ಸುಖವಾದ ಜೀವನ ಎಂದರೆ ಯಾವುದು? ಅರ್ಥಪೂರ್ಣ, ಸಾರ್ಥಕ ಜೀವನ ಎಂದರೆ ಯಾವುದು? ಎಂಬುದಕ್ಕೆ ಸರ್ವಸಮ್ಮತ ವಾದ ಉತ್ತರಗಳಿಲ್ಲ. ಮೊದಲು ಸುಖ ಅಥವಾ ಸಂತೋಷದ ಜೀವನದ ಬಗ್ಗೆ ಕೆಲವು ವಿಚಾರಗಳನ್ನು ಪರಿಶೀಲಿಸೋಣ ಸುಖ ಜೀವನ ಎಂದರೆ ಯಾವುದು? ಯಾರೊಬ್ಬರ ಜೀವನ ಸುಖ/ಸಂತೋಷದಿಂದ ಕೂಡಿದೆ ಎಂದು ವಿವರಿಸಬೇಕಾದರೆ ಏನೆಲ್ಲ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂಬ ಪ್ರಶ್ನೆಗಳನ್ನು ಕೇಳಿಕೊಂಡರೆ ಎಲ್ಲರೂ ಒಪ್ಪಬಹುದಾದ ಉತ್ತರ ಏಕೆ ಅಲಭ್ಯ ಎಂಬ ವಿಷಯ ಥಟ್ಟನೆ ಮನಸ್ಸಿಗೆ ಹೊಳೆಯುತ್ತದೆ. ಕೋಟ್ಯಾಧೀಶನಾಗಿದ್ದರೂ ಶತಕೋಟಿ ಒಡೆಯನನ್ನು ಕಂಡು ದುಃಖ ಪಡುವ ವ್ಯಕಿಗಳು ಒಂದೆಡೆ ಆದರೆ, “ ಬೆಚ್ಚನೆಯ ಮನೆಯಲ್ಲಿ, ವೆಚ್ಚ ಮಾಡಲು ಹೊನ್ನು ಹಾಗೂ ಇಚ್ಚೆಯನರಿತು ನಡೆಯುವ ಸತಿ” ಇರುವ ಗೃಹಸ್ಥ ನೊಬ್ಬ ಇರುವಷ್ಟರಲ್ಲಿಯೇ “ಸ್ವರ್ಗ ಸುಖ” ಅನುಭವಿಸಬಹುದು (ಸರ್ವಜ್ಞ ವಚನ). ವರಕವಿ ಬೇಂದ್ರೆಯವರು “ನಾನು ಬಡವಿ, ಆತ ಬಡವ ಒಲವೆ ನಮ್ಮ ಬದುಕು; ಬಳಸಿಕೊಂಡೆವದನೆ ನಾವು ಅದಕು, ಇದಕು ಎದಕು” ಎಂದು ಬಡತನದಲ್ಲಿ ಸುಖ ಸಂಸಾರ ನಡೆಸುವ ಸರಳ ಸೂತ್ರ ತಿಳಿಸುತ್ತಾರೆ. ಇದು ಸಂಪತ್ತಗೆ ಸಂಬಂದಿಸಿದಂತೆ ಮಾತ್ರವಲ್ಲ ವ್ಯಕ್ತಿಯ ಅಧಿಕಾರ, ರೂಪ, ವಿದೈ, ಪ್ರಶಸ್ತಿ-ಸನ್ಮಾನಗಳು ಸದಾ “ಸುಖ”ವನ್ನೇ ತರುತ್ತವೆ ಎಂದು ಹೇಳಲಾಗದು. ಹೆಚ್ಚಿನ ಅಧಿಕಾರದ ಆಸೆಯೋ, ಇನ್ನೂ ಹೆಚ್ಚಿನ ಪ್ರಶಸ್ತಿ ಲಭಿಸಬೇಕಾಗಿತ್ತು ಎಂಬ ಕೊರಗು ಕಾಡಬಹುದು. ಆದರೆ “ಸುಖ ಜೀವನ” ಎಂಬುದು ಕೇವಲ “ಮಾನಸಿಕ ಕಾರಣಗಳಿಂದ ನಿರ್ಧರಿಸಬೇಕಾದ ವಿಚಾರ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತುಗುತ್ತದೆ. ಮನುಷ್ಯ ಸುಖವಾಗಿರಲು ಮೂಲಭೂತ ಅವಶ್ಕಕತೆಗಳಾದ ಅನ್ನ, ನೀರು, ಶುದ್ದ ಗಾಳಿ, ಬಟ್ಟೆ, ವಸತಿ , ಉದ್ಯೋಗ , ಆರೋಗ್ಯ ಇತ್ಯಾದಿಗಳು ಬೇಕು. ಅಷ್ಟೇ ಅಲ್ಲ ಮಾನವ ಜೀವಿತದ ವಿವಿಧ ಹಂತಗಳಲ್ಲಿ “ಸುಖ ಜೀವನದ” ಅವಶ್ಯಕತೆಗಳು ಸಂದರ್ಭಾನುಸಾರ ಬದಲಾಗುತ್ತಲೇ ಹೋಗುತ್ತವೆ. ಇದನ್ನು ಅಮೆರಿಕಾದ ಪ್ರಖ್ಯಾತ ಮನಶ್ಯಾತ್ರಜ್ಞ “ಮಾಸ್ಲೊ” ಸಿದ್ದಾಂತ ಸೊಗಸಾಗಿ ಚಿತ್ರಿಸುತ್ತದೆ. ಆತನ ಪ್ರಕಾರ, ಮನುಷ್ಯನಿಗೆ ಮೊದಲನೆಯ ಹಂತದಲ್ಲಿ ಶಾರೀರಿಕ ಅಗತ್ಯಗಳಾದ ಗಾಳಿ, ನೀರು, ಅನ್ನ, ಬಟ್ಟೆ. ವಸತಿ ಹೊಂದುವುದು ಪ್ರಮುಖ ಅಗತ್ಯವೆನಿಸುತ್ತದೆ. ಆ ನಂತರ ಜೀವನದಲಿ ಉದ್ಯೋಗ,ಕುಟುಂಬ ಜೀವನ, ಭದ್ರತೆ, ಪ್ರೀತಿ, ಸ್ನೇಹ ಗಳಿಕೆ ಮುಖ್ಯವಾಗುತ್ತದೆ. ಮುಂದಿನ ಹಂತದಲ್ಲಿ ಇಷ್ಟು ಮಾತ್ರ ಸುಖ , ತೃಪ್ತಿ ನೀಡದೆ ಆತ್ಮ ಗೌರವ ಹೆಚ್ಚಿಸುವ ಕೆಲಸಗಳು, ಸ್ವಸಾಮರ್ಥ್ಯ ಅಭಿವ್ಯಕ್ತಿ ಮಾಡುವ ಅವಕಾಶಗಳತ್ತ ತುಡಿತ ಉಂಟಾಗುತ್ತದೆ.”ಮಾಸ್ಲೋ” ಸಿದ್ದಾಂತದ ಪ್ರಕಾರ ಕೊನೆಯ ಹಂತದಲ್ಲಿ “ ಜೀವನದ ಅರ್ಥವೇನು? ಉದ್ದೇಶವೇನು” ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳ ಅನ್ವೇಷಣೆ ಜೀವನೋತ್ಸಾದ ಬದುಕಿಗೆ ಪ್ರೇರೇಪಣೆ ನೀಡಬಹುದು. ನಿಜ. ಬದುಕು “ಮಾಸ್ಲೊ” ಸಿದ್ದಾಂತದಲ್ಲಿ ವಿವರಿಸುವಂತೆ ಹಂತ ಹಂತವಾಗಿ ನೇರ ರೇಖೆಯಲ್ಲಿಯೇ ಸಾಗುತ್ತದೆ ಎಂದು ಹೇಳಲಾಗದು. ಈ ಎಲ್ಲ ವಿಚಾರಗಳು “ಸುಖ ಜೀವನಕ್ಕೆ” ಬೇಕಾದ ಕೆಲವು ಮೂಲ ವಸ್ತುಗಳನ್ನು ಗೊರುತಿಸುತ್ತವೆಯಾದರೂ ಇಂದಿನ ಯಂತ್ರ ನಾಗರೀಕತೆಯ ಆದುನಿಕ ಜೀವನದ ಒತ್ತಡಗಳು,ಹಲವಾರು ತವಕ ತಲ್ಲಣದ ಸನ್ನಿವೇಷಗಳು “ಸುಖ ಜೀವನ” ನಡೆಸಲು ಸಾಕಷ್ಟು ಅಡ್ಡಿ ಆತಂಕಗಳನ್ನು ಒಡ್ಡುತ್ತವೆ.ಎಲ್ಲ ಕ್ಷೇತ್ರಗಳಲ್ಲಿ ಇರುವ ಅತೀವ ಸ್ಪರ್ಧಾತ್ಮಕ ವಾತಾವರಣವಿರಬಹುದು, ಸುಖ ನೀಡುವ ಕೆಲಸದಲ್ಲಿ ಸಮಯ ಕಳೆಯಲು ಆಗದೆ ಇರಬಹುದು, ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿಚಾರದಲ್ಲಿ ಗೊಂದಲ ಹುಟ್ಟಬಹುದು, ಸಾರ್ವಜನಿಕ ಟೀಕೆಗಳಿರಬಹುದು.. ಆದರೆ ಸಂತೋಷದ ವಿಷಯವೆಂದರೆ ಇಂದು “ಸುಖ ಜೀವನದ” “ಬೇಕು-ಬೇಡ” ಗಳ ಬಗ್ಗೆ ಯ ತಿಳವಳಿಕೆ ಹಿಂದೆಂದಿಗಿತಲೂ ಹೆಚ್ಚಿದೆ. ಸಾಕಷ್ಟು ಅಧ್ಯಯನಗಳು ನಡೆದಿವೆ; ನಡೆಯುತ್ತವೆ. ವಿಶ್ವವಿದಾಲಯಗಳು, ಸಂಸ್ಥಗಳು ಈ ವಿಷಯದ ಬಗ್ಗೆ ಆಸಕ್ತಿ ತೋರಿ ಸಂಶೋಧನೆ, ಅಧ್ಯಯನಗಳನ್ನು ನಡೆಸುತ್ತಿವೆ. ಇಂದಿನ ಆದುನಿಕ ಜೀವನದಲ್ಲಿನ ಒತ್ತಡಗಳನ್ನು ನಿಭಾಯಿಸಲು ಧನಾತ್ಮಕ ಮನಸ್ತಿತಿ, ಸಮಯದ ಸದುಪಯೋಗ, ಜೀವನೋತ್ಸಾದ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇತ್ಯಾದಿಗಳ ಬಗ್ಗೆ ವಿವರಗಳನ್ನು ನೀಡುವ ಹಲವಾರು ಪುಸ್ತಕಗಳು, ಲೇಖನಗಳು ಇಂದು ಸುಲಭವಾಗಿ ಲಭ್ಯವಿವೆ. . ಪ್ರಪಂಚದಲ್ಲಿ ಸುಖೀ ರಾಷ್ರ ಯಾವುದು? “ಸುಖ ಜೀವನ” ವನ್ನು ನಿರ್ಧಾರ ಮಾಡುವುದು ಎಷ್ಟು ಕಷ್ಟ ಎಂಬುದು ಮೇಲಿನ ವಿಶ್ಲೇಷಣೆಯಿಂದ ತಿಳಿಯುತ್ತದೆ. ಆದರೂ “ ಪ್ರಪಂಚದಲ್ಲಿ ಸುಖೀ ರಾಷ್ರ ಯಾವುದು?” ಎಂಬುದನ್ನು ಸರಿಯಾಗಿ ಗುರುತಿಸಲು ಆ ನಿರ್ದಾರವನ್ನು ಆಯಾ ದೇಶದ ಜನರೇ ಮಾಡಿ ಸೊನ್ನೆಯಿಂದ ಹತ್ತರ ನಡುವಿನ ಸಂಖ್ಯೆ ಸೂಚಿಸಲಿ ಎಂದು ತೀರ್ಮಾನಿಸಲಾಯಿತು. ಸೊನ್ನೆ, ಕನಿಷ್ಠ ಮಟ್ಟದ ಸುಖ; ಹತ್ತು ಗರಿಷ್ಠ ಮಟ್ಟದ ಸುಖ. ಆ ಆಧಾರದ ಮೇಲೆ ಸುಖೀ ದೇಶ್ಗಗಳ ಪಟ್ಟಿ ತಯಾರಾಗುತ್ತದೆ. ಗಮನಿಸಬೇಕಾದ ಅಂಶವಂದರೆ 2023 ರ ಸುಖೀ ರಾಷ್ಟ ಅಮೆರಿಕವಲ್ಲ ಬದಲಾಗಿ ಫಿನಲ್ಯಾಂಡ್. ಅಮೆರಿಕ ದ ಸ್ಥಾನ 120. ಈ ರೀತ ಸ್ಥಾನ ನಿರ್ದಾರ ಸರ್ವಸಮರ್ಪಕ ಎಂದು ಅರ್ಥವಲ್ಲ ಆದರೆ “ಸುಖ ಜೀವನ” ವೆಂದರೆ ಏನು ಎಂಬುದು ನಾವು ಭಾವಿಸುವಂತೆ ಸರಳವಾದ ವಿಚಾರವಲ್ಲ ಅದರದೇ ಆದ ಸಂಕೀರ್ಣತೆಯಿಂದ ಕೂಡಿದೆ. “ಸುಖ ಜೀನನದ” rating ನಲ್ಲಿ ವ್ಯಕ್ತಿಗಳ ಅನುಭವ, ಧೋರಣೆ, ಪರಿಸರ, ಆಶಯಗಳು ,ಸಂಸ್ಕೃತಿ ಇತ್ಯಾದಿಗಳು ಮುಖ್ಯ ಪಾತ್ರ ವಹಿಸುತ್ತವೆ. ದೇಶದ ಸಂಪತ್ತು, ಅಧಿಕಾರ , ಆಡಳಿತ, ಪ್ರಗತಿ ನಂತರದ ಸ್ಥಾನ ಪಡೆಯುತ್ತವೆ. ಆದರೆ ಸಂತೋಷವೆಂಬ ಬಳ್ಳಿ ಬೇರುಬಿಟ್ಟು ಬೆಳೆಯುವುದು ನಮ್ಮ ಹೃದಯದಲ್ಲಿಯೇ.ಆದ್ದರಿಂದ ನಮಗೆ ಸಂತೋಷ ನೀಡುವ ಬೀಜಗಳನ್ನು ಗುರಿತಿಸಿ ಹೃದಯದೊಳಗೆ ಬಿತ್ತಬೇಕಾದವರು ನಾವೇ…ಎಂಬ ಖಲೀಲ್ ಗಿಬ್ರಾನ್ ಮಾತುಗಳು ನೆನಪಾಗುತ್ತವೆ. . ಈ ಸಂತೋಷದ ಬೀಜಗಳೋ, ತಂಗಾಳಿ ಮೈಸೋಂಕಿದ ಕಾರಣವಾಗಿರಬಹುದು, ಇಷ್ವವಾದ ಕವಿತೆಯ ಸಾಲುಗಳು ಗಾಲೀಯಲ್ಲಿ ತೇಲಿ ಬರುತ್ತಿರುವ ಕಾಶರಣವಾಗಿರಬಹುದು; ಸುಂದರವಾದ ಗುಲಾಬಿಯ ತೋಟ ಕಂಢ ಕಾರಣವಾಗಿರಬಹುದು; , ಹದವಾದ ಮಳೆ ಬಿದ್ದದ್ದರಿಂದ ಎದ್ದ ಮಣ್ಣಿನ ವಾಸನೆ ಕೂಡ ಇರಬಹುದು. ಕೇವಲ “ಸುಖ ಜೀವನ” ಆತ್ಮತೃಪ್ತಿ ತಂದುಕೊಡಬಲ್ಲುದೇ? ಮಾನವನಿಗೂ ಇತರ ಪ್ರಾಣಿಗಳಿಗೂ ಇರುವ ಮುಖ್ಯ ವ್ಯತ್ತಾಸವೆಂದರೆ ಅವನು ಚಿಂತಿಸಬಲ್ಲ. ವಿಶ್ಲೇಷಿಸಬಲ್ಲ. ಕಾರ್ಯಕಾರಣ ಸಂಬಂದಗಳನ್ನು ಹುಢುಕಬಲ್ಲ. ಈ ಕಾರಣಗಳಿಂದಲೇ ಕೇವಲ ದೈಹಿಕ ಅವಶ್ಯಕತೆಗಳ ಪೂರೈಕೆ , ಸಮಾಜ ಜೀವನ, ಅವನಿಗೆ ಸಂತೃಪ್ತಿ ನೀಡಲಾರವು. ಮೆದುಳಿಗೆ ಕೆಲಸ ಕೊಡುವ ಓದು, ಬರಹ, ಸಂಶೋಧನೆ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೂ ಅನಿವಾರ್ಯ. ಹಿತಕರವಾದ ಅನುಭವ ನೀಡುವ ಸುಖದಿಂದ ಕೂಡಿದ, ಅಷ್ಟೇ ಏಕೆ ಹೆಚ್ಚಿನ ಓದು, ಬುದ್ದಿಶಕ್ತಿ ಬೇಡುವ ಕೆಲಸಗಳಲ್ಲಿದ್ದು ಉತ್ತಮ ಜೀವನ ನಡೆಸುತ್ತಿರುವ ಹಲವರಲ್ಲಿ ಕೂಡಾ ಆಗಾಗ ಅತೃಪ್ತಿ, ಅಸಮಾಧಾನ , ತಾವು ನಡೆಸುತ್ತಿರುವ ಜೀವನ ನಿಜವಾಗಿಯೂ ಉತ್ತಮವಾಗಿದೆಯೇ? ಅರ್ಥಪೂರ್ಣವಾಗಿದೆಯೇ ಎಂಬ ಸಂಶಯ ಕಾಡಬಹುದು. ಇದು ಅಸುಖೀಬಾವ ಕೂಡಾ ಮೂಡಿಸಬಹುದು. ಕವಿ ಗೋಪಾಲಕೃಷ್ಣರ ಕವನ “ಯಾವ ಮೋಹನ ಮುರಲಿ ಕರೆಯಿತು, ದೂರ ತೀರಕೆ ನಿನ್ನನು?” ಇಂತಹ ಒಂದು ತುಡಿತವನ್ನು ಕಾವ್ಯಾತ್ಮಕವಾಗಿ ವಿವರಿಸುತ್ತದೆ. …… ” ದೇವರು ಒಂದು ಸಂಕೇತ ನಾಮ” ಪುಸ್ತಕದಲ್ಲಿ ಬೌತವಿಜ್ಞಾನಿ ಮಣಿಭೌಮಿಕ್ ರವರು ತಮ್ಮ ಹಲವಾರು ವರ್ಷಗಳ ವೈಜ್ಞಾನಿಕ ಸಂಶೋಧನಾ ಜೀವನದ ನಂತರ ಈ ಪ್ರಶ್ನೆ ತಮ್ಮನ್ನು ಕಾಡಿದ್ದನ್ನು ಮನಮುಟ್ಟುವಂತೆ ವಿವರಿಸುತ್ತಾರೆ. “ ಅರ್ಥಪೂರ್ಣ ಜೀವನ” ದ ಜಾಡು ಹಿಡಿದು…. ಹಾಗಾದರೆ ಯಾವ ಜೀವನವನ್ನು “ಅರ್ಥಪೂರ್ಣ” ಎಂದು ಕರೆಯಬಹುದು? ಕನ್ನಢ ನಾಡಿನ ಕೆಲವು ಮಹತ್ಸಾಧಕರ ದೃಷ್ಟಿಯಲ್ಲಿ “ಅರ್ಥಪೂರ್ಣ” ಬದುಕಿನ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ( ೧೯೯೫ ) “ ಬದುಕು ನನ್ನ ದೃಷ್ಟಿಯಲ್ಲಿ” ಪುಸ್ತಕದಲ್ಲಿ ಉತ್ತಮ ವಿಚಾರಗಳು ನಮಗೆ ಸಿಗುತ್ತವೆ. ಡಾ. ಬಸವರಾಜ್ ಸಾದರ ರವರು ಈ ವಿವರಗಳನ್ನುಬಹಳ ಅಚ್ಯುಕಟ್ಟಾಗಿ ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿ ಬದುಕಿನ ಬಗ್ಗೆ ನಾಡಿನ ಹೆಸರಾಂತ ಸಾಹಿತಿಗಳು , ಕಲಾವಿದರು, ವಿಜ್ಞಾನಿಗಳ ಅನುಭವ ಹಾಗೂ ದೃಷ್ಟಿಕೋನಗಳು ಲಭ್ಯವಿವೆ. ಆಯ್ದ ಅನುಭವದ ನುಡಿಗಳು ಹೀಗಿವೆ: ಅಂತರರಾಷ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಯು.ಆರ್. ರಾವ್ ರವರ ಪ್ರಕಾರ,“ ಜೀವನ ಪರ್ಯಂತ ಕನಸು ಕಾಣುವುದು; ಆ ಕನಸು ನನಸಾಗಲು ದಿಟ್ಟ ಕಾರ್ಯಮಗ್ನನಾಗುವುದು ಮತ್ತು ಸಮಾಜಕ್ಕ ಹೆಚ್ಚಿನದನ್ನು ಹಿಂದಿರಿಗಿಸುವುದು” ನೂರು ವರ್ಷದ ಜೀವನೋತ್ಸಾದಿಂದ ತಂಬಿದ ಬದುಕು ನಡೆಸಿದ ಪ್ರೊ. ಎ,ಎನ್ ಮೂರ್ತಿರಾವ್ ರವರ ದೃಷ್ಟಿಯಲ್ಲಿ, “ ಬದುಕಿನಲ್ಲಿ ನಮ್ಮ ಮುಖ್ಯ ಕೆಲಸ-ಅದನ್ನು ಕರ್ತವ್ಯ ಎಂದೇ ಕರೆಯಬೇಕು-ಮಾನವ ಕುಲದ ಸಂಕಟವನ್ನು ಪರಿಹರಿಸುವುದು ಮತ್ತು ಸುಖವನ್ನು ಹೆಚ್ಚಿಸುವುದು. ಕೆಟ್ಟದ್ದನ್ನು ಹೊರದೂಡಿ ಒಳ್ಳೆಯದನ್ನು ಪ್ರತಿಷ್ಟಾಪಿಸುವ ಕಲಸ ತೆವಳಿಕೊಂಡಾದರೂ ಸಾಗುತ್ತಲೇ ಇದೆ. ಆ ಪ್ರವೃತ್ತಿಯನ್ನು ಬೆಳೆಸಿಕೊಂಡು ಬದುಕನ್ನು ಸುಖಮಯವಾಗಿಸಬೇಕು.