ಲಚ್ಮನ ಸೈಕಲ್ ಪುರಾಣ ಮತ್ತು ಇತರ ಕಥೆಗಳು

೨೧ನೇ ಶತಮಾನದ ಯುವ ಕಥೆಗಾರರು ಕನ್ನಡ ಸಣ್ಣಕಥೆಯ ಜಗತ್ತಿಗೆ ಹೊಸ ಉಸಿರು ತುಂಬಿದ್ದಾರೆ. ಅವರ ಕಥೆಗಳು ಭಾವನೆಗಳನ್ನು ಜಾಗೃತಗೊಳಿಸುವುದರ ಜೊತೆಗೆ, ಹೊಸ ದೃಷ್ಟಿಕೋನಗಳ ಮೂಲಕ ಓದುಗರ ಚಿಂತನೆಯನ್ನು ವಿಸ್ತರಿಸುತ್ತವೆ. ಓದುಗನ ಮನಸ್ಸಿನಲ್ಲಿ “ಇದು ನನ್ನದೇ ಕಥೆ” ಎಂಬ ಅನುಭವ ಮೂಡಿದರೆ, ಅದು ಲೇಖಕನಿಗೆ ದೊಡ್ಡ ಸಾಧನೆ. ಇಂತಹ ಒಂದು ಸಂವೇದನಾಶೀಲ ಕಥೆಗಾರ ಮೋಹನ ಬಣಕಾರ ಅವರ ಮೊದಲ ಕಥಾ ಸಂಕಲನ ‘ಲಚ್ಮನ ಸೈಕಲ್ ಪುರಾಣ ಮತ್ತು ಇತರ ಕಥೆಗಳು’. ಇದರಲ್ಲಿ ಹತ್ತು ಕಥೆಗಳಿವೆ. ಕೆಲವು ಕಥೆಗಳು ಸ್ತ್ರೀ ಕೇಂದ್ರಿತವಾಗಿವೆ. ಉದಾ: ನಾಟಕ ಕಂಪೆನಿ, ಪೊಲೀಸ್ ಅಜ್ಜಿ, ಹೀಗೊಂದು ಮದುವೆ. ಇನ್ನು ಕೆಲವು ಪುರುಷ ಪ್ರಧಾನವಾದವು. ರಾಜೂ ಕಾಕಾ, ಒಂದು ಬಾಟಲಿನ ಕಥೆ, ಆಚಾರವಿಲ್ಲದ ನಾಲಿಗೆ, ಲಚ್ಮನ ಸೈಕಲ್ ಪುರಾಣ ಮುಂತಾದವು. ‘ಎ.ಬಿ.ಸಿ.ಡಿ.’ ಮಗುವಿನ ಮುಗ್ಧತೆಯನ್ನು ಕೇಂದ್ರೀಕರಿಸಿದ್ದರೆ, ‘ಲೈಟ್ ಆಫ್ ಪ್ಲೀಸ್’ ಸಲಿಂಗಕಾಮದ ಸೂಕ್ಷ್ಮ ಸ್ಪಂದನಗಳನ್ನು ಚರ್ಚಿಸುತ್ತದೆ. ಲೇಖಕರು ವಸ್ತು ಆಯ್ಕೆಯಲ್ಲಿ ಮತ್ತು ನಿರೂಪಣೆಯಲ್ಲಿ ತೋರಿದ ಕೌಶಲ ಅದ್ಭುತ. ಉದಾಹರಣೆಗೆ, ‘ಆಚಾರ ಹೇಳುವ ನಾಲಿಗೆ’ ಕಥೆಯಲ್ಲಿ ಶಿಕ್ಷಕರ ಮಗನೇ ಕುಡುಕನಾಗಿ ಮಾಡುವ ಅಲೆಮಾರಿ ಜೀವನದ ದುರಂತವನ್ನು ತೆರೆದಿಡಲಾಗಿದೆ. “ಗಾಜಿನ ಮನೆಯಲ್ಲಿ ಕುಳಿತವರು ಇತರರ ಮನೆಗೆ ಕಲ್ಲು ಹೊಡೆಯಬಾರದು” ಎಂಬ ಸತ್ಯವನ್ನು ಸೂಕ್ಷ್ಮವಾಗಿ ಮನವರಿಕೆ ಮಾಡಿಸುತ್ತದೆ.‘ಅವಲಕ್ಕಿ ಸರ’ ಕಥೆಯಲ್ಲಿ ಪರರ ಸೊತ್ತಿನ ಆಸೆಯ ದುಷ್ಪರಿಣಾಮವನ್ನು ಯುಕ್ತಿಪೂರ್ವಕ ಘಟನೆಗಳ ಮೂಲಕ ಚಿತ್ರಿಸಲಾಗಿದೆ. ದೇವರ ಹುಂಡಿಯಿಂದಲೇ ಕಳೆದುಕೊಂಡ ವಸ್ತುವನ್ನು ಹಿಂದಿರುಗಿಸಿ ಸಂತೈಸುವ ಅರ್ಚಕನ ಕೃತ್ಯ ದೇವರಂತೆಯೇ ಭಾಸವಾಗುತ್ತದೆ. ಇದು ಸಾಧ್ಯವೇ ಎಂಬ ಸಂದೇಹವನ್ನು ಮೂಡಿಸಿದರೂ, ನೊಂದವರ ರಕ್ಷಣೆಯ ಹೊಣೆ ದೈವಕ್ಕಿದೆ ಎಂಬ ಸಂದೇಶ ನೀಡುತ್ತದೆ. ‘ಹೀಗೊಂದು ಮದುವೆ’ಯಲ್ಲಿ ಆಧುನಿಕ ಯುವಕ-ಯುವತಿಯರ ಮದುವೆಯ ಒತ್ತಡದ ನಡುವೆ ನಡೆಯುವ ಚಾಣಾಕ್ಷ ಆಟವನ್ನು ತೋರಿಸಲಾಗಿದೆ. ಹೆತ್ತವರ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿದಂತೆ ನಟಿಸಿ, ಕೊನೆಗೆ ಯುವತಿ ತನ್ನ ಪ್ರೇಮಿಯೊಂದಿಗೆ ವಿದೇಶಕ್ಕೆ ತಪ್ಪಿಸಿಕೊಳ್ಳುವ ತಂತ್ರ ಯುವಕನ ಮುಗ್ಧತೆಯನ್ನು ದುರುಪಯೋಗ ಮಾಡುವಂತೆ ಮಾಡುತ್ತದೆ. ‘ಲೈಟ್ ಆಫ್ ಪ್ಲೀಸ್’ ಸಲಿಂಗಕಾಮಿಗಳ ಗುಪ್ತ ಭೇಟಿಗಳ ಸ್ಥಳ-ಸಮಯ-ರೀತಿಯನ್ನು ತಿಳಿಸುವುದರ ಜೊತೆಗೆ ಸಮಾಜಕ್ಕೆ ಎಚ್ಚರಿಕೆ ನೀಡುತ್ತದೆ. ‘ಲಚ್ಮನ ಸೈಕಲ್ ಪುರಾಣ’ ಹಳ್ಳಿಯ ಮುಗ್ಧ ಯುವಕನ ಪ್ರೀತಿ, ಸ್ವಾಮಿ ನಿಷ್ಠೆಯನ್ನು ಸೊಗಸಾಗಿ ಚಿತ್ರಿಸುತ್ತದೆ. ಕೃಷಿಕ ಕುಟುಂಬದ ಪ್ರಾಣಿ ಪ್ರೀತಿ, ಕಾಯಿಲೆ ಬಿದ್ದಾಗ ಪಶು ವೈದ್ಯರನ್ನು ಹುಡುಕುವ ಸಂಕಷ್ಟ, ಸೈಕಲ್ ಓಡಿಸಲು ಬಾರದಿದ್ದರೂ ನಂಬಿಕೆಯಿಂದ ದೂಡಿಕೊಂಡು ಹೋದ ಲಚ್ಮನನ ನಿಷ್ಠೆಯನ್ನು ಗೌರವಿಸುವಂತೆ ಮಾಡುತ್ತದೆ. ‘ಪೊಲೀಸ್ ಅಜ್ಜಿ’ಯಲ್ಲಿ ವಿದ್ಯಾರ್ಥಿಗಳ ಪಕ್ಕದ ಮನೆಗೆ ಬಾಡಿಗೆಗೆ ಬಂದ ಅಜ್ಜಿ ಅವರೊಂದಿಗೆ ಬೆಳೆಸಿದ ಪ್ರೀತಿ, ಶಿಸ್ತು ರೂಪಿಸಿದ್ದು ಖುಷಿ ನೀಡುತ್ತದೆ. ಆದರೆ ಒಂದು ದಿನ ಮಲಗಿದಲ್ಲೇ ನಿಧನರಾದಾಗ ಹುಡುಗರು ಅನಾಥರಾದಂತೆ ಅಳುವ ದೃಶ್ಯ ಹೃದಯಸ್ಪರ್ಶಿಯಾಗಿದೆ. ‘ಒಂದು ಬಾಟಲಿನ ಕಥೆ’ಯಲ್ಲಿ ಸಹ ಪ್ರಯಾಣಿಕರ ಮೇಲೆ ಸಹನೆ ಕಳೆದುಕೊಂಡ ನಡವಳಿಕೆಯಿಂದ ಮನುಷ್ಯ ಪ್ರೀತಿಯ ಕೊರತೆ ತಿಳಿಯುತ್ತದೆ. ನೀರಿನ ಬಾಟಲ್ ಕೆಳಗೆ ಬಿದ್ದು ಕೆರಳಿದವಳೇ ಅಪಘಾತದ ನಂತರ ಅದೇ ಬಾಟಲ್ ನೀರನ್ನು ಬಯಸುವ ಘಟನೆ ಮನೋಜ್ಞವಾಗಿದೆ. ಅಪನಂಬಿಕೆಯ ದುಷ್ಪರಿಣಾಮವನ್ನೂ ಇದು ಚೆನ್ನಾಗಿ ತೋರಿಸುತ್ತದೆ. ‘ರಾಜೂ ಕಾಕಾ’ಯಲ್ಲಿ ಕುಟುಂಬಕ್ಕಾಗಿ ತನ್ನೆಲ್ಲವನ್ನೂ ತ್ಯಾಗ ಮಾಡಿದ ಕಾಕನ ದುರಂತ ಅಂತ್ಯ ಕಣ್ಣೀರು ತರಿಸುತ್ತದೆ. ಮನೆಯವರ ಆರೋಪಗಳಿಂದ ಘಾಸಿಗೊಂಡು ಆತ್ಮಹತ್ಯೆ ಮಾಡಿಕೊಂಡಾಗ, ಅವನನ್ನು ಸಾಕಿದ ಕುಟುಂಬವೇ ಹೊಣೆಗಾರ ಎಂಬುದನ್ನು ಲೇಖಕ ಸ್ಪಷ್ಟಪಡಿಸುತ್ತಾರೆ. ‘ಎ.ಬಿ.ಸಿ.ಡಿ.’ ಮಕ್ಕಳ ಮುಗ್ಧ ಪ್ರಪಂಚ, ಪ್ರಾಣಿಗಳ ಮೇಲಿನ ಪ್ರೀತಿಯನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ‘ನಾಟಕ ಕಂಪೆನಿ’ಯಲ್ಲಿ ಆಧುನಿಕ ಉದ್ಯೋಗಸ್ಥ ಮಹಿಳೆಯರ ಕೆಲಸದ ಸಂದರ್ಭದಲ್ಲಿನ ಕೆಲವು ಗಲ್ಲತನಗಳನ್ನು ಲಲಿತವಾಗಿ ತೋರಿಸಲಾಗಿದೆ. ಈ ಸಂಕಲನದ ವಿಶೇಷತೆ ಏನೆಂದರೆ ಹೆಚ್ಚಿನ ಕಥೆಗಳು ಸಂಭಾಷಣೆಗಳ ಮೂಲಕವೇ ಮುಂದುವರಿಯುತ್ತವೆ. ಲೇಖಕರು ಮಾನವ ಮನಸ್ಸಿನ ತುಡಿತ-ಮಿಡಿತಗಳಿಗೆ ಸ್ಪಂದಿಸುವ ರೀತಿ ಅದ್ಭುತ. ಹಲವು ಕಥೆಗಳು ತುಷಾರ, ಮಯೂರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮೆಚ್ಚುಗೆ ಗಳಿಸಿವೆ.  ಈ ಕೃತಿಗೆ ಚಿಕ್ಕದಾದರೂ ಚೊಕ್ಕದಾದ ಬೆನ್ನುಡಿಯನ್ನು ಬರೆದಿದ್ದಾರೆ ವಸುಮತಿ ಉಡುಪ. “ಮೋಹನ ಬಣಕಾರ ಅವರ ಸಂಕಲನದ ಕತೆಗಳು ವಾಸ್ತವ ಜಗತ್ತಿನ ವಿದ್ಯಮಾನಕ್ಕೆ ಕನ್ನಡಿ ಹಿಡಿಯುವಂತೆ ಸರಳವಾಗಿ, ಆಪ್ತವಾಗಿ ರಚನೆಯಾಗಿದೆ. ಲೇಖಕರು ಮನುಷ್ಯ ಸ್ವಭಾವದ ವಿವಿಧ - ಮಗ್ಗುಲುಗಳನ್ನು ಓದುಗರೆದುರು ತೆರೆದಿಡುತ್ತಾರೆ. 'ಇದು ಹೀಗೆ.... ಇವರು ಹೀಗೆ...' ಎನ್ನುವುದನ್ನು ನಿರ್ಲಿಪ್ತವಾಗಿ ಹೇಳುತ್ತಾ ಕಥಾಪಾತ್ರಗಳ ಗುಣ, ಸಭಾವಗಳ ತೀರ್ಪನ್ನು ಓದುಗರಿಗೇ ಬಿಟ್ಟು ಕೊಡುತ್ತಾರೆ. ಒಳಗೊಂದು, ಹೊರಗೊಂದು ಸ್ವಭಾವದ ಬೂಟಾಟಿಕೆಯ ಜಗತ್ತನ್ನು ಸಂಕಲನದ ಕೆಲ ಕತೆಗಳು ಸಮರ್ಥವಾಗಿ ಬಿಂಬಿಸುತ್ತವೆ.” ಮೋಹನ ಬಣಕಾರ ಅವರಿಂದ ಕನ್ನಡ ಕಥಾ ಸಾಹಿತ್ಯಕ್ಕೆ ಇನ್ನಷ್ಟು ಉತ್ತಮ ಕೃತಿಗಳು ಬರಲಿ ಎಂದು ನಿರೀಕ್ಷಿಸಬಹುದು.

ಕೃತಜ್ಞತೆಗಳು: ಶ್ರೀಮತಿ ರೋಹಿಣಿ ಬಿ ಎಂ