ನಮ್ಮ ರಾಜ್ಯದಲ್ಲಿ ಎಲ್ಲಾ ಪ್ರದೇಶಗಳಲ್ಲೂ ರೇಷ್ಮೆ ಕೃಷಿಗೆ ವಿಫುಲ ಅವಕಾಶಗಳಿವೆ. ಸರಿಸುಮಾರು ಎಲ್ಲಾ ಪ್ರದೇಶಗಳಲ್ಲೂ ಇದನ್ನು ಒಂದು ಉತ್ತಮ ಆದಾಯ ತಂದುಕೊಡುವ ಬೆಳೆಯಾಗಿ ಸ್ವೀಕರಿಸಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಸಣ್ಣ ಹಿಡುವಳಿಯಾಗಿ ಮತ್ತೆ ಕೆಲವೆಡೆ ದೊಡ್ಡ ಪ್ರಮಾಣದಲ್ಲಿ ಬೆಳೆ ಬೆಳೆಸಲಾಗುತ್ತದೆ. ಒಮ್ಮೆ ರೇಷ್ಮೆ ವ್ಯವಸಾಯಕ್ಕೆ ಇಳಿದವರು ಅದರ ನೈಜ ರುಚಿ ಪಡೆದು ನಂತರ ಅದನ್ನು ಯಾವುದೇ ಕಾರಣಕ್ಕೂ ಬಿಡಲು ಒಲ್ಲರು. ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಇಷ್ಟೊಂದು ವ್ಯವಸ್ಥಿತವಾಗಿ ಬೆಳೆಸಲು ಕೇಂದ್ರ ರೇಷ್ಮೆ ಮಂಡಳಿ ಮತ್ತು ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು, ರಾಜ್ಯ ರೇಷ್ಮೆ ಇಲಾಖೆ ಸಾಕಷ್ಟು ಶ್ರಮಿಸಿದೆ. ವಿಶೇಷವಾಗಿ ಹೇಳಬೇಕಾದರೆ ರಾಜ್ಯದಲ್ಲಿ ರೇಷ್ಮೆ ವ್ಯವಸಾಯದ ಅಭಿವೃದ್ಧಿಗೆ ಸಂಶೋಧನೆ ಮತ್ತು ವಿಸ್ತರಣೆಯ ಎಲ್ಲಾ ಮಜಲುಗಳೂ ಸಮರ್ಪಕವಾಗಿ ಕೆಲಸ ಮಾಡಿದೆ. ಇದರಿಂದಾಗಿ ಲಕ್ಷಾಂತರ ಕೃಷಿಕರ ಮನೆ ಬೆಳಗಿದೆ ಎನ್ನಬಹುದು.

ನಮ್ಮ ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಪ್ರಚಾರ ಮಾಡಿ ಅದನ್ನು ಸಂಶೋಧನೆಯ ಮೂಲಕ ಸರಳೀಕರಣಗೊಳಿಸಲು ನೆರವಾದ ಪ್ರಮುಖ ಕೇಂದ್ರಗಳೆಂದರೆ ಮೈಸೂರಿನಲ್ಲಿರುವ ರೇಷ್ಮೆ ಕೃಷಿ ಮತ್ತು ಸಂಶೋಧನೆ ಮತ್ತು ತರಬೇತಿ ಸಂಸ್ಥೆ. ಬೆಂಗಳೂರಿನಲ್ಲಿರುವ ರೇಷ್ಮೆ ಮೊಟ್ಟೆ ತಾಂತ್ರಿಕ ಪ್ರಯೋಗಾಲಯ, ರೇಷ್ಮೆ ಜೀವವಿಜ್ಞಾನ ಪ್ರಯೋಗಾಲಯ, ಕೇಂದ್ರೀಯ ರೇಷ್ಮೆ ತಂತ್ರಜ್ಞಾನ ಸಂಶೋಧನೆ ಸಂಸ್ಥೆ, ರಾಷ್ಟ್ರೀಯ ರೇಷ್ಮೆ ಬೀಜ ಸಂಸ್ಥೆ ಹಾಗೂ ರಾಜ್ಯ ರೇಷ್ಮೆ ಇಲಾಖೆಗಳು. ರಾಜ್ಯದಲ್ಲಿ ರೇಷ್ಮೆ ಇಲಾಖೆಗಳು ಪ್ರತಿ ತಾಲೂಕಿನಲ್ಲೂ ಕೆಲಸ ಮಾಡುತ್ತಿದ್ದರೆ, ಇಡೀ ರಾಜ್ಯದಲ್ಲಿ ರಾಷ್ಟ್ರ ಮಟ್ಟದ ಐದು ಸಂಶೋಧನಾ ಸಂಸ್ಥೆಗಳು ಸಾಕಷ್ಟು ರೈತರಿಗೆ ಉತ್ತಮ ಇಳುವರಿ ನೀಡಬಲ್ಲ ಹಿಪ್ಪುನೇರಳೆ ತಳಿಗಳ ಕೊಡುಗೆ, ಹುಳು ಮೇಯಿಸುವ ತಾಂತ್ರಿಕತೆ, ಸಹಾಯ ಸವಲತ್ತುಗಳು, ತರಬೇತಿ ಒದಗಿಸುತ್ತಾ ಬಂದಿವೆ.

ನಮ್ಮ ರಾಜ್ಯದಲ್ಲಿ ರೇಷ್ಮೆ ವ್ಯವಸಾಯಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸ ಇದೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಬಟ್ಟೆಗಾಗಿ ರೇಷ್ಮೆ ಗೂಡು ಸಾಕಿ ಅದರ ನೂಲು ತೆಗೆದು ಅದರಿಂದ ಬಟ್ಟೆ ತಯಾರಿಸುವ ಕ್ರಮ ಇತ್ತು. ನಂತರ ಮೈಸೂರು ಅರಸರು ಈ ಕೃಷಿಗೆ ಹೆಚ್ಚು ಉತ್ತೇಜನ ಕೊಟ್ಟು ಬೆಳೆಸಿದರು. ಮೈಸೂರು ಮಹಾರಾಜರ ಕಾಲದಲ್ಲಿ ರೇಷ್ಮೆ ವ್ಯವಸಾಯದಿಂದಾಗಿ ೩೫ ಲಕ್ಷ ಮಂದಿಗೆ ಉದ್ಯೋಗಾವಕಾಶವು ದೊರೆತಿತ್ತಂತೆ. ನಮ್ಮ ರಾಜ್ಯದಲ್ಲಿ ಮೈಸೂರು ಪ್ರಾಂತ್ಯವೇ ರೇಷ್ಮೆ ವ್ಯವಸಾಯದ ಮೂಲ ಪ್ರದೇಶ. ಸ್ವಾತಂತ್ರ್ಯಾ ನಂತರ ನಾವು ರೇಷ್ಮೆ ಕೃಷಿಯನ್ನು ನಿರ್ಲಕ್ಷ್ಯ ಮಾಡದೆ ಅದನ್ನು ಬೆಳೆಸಿದೆವು.

