ಗೂಡಿಗೆ ಬಿಡುವ ಹೊಸ ತಾಂತ್ರಿಕತೆ : ಹಿಂದಿನಿಂದಲೂ ರೇಷ್ಮೆ ಹುಳು ಸಾಕಿ ಅದು ಗೂಡಿಗೆ ಹೋಗುವ ಹಂತಕ್ಕೆ ಬಂದಾಗ ಅದನ್ನು ಚಂದ್ರಿಕೆ ಎಂಬ ತಟ್ಟೆಗೆ ಬಿಟ್ಟು ಅದರಲ್ಲಿ ಹುಳಗಳು ನೂಲು ಬಿಟ್ಟು ಗೂಡು ಕಟ್ಟಲು ಅವಕಾಶ ಮಾಡಿಕೊಡಲಾಗುತ್ತಿತ್ತು. ಈಗ ಅದು ಕಳೆದು ಹೋದ ಕತೆ. ಹಳೆಯ ಚಂದ್ರಿಕೆ ಬದಲಿಗೆ ರೋಟರಿ ಚಂದ್ರಿಕೆ ಎಂಬ ಸುಧಾರಿತ ವ್ಯವಸ್ಥೆಬಂದಿದೆ. ಉತ್ತಮ ಚಂದ್ರಿಕೆ ಇದ್ದರೆ ಉತ್ತಮ ಗೂಡು ದೊರೆಯುತ್ತದೆ. ಉತ್ತಮ ನೋಟದ ಗೂಡಾದರೆ ಉತ್ತಮ ದರವೂ ಲಭ್ಯವಾಗುತ್ತದೆ. ಸಾಂಪ್ರದಾಯಿಕ ಚಂದ್ರಿಕೆಗಳಿಗಿಂತ ರೋಟರಿ ಚಂದ್ರಿಕೆಗಳು ಎಲ್ಲ ಮಟ್ಟಿನಲ್ಲೂ ರೈತರಿಗೆ ಪ್ರಯೋಜನಕಾರಿ. ಇದರಲ್ಲಿ ಶೇಕಡಾವಾರು ನೂಲು ಬಿಚ್ಚಾಣಿಕೆ ಸಾಮರ್ಥ್ಯ ಹೆಚ್ಚು. ಗೂಡುಗಳ ಆಕಾರ ಮತ್ತು ಗಾತ್ರ ಏಕಪ್ರಕಾರದಲ್ಲಿರುತ್ತದೆ. ಗಂಟು ದೋಷಪೂರಿತ ಗೂಡುಗಳ ಸಂಖ್ಯೆ ಕಡಿಮೆ ಇರುತ್ತದೆ. ಇದರಲ್ಲಿ ಗೂಡು ಕಟ್ಟಿಸಿದರೆ ೨೦-೨೫% ಬೆಲೆ ಹೆಚ್ಚು ದೊರೆಯುತ್ತದೆ. ಹುಳುಗಳನ್ನು ಬಿಟ್ಟು ಪೇರಿಸಿಡಲು ಕಡಿಮೆ ಸ್ಥಳಾವಕಾಶ ಸಾಕಾಗುತ್ತದೆ. ರೋಟರಿ ಚಂದ್ರಿಕೆಗಳ ಬಳಕೆಯ ನಂತರ ಅವುಗಳ ಸಂಗ್ರಹಣೆ ಸುಲಭ. ಗೂಡು ಬಿಡಿಸುವುದೂ ಸುಲಭ. ರೋಟರಿ ಚಂದ್ರಿಕೆಗಳೆಂದರೆ ಒಂದು ಮರದ ಚೌಕಟ್ಟು. ಅದರಲ್ಲಿ ೧೦ ಕಾರ್ಡ್ಬೋರ್ಡುಗಳ ಚಂದ್ರಿಕೆಗಳು. ಒಂದೊಂದು ಚಂದ್ರಿಕೆಯಲ್ಲಿ ೧೫೬ ಹುಳುಗಳನ್ನು ಬಿಟ್ಟು ಗೂಡುಗಳನ್ನು ಕಟ್ಟಲು ಮತ್ತು ಒಂದು ಚೌಕಟ್ಟು ಚಂದ್ರಿಕೆಯಲ್ಲಿ ೧೫೬೦ ಹುಳುಗಳನ್ನು ಬಿಡಬಹುದು. ಹಣ್ಣಾದ ಹುಳುಗಳನ್ನು ಬಿಟ್ಟ ನಂತರ ಈ ಚೌಕಟ್ಟನ್ನು ಮನೆಯ ಚಾವಡಿಗೆ ಎರಡು ಕಬ್ಬಿಣದ ಸರಳಿನ ಮೂಲಕ ಜೋತು ಹಾಕಬೇಕು. ಹುಳು