ಜೀವಜಂತುಗಳ ಪಾವಿತ್ರ್ಯ ಮತ್ತು ಮಾನವ ಜೀವನದ ಮೌಲ್ಯ – ಒಂದು ಟಿಪ್ಪಣಿ

ಪತ್ರಿಕೆ ಓದುವಾಗ ಕೆಲವೊಮ್ಮೆ ಒಂದು ಸಣ್ಣ ಅಂಕಣ ಕೂಡ ದೊಡ್ಡ ಚಿಂತನೆಗೆ ಕಾರಣವಾಗುತ್ತದೆ. ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾದ “ಪಾವಿತ್ರ್ಯದ ಕಲ್ಪನೆ ಬದಲಾಗಬೇಕು” ಲೇಖನದಲ್ಲಿ (ಪ್ರ.ವಾ, ನುಡಿಬೆಳಗು, ೨೩ಫೆ೨೦೨೬ ) ನಾವು ಕೆಲವು ವಸ್ತುಗಳನ್ನು ಅಥವಾ ಸ್ಥಳಗಳನ್ನು “ಪವಿತ್ರ” ಎಂದು ಹೇಳುವುದಕ್ಕೆ ಅರ್ಥವೇನು ಎಂಬ ವಿಷಯದ ಬಗ್ಗೆ ಚಿಂತನೆ ನಡೆದಿತ್ತು.

ಈ ಪ್ರಶ್ನೆ ಹೊಸದೇನಲ್ಲ.

ಹಲವು ಧರ್ಮಗಳು ಮತ್ತು ಸಂಪ್ರದಾಯಗಳಲ್ಲಿ ಪಾವಿತ್ರ್ಯವು ದೇವಸ್ಥಾನಗಳು, ತೀರ್ಥಕ್ಷೇತ್ರಗಳು, ನದಿಗಳು ಅಥವಾ ಕೆಲವು ವಸ್ತುಗಳೊಂದಿಗೆ ಸಂಬಂಧಿಸಿಕೊಂಡಿರುತ್ತದೆ. ಕೆಲವರು ಪವಿತ್ರ ಸ್ಥಳಗಳಿಂದ ನೀರನ್ನು ತಂದು ಮನೆಗಳಲ್ಲಿ ಇಡುತ್ತಾರೆ. ಕೆಲವರು ಕೆಲವು ದಿನಗಳನ್ನು ಅಥವಾ ಆಚರಣೆಗಳನ್ನು ವಿಶೇಷವಾಗಿ ಪವಿತ್ರವೆಂದು ಆಚರಿಸುತ್ತಾರೆ.ಈ ಹಿನ್ನೆಲೆಯಲ್ಲಿ “ನಮ್ಮ ಪಾವಿತ್ರದ ಕಲ್ಪನೆ ಹೀಗೆ ಸೀಮಿತವಾಗಿರಬಾರದು “ ಎಂಬ ಬಾವದಲ್ಲಿ “ನಿತ್ಯ ಕುಡಿಯುವ ನೀರು, ತಿನ್ನುವ ಅನ್ನ, ಮರಗಿಡಗಳು, ಪ್ರಾಣಿಪಕ್ಷಿಗಳು ಇತ್ಯಾದಿ ಎಲ್ಲವನ್ನೂ ಪವಿತ್ರವೆಂದು ಭಾವಿಸಬೇಕು” ಎಂಬ ಆಶಯವನ್ನು ಲೇಖಕರು ವ್ಯಕ್ತಪಡಿಸುತ್ತಾರೆ.

ನಿಜ. ಈ ರೀತಿಯ ಚಿಂತನೆಗಳು ಭಾರತೀಯ ಪರಂಪರೆಯ ಹಲವಾರು ಗ್ರಂಥಗಳಲ್ಲಿ, ಮತ್ತು ಉಪನಿ಼ತ್ತುಗಳಲ್ಲಿಯೂ ಹೇಳಲ್ಪಟ್ಟಿವೆ. “ಪಂಡಿತಾಃ ಸಮದರ್ಶಿನಃʼ “ ದ ತಾತ್ಪರ್ಯವೂ ಇದೇ. ಆದರೆ ಇಂತಹ ಬೋಧನೆಗಳು ಬಿಂಬಿಸುವ ತತ್ವಚಿಂತನೆಯ ಸಂಕೀರ್ಣ ವಿಚಾರಗಳನ್ನು ಬಹುವಾಗಿ ಸರಳಿಕರಿಸಿ ಎಲ್ಲ ವಸ್ತುಗಳು ಮತ್ತು ಜೀವಿಗಳಿಗೂ “ಸಮಾನ ಸ್ಥಾನ ಮತ್ತು ಪಾವಿತ್ರ್ಯ” ಇದೆ ಎಂದು ವಾದಿಸುವುದು ಅಸಮರ್ಥನೀಯ.