ಸುಮಾರು ೨೦ ವರ್ಷಗಳ ಹಿಂದೆ ರೇಷ್ಮೆ ವ್ಯವಸಾಯ ಇದ್ದ ತಾಂತ್ರಿಕತೆಗಳು ಈಗ ಭಾರೀ ಬದಲಾವಣೆ ಕಂಡಿವೆ. ಆಗ ರೇಷ್ಮೆ ಹುಳು ಬೆಳೆಸಿ ಗೂಡು ಮಾಡುವ ವಿಧಾನ ಇಷ್ಟೊಂದು ಸರಳವಾಗಿರಲಿಲ್ಲ. ಉತ್ತಮ ಗುಣಮಟ್ಟದ ಹಿಪ್ಪುನೇರಳೆ ತಳಿಯೂ ಇರಲಿಲ್ಲ. ಮೈಸೂರು ತಳಿ ಎಂಬ ಒಂದೇ ಒಂದು ಹಿಪ್ಪುನೇರಳೆ ತಳಿ ಇತ್ತು. ಇದು ಈಗಿನ ಹೊಸ ತಳಿಯಂತೆ ಹೆಚ್ಚು ಎಲೆಗಳನ್ನು ಕೊಡುತ್ತಿರಲಿಲ್ಲ. ಎಲೆಗಳೂ ಈಗಿನ ತಳಿಯಷ್ಟು ಪೌಷ್ಠಿಕವಾಗಿಯೂ ಇರಲಿಲ್ಲ. ಹುಳು ಸಾಕಣೆ ಮಾಡಬೇಕಾದರೆ ಮೊಟ್ಟೆಗಳನ್ನು ತಂದು ರೈತರೇ ಮರಿ ಮಾಡಿಕೊಂಡು ಹುಳು (ಚಾಕಿ) ಮಾಡಬೇಕಿತ್ತು. ರೇಷ್ಮೆ ವ್ಯವಸಾಯದಲ್ಲಿ ಹಿಂದೆ ೫ ಹಂತಗಳಿದ್ದವು. ಅಂದರೆ ಮೊದಲನೆಯದ್ದು ಮೊಟ್ಟೆಯನ್ನು ಮರಿ ಮಾಡುವ ಚಾಕಿ ಹಂತ. (ಸಾಕಬೇಕಾದ ತಳಿಯ ರೇಷ್ಮೆ ಮೊಟ್ಟೆಗಳನ್ನು ತಂದು ಅದನ್ನು ಸೂಕ್ತ ರೀತಿಯಲ್ಲಿ ಮರಿ ಮಾಡುವಿಕೆ). ಚಾಕಿ ಹುಳು ಸಾಕಣೆಯ ಮೇಲೆ ಬೆಳೆಯ ಸಫಲತೆ ಮತ್ತು ವಿಫಲತೆಯನ್ನು ನಿರ್ಧರಿಸಲಾಗುತ್ತದೆ. ಇದಕ್ಕೆ ೩ ದಿನ ತಗಲುತ್ತಿತ್ತು. ಇದು ಸೂಕ್ಷ್ಮ ಕೆಲಸವಾಗಿದ್ದು ಮೊಟ್ಟೆಯೊಡೆಯುವಿಕೆ ಮತ್ತು ಅವುಗಳು ಬದುಕಿ ಉಳಿಯುವಿಕೆ ನೈಪುಣ್ಯದ ಮೇಲೆ ನಿಂತಿತ್ತು. ಇತ್ತೀಚಿನ ಹತ್ತು ವರ್ಷಗಳವರೆಗೂ ಬೆಳೆಗಾರರು ಮೊಟ್ಟೆ ತಂದು ಅದನ್ನು ಅವರವರೇ ಮರಿ ಮಾಡಿ ಬೆಳೆಸುತ್ತಿದ್ದರು. ಈಗ ಇದು ಬದಲಾಗಿದೆ. ಬೆಳೆಗಾರರಿಗೆ ಮರಿ ಮಾಡಿಯೇ ಕೊಡಲಾಗುತ್ತದೆ. ಅದಕ್ಕಾಗಿ ಪ್ರತೀ ಹೋಬಳಿಯಲ್ಲಿ ಚಾಕಿ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಇದರಿಂದ ಬೆಳೆಗಾರರಿಗೆ ತಳಿ ಶುದ್ಧತೆ, ಮತ್ತು ಖಾತ್ರಿ ದೊರಕಿದೆ. ಇದಲ್ಲದೆ ಸಾಕಣೆಯಲ್ಲಿ ಸುಮಾರು ನಾಲ್ಕು ದಿನ ಉಳಿಕೆಯಾಗಿದೆ. ಹಿಂದೆ ಮೊಟ್ಟೆ ಮರಿಯಾಗಿ ಗೂಡು (ಚಿತ್ರ ೩) ಆಗಲು ೨೮-೩೦ ದಿನ ಬೇಕಿತ್ತು. ಈಗ ಅದು ೨೬ ದಿನಕ್ಕೆ ಇಳಿದಿದೆ.

