ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಸಾಹಿತಿಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಮತ್ತು ಅಂಕಣಗಾರ್ತಿಯಾಗಿ ನಾಡಿನಾದ್ಯಂತ ಪ್ರಸಿದ್ಧರು. ವೈದ್ಯಸಾಹಿತ್ಯ, ಕತೆ, ನಾಟಕ, ಕವನ, ಗ್ರಂಥ ಸಂಪಾದನೆ ಪ್ರಕಾರಗಳಲ್ಲಿ ಇವರ ೭೫ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಸದಾ ಸಮಾಜಮುಖಿ ಚಿಂತನೆಯುಳ್ಳ ಡಾ. ವಸುಂಧರಾ ಭೂಪತಿಯವರು ಇದೀಗ ‘ಹಣ್ಣುಗಳು ಮತ್ತು ಆರೋಗ್ಯ’ ಕೃತಿಯನ್ನು ರಚಿಸಿದ್ದಾರೆ. ಇದು ಎಲ್ಲರ ಕೈಯ್ಯಲ್ಲಿ ಇರಲೇಬೇಕಾದ ಕೃತಿ.
ಲೇಖಕಿಯವರು ಬೆನ್ನುಡಿಯಲ್ಲಿ ಬರೆದ ಸಾಲುಗಳು ಹೀಗಿವೆ… “ಶರೀರಕ್ಕೆ ಸಂಪೂರ್ಣ ಆಹಾರ ದೊರೆಯಬೇಕೆಂದರೆ ಇತರ ಆಹಾರಗಳೊಡನೆ ಹಣ್ಣುಗಳು ಸೇರಿರಬೇಕು. ದೀರ್ಘಕಾಲ ರೋಗ ರುಜಿನಗಳು ಇಲ್ಲದೇ ಬದುಕಿರಬೇಕೆಂಬ ಇಚ್ಛೆಯುಳ್ಳ ಪ್ರತಿಯೊಬ್ಬರೂ ಪ್ರಕೃತಿಯ ವರವಾದ ಹಣ್ಣುಗಳನ್ನು ಯಥೇಚ್ಛವಾಗಿ ಉಪಯೋಗಿಸಲೇಬೇಕು. ಹಣ್ಣುಗಳು ಮಾನವನಿಗೆ ರೋಗ ನಿರೋಧಕ ಶಕ್ತಿ ಕೊಟ್ಟು ಸುಖಜೀವನಕ್ಕೆ ಅಡಿಪಾಯ ಹಾಕುತ್ತವೆ. ಆಯಾ ಋತುಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ಹಣ್ಣುಗಳು ಲಭ್ಯವಿರುತ್ತವೆ. ಇವು ತಿನ್ನಲು ರುಚಿಯಾಗಿರುವುದಲ್ಲದೇ ಬೇಯಿಸುವ ತೊಂದರೆಯಿಲ್ಲ.
ಪೋಷಕಾಂಶಯುಕ್ತವಾಗಿರುವ ಹಣ್ಣುಗಳು ನಮ್ಮ ಶರೀರದ ಜೀವಕೋಶಗಳಿಗೆ ಚೈತನ್ಯ ನೀಡುತ್ತವೆ. ಈ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯದಿದ್ದಾಗ ನಮ್ಮ ಶರೀರವು ಅವುಗಳ ಕೊರತೆಯನ್ನು ವಿವಿಧ ರೂಪದಲ್ಲಿ ಅಂದರೆ ಕಾಯಿಲೆಯ ರೂಪದಲ್ಲಿ ವ್ಯಕ್ತಪಡಿಸುತ್ತದೆ. ಆದ್ದರಿಂದ ಕಾಯಿಲೆ ಬಂದ ಮೇಲೆ ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತ ಕಾಯಿಲೆ ಬಾರದಂತೆ ನೋಡಿಕೊಳ್ಳುವುದೇ ಬುದ್ದಿವಂತರ ಲಕ್ಷಣವಲ್ಲವೆ? ಯಾವ ಯಾವ ಹಣ್ಣುಗಳಲ್ಲಿ ಪೋಷಕಾಂಶಗಳು ಎಷ್ಟೆಷ್ಟು ಪ್ರಮಾಣದಲ್ಲಿರುತ್ತವೆ ಮತ್ತು ಔಷಧಿ ರೂಪದಲ್ಲಿ ಅದನ್ನು ಹೇಗೆ ಬಳಸಬಹುದು ಎಂಬುದನ್ನು ಈ ಕಿರುಹೊತ್ತಿಗೆಯಲ್ಲಿ ತಿಳಿಸಲಾಗಿದೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!