ಅದೇ ಮತಧರ್ಮವಾಗಬೇಕು. ಬದುಕನ್ನು ಬಿತ್ತು ಓಡಿಹೋಗುವ ಬದಲು ಅದನ್ನು ಸರಿಪಡಿಸುವುದಕ್ಕಾಗಿಯೇ ಬದುಕಬೇಕು.ಮಾನವ ಪ್ರೇಮದಿಂದ ಪ್ರಚೋದಿತರಾಗಿ ಇಂತಹ ಕರ್ಮ ಮಾಡುತ್ತಾ ನೂರು ವರ್ಷ ಬದುಕಬೇಕು. ಅಂತಹ ಬದುಕಿನಲ್ಲಿ ಸಂತೋಷ ಪಡಬೇಕು.ಬದುಕಿನಲ್ಲಿ ಮಾನವ ಕುಲದ ಸೇವೆಯೇ ಮುಖ್ಯ ಕಲಸ. ಸಂಪ್ರದಾಯಸ್ಥರ ದೃಷ್ಟಿಯಲ್ಲಿ ಮೋಕ್ಷ ಎಂದರೆ ಮಾನವ ಜೀವನದ ಹುಟ್ಟು-ಸಾವುಗಳ ಚಕ್ರದಿಂದ ಬಿಡುಗಡ ಹೊಂದುವುದು.ಆದರೆ ನನ್ನ ದೃಷ್ಟಿಯಲ್ಲಿ, “ ಮೋಕ್ಷ ವೆಂದರೆ ಇಡೀ ಮಾನವ ಕುಲದ ಕುರಿತ ಪ್ರೇಮದ ಬಂಧನಕ್ಕೆ ಸಿಕ್ಕಿಹಾಕಿಕೊಂಡು ಸ್ವಾರ್ಥ ದಿಂದ ಬಿಡುಗಡೆ ಹೊಂದುವುದು. ಒಬ್ಬ ವ್ಯಕ್ತಿಯ ಬದುಕು ನಶ್ವರ; ಆದರೆ ಇಡೀ ಮನುಕುಲದ ಬದುಕು ನಶ್ವರವಲ್ಲ”. ಜೀವನದಲ್ಲಿ ಉನ್ನತ ಗುರಿ , ಆದರ್ಶಗಳನ್ನು ಇರಿಸಿಕೊಳ್ಳುವುದು, ಅವುಗಳ ಸಫಲತೆಯಲ್ಲೇ ಧನ್ಯತೆ ಕಾಣುವುದು; ಸಮಾಜ ಸೇವೆಯನ್ನು ಬದುಕಿನ ಒಂದು ಮುಖ್ಯ ಭಾಗವಾಗಿ ಪರಿಗಣಿಸುವುದು” - ಇವುಗಳು ಕನ್ನಢ ನಾಡಿನ ಇನ್ನೂ ಹಲವಾರು ಪ್ರಸಿದ್ಧ ಸಾಹಿತಿಗಳು, ವೈದ್ಯರು, ವಿಜ್ಙಾನಿಗಳು, ಸಂಶೋಧಕರು, ರಾಜಕಾರಣಿಗಳು, ಚಿಂತಕರು, ಅರ್ಥಶಾಸ್ತ್ರಜ್ಞರು, ಪತ್ರಿಕೋದ್ಯಮಿಗಳ ದೃಷ್ಟಿಯಲ್ಲಿ ಬದುಕಿಗೆ “ಅರ್ಥಪೂರ್ಣತೆ” ಯನ್ನು ತಂದುಕೊಟ್ಟಿವೆ.. ಇನ್ನೊಂಧು ಗಮನಿಸಬೇಕಾದ ಅಂಶವೆಂದರೆ “ಅರ್ಥಪೂರ್ಣ ಜೀವನ” ಎಂಬುದೂ “ಸುಖ ಜೀವನ” ದಂತೆಯೇ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿ ಕಾಣುವುದು. ವ್ಯಕ್ತಿ ತನ್ನ ಪ್ರತಿಭೆ, ಶಕ್ತಿ, ಸಾಮರ್ಥ್ಯ, ಮಿತಿಗಳನ್ನು ಅರಿಯದೆ “ಅರ್ಥಪೂರ್ಣ ಬದುಕಿನ ದಾರಿಯಲ್ಲಿ ನಡೆಯಲಾಗದು. ಕನ್ನಡದ ಬಹುಮುಖ ಪ್ರತಿಭೆಯ ಸಾಹಿತಿಗಳಾದ ಶಿವರಾಮ ಕಾರಂತರ ಈ ಮಾತುಗಳಲ್ಲಿ ಈ ವಿಚಾರ ಮತ್ತಷ್ಟು ಸ್ಪಷ್ಟವಾಗುತ್ತದೆ. “ನಾನು ಯಾವುದನ್ನೇ ʼವ್ಯಕ್ತಿ ಜೀವನದ ದೃಷ್ಟಿʼ ಅನ್ನಬೇಕಾದರೂ ಅದು, ʼಬದುಕಿನ ಗುರಿಯೇನೆಂದು ನಿರ್ಣಯಿಸುವ ಕೆಲಸʼ ನಮ್ಮ ನಮ್ಮಿಂದಲೇ ಎಂದರೆ ವ್ಯಕ್ತಿಯಿಂದಲೇ ಆಗಬೇಕು ʼ “ನಾನೇ “ಏನು ಮಾಡಬಲ್ಲೆʼ ʼಏನು ಮಾಡಲಾರೆʼ ಎಂದು ತಿಳಿಯುವ ಪ್ರಯೋಗಗಳು ನನ್ನ ವೃತ್ತಿಯಾಯಿತು. ನಾನು ಲೇಖಕನಾಗಬೇಕೆ? ಇನ್ನೇನೋ ಆಗಬೇಕೋ? – ಇಂಥ ಪ್ರಶ್ನೆಗಳು ಕಾಣಿಸಿದುವು. ಅಂಥ ಗುರಿಗಳಲ್ಲಿ “ ನನಿಂದ ಏನು ಆದೀತು/ ಏನು ಆಗಲಾರದು ಎಂಬ ಪ್ರಯತ್ನ ನನ್ನನ್ನು ನಡೆಯಿಸಿತು. ಹಾಗಾಗಿ ಹೊಟ್ಟೆ ಹೊರೆಯುವ ಯಾವುದೇ ನಿಶ್ಚಿತ ವೃತ್ತಿಗೆ ನಾನು ಅರ್ಪಿಸಿಕೊಳ್ಳದೆಯೇ ನನ್ನ ಸಾಮರ್ಥ್ಯವನ್ನು ನಾನು ಅಳೆಯಲು ಹೊರಟೆ. ಈ ಪ್ರಯತ್ನದಲ್ಲಿ ನಾನು ಹಾಡಬಲ್ಲೆನೇ? ಕುಣಿಯಬಲ್ಲೆನೇ? ಈ ಪ್ರಶ್ನೆಗಳು ನನ್ನನ್ನು ನಾಟಕ ಕ್ಷೇತ್ರಕ್ಕೆ ಒಯ್ದಿತು. ನನ್ನ ಸುತ್ತಲಿನ ಜಗತ್ತಿನಲ್ಲಿ ಏನಿದೆ ಎನ್ನುವುದನ್ನು ತಿಳಿಯುವ ಲೌಕಿಕ ಕುತೂಹಲ ನನ್ನನ್ನು ಹಲವಾರು ವ್ಯಜ್ಞಾನಿಕ ಮತ್ತು ಇತರ ವಿಷಯಗಳ ಓದುಗಾರಿಕೆಗೆ ಪ್ರೇರಿಸಿತು. ನಾನು ತೊಡಗಿಸಿಕೊಂಡ ವಸಂತ ಮಾಸಪತ್ರಿಕೆಯ ಕಾರಣದಿಂದ ಜಾಗತಿಕ ಕಲೆಗಳ ಅಧ್ಯಯನ, ಪ್ರವಾಸ ನನ್ನ ಹವ್ಯಾಸವಾಯಿತು. ಅವೆಲ್ಲವನ್ನು ಕನ್ನಡ ಭಾಷೆಯ ಮೂಲಕ ನನ್ನ ಕನ್ನಡ ಜನರಿಗೆ ಕೊಡಲು ಪ್ರಯತ್ನಿಸಿದೆ”. ಮಾನವ ಜೀವನದಲ್ಲಿ ಅರ್ಥ ಹುಡುಕುವುದೇ ಅರ್ಥಹೀನ ಎಂಬ ವಾದಗಳೂ ಇವೆ. ವಿಶ್ವಕಾಯಗಳ ಅಗಾಧತೆ, ಜೀವಿತಾವಧಿ, ಅನಂತ ಭೂತ ಕಾಲ ಮತ್ತು ಭವಿಷ್ಯತ್ ಕಾಲ ಗಳನ್ನು ಮಾನವನ ಗಾತ್ರ ಮತ್ತು ಜೀವಿತಾವಧಿಗೆ ಹೋಲಿಸಿದಾಗ ಹೀಗನ್ನಿಸುವುದು ಸಹಜ. ಈ ವಾದದ ಪರ ಅಥವಾ ವಿರೋಧದ ಚರ್ಚೆಗಳು ಅಂತಿಮವಾಗಿ ನಂಬಿಕೆಯ ಬಗ್ಗೆ ನಮ್ಮ ತೀರ್ಮಾನಗಳಾಗುತ್ತವೆ. ಯಾವುದು “ಅರ್ಥಪೂರ್ಣ ಜೀವನ” ಎಂಬುದನ್ನು ವ್ಯಕ್ತಿಗಳೇ ನಿರ್ಧರಿಸಬೇಕಾಗುತ್ತದೆ. ತನ್ನ ಸಾದನೆಯ ಕ್ಷೇತ್ರದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ವ್ಯಕ್ತಿ ತನ್ನ ಪ್ರತಿಭೆ, ಶಕ್ತಿ, ಸಾಮರ್ಥ್ಯ,ಅಭಿರುಚಿ, ಮಿತಿಗಳು ಇತ್ಯಾದಿಗಳಿಗೆ ಅನಗುಣವಾಗಿ “ ಅರ್ಥಪೂರ್ಣ ಜೀವನ “ ವನ್ನು define ಮಾಡಿದರೂ ಕುಟುಂಬದ, ಸಮಾಜದ, ದೇಶದ ಋಣ ವನ್ನು ಪ್ರೀತಿ, ಸೇವೆ, ಕೊಡುಗೆಗಳ ಮೂಲಕ ಹಿಂದಿರುಗಿಸದೆ “ಸಾರ್ಥಕ “ ಅಥವ “ಧನ್ಯತಾ ಬಾವ” ಹೊಂದಲಾರ. ಅರ್ಥಪೂರ್ಣ ಜೀವನ “ಸುಖ ಜೀವನ” ಆಗಿರಬೇಕು ಎಂದೇನೂ ಇಲ್ಲ. ಏಕೆಂದರೆ ಆಯ್ಕೆ ಮಾಡಿದ ಜೀವನ ವಿಧಾನ ಕೆಲವಾರು ಸುಖಗಳ ತ್ಯಾಗ, ಪರಿಶ್ರಮ, ತಾಳ್ಮೆ ಬೇಡಬಹುದು. ಈ ಭೂಮಿಯ ಮೇಲೆ ಪಡೆಯಬಹುದಾದ ಕ್ಷಣಿಕ ಕಾಲದ ಸುಖಕ್ಕೆ ಬದಲಾಗಿ ಶಾಶ್ವತ ಸುಖ ನೀಡುವ “ಮೋಕ್ಷ” ಸಾಧನೆಯಂತಹ ಮಹತ್ಶಾಧನೆಗಳತ್ತ ಮಾನವ ಜೀವಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.ಭಕ್ತಿ, ಕರ್ಮ, ಜ್ಞಾನ ಯೋಗದ ಮಾರ್ಗದಲ್ಲಿ ನಡೆದು ಮೋಕ್ಷ ಪಥದಲ್ಲಿ ಸಾಗಬೇಕೆಂದು ಭಗವದ್ಗೀತೆ ಬೋದಿಸುತ್ತದೆ. ವೇದಾಂತ ವಿಚಾರಗಳಲ್ಲಿ, ಧಾರ್ಮಿಕ ಆಚರಣೆಗಳಗಳಲ್ಲಿ ನಂಬಿಕೆ ಮತ್ತು ಆಸಕ್ತಿ ಇರುವವರಿಗೆ “ ಮೋಕ್ಷ ಸಾಧನೆಯೇ ಗುರಿ” . ಇತರರಿಗೆ, ಆಯ್ದುಕೊಂಡ ಕ್ಷೇತ್ರದಲ್ಲಿ ಭಕ್ತಿ, ಕರ್ಮ, ಜ್ಙಾನ ಮಾರ್ಗಗಳ ಅನುಸಂಧಾನ ನಡೆಸುವುದು ಅಸಾಧ್ಯವೇನೂ ಅಲ್ಲ. “ ಡಾ. ಎಂ.ರವೀಂದ್ರ, ಬೆಂಗಳೂರು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಜೀವಜಂತುಗಳ ಪಾವಿತ್ರ್ಯ ಮತ್ತು ಮಾನವ ಜೀವನದ ಮೌಲ್ಯ – ಒಂದು ಟಿಪ್ಪಣಿ
ಅಕ್ಷರಗಳ ಕೈಪಿಡಿದು......
ಮಾಯೆಯ ಮಿತಿ ೪ - ಆಹಾರದ ಅರ್ಥ
ಆಡು ಮಾತಿನ ಬಾಯಿಮಾತು ಕಥೆ
ಈ ಒಂದು ನಿಯಮ ಭಾರತಕ್ಕೆ ಬಂದರೆ ಸಾವಿರಾರು ಮಕ್ಕಳ ಜೀವ ಉಳಿಸಬಹುದು!
*ಬೆಂದಕಾಳೂರಿನ ವಾಸಿ,**ಜಾನಕೀ ತನಯನ ಕನಸು**ನನಸಾಗುವುದೇ*
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!