ಅಧಿಕ  ಇಳುವರಿಯ ತಳಿಗಳು: ಹಿಂದೆ ಮೈಸೂರು ಲೋಕಲ್ ಹೆಸರಿನ ತಳಿಯೊಂದೇ ಇತ್ತು. ಇದರ ನ್ಯೂನತೆಯನ್ನು ಸರಿಪಡಿಸಲಿಕ್ಕಾಗಿ ನೀರಾವರಿಗೆ, ಮಳೆಯಾಶ್ರಯಕ್ಕೆ, ಕರಾವಳಿಯ ಮಣ್ಣಿಗೆ ಹೊಂದುವ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ರೇಷ್ಮೆ ವ್ಯವಸಾಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಎಂ-೫ (ಕಣ್ವ-೨) ತಳಿಯನ್ನು ಪರಿಚಿಸಿದ ನಂತರ. ಆನಂತರ ಎಸ್.೩೦, ಎಸ್.೩೬ ಎಂಬ ತಳಿ ಎಸ್.-೫೪ ಎಂಬ ತಳಿ ವಿಕ್ಟೋರಿಯಾ-೧ (ಚಿತ್ರ ೨), ವಿಶ್ವ  ಎಂಬ ಹೆಸರಿನ ನೀರಾವರಿ ಪ್ರದೇಶಕ್ಕೆ ಹೊಂದುವ ಸಂಕರ ತಳಿ ಬಂತು. ಜೊತೆಗೆ ಎಸ್.೧೩, ಎಸ್.೩೪, ಎಂ.ಆರ್.-೨ ಎಂಬ ಮಳೆಯಾಶ್ರಿತ ಪ್ರದೇಶಕ್ಕೆ ಹೊಂದುವ ತಳಿಗಳು ಬಂದು ಹಿಪ್ಪುನೇರಳೆಯಲ್ಲಿ ಭಾರೀ ಬದಲಾವಣೆ ಉಂಟಾಯಿತು. ಹೆಚ್ಚಿನ ಪ್ರಮಾಣದ ಸೊಪ್ಪು ಉತ್ಪಾದನೆ, ಹೆಚ್ಚು ಪೌಷ್ಠಿಕಾಂಶದ ಒಳಗೊಂಡ ಕಾರಣದಿಂದ ಗೂಡಿನ ಇಳುವರಿ ಮತ್ತು ಗುಣಮಟ್ಟ ಉತ್ತಮವಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ರೇಷ್ಮೆ ನೂಲಿಗೆ ಮನ್ನಣೆ ದೊರೆತುದೇ ಈ ಹೊಸ ಹಿಪ್ಪುನೇರಳೆ ತಳಿಗಳು ಬಂದ ನಂತರ.

ಸರಳಗೊಂಡ ಬೆಳೆ ತಂತ್ರಜ್ಞಾನ: ಹಿಂದೆ ರೇಷ್ಮೆ ಕೃಷಿ ಮಾಡಬೇಕಾದರೆ ಅದಕ್ಕೆ ಬೇಕಾಗುವ ಸಲಕರಣೆಗಳೇನು ? ಮೊಟ್ಟೆ ಮರಿ ಮಾಡಲು ತಟ್ಟೆಗಳು, ಹುಳು ಬೆಳೆಸಲು ತಟ್ಟೆಗಳು, ಅದನ್ನು ಇಡಲು ಸ್ಟ್ಯಾಂಡು, ನಂತರ ಹುಳು ನೂಲು ಬಿಚ್ಚಾಣಿಕೆಗೆ ಪ್ರಾರಂಭಿಸಿದಾಗ ಅದನ್ನು ಬಿಡಲು ಚಂದ್ರಿಕೆಗಳು (ಚಿತ್ರ ೧) ಇವುಗಳನ್ನು ಇಡಲು ಸ್ಥಳಾವಕಾಶ ಎಲ್ಲವೂ ಹೊಂದಿಸಿಕೊಳ್ಳುವುದು ಕಷ್ಟವಿತ್ತು. ತಾಂತ್ರಿಕತೆ ಬದಲಾವಣೆಯಾದಂತೆ ಮೊಟ್ಟೆ ಮರಿ ಮಾಡುವ ಕೆಲಸವೇ ಇಲ್ಲದಾದುದು ಒಂದಾದರೆ, ನಂತರ ಅದನ್ನು ಇನ್ನೂ ಸರಳೀಕರಣಗೊಳಿಸಲಾಯಿತು. ತಟ್ಟೆ ಇಡಲು ಮಾಡಿದ ಸ್ಟಾಂಡುಗಳಿಗೆ ನೈಲಾನು ಹಗ್ಗ ಅಥವಾ ಇನ್ಯಾವುದಾದರೂ ರೋಪುಗಳನ್ನು ಹೆಣೆದು ಅದರಲ್ಲೇ ಹುಳುಗಳನ್ನು ಮೇಯಿಸುವ ವ್ಯವಸ್ಥೆ ಬಂತು. ಹಿಂದೆ ತಟ್ಟೆಗಳನ್ನು ದಿನಾ ಹುಳುಗಳು ತಿಂದು ಹೊರಹಾಕಿದ ಹಿಕ್ಕೆ ಸ್ವಚ್ಛ ಮಾಡುವ ಕೆಲಸ ಕಷ್ಟದ್ದಾಗಿತ್ತು. ಒಮ್ಮೆ ಹುಳುಗಳನ್ನು ಬೇರೆ ತಟ್ಟೆಗೆ ಸ್ಥಳಾಂತರ ಮಾಡುವುದೂ ಅಗತ್ಯವಾಗುತ್ತಿತ್ತು. ಈ ಸಂದರ್ಭದಲ್ಲಿ ಹುಳುಗಳಿಗೆ ಸೋಂಕು ತಗಲುವುದು ಮುಂತಾದವು ಆಗುತ್ತಿತ್ತು. ಇದನ್ನು ನಿವಾರಿಸಿ ಕೃಷಿಯನ್ನು ಸರಳೀಕರಣಗೊಳಿಸಿದ ತಾಂತ್ರಿಕತೆ ಹಾಸಿಗೆ ಪದ್ಧತಿಯ ಸ್ಟಾಂಡುಗಳು. ಬೆಳೆದ ಹುಳುಗಳನ್ನು ಇದರಲ್ಲಿ ಬಿಟ್ಟು ಅವುಗಳಿಗೆ ಹಿಪ್ಪು ನೇರಳೆಯ ಕಡ್ಡಿಗಳನ್ನೇ ಹಾಕಿ ತಿನ್ನಿಸುವ ವಿಧಾನದಿಂದ ಬೆಳೆಗಾರರಿಗೆ ಬಹಳಷ್ಟು ಪ್ರಯೋಜನವಾಯಿತು. ಇಂದು ಪ್ರತಿಯೊಬ್ಬ ರೇಷ್ಮೆ ಬೆಳೆಗಾರನೂ ಇದನ್ನು ಅಳವಡಿಸಿಕೊಂಡು ಪ್ರಯೋಜನ ಪಡೆದಿದ್ದಾರೆ. ಸಾಂಪ್ರದಾಯಿಕ ತಟ್ಟೆ ವಿಧಾನಕ್ಕೆ ಹೆಚ್ಚಿನ ಕೆಲಸಗಾರರು ಬೇಕಾಗಿತ್ತು. ಆದರೆ ಇದರಲ್ಲಿ ೫೦% ಕೆಲಸ ಉಳಿತಾಯವಾಗಿದೆ. ಹುಳುಗಳನ್ನು ಪದೇ ಪದೇ ಮುಟ್ಟುವುದು ಕಡಿಮೆಯಾದ ಕಾರಣ ಸೋಂಕು ಹರಡುವುದು ಕಡಿಮೆಯಾಗುತ್ತದೆ. ಹುಳು ಸಾಕಣೆ ಮನೆಯಲ್ಲಿ ಮತ್ತು ಹಾಸಿಗೆಯಲ್ಲಿ ಗಾಳಿ ಸಂಚಾರ ಚೆನ್ನಾಗಿರುತ್ತದೆ. ಇದರಿಂದ ಹುಳುಗಳ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ. ಹುಳುಗಳು ಸೊಪ್ಪು ತಿಂದು ವಿಸರ್ಜಿಸಿದ ಹಿಕ್ಕೆಗಳು ಟೊಂಗೆಗಳ ಕೆಳಗೆ ಸಂಗ್ರಹವಾಗುತ್ತದೆ. ತನ್ನಿಂತಾನೇ ಕೆಳಭಾಗದಲ್ಲಿ ಶೇಖರಣೆಯಾಗುತ್ತದೆ. ಹಾಸಿಗೆಯಿಂದ ಎಲೆ ತಿಂದು ಮುಗಿದ ಹಳೆ ರೆಂಬೆಗಳನ್ನು ಎತ್ತಿ ಹೊಸ ರೆಂಬೆಗಳನ್ನು ಹಾಕಿ ಸ್ವಲ್ಪ ಹೊತ್ತಿನಲ್ಲೇ ಹುಳುಗಳು ಹೊಸ ರೆಂಬೆಗೆ ಬರುತ್ತವೆ. ಆಗ ಹಳೆ ರೆಂಬೆ ಕಡ್ಡಿಗಳನ್ನು ಅಲ್ಲಿಂದ ತೆಗೆಯುವುದು ಸುಲಭ. ಸುಮಾರು ೧೦೦ ಮೊಟ್ಟೆ ಸಾಕಲು ೪೦ ಅಡಿ ಮತ್ತು ೫ ಅಡಿ ಅಳತೆಯ ೩ ಅಂತಸ್ತಿನ ಮೇಜು ಸಾಕಾಗುತ್ತದೆ. ಮೇಜನ್ನು ಸ್ಥಳೀಯವಾಗಿ ದೊರೆಯುವ ಅಡಿಕೆ, ತೆಂಗು, ಮರದ ಇಡೀ ಗೆಲ್ಲನ್ನೇ ಹುಳುಗಳಿಗೆ ಮೇಯಿಸಲು ಕೊಡುವುದರಿಂದ ೧೫-೨೦% ಸೊಪ್ಪಿನ ಉಳಿತಾಯ ಸಾಧ್ಯವಾಗಿದೆ. ಎಲೆಗಳನ್ನೇ ಕಿತ್ತು ಅದನ್ನು ಹುಳುಗಳಿಗೆ ಹಾಕುತ್ತಿದ್ದ ಸಮಯದಲ್ಲಿ ಅದು ಬೇಗ ತಾಜಾತನ ಕಳಕೊಳ್ಳುತ್ತಿತ್ತು. ಆದರೆ ರೆಂಬೆ ಪದ್ಧತಿ ಬಂದ ನಂತರದ ಸೊಪ್ಪು ಹೆಚ್ಚು ಸಮಯದ ತನಕ ತಾಜಾ ಸ್ಥಿತಿಯಲ್ಲಿ ಉಳಿಯುತ್ತದೆ. ಹಿಂದೆ ರೇಷ್ಮೆ ಹುಳುಗಳಿಗೆ ಪ್ರಾರಂಭದ ಮೂರು ಜ್ವರದ ತನಕ ಸೊಪ್ಪನ್ನು ಪಲ್ಯಕ್ಕೆ ಕೊಚ್ಚಿದಂತೆ ಕೊಚ್ಚಿ ನೀಡಲಾಗುತ್ತಿತ್ತು. ಕೊನೆ ಹಂತದಲ್ಲಿ ಮಾತ್ರ ಎಲೆಗಳನ್ನು ನೀಡಲಾಗುತ್ತಿತ್ತು. ಈಗ ಇದು ಪೂರ್ತಿ ಬದಲಾಗಿದೆ.

(ಇನ್ನೂ ಇದೆ)

ಮಾಹಿತಿ: ರಾಧಾಕೃಷ್ಣ ಹೊಳ್ಳ