ಬಿಟ್ಟು ಹೀಗೆ ತೂಗು ಹಾಕಿದ ಚಂದ್ರಿಕೆಗಳು ತಿರುಗುತ್ತಿರುತ್ತದೆ. ಅದಕ್ಕಾಗಿ ರೋಟರಿ ಚಂದ್ರಿಕೆ ಎಂಬ ಹೆಸರು ಬಂದಿದೆ. ಒಂದು ಚಂದ್ರಿಕೆಗೆ ಸುಮಾರು ೫೦೦ ರೂಪಾಯಿ ತಗಲುತ್ತದೆ. ಇದನ್ನು ೫-೬ ವರ್ಷಗಳ ಕಾಲ ಬಳಕೆ ಮಾಡಬಹುದು. ಸಾಂಪ್ರದಾಯಿಕ ಬಿದಿರು ಸಿಗಿದು ಮಾಡಿದ ಚಂದ್ರಿಕೆಗಳಿಗೂ ಇಷ್ಟೇ ವೆಚ್ಚ ತಗಲುತ್ತದೆ. ಈ ಚಂದ್ರಿಕೆಗಳನ್ನು ಮನೆ ಮುಂದೆ ಇಡಲಾಗುತ್ತದೆ. ಇದರಲ್ಲಿ ಇಷ್ಟೇ ಹುಳು ಬಿಡಲು ವ್ಯವಸ್ಥಿತಿ ಅವಕಾಶ ಇರುವುದಿಲ್ಲ. ರೋಟರಿ ಚಂದ್ರಿಕೆ ಸುಮಾರು ೨೦ ವರ್ಷಗಳ ಹಿಂದಿನ ಆವಿಷ್ಕಾರ.
ರೇಷ್ಮೆಗೂಡಿನಲ್ಲಿ ಹೊಸ ತಳಿಗಳು : ಹಿಂದೆ ನಮ್ಮಲ್ಲಿ ಚಾಲ್ತಿಯಲ್ಲಿದ್ದ ಮೈಸೂರು ಎನ್ಬಿಡಿ, ಮತ್ತು ಮೈಸೂರು ಸಿನಿಚಿ ತಳಿಗಳಿಂದ ಅಂತರರಾಷ್ಟಿçÃಯ ಗುಣಮಟ್ಟದ ನೂಲು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಹಾಗು ನಮ್ಮ ರೈತರು ಅಂತರಾಷ್ಟಿçÃಯ ಗುಣಮಟ್ಟದ ಗೂಡು ಉತ್ಪಾದಿಸಿ ಸ್ಪರ್ಧೆಗೆ ಸಜ್ಜಾಗಬೇಕೆಂಬ ಉದ್ದೇಶದಿಂದ ರೇಷ್ಮೆ ತಳಿಗಳಲ್ಲಿ ಸುಧಾರಿತ ತಳಿಗಳನ್ನು ಮತ್ತು ಸಂಕರ ತಳಿಗಳನ್ನು (ಬೈವೋಲ್ಟೀನ್-ದ್ವಿ ಸಂಕರ) ಬಿಡುಗಡೆ ಮಾಡಲಾಗಿದೆ. ಈಗ ಚಾಲ್ತಿಯಲ್ಲಿರುವ ಕೋಲಾರ್ ಗೋಲ್ಡ್ ತಳಿ ಶಿಫಾರಿತ ಉತ್ತಮ ತಳಿಯಾಗಿದ್ದು ಸಂಕರ ತಳಿಯಾಗಿ ಸಿ ಎಸ್.ಆರ್. ೧ x ೪, ೨ x ೫ ಮತ್ತು ೧೮ x ೧೯ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಸಾಕಣೆ ಸ್ವಲ್ಪ ಜಠಿಲವಾದರೂ ಶೇ. ೨೩ ರಿಂದ ೨೫ ಹೆಚ್ಚು ಇಳುವರಿ, ಬೆಲೆಯೂ ಹೆಚ್ಚು. ಇದು ಸರಿಯಾಗಿ ೨೪ ರಿಂದ ೨೫ ದಿನಕ್ಕೆ ಹಣ್ಣಾಗುತ್ತದೆ. ಸ್ವಲ್ಪ ತಂಪು ವಾತಾವರಣ ಅವಶ್ಯಕ.
