ : ರಾಧಾಕೃಷ್ಣ ಹೊಳ್ಳ