ಬೆಳ್ಳಿ ಚುಕ್ಕಿ

‘ಬೆಳ್ಳಿ ಚುಕ್ಕಿ’ ಎ. ಪಿ. ಮಾಲತಿ ಅವರ ಕಾದಂಬರಿಯಾಗಿದೆ. “ಬದುಕು ಗಣಿತದ ಸೂತ್ರಗಳ ಲೆಕ್ಕಾಚಾರದಂತೆ ಒಂದು ಅಂಕೆ ತಪ್ಪಿದರೆ ಇಡೀ ಸೂತ್ರವೇ ತಪ್ಪಿಹೋಗುತ್ತದೆ" ಎಂಬ ಕಾದಂಬರಿಯ ಕೇಂದ್ರ ಪಾತ್ರ ವಸಂತಿ ಹೇಳುವ ಮಾತು ಕಾದಂಬರಿಯ ಆಶಯವನ್ನು ಹೇಳುವಂತದ್ದು. ಬದುಕಿನ ಬವಣೆಗಳನ್ನು, ಕ್ಲಿಷ್ಟ ಸಮಸ್ಯೆಗಳನ್ನು ತಾಳ್ಮೆಯಿಂದ ಧೈರ್ಯದಿಂದ ಅಂತಃಕರಣದಿಂದ ಬಿಡಿಸುತ್ತಾ ಸಾಗಬೇಕೇ ಹೊರತು ಕೋಪತಾಪ ಆತುರದ ನಿರ್ಧಾರಗಳು ಬದುಕನ್ನು ಹಾಳುಗೆಡವುತ್ತವೆಂಬುದನ್ನು ಲೇಖಕಿ ಮಾಲತಿಯವರು ಈ ಕಾದಂಬರಿಯ ಮೂಲಕ ಚಂದದಲ್ಲಿ ಕಟ್ಟಿಕೊಡುತ್ತಾರೆ. ಯುವ ಮನಸ್ಸುಗಳು ಎದುರಿಸುವ ಅನೇಕ ಸಂಘರ್ಷಗಳಿಗೆ ಪ್ರೀತಿ ಬೆಂಬಲ ಪ್ರೋತ್ಸಾಹದ ಕೊರತೆ ಕಾರಣವಾಗಿರುವುದನ್ನು ಕುರಿತು ಹೇಳುವ ಲೇಖಕಿ, ಹಾಗೆಯೇ ಅತೀ ಕೊಂಡಾಟ ಕೂಡಾ ಅವರನ್ನು ದಿಕ್ಕುಗೆಡಿಸುತ್ತದೆ ಎಂಬ ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯನ್ನು ಇಲ್ಲಿ ಕುತೂಹಲಕಾರಿಯಾಗಿ, ಆಪ್ತವಾಗಿ ಚಿತ್ರಿಸಿದ್ದಾರೆ. ತಲ್ಲಣಗಳನ್ನು ಎದುರಿಸುವ, ಅದರಿಂದ ಹೊರಬರುವ ಮಾರ್ಗಗಳನ್ನು ಕಥಾನಕ ಸರಳ, ಸುಂದರವಾಗಿ ಚಿತ್ರಿಸಿದರೂ, ಬದುಕೆಂಬುದು ಅಷ್ಟು ಸಲೀಸಲ್ಲ, ಅನೂಹ್ಯವಾದದ್ದು ఎంబ ಧ್ವನಿಯೂ ಅಂತರ್ಗತವಾಗಿದೆ. ಆಶಾದಾಯಕ, ಭರವಸೆಯ ದಿಕ್ಕಿನೆಡೆ ಕಥೆ ಮುಖಮಾಡಿರುವುದು ವಿಶೇಷವಾಗಿದೆ.

ತಮ್ಮ ಕಾದಂಬರಿಯ ಬಗ್ಗೆ ಲೇಖಕಿ ಮಾಲತಿಯವರು ಹೇಳುತ್ತಾರೆ…”ಅಭಿಮಾನಿ ಓದುಗರ ಮುಂದೆ ನನ್ನ ಹೊಸ ಕಾದಂಬರಿ "ಬೆಳ್ಳಿ ಚುಕ್ಕಿ" ಇರಿಸಿದ್ದೇನೆ. ಇದೊಂದು ಸಾಮಾಜಿಕ ಕಾದಂಬರಿ, ಪ್ರಚಲಿತ ದಿನಮಾನಗಳಲ್ಲಿ ನಡೆಯುವ ಹಲವು ಸಮಸ್ಯೆಗಳು, ಜೀವನದ ಅತಿರೇಕಗಳು, ಅಸಹಾಯಕ ಪರಿಸ್ಥಿತಿಗಳು, ವ್ಯಂಗ್ಯ ನಡೆನುಡಿಗಳು, ಅರ್ಹತೆ ಇದ್ದರೂ ಜರಿದು ಮಾತನಾಡುವ ರಕ್ತ ಸಂಬಂಧಿಗಳು, ಮಾನಸಿಕ ತಲ್ಲಣಗಳು, ಮಕ್ಕಳ ಭವಿಷ್ಯಕ್ಕೆ ಹೆತ್ತವರ ಆತಂಕ, ಕಿಶೋರ ವಯಸ್ಸಿನಲ್ಲಿ ದುಶ್ಚಟಗಳಿಂದ ದಾರಿ ತಪ್ಪುವಿಕೆ, ಜೀವನದಲ್ಲಿ ಜಿಗುಪ್ಸೆ, ಆತ್ಮಹತ್ಯೆಗೆ ಹವಣಿಸುವ ಕ್ಷಣದಲ್ಲಿ ಪ್ರತಿ ಜೀವಿಗೂ ಅವರನ್ನು ಸಂತೈಸುವ ಇನ್ನೊಂದು ಜೀವದ ಬೆಳಕು ಬೇಕು. ದಾರಿ ತೋರಿಸುವ ಗುರು ಬೇಕು. ಪ್ರೀತಿಸುವ ಮನಸ್ಸು, ಅಂತಃಕರಣ ಬೇಕು. ಇವೆಲ್ಲವೂ ಒದಗಿದಾಗ ಬಂದ ಸಮಸ್ಯೆ ನಿವಾರಣೆಯಾಗಿ ಹೊಸ ಬೆಳಕು ಮೂಡುತ್ತದೆ. ಇಂತಹ ಒಂದು ಸಾಂತ್ವನದ ಚಿತ್ರಣವನ್ನು ಬೆಳ್ಳಿ ಚುಕ್ಕಿ ಕಾದಂಬರಿಯಲ್ಲಿ ಹೇಳುವ ಪ್ರಯತ್ನ ನನ್ನದು.”