ಸಿ.ಎಸ್.ಆರ್. : ತಳಿಯು ದೃಢಕಾಯ ತಳಿಯಾಗಿದ್ದು ಸ್ವಲ್ಪ ಉಷ್ಣ ಹವೆಗೂ ಹೊಂದಿಕೆಯಾಗುತ್ತದೆ. ೨೧ರಿಂದ ೨೨ ದಿನಕ್ಕೆ ಹುಳು ಹಣ್ಣಾಗುತ್ತದೆ. ನೀರಾವರಿ ಪ್ರದೇಶಕ್ಕೆ ಹೊಂದಿಕೆಯಾಗುವಂತೆ ಕಾವೇರಿ ಎಂಬ ಹೊಸ ಮಿಶ್ರ ತಳಿಯನ್ನು ಬಿಡುಗಡೆ ಮಾಡಲಾಗಿದ್ದು ಇದು ನೂರು ಮೊಟ್ಟೆಗೆ ೬೦-೬೫ ಕಿಲೋ ಇಳುವರಿ ನೀಡುತ್ತದೆ. ಹುಳು ಹಣ್ಣಾಗಲು ೨೨-೨೩ ದಿನ ಬೇಕಾಗುತ್ತದೆ. ಮಳೆಯಾಶ್ರಿತ ಬೆಳೆಯಾಗಿ ರೇಷ್ಮೆ ವ್ಯವಸಾಯ ಮಾಡುವವರಿಗೆ ವರುಣ ಎಂಬ ಸಂಕರ ತಳಿಯನ್ನು ಬಿಡುಗಡೆ ಮಾಡಲಾಗಿದ್ದು ಇದು ನೂರು ಮೊಟ್ಟೆಗೆ ೩೦-೪೦ ಕಿಲೋ ಗೂಡು ನೀಡಬಲ್ಲದು. ಮಾರುಕಟ್ಟೆಯಲ್ಲಿ ಶೇ. ೧೫-೧೮ರಷ್ಟು ಹೆಚ್ಚಿನ ಧಾರಣೆಯನ್ನು ಪಡೆಯಬಹುದು. ಈ ಹೊಸ ರೇಷ್ಮೆ ಗಳಿಗಳು ಬೆಳೆ ಬೆಳೆಸುವವರಿಗೆ ಮತ್ತು ನೂಲು ಬಿಚ್ಚಾಣಿಕೆದಾರರಿಗೆ ಹಾಗೂ ನೇಯ್ಗೆಯವರಿಗೆ ಉತ್ತಮವಾಗಿದೆ. ಈಗ ಕೋಲಾರ ಗೋಲ್ಡ್ ತಳಿಯ ರೇಷ್ಮೆ ಗೂಡಿಗೆ ಕಿಲೋಗೆ ೩೫೦-೪೦೦ ರನಕವೂ, ಬೈವೋಲ್ಟಿನ್ ತಳಿಯದ್ದಕ್ಕೆ ೫೦೦-೫೫೦ ತನಕವೂ ಬೆಲೆ ಇದೆ.
ಹುಳು ಸಾಕುವ ಮನೆಗಳು : ಹಿಪ್ಪು ನೇರಳೆಯನ್ನು ಹೊಲದಲ್ಲಿ ಬೆಳೆಸಿ, ರೇಷ್ಮೆ ಹುಳುಗಳನ್ನು ಮನೆಯಲ್ಲಿ ಬೆಳೆಸಬೇಕು. ಉತ್ತಮ ಮನೆಯಲ್ಲಿ ಬೆಳೆಸಿದ ಹುಳುಗಳಿಂದ ಉತ್ತಮ ಇಳುವರಿ ಪಡೆಯಬಹುದು. ಹಿಂದೆ ರೇಷ್ಮೆ ಹುಳು ಸಾಕುವ ಮನೆಯಲ್ಲಿ ತಂತ್ರಜ್ಞಾನ ಇರಲಿಲ್ಲ. ಒಟ್ಟಾರೆ ಒಂದು ಕೊಟ್ಟಿಗೆಯಾಗಿರುತ್ತಿತ್ತು. ಇದಕ್ಕಾಗಿ ಕೊಟ್ಟಿಗೆ ತಾಂತ್ರಿಕತೆಯಲ್ಲು ಸಾಕಷ್ಟು ಪ್ರಯೋಗಗಳನ್ನು ಕೈಗೊಂಡು ವಿವಿಧ ಸಾಮರ್ಥ್ಯದ ಮನೆಗಳನ್ನು ವಿನ್ಯಾಸಗಳನ್ನು ರೈತರಿಗೆ ದೊರೆಯುವಂತೆ ಮಾಡಲಾಗಿದೆ. ಸುಡು ಬಿಸಿಲಿನ ಬಟ್ಟ ಬಯಲಿನ್ಲೂ ರೇಷ್ಮೆ ಹುಳು ಸಾಕುವ ಮನೆ ಏರ್ಕಂಡೀಷನ್ ಮನೆಯಂತಾಗಿಸುವ ಸರಳ ತಂತ್ರಜ್ಞಾನ ಇದೆ. ಹಿಂದೆ ನಾವು ರೇಷ್ಮೆ ಹುಳು ಸಾಕುತ್ತಿದ್ದ ಮನೆಗಳಲ್ಲಿ ಊಜಿ ಕೊರಕದ ಉಪಟಳ ಅತಿಯಾಗಿದ್ದು ಅದನ್ನು ಈಗ ನೊಣ ನುಸುಳದ ಬಲೆಯನ್ನು ಒಳಭಾಗದಲ್ಲಿ ಮನೆಪೂರ್ತಿ ಹೊಂದಿಸಿ ಸಂಪೂರ್ಣವಾಗಿ ಊಜಿ ನೊಣವನ್ನು ದೂರವಿಡಲಾಗಿದೆ. ಹುಳು ಸಾಕುವ ಸುಸಜ್ಜಿತ ಮನೆಯಲ್ಲಿ ಹಿಪ್ಪು ನೇರಳೆ ಸೊಪ್ಪು, ಸಾಮಾಗ್ರಿ ದಾಸ್ತಾನು ಹೀಗೆ ಏನೇನು ವ್ಯವಸ್ಥೆಗಳಿರಬೇಕು ಎಂಬುದನ್ನು ತಿಳಿಸಿಕೊಟ್ಟಿದೆ. ಇದು ಸುಮಾರಾಗಿ ಹೆಚ್ಚಿನೆಲ್ಲಾ ರೇಷ್ಮೆ ವ್ಯವಸಾಯಗಾರರಿಂದ ಸ್ವೀಕೃತವಾಗಿದೆ.
ರೇಷ್ಮೆ ವ್ಯವಸಾಯ ಕರ್ನಾಟಕದ ವೈಭವವನ್ನು ಮೇಲೇರಿಸಿದ ಬೆಳೆ. ಕರ್ನಾಟಕದ ಕೀರ್ತಿಗೆ ಕಾರಣವಾದವುಗಳಲ್ಲಿ ಒಂದು ಶ್ರೀಗಂಧವಾದರೆ ಮತ್ತೊಂದು ರೇಷ್ಮೆ. ಕರ್ನಾಟಕದ ರೇಷ್ಮೆಗೆ ಮರುಳಾಗಿ ಐರೋಪ್ಯ ರಾಷ್ಟ್ರಗಳಿಂದ ಫ್ರೆಂಚರು, ಡಚ್ಚರು, ಬ್ರಿಟೀಷರು ನಮ್ಮ ದೇಶಕ್ಕೆ ಬಂದು ವ್ಯಾಪಾರ ಮಾಡಿ ದೇಶವನ್ನೇ ಆಳಿ ಹೋಗಿದ್ದಾರೆ. ಇಂತಹ ಘನತೆವೆತ್ತ ಬೆಳೆ ಎಂದೆಂದೂ ರೈತರನ್ನು ಸೋಲಿಸದ ಬೆಳೆ. ನಮ್ಮ ದೇಶದ ರೇಷ್ಮೆ ಬೆಳೆಗೆ ಸ್ವಲ್ಪ ಮಟ್ಟಿಗೆ ಚೀನೀಯರು ಪೈಪೋಟಿದಾರರಾದರೂ ಅವರನ್ನು ಹಿಂದಿಕ್ಕಿ ನಾವು ಮುಂದೆ ಬರುವಷ್ಟು ತಾಂತ್ರಿಕತೆಯು ನಮ್ಮಲ್ಲಿ ಬೆಳೆದಿದೆ. ಆದರೆ ನೈಸರ್ಗಿಕ ಸಂಪನ್ಮೂಲಗಳಾದ ನೀರಿನ ಮೂಲ ನಮ್ಮಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ರೇಷ್ಮೆ ವ್ಯವಸಾಯ ಮಾಡುವ ರಾಜ್ಯದ ಚಿತ್ರದುರ್ಗ, ರಾಮನರಗ ಚಾಮರಾಜನಗರ, ದೊಡ್ಡ ಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ದೇವನಹಳ್ಳಿಗಳಲ್ಲಿ ನೀರಾವರಿಯ ಸಮಸ್ಯೆಗಾಗಿಯೇ ಇಂದು ಕೆಲವರು ರೇಷ್ಮೆ ವ್ಯವಸಾಯ ಬಿಟ್ಟಿದ್ದಾರೆ. ಹನಿ ನೀರಾವರಿ ವ್ಯವಸ್ಥೆಯ ಕಾರಣದಿಂದ ಇಂದು ರೇಶ್ಮೆ ಕೃಷಿ ಉಳಿದಿದೆ ಎನ್ನಬಹುದು. ೯೦ % ಕ್ಕೂ ಅಧಿಕ ವ್ಯವಸಾಯಗಾರರು ಹನಿ ನೀರಾವರಿ, ರಸಾವರಿ ಮೂಲಕ ಹಿಪ್ಪು ನೇರಳೆ ಬೆಳೆಸುತ್ತಿದ್ದಾರೆ. ಜೋಡಿ ಸಾಲು ಪದ್ದತಿಯಲ್ಲಿ ಕಡಿಮೆ ನೀರಿನಲ್ಲಿ ಅಧಿಕ ಬೆಳೆ ಬೆಳೆಸುತ್ತಿದ್ದಾರೆ. ರೇಷ್ಮೆ ಕೃಷಿಯಲ್ಲಿ ಕಾಲ ಕಾಲಕ್ಕೆ ಅನುಗುಣವಾಗಿ ನೂತನ ತಾಂತ್ರಿಕತೆಗಳು ಬರುತ್ತಲೇ ಇವೆ. ಮೈಸೂರು, ಮಂಡ್ಯ ಹಾಸನ ಮುಂತಾದೆಡೆ ನೀರಿನ ಮೂಲ ಉತ್ತಮವಾಗಿದೆಯಾದರೂ ಇಲ್ಲಿ ರೈತರು ನೀರಾವರಿ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ರೇಷ್ಮೆ ವ್ಯವಸಾಯ ಒಂದು ವ್ಯವಸಿತ ಅಭಿವೃದ್ಧಿ ಹೊಂದುತ್ತಿರುವ ಕೃಷಿ. ಇದು ಅಂತರರಾಷ್ಟ್ರೀಯ ಖ್ಯಾತಿಯ ಬೆಳೆ. ರೈತರು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಜೊತೆ ಸೇರಿಕೊಂಡು ಬೆಳೆ ಬೆಳೆಸಿದರೆ ಇದರಲ್ಲಿ ತಮ್ಮ ಜೀವನಮಟ್ಟ ಸುಧಾರಿಸಲು ಸಾಧ್ಯವಿದೆ. ಕೃಷಿಕರಿಗೆ ಹೈನುಗಾರಿಕೆ ಹೇಗೆ ಒಂದು ಉಪಕಸುಬೋ, ಅದೇ ರೀತಿಯಲ್ಲಿ ಅದಕ್ಕಿಂತ ಹೆಚ್ಚಿನ ಲಾಭ ತಂದುಕೊಡಬಲ್ಲ ಕಸುಬು ರೇಷ್ಮೆ ಕೃಷಿ ಎಂಬುದರಲ್ಲಿ ಅನುಮಾನವಿಲ್ಲ.
ರೇಷ್ಮೆ ವ್ಯವಸಾಯ ಕ್ಷೇತ್ರವು ಇಂದು ಭಾರೀ ಅಭಿವೃದ್ಧಿ ಕಂಡಿದೆ. ಹೊಸ ಹಿಪ್ಪುನೇರಳೆ ತಳಿಗಳು, ಮೊಟ್ಟೆ ತಳಿಗಳು, ಸುಧಾರಿತ ತಂತ್ರಜ್ಞಾನಗಳು, ವ್ಯವಸ್ಥಿತ ಮಾರುಕಟ್ಟೆ ಎಲ್ಲವೂ ಬಂದಿದೆ. ನೀರಾವರಿಗೆ ಹಿಂದಿನಂತೆ ಕಷ್ಟವಿಲ್ಲ. ರೇಷ್ಮೆ ಕೃಷಿ ಕ್ಷೇತ್ರದೆಡೆ ಹೊಸ ಹೊಸ ಜನ ಆಕರ್ಷಿತರಾಗುತ್ತಿದ್ದಾರೆ. ಪಟ್ಟಣಗಳಲ್ಲಿ ವ್ಯವಹಾರ ನಡೆಸುತ್ತಿರುವವರೂ ಕೃಷಿ ಕ್ಷೇತ್ರದತ್ತ ಮುಖ ಮಾಡುತ್ತಿದ್ದಾರೆ. ಇಂತಹವರು ಆಯ್ಕೆ ಮಾಡುವ ಬೆಳೆಗಳಲ್ಲಿ ಹೆಚ್ಚಿನವು ತೋಟಗಾರಿಕಾ ಬೆಳೆಗಳು. ಆದರೆ ಯಾರೂ ರೇಷ್ಮೆ ವ್ಯವಸಾಯದಂತಹ, ಬೇಗ ಹೆಚ್ಚು ಲಾಭ ತಂದುಕೊಡಬಲ್ಲ ಬೆಳೆಗಳನ್ನು ಬೆಳೆಸುತ್ತಿಲ್ಲ. ರೇಷ್ಮೆ ಕೃಷಿಯಲ್ಲಿ ಉತ್ಪತ್ತಿ ಪಡೆಯಲು ಕೇವಲ ಒಂದು ವರ್ಷ ಸಾಕು. ಹಿಪ್ಪು ನೇರಳೆ ಸಸಿ ನೆಟ್ಟು ಸುಮಾರು ಒಂದು ವರ್ಷದಲ್ಲಿ ರೇಷ್ಮೆ ಹುಳು ಸಾಕಣಿಕೆಗೆ ಬೇಕಾಗುವಷ್ಟು ಗೆಲ್ಲುಗಳನ್ನು ಬಿಟ್ಟು ಸೊಪ್ಪನ್ನು ಉತ್ಪಾದಿಸುತ್ತದೆ. ನಂತರ ಗೆಲ್ಲುಗಳನ್ನು ಹುಳುಗಳಿಗೆ ತಿನ್ನಿಸಲು ಕಡಿದರೆ ಮತ್ತೆ ಅದು ನಾಲ್ಕು ತಿಂಗಳಿಗೆ ಬೆಳೆದು ಪುನಃ ಕಠಾವು ಮಾಡಲು ಸಿದ್ಧವಾಗುತ್ತದೆ. ಏಕ ಕಾಂಡ ಪದ್ದತಿಯಲ್ಲಿ ಸಸಿ ಬೆಳೆಸಿ,ಒಮ್ಮೆ ನೆಟ್ಟ ಗಿಡದಿಂದ ವರ್ಷಕ್ಕೆ ಕನಿಷ್ಠ ಮೂರು ಬಾರಿ ರೆಂಬೆಗಳನ್ನು ಕಠಾವು ಮಾಡುತ್ತಾ ಅದೇ ಬುಡದಿಂದ ಸುಮಾರು ೧೫-೨೦ ವರ್ಷ ಕಾಲ ಉತ್ತಮ ರೆಂಬೆ ಇಳುವರಿಯನ್ನು ಪಡೆಯುತ್ತಿರುಬಹುದು. ಹಿಪ್ಪು ನೇರಳೆ ಸಸ್ಯ ಬಹುವಾರ್ಷಿಕ ಸಸ್ಯ. ಇದರ ಸಸ್ಯಾಭಿವೃದ್ಧಿಗೆ ಯಾವುದೇ ಕಷ್ಟಗಳಿಲ್ಲ. ರೈತರೇ ನಿರ್ಲಿಂಗ ರೀತಿಯಲ್ಲಿ ಸಸ್ಯಾಭಿವೃದ್ಧಿ ಮಾಡಿಕೊಳ್ಳಬಹುದು. ಒಂದು ಎಕ್ರೆಯಲ್ಲಿ ಸುಮಾರು ೩೨೦೦ರಿಂದ ೪,೮೦೦ ತನಕ ಹಿಪ್ಪುನೇರಳೆ ಸಸಿಗಳು ಹಿಡಿಯುತ್ತವೆ. ಇದರಲ್ಲಿ ವಿಭಾಗ ಮಾಡಿಕೊಂಡು ವರ್ಷಕ್ಕೆ ೧೫೦ ಮೊಟ್ಟೆಯ ಪ್ರಮಾಣದಲ್ಲಿ ೧೦-೧೧ ರೀತಿಯ ವಾಣಿಜ್ಯ ಬೆಳೆ ಬೆಳೆಯಬಹುದು. ೧೫೦ ಮೊಟ್ಟೆಗಳಿಂದ ಸುಮಾರು ೧೩೦ರಿಂದ ೧೩೫ ಕಿಲೋ ಗೂಡಿನ ಇಳುವರಿ ದೊರೆಯುತ್ತದೆ. ಇಂದಿನ ಕಿಲೋ. ರೂ. ೩೫೦ ದರದಂತೆ ೧೩೦ ಕಿಲೋ ಗೂಡಿಗೆ ೪೫,೦೦೦ ರೂ. ಆದಾಯ ದೊರೆಯಬಲ್ಲದು. ಇದರಲ್ಲಿ ಆಳುಗಳನ್ನೇ ನೇಮಿಸಿ ಬೇಸಾಯ ಮಾಡುವುದಾದರೆ ೫೦% ಖರ್ಚಾದರೂ ವಾರ್ಷಿಕ ೧೦ ಬೆಳೆಗೆ ಎಕ್ರೆಯೊಂದರಿಂದ ರೂ. ೨,೨೫,೦೦೦ ನಿವ್ವಳ ಲಾಭ ದೊರೆಯುತ್ತದೆ. ಮೊದಲ ವರ್ಷ ಹಿಪ್ಪು ನೇರಳೆ ನಾಟಿ, ಸಾಕಣೆ, ಮನೆ, ಸ್ಟಾಂಡ್, ಚಂದ್ರಿಕೆ ಮುಂತಾದ ಒಳಸುರಿಗಳಿಗೆ ಖರ್ಚುಗಳಿವೆಯಾದರೂ ನಂತರದ ವರ್ಷಗಳಲ್ಲಿ ಇದು ಕಡಿಮೆಯಾಗಿ ಲಾಭಕ್ಕೆ ಕೂಡಿಕೆಯಾಗುತ್ತದೆ. ಉಳಿದ ಯಾವುದೇ ಕೃಷಿಯಲ್ಲಿ ಇಂತಹ ಲಾಭ ನಿರೀಕ್ಷೆ ಕಷ್ಟ. ಹಿಪ್ಪುನೇರಳೆ ಸಸಿಗಳನ್ನು ಏಕಬೆಳೆಯಾಗಿಯೂ ಬೆಳೆಸಬಹುದು, ಅಲ್ಲದೆ ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿಯೂ ಬೆಳೆಸಬಹುದು. ಇದರಿಂದ ಅದಾಯ ಹೆಚ್ಚು ಪಡೆಯಬಹುದು. ರೇಷ್ಮೆ ವ್ಯವಸಾಯ ಮಾಡುವವರು ಹಸು, ಆಡು ಸಾಕಣೆಯನ್ನೂ ಮಾಡಬಹುದು. ಹುಳುಗಳಿಗೆ ತಿನ್ನಿಸಿ ಉಳಿಕೆಯಾಗುವ ಸೊಪ್ಪಿನ ಕಡ್ಡಿಗಳನ್ನು ಇವು ತಿನ್ನುತ್ತವೆ. ಇದರಿಂದ ಮೇವು ಸಮಸ್ಯೆ ಕಡಿಮೆಯಾಗುತ್ತದೆ. ಹಿಪ್ಪು ನೇರಳೆ ಸೊಪ್ಪು ಅಧಿಕ ಹಾಲಿನ ಉತ್ಪಾದನೆಗೆ ಸಹಾಯಕ.
ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಸ್ವ-ಉದ್ಯೋಗಕ್ಕೆ ಅವಕಾಶಗಳು: ಗ್ರಾಮೀಣ ಪ್ರದೇಶದ ಜನ ಇಂದು ಹೆಚ್ಚಿನ ವೇತನದ ಆಸೆಗಾಗಿ ಪಟ್ಟಣದ ಕಡೆಗೆ ವಲಸೆ ಹೋಗುವುದನ್ನು ಎಲ್ಲೆಲ್ಲೂ ಕಾಣಬಹುದು. ಪಟ್ಟಣಗಳಲ್ಲಿ ಕೂಲಿ ಕೆಲಸಕ್ಕೂ ಸಹ ಇಂದು ದಿನಕ್ಕೆ ರೂ. ೪೦೦ರಿಂದ ರೂ. ೫೦೦ ವೇತನ ಇದೆ. ಹಳ್ಳಿಯಲ್ಲಾದರೆ ಅಷ್ಟು ಸಿಗುವುದಿಲ್ಲ ಎಂಬುದು ಜನರ ಭಾವನೆ. ಪಟ್ಟಣಗಳಲ್ಲಿ ಮಜೂರಿ ಹೆಚ್ಚು ದೊರೆತರೂ ಖರ್ಚು ಕಳೆದು ಉಳಿತಾಯವಾಗುವುದು ಏನೂ ಇಲ್ಲ. ಒಮ್ಮೆ ಪಟ್ಟಣಕ್ಕೆ ಹೋದರೆ ಮತ್ತೆ ಅಲ್ಲಿ ಸಿಕ್ಕಿಹಾಕಿಕೊಂಡಂತೆ. ಸಂಬಳ ಸಾಲದೆ ಮುಂಗಡ ಪಡೆದು ನಿರಂತರ ಅಲ್ಲೇ ದುಡಿಯುವ ಸ್ಥಿತಿ ಈಗ ಗ್ರಾಮೀಣ ಪ್ರದೇಶದ ವಲಸಿಗರ ಕಥೆ.