ಲೇಖನದ ಅಂತ್ಯದಲ್ಲಿ ಮಂಡಿಸಲಾದ ಇನ್ನೊಂದು ವಿಚಾರವೆಂದರೆ , “ ಮಾನವ ಜೀವನವು ಇತರ ಜೀವಿಗಳಂತೆಯೇ ಒಂದು ಜೀವ ಮಾತ್ರ, ಅದರಲ್ಲಿ ವಿಶೇಷ ಪಾವಿತ್ರ್ಯ ಅಥವಾ ಮಹತ್ವವನ್ನು ನೋಡುವ ಅಗತ್ಯವಿಲ್ಲ” . ಜೀವಶಾಸ್ತ್ರೀಯ ದೃಷ್ಟಿಯಿಂದ ನೋಡಿದರೆ ಮಾನವನೂ ಪ್ರಕೃತಿಯ ಒಂದು ಭಾಗವೇ. ನಿಜ. ಇರುವೆಗಳು, ಆನೆಗಳು, ಮರಗಳು, ಪಕ್ಷಿಗಳು – ಎಲ್ಲವೂ ಜೀವಜಗತ್ತಿನ ವಿಭಿನ್ನ ರೂಪಗಳು. ಈ ಅರ್ಥದಲ್ಲಿ ಮಾನವನು ಪ್ರಕೃತಿಯಿಂದ ಬೇರ್ಪಟ್ಟವನು ಅಲ್ಲ.

ಆದರೆ ಇದೇ ವಿಚಾರವನ್ನು ಅಲ್ಲಿಯೇ ನಿಲ್ಲಿಸಿದರೆ ಒಂದು ಪ್ರಮುಖ ಪ್ರಶ್ನೆ ಉಳಿಯುತ್ತದೆ.

ಮಾನವನಲ್ಲಿರುವ ಕೆಲವು ವಿಶೇಷ ಸಾಮರ್ಥ್ಯಗಳನ್ನು ನಾವು ಹೇಗೆ ಅರ್ಥೈಸಬೇಕು? ಮಾನವನು ತನ್ನ ಜೀವನದ ಬಗ್ಗೆ ಪ್ರಶ್ನೆ ಕೇಳಬಲ್ಲನು. ತನ್ನ ನಡವಳಿಕೆಯನ್ನು ಪರಿಶೀಲಿಸಬಲ್ಲನು. ನೈತಿಕ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲನು. ನ್ಯಾಯ, ಕರ್ತವ್ಯ, ಹೊಣೆಗಾರಿಕೆ ಗಳನ್ನು ನಿರ್ವಹಿಸಬಲ್ಲನು. ಪ್ರಕೃತಿಯಲ್ಲಿ ಇರುವ ಇತರ ಜೀವಿಗಳಲ್ಲಿ ಈ ರೀತಿಯ ಆತ್ಮಪರಿಶೀಲನೆ ಅಥವಾ ನೈತಿಕ ಚಿಂತನೆ ಕಂಡುಬರುವುದಿಲ್ಲ. ಈ ಕಾರಣದಿಂದಲೇ ಮಾನವ ಜೀವನದ ಬಗ್ಗೆ ವಿಭಿನ್ನ ರೀತಿಯ ಚಿಂತನೆಗಳು ವಿವಿಧ ತತ್ವಶಾಸ್ತ್ರಗಳಲ್ಲಿ ಕಾಣಿಸುತ್ತವೆ.

ಭಾರತೀಯ ಭಕ್ತಿಪರಂಪರೆಯಲ್ಲಿಯೂ ಮಾನವ ಜೀವನದ ಮಹತ್ವವನ್ನು ಹಲವು ಸಂತರೂ ಕವಿಗಳೂ ನೆನಪಿಸುತ್ತಾರೆ. ಕನ್ನಡದ ಮಹಾನ್ ಹರಿದಾಸರಲ್ಲಿ ಒಬ್ಬರಾದ ಪುರಂದರದಾಸರು ಹೇಳಿದ ಪ್ರಸಿದ್ಧ ಸಾಲು ಇದನ್ನು ಸರಳವಾಗಿ ವ್ಯಕ್ತಪಡಿಸುತ್ತದೆ:

“ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಬೇಡಿ”

ಈ ಸಾಲಿನ ಅರ್ಥವನ್ನು ಕೆಲವರು ಕೇವಲ ಭಕ್ತಿಯ ಭಾಷೆಯಾಗಿ ನೋಡಬಹುದು. ಆದರೆ ಅದನ್ನು ಇನ್ನೊಂದು ರೀತಿಯಲ್ಲಿಯೂ ಅರ್ಥೈಸಬಹುದು.

ಮಾನವ ಜೀವನವು ದೊಡ್ಡದು ಎಂಬುದರ ಅರ್ಥ ಮಾನವನು ಇತರ ಜೀವಿಗಳಿಗಿಂತ ಮೇಲು ಎಂಬ ಅಹಂಕಾರವಲ್ಲ. ಬದಲಾಗಿ ಮಾನವನಿಗೆ ದೊರೆತಿರುವ ಅರಿವು ಮತ್ತು ಹೊಣೆಗಾರಿಕೆಯ ಮಹತ್ವವೇ ಇಲ್ಲಿ ಸೂಚಿಸಲ್ಪಟ್ಟಿದೆ. ಮಾನವನು ಪ್ರಕೃತಿಯ ಭಾಗವಾಗಿರುವುದರ ಜೊತೆಗೆ ತನ್ನ ಕ್ರಿಯೆಗಳ ಪರಿಣಾಮವನ್ನು ಅರಿಯಬಲ್ಲ ಜೀವಿಯೂ ಆಗಿದ್ದಾನೆ. ಅವನು ತನ್ನ ಸಮಾಜವನ್ನು ರೂಪಿಸಬಲ್ಲನು, ನ್ಯಾಯವನ್ನು ಹುಡುಕಬಲ್ಲನು, ತಪ್ಪುಗಳನ್ನು ತಿದ್ದಿಕೊಳ್ಳಬಲ್ಲನು. ಈ ಅರ್ಥದಲ್ಲಿ ಮಾನವ ಜೀವನವು ಒಂದು ನೈತಿಕ ಹೊಣೆಗಾರಿಕೆಯ ಅವಕಾಶವೂ ಆಗಿದೆ.

ಆದ್ದರಿಂದ ಪಾವಿತ್ರ್ಯದ ಕಲ್ಪನೆ ಬಗ್ಗೆ ಚರ್ಚಿಸುವಾಗ ಎರಡು ಅತಿರೇಕಗಳನ್ನು ತಪ್ಪಿಸಿಕೊಳ್ಳುವುದು ಮುಖ್ಯವೆನಿಸುತ್ತದೆ. ಒಂದು ಕಡೆ ಪಾವಿತ್ರ್ಯವನ್ನು ಕೇವಲ ವಸ್ತುಗಳು ಅಥವಾ ಆಚರಣೆಗಳ ಮಟ್ಟಕ್ಕೆ ಸೀಮಿತಗೊಳಿಸುವುದು ಸಮರ್ಪಕವಲ್ಲ. ಇನ್ನೊಂದು ಕಡೆ ಮಾನವ ಜೀವನದಲ್ಲಿ ಯಾವುದೇ ವಿಶೇಷ ಅರ್ಥ ಅಥವಾ ಮೌಲ್ಯವಿಲ್ಲ ಎಂದು ಹೇಳುವುದೂ ಅತಿಸರಳೀಕರಣವಾಗಬಹುದು. ಬಹುಶಃ ಪಾವಿತ್ರ್ಯದ ಅರ್ಥವನ್ನು ಇನ್ನೊಂದು ರೀತಿಯಲ್ಲಿ ನೋಡಬಹುದು. ಪಾವಿತ್ರ್ಯವು ಯಾವುದೋ ವಸ್ತುವಿನಲ್ಲಿ ಇರುವ ಗುಣವಲ್ಲ; ಅದು ಮಾನವನ ನಡವಳಿಕೆಯಲ್ಲಿ, ಅವನ ಮೌಲ್ಯಗಳಲ್ಲಿ ಮತ್ತು ಅವನ ಹೊಣೆಗಾರಿಕೆಯಲ್ಲಿ ವ್ಯಕ್ತವಾಗುವ ಗುಣವಾಗಿರಬಹುದು. ಮಾನವನನ್ನು ಇತರ ಜೀವಿಗಳ ಸಮತಟ್ಟಿನಲ್ಲಿ ನಿಲ್ಲಸುವುದು ಪರಿಸರ ಜಾಗೃತಿಗೆ ಸಹಾಯ ಮಾಡಬಹುದು. ಆದರೆ ಮಾನವ ಗೌರವ , ಹಕ್ಕುಗಳು ಮತ್ತು ನೈತಿಕ ಹೊಣೆಗಾರಿಕೆಯ ತತ್ವಗಳಿಗೆ ಅದು ಸವಾಲಾಗಬಹುದು. ಈ ಕಾರಣಕ್ಕಾಗಿ ಮಾನವ ಜೀವನದ ಮಹತ್ವವನ್ನು ಮತ್ತು ಹೆಚ್ಚುಗಾರಿಕೆಯನ್ನು ಹೊಣೆಗಾರಿಕೆಯ ಸೂಚಕವಾಗಿ ಪರಿಗಣಿಸುವ ದೃಷ್ಟಿಕೋನ ಹೆಚ್ಚು ಸಮಂಜಸ ಎಂಬುದು ನನ್ನ ಅನಿಸಿಕೆ.

— ಬ್ಲಾಗ್‌ ಬರಹ: Margin Notes: ಬರಹಗಳು, ನೋಟಗಳು ಮತ್ತು ಚಿಂತನೆಗಳು

ಡಾ. ಎಂ. ರವೀಂದ್ರ, ಬೆಂಗಳೂರು.