ಗ್ರಾಮದಲ್ಲಿದ್ದುಕೊಂಡೇ ಪಟ್ಟಣದಲ್ಲಿ ಪಡೆಯುತ್ತಿರುವ ಆದಾಯ ಸಂಪಾದಿಸಲು ಸಾಧ್ಯವಿದೆ. ಅಂತಹ ಆದಾಯ ದೊರಕಿಸಿ ಕೊಡುವ ಬೇರೆ ಬೇರೆ ಕೃಷಿ ಪೂರಕ ಚಟುವಟಿಕೆಗಳಲ್ಲಿ ರೇಷ್ಮೆ ವ್ಯವಸಾಯವೂ ಒಂದು. ಇಲ್ಲಿ ರೈತರು ಹುಳು ಹಾಕುವ ವೃತ್ತಿ ಮಾಡುವುದಾದರೆ ಅವರಿಗೆ ಬೇಕಾಗುವ ಒಳಸುರಿಗಳನ್ನು ಪೂರೈಸಿಕೊಡುವ ವೃತ್ತಿಯಲ್ಲಿ ಗ್ರಾಮೀಣ ಪ್ರದೇಶದ ಉತ್ಸಾಹೀ ಯುವಕರು ತೊಡಗಿಸಿಕೊಳ್ಳಬಹುದು. ಹುಳು ಸಾಕುವವರಿಗೆ ಬೇಕಾದ ಸೊಪ್ಪನ್ನು ಬೆಳೆಸಿ ಮಾರಾಟ ಮಾಡುವಿಕೆ, ಹೊಸ ತಳಿಯ ಹಿಪ್ಪುನೇರಳೆ ಸಸಿಗಳನ್ನು ನರ್ಸರಿ ಮಾಡಿ ಬೇಕಾದವರಿಗೆ ದೊರಕಿಸಿ ಕೊಡುವಿಕೆ, ರೋಟರಿ ಚಂದ್ರಿಕೆಗಳನ್ನು ತಯಾರಿಸಿ ಕೊಡುವುದು, ವೈಜ್ಞಾನಿಕವಾಗಿ ಚಾಕಿ ಹುಳು ಬೆಳೆಸಿ ಕೊಡುವುದು, ಹಿಪ್ಪುನೇರಳೆ ವ್ಯವಸಾಯಕ್ಕೆ ಬೇಕಾಗುವ ಗೊಬ್ಬರ, ಲಘು ಪೋಷಕಾಂಶಗಳನ್ನು, ಕೃಷಿ ಉಪಕರಣಗಳನ್ನು ಮಾರಾಟ ಮಾಡುವುದು, ಹುಳು ಸಾಕುವಾಗ ದೊರೆಯುವ ಹುಳು ತಿಂದು ಹೊರ ಹಾಕಿದ ತ್ಯಾಜ್ಯಗಳಿಂದ ಗೊಬ್ಬರ ತಯಾರಿಸಿ ಮಾರಾಟ ಮಾಡುವುದು, ಗುತ್ತಿಗೆಯ ನೆಲೆಯಲ್ಲಿ ಹುಳು ಸಾಕಿ ಕೊಡುವುದು, ಭೂಮಿ ನೀರಾವರಿ ಉಳ್ಳವರು ಹಿಪ್ಪು ನೇರಳೆ ಬೆಳೆಸಿ ಅದನ್ನು ಗುತ್ತಿಗೆಗೆ ಕೊಡುವುದು ಮುಂತಾದ ಕಸುಬುಗಳನ್ನು ಮಾಡಬಹುದು. ವ್ಯವಸ್ಥಿತ ಹುಳು ಸಾಕುವ ಮನೆಗಳನ್ನು ಮಾಡಿಕೊಂಡು ಅದನ್ನು ಅಗತ್ಯವಿರುವವರಿಗೆ ಬಾಡಿಗೆಗೆ ನೀಡಿ ಆದಾಯ ಸಂಪಾದಿಸುವುದೂ ಸಾಧ್ಯವಿದೆ. ರೇಷ್ಮೆ ವ್ಯವಸಾಯ ಹೆಚ್ಚಿನ ಪ್ರಮಾಣದಲ್ಲಿ ಇರುವ ಪ್ರದೇಶಗಳಲ್ಲಿ ಇದರಿಂದ ಉತ್ತಮ ಆದಾಯ ಪಡೆಯುವುದೂ ಸಾಧ್ಯವಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಬೆಂಗಳೂರು ಶಿಡ್ಲಘಟ್ಟ, ದೇವನಹಳ್ಳಿ, ಕೋಲಾರಗಳಲ್ಲಿ ಇದು ಇದೆ. ರಾಮನಗರ, ಕನಕಪುರ, ಚನ್ನಪಟ್ಟಣ ಮುಂತಾದ ಕಡೆಗಳಲ್ಲಿ ಹಲವು ಜನ ಇಂತಹ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು.
ಮಾಹಿತಿ : ರಾಧಾಕೃಷ್ಣ ಹೊಳ